ಬೆಂಗಳೂರು: ಮಹಾಮಾರಿ ಕೊರೊನಾ ಇಡೀ ದೇಶವನ್ನೇ ನಲುಗುವಂತೆ ಮಾಡಿದೆ. ಅದರಲ್ಲೂ ಕೊರೊನಾ ಸೋಂಕಿಗೆ ಕಡಿಮೆ ವಯಸ್ಸಿನ ಯುವಕರು ಬಲಿಯಾಗುತ್ತಿದ್ದಾರೆ. ಇದರ ನಡುವೆ 103 ವರ್ಷದ ಶತಾಯುಷಿ ಅಜ್ಜ ಕೊರೊನಾ ವಿರುದ್ಧ ಹೋರಾಡಿ ಗೆದ್ದಿದ್ದಾರೆ.
ಮಹಾಮಾರಿ ಕೊರೊನಾ ಎರಡನೇ ಅಲೆಯಲ್ಲಿ ಯುವಕರು ಉಸಿರಾಟದ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಕೊರೊನಾ ವಿರುದ್ಧ ಹೋರಾಡಲಾಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೊರೊನಾ 2ನೆ ಅಲೆ ಅನೇಕ ಸಾವು-ನೋವುಗಳಿಗೆ ಕಾರಣವಾಗಿದೆ. ಆದರೆ ಇದರ ನಡುವೆ ಒಂದು ಸಂತೋಷಕರ ಸಂಗತಿ ವರದಿಯಾಗಿದೆ. ಕೊರೊನಾದಿಂದ 103 ವರ್ಷದ ವೃದ್ಧ ಗುಣಮುಖರಾಗಿದ್ದಾರೆ.
ಬೆಂಗಳೂರಿನ ಶಾಂತಿನಗರದ ನಿವಾಸಿ ಶರಣಯ್ಯ ಎಂಬ 103 ವರ್ಷದ ವೃದ್ಧ ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ಬಗ್ಗೆ ಕೊರೊನಾ ಗೆದ್ದ ಅಜ್ಜ ಕೆಲ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಕೊರೊನಾ ಗೆಲ್ಲಲು ಮೊದಲು ಧೈರ್ಯ ಬೇಕು. ಆರೋಗ್ಯ ಸರಿಯಾಗುತ್ತೆ ಎಂಬ ನಂಬಿಕೆ ಇರಬೇಕು ಎಂದು ಸಂದೇಶ ನೀಡಿದ್ದಾರೆ.
ನನ್ನ ಅಳಿಯ ಮತ್ತು ಮಗಳಿಂದ ನನಗೆ ಕೊರೊನಾ ಬಂತು. ನನಗೆ 15 ದಿನಗಳ ಕಾಲ ತುಂಬಾ ಕಷ್ಟವಾಯಿತು. ತಲೆ ನೋವು, ಮೈಕೈ ನೋವು, ಜ್ವರ ತುಂಬಾ ಇತ್ತು. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಗುಣಮುಖನಾದೆ. ನಾನು ಗುಣಮುಖನಾಗಿದ್ದೇನೆಂದು ಉದಾಸೀನ ಮಾಡಿಲ್ಲ. ಮನೆಯಿಂದ ಹೊರಗೆ ಬರದೆ ಎಚ್ಚರಿಕೆ ವಹಿಸುತ್ತೇನೆ. ನಾನು ಹೆಚ್ಚಾಗಿ ಅನ್ನ, ತಿಳಿ ಸಾಂಬಾರ್, ತರಕಾರಿ ತಿನ್ನುತ್ತಿದ್ದೆ. ಸಮಯ ಕಳೆಯಲು ದೇವರಿಗೆ ಪೂಜೆ ಮಾಡುತ್ತಿದ್ದೆ ಎಂದು ಕೊರೊನಾದಿಂದ ಗುಣಮುಖರಾದ 103 ವರ್ಷದ ವೃದ್ಧ ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ: ಒಬ್ಬರಿಗೊಬ್ಬರು ಧೈರ್ಯ ತುಂಬುತ್ತ ಕೊರೊನಾ ಗೆದ್ದು ಬೀಗಿದ ಒಂದೇ ಕುಟುಂಬದ ಸದಸ್ಯರು