ಹೊತ್ತಿನ ಊಟಕ್ಕೂ ಪರದಾಟ, ಕಿರಾಣಿ ಅಂಗಡಿಯಲ್ಲಿ ಕೆಲಸ: ಮಹಾಂತೇಶ್ ಬೀಳಗಿ ಐಎಎಸ್ ಅಧಿಕಾರಿಯಾಗಲು ಪಟ್ಟ ಪಾಡು ಒಂದೇ ಎರಡೇ!

ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರನ್ನು ರಸ್ತೆ ಅಪಘಾತ ಬಲಿ ತೆಗೆದುಕೊಂಡಿದೆ. ಬಾಲ್ಯದಲ್ಲಿ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿ ಮಹಾಂತೇಶ್ ಓದಿದ್ದು, ಅವರ ತಾಯಿ ಹಣ್ಣು ಮಾರಿ ಕುಟುಂಬ ಸಲಹಿದ ದಿನಗಳ ಬಗ್ಗೆ ಅವರ ಬಾಲ್ಯ ಸ್ನೇಹಿತರು ಈ ಸಂದರ್ಭದಲ್ಲಿ ಮೆಲುಕು ಹಾಕಿದ್ದಾರೆ. ಬಡತನದ ನಡುವೆಯೂ ಶಿಕ್ಷಣಕ್ಕಾಗಿ ಹೋರಾಡಿ ಚಿನ್ನದ ಪದಕ ಗಳಿಸಿದ, ಆ ನಂತರ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಅವರ ಸ್ಪೂರ್ತಿದಾಯಕ ಜೀವನದ ಹಿನ್ನೋಟ ಇಲ್ಲಿದೆ.

ಹೊತ್ತಿನ ಊಟಕ್ಕೂ ಪರದಾಟ, ಕಿರಾಣಿ ಅಂಗಡಿಯಲ್ಲಿ ಕೆಲಸ: ಮಹಾಂತೇಶ್ ಬೀಳಗಿ ಐಎಎಸ್ ಅಧಿಕಾರಿಯಾಗಲು ಪಟ್ಟ ಪಾಡು ಒಂದೇ ಎರಡೇ!
ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ
Edited By:

Updated on: Nov 26, 2025 | 10:14 AM

ಬೆಂಗಳೂರು, ನವೆಂಬರ್ 26: ಕಲಬುರಗಿಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (IAS Officer Mahantesh Bilagi) ಸೇರಿ ಮೂವರು ಮೃತಪಟ್ಟಿದ್ದಾರೆ. ದಕ್ಷ ಐಎಎಸ್ ಅಧಿಕಾರಿ ಎಂದೇ ಖ್ಯಾತಿ ಹೊಂದಿದ್ದ ಮಹಾಂತೇಶ್ ಬೀಳಗಿ ಆ ಹಂತಕ್ಕೆ ಬರಲು ಪಟ್ಟ ಕಷ್ಟ ಎಷ್ಟು? ಬಾಲ್ಯದಲ್ಲಿ ಅವರು ಅನುಭವಿಸಿದ ಕಡು ಕಷ್ಟದ ದಿನಗಳು ಹೇಗಿದ್ದವು ಎಂಬುದನ್ನು ಅವರು ಬಾಲ್ಯ ಸ್ನೇಹಿತರು ಹಾಗೂ ಅವರಿಗೆ ಪಾಠ ಹೇಳಿಕೊಟ್ಟ ಗುರುಗಳು ಈಗ ನೆನಪಿಸಿಕೊಂಡಿದ್ದಾರೆ.

ಮಹಾಂತೇಶ್ ಬೀಳಗಿ ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದವರು. ಅವರ ಬಾಲ್ಯದಲ್ಲಿ ಎರಡು ಹೊತ್ತು ಊಟಕ್ಕೂ ಕಷ್ಟಪಡುತ್ತಿದ್ದರು. ಅವರು ಸ್ವತಃ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿ, ತಮ್ಮ ಶಿಕ್ಷಣಕ್ಕೆ ಹಣವನ್ನು ಗಳಿಸಿಕೊಂಡಿದ್ದರು. ಅವರ ತಾಯಿಯವರು ಊರೂರಿಗೆ ಹಣ್ಣು ಮಾರಿ ಕುಟುಂಬವನ್ನು ಸಾಗಿಸುತ್ತಿದ್ದರು. ಪುಸ್ತಕಗಳನ್ನು ಖರೀದಿಸಲು ಹಣವಿಲ್ಲದಿದ್ದಾಗ, ತಮ್ಮ ಆತ್ಮೀಯ ಸ್ನೇಹಿತರು ಮತ್ತು ಸಹಪಾಠಿಗಳಿಂದ ಪುಸ್ತಕಗಳನ್ನು ಪಡೆದು, ಗ್ರಂಥಾಲಯಗಳನ್ನು ಬಳಸಿಕೊಂಡು ಅಭ್ಯಾಸ ಮಾಡುತ್ತಿದ್ದರು ಎಂದು ಮಹಾಂತೇಶ್ ಬೀಳಗಿ ಅವರ ಬಾಲ್ಯ ಸ್ನೇಹಿತರು ನೆನಪಿಸಿಕೊಂಡಿದ್ದಾರೆ.

ಬಡತನದ ನಡುವೆಯೂ ಮಹಾಂತೇಶ್ ಅವರಿಗೆ ಅಧ್ಯಯನದ ಬಗ್ಗೆ ಇದ್ದ ಅಗಾಧ ಆಸಕ್ತಿಯ ಬಗ್ಗೆ ಪಿಯುಸಿ ಮತ್ತು ಡಿಗ್ರಿಯಲ್ಲಿ ಬೀಳಗಿ ಅವರೊಂದಿಗೆ ಓದಿದ್ದ ಸ್ನೇಹಿತರು ವಿವರಿಸಿದ್ದಾರೆ. ಆರಂಭದಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದರೂ, 10ನೇ ತರಗತಿಯ ನಂತರ ಓದಿನಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. ನಂತರದ ದಿನಗಳಲ್ಲಿ ಪ್ರತಿ ತರಗತಿಯಲ್ಲೂ ಪ್ರಥಮ ರ್ಯಾಂಕ್ ಗಳಿಸಿ ಎಲ್ಲರ ಗಮನ ಸೆಳೆದರು. ಬಸವೇಶ್ವರ ಕಾಲೇಜಿನಲ್ಲಿ ಪಿಯುಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಅವರು, ಸಿ ಎಸ್ ಬೆಂಬಳಗಿ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು ಎಂದು ಸ್ನೇಹಿತರು ನೆನಪಿಸಿಕೊಂಡಿದ್ದಾರೆ.

ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದ ಮಹಾಂತೇಶ್

ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಅವರು ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದರು. ಧಾರವಾಡದಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ತೋರಿಸಿದ್ದರು. ಇಷ್ಟೆಲ್ಲಾ ಉನ್ನತ ಹುದ್ದೆಯಲ್ಲಿದ್ದರೂ, ಮಹಾಂತೇಶ್ ಬೀಳಗಿ ಅವರು ರಾಮದುರ್ಗದ ತಮ್ಮ ಸ್ನೇಹಿತರನ್ನು ಎಂದಿಗೂ ಮರೆಯಲಿಲ್ಲ. ಅವರನ್ನು ಹೆಸರಿನಿಂದಲೇ ಕರೆದು, ಯಾವುದೇ ಔಪಚಾರಿಕತೆ ತೋರದೆ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅವರೊಂದಿಗೆ ಬೀದಿಗಳಲ್ಲಿ ಚಹಾ ಕುಡಿಯುತ್ತಾ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದರು ಎಂದು ಮತ್ತೊಬ್ಬರು ಸ್ನೇಹಿತ ನೆನಪಿಸಿಕೊಂಡಿದ್ದಾರೆ.

ಮಹಾಂತೇಶ್ ಬೀಳಗಿ ಅವರ ಸ್ನೇಹಿತರ ಮಾತಿನ ವಿಡಿಯೋ

ರಾಮದುರ್ಗದ ಬಗ್ಗೆ ಅವರಿಗೆ ಅಪಾರ ಅಭಿಮಾನವಿತ್ತು. ‘ನನ್ನ ಹುಟ್ಟಿದ ಊರು, ನನ್ನ ಜನ್ಮ ಕೊಟ್ಟ ಊರು’ ಎಂದು ಆಗಾಗ ಹೇಳುತ್ತಿದ್ದರು. ಉನ್ನತ ಹುದ್ದೆಗೆ ಏರಿದ ನಂತರವೂ ತಮ್ಮ ಸ್ನೇಹಿತರೊಂದಿಗೆ ಅವರ ಬಾಂಧವ್ಯ ಎಂದಿಗೂ ಕಡಿದಾಗಲಿಲ್ಲ. ಓದುವ ದಿನಗಳಲ್ಲಿ ಹೇಗೆ ಒಟ್ಟಾಗಿ ಇದ್ದರೋ, ಅದೇ ರೀತಿ ಜೀವನದುದ್ದಕ್ಕೂ ಆ ಸ್ನೇಹವನ್ನು ಉಳಿಸಿಕೊಂಡಿದ್ದರು ಎಂದು ಸ್ನೇಹಿತರು ನೆನಪಿಸಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ