Belur Election 2023 Winner: ಬೇಲೂರಿನಲ್ಲಿ ತ್ರಿಕೋನ ಯುದ್ಧದಲ್ಲಿ ಗೆದ್ದುಬೀಗಿದ ಬಿಜೆಪಿಯ ಹುಲ್ಲಳ್ಳಿ ಸುರೇಶ್

|

Updated on: May 13, 2023 | 6:10 PM

Hullalli Suresh: ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹುಲ್ಲಳ್ಳಿ ಸುರೇಶ್ ಗೆಲುವು ಪಡೆದಿದ್ದಾರೆ. ತ್ರಿಕೋನ ಹಣಾಹಣಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಎದುರು ಹೆಚ್.ಕೆ. ಸುರೇಶ್ ಅನಿರೀಕ್ಷಿತ ಗೆಲುವು ಕಂಡಿದ್ದಾರೆ.

Belur Election 2023 Winner: ಬೇಲೂರಿನಲ್ಲಿ ತ್ರಿಕೋನ ಯುದ್ಧದಲ್ಲಿ ಗೆದ್ದುಬೀಗಿದ ಬಿಜೆಪಿಯ ಹುಲ್ಲಳ್ಳಿ ಸುರೇಶ್
ಹೆಚ್.ಕೆ. ಸುರೇಶ್
Follow us on

Belur Assembly Election Results 2023: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಹಿನ್ನಡೆ ಸಾಧಿಸಿದ ಬಿಜೆಪಿ ಹಾಸನದ ಬೇಲೂರಿನಲ್ಲಿ ಗೆಲುವಿನ ಸಮಾಧಾನ ಪಡೆದಿದೆ. ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿದೆ. ಬಹುತೇಕ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಂತಿದ್ದ ಬೇಲೂರಿನಲ್ಲಿ ಹೆಚ್.ಕೆ. ಸುರೇಶ್ ಜಯ ಗಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ಅಚ್ಚರಿ ಮೂಡಿಸಿದ್ದ ಬಿಜೆಪಿಯ ಹುಲ್ಲಳ್ಲಿ ಸುರೇಶ್ ಅವರ ಗೆಲುವು ಅನಿರೀಕ್ಷಿತವೂ ಅಲ್ಲ. ಜೆಡಿಎಸ್​ನ ಕೆಎಸ್ ಲಿಂಗೇಶ್ ಮತ್ತು ಕಾಂಗ್ರೆಸ್​ನ ಬಿ ಶಿವರಾಜು ಅವರು ಕಣದಲ್ಲಿದ್ದು ಬೇಲೂರು ಅಕ್ಷರಶಃ ತ್ರಿಕೋನ ಫೈಟ್ ಕಂಡಿತ್ತು. ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಶೇ. 38ರಷ್ಟು ಮತ ಗಳಿಸಿ ಜಯ ಭಾರಿಸಿದ್ದಾರೆ. ಕಾಂಗ್ರೆಸ್​ನ ಬಿ. ಶಿವರಾಜು ಶೇ. 34ರಷ್ಟು ಮತ ಗಳಿಸಿದರೆ ಜೆಡಿಎಸ್​ನ ಕೆಎಸ್ ಲಿಂಗೇಶ್ ಶೇ. 23ರಷ್ಟು ಮತ ಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಉಳಿದವರೆಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ.

ಬೇಲೂರು ವಿಧಾನಸಭಾ ಕ್ಷೇತ್ರ ಚುನಾವಣೆ 2023 ಫಲಿತಾಂಶ ವಿವರ

  • ಬಿಜೆಪಿ: ಹುಲ್ಲಳ್ಳಿ ಸುರೇಶ್ (63571 ಮತಗಳು)
  • ಕಾಂಗ್ರೆಸ್: ಬಿ. ಶಿವರಾಜು (55,835 ಮತಗಳು)
  • ಜೆಡಿಎಸ್: ಕೆಎಸ್ ಲಿಂಗೇಶ (38,446 ಮತಗಳು)

ಇದನ್ನೂ ಓದಿ: Sakleshpur Election 2023 Winner: ಸಕಲೇಶಪುರದಲ್ಲಿ ಜೆಡಿಎಸ್, ಕಾಂಗ್ರೆಸ್​ಗೆ ಸೋಲಿನ ಆಘಾತ ಕೊಟ್ಟ ಬಿಜೆಪಿಯ ಸಿಮೆಂಟ್ ಮಂಜು

ಬೇಲೂರಿನಲ್ಲಿ ಈ ಹಿಂದೆ ಬಿಜೆಪಿ ಒಮ್ಮೆ ಮಾತ್ರ ಗೆದ್ದಿತ್ತು. 1999ರ ಚುನಾವಣೆಯಲ್ಲಿ ಬಿಜೆಪಿಯಿಂದ ಎಸ್.ಎಚ್. ಪುಟ್ಟರಂಗನಾಥ್ ಗೆಲುವು ಸಾಧಿಸಿದ್ದರು. ಪುಟ್ಟರಂಗನಾಥ್ ಈ ಕ್ಷೇತ್ರದ ಹಿರಿಯ ರಾಜಕಾರಣಿಯಾಗಿದ್ದವರು. ಕಾಂಗ್ರೆಸ್​ನಿಂದ ಮೂರು ಬಾರಿ ಶಾಸಕರಾದವರು. ಪಕ್ಷೇತರರಾಗಿಯೂ ಸ್ಪರ್ಧಿಸಿದ್ದವರು.

ಹಾಸನ ಜಿಲ್ಲೆಯಲ್ಲಿ ಐತಿಹಾಸಿಕ ದೇವಸ್ಥಾನಗಳಿರುವ ಕ್ಷೇತ್ರವಾದ ಬೇಲೂರಿನಲ್ಲಿ 1.86 ಲಕ್ಷ ಮತದಾರರಿದ್ದಾರೆ. 1962ಕ್ಕೆ ಮೊದಲು ಇದು ಬೇಲೂರುಸಕಲೇಶಪುರ ಕ್ಷೇತ್ರವಾಗಿತ್ತು. ಬಳಿಕ ವಿಭಜನೆಯಾಗಿ ಸಕಲೇಶಪುರ ಕ್ಷೇತ್ರ ಪ್ರತ್ಯೇಕವಾಯಿತು. ಇನ್ನು ಜಾತಿ ಲೆಕ್ಕಾಚಾರ ತೆಗೆದುಕೊಂಡರೆ ಲಿಂಗಾಯತರೇ ಅಧಿಕ ಸಂಖ್ಯೆಯಲ್ಲಿರುವುದು. 54,000ಕ್ಕೂ ಹೆಚ್ಚು ಲಿಂಗಾಯತ ಮತದಾರರಿದ್ದಾರೆ. 30,000ದಷ್ಟು ಒಕ್ಕಲಿಗ ಮತದಾರರಿದ್ದಾರೆ. ಎಸ್​ಸಿ ಎಸ್​ಟಿ, ಕುರುಬರು ಸೇರಿದರೆ ಸಂಖ್ಯೆ 60,000 ದಾಟುತ್ತದೆ. ಮುಸ್ಲಿಮರು 10,000ಕ್ಕೂ ಹೆಚ್ಚಿದ್ದಾರೆ. ಹೀಗಾಗಿ, ಬೇಲೂರು ಕ್ಷೇತ್ರ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸಮಾನ ಅವಕಾಶ ನೀಡಿದ್ದು ಹೌದು. ಆದರೆ, ಮತದಾರರು ಅಂತಿಮವಾಗಿ ಬಿಜೆಪಿ ಅಭ್ಯರ್ಥಿಗೆ ಆಶೀರ್ವಾದ ಮಾಡಿದ್ದಾರೆ.

 

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 6:09 pm, Sat, 13 May 23