ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್​ ರೇವಣ್ಣಗೆ ಶಾಕ್ ಕೊಟ್ಟ ಕೋರ್ಟ್

ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಜೀವ ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿರುವ ಸೂರಜ್ ರೇವಣ್ಣಗೆ ಬಿಗ್ ಶಾಕ್ ಕೊಟ್ಟಿದೆ. ಸೂರಜ್ ರೇವಣ್ಣ ವಿರುದ್ಧದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸಲ್ಲಿಸಿದ್ದ 'ಬಿ' ರಿಪೋರ್ಟ್​ ವರದಿಯನ್ನು ತಿರಿಸ್ಕರಿಸಿದೆ. ಅಲ್ಲದೇ ತನಿಖೆ ಮುಂದುವರಿಕೆಗೆ ಆದೇಶಿಸಿದೆ. ಇದರಿಂದ ಸೂರಜ್ ರೇವಣ್ಣ ಮತ್ತೆ ಸಂಕಷ್ಟ ಎದುರಾಗಿದೆ.

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್​ ರೇವಣ್ಣಗೆ ಶಾಕ್ ಕೊಟ್ಟ ಕೋರ್ಟ್
Suraj Revanna
Updated By: ರಮೇಶ್ ಬಿ. ಜವಳಗೇರಾ

Updated on: Dec 02, 2025 | 8:55 PM

ಬೆಂಗಳೂರು/ಹಾಸನ, (ಡಿಸೆಂಬರ್ 02): ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಜೀವ ಬೆದರಿಕೆ ಹಾಕಿದ ಪ್ರಕರಣದ ಆರೋಪಿ ವಿಧಾನ ಪರಿಷತ್ ಸದಸ್ಯ ಸೂರಜ್​​ ರೇವಣ್ಣ (Suraj Revanna) ವಿರುದ್ಧದ ಬಿ ರಿಪೋರ್ಟ್​​ ಅನ್ನು ಕೋರ್ಟ್ ತಿರಸ್ಕರಿಸಿದೆ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಎಸ್ಐಟಿ ಸಲ್ಲಿಸಿದ್ದ ಬಿ ರಿಪೋರ್ಟ್​​ ತಿರಸ್ಕರಿಸಿ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಆದೇಶ ಹೊರಡಿಸಿದೆ. ಅಲ್ಲದೇ ತನಿಖೆ ಮುಂದುವರಿಸಿ ಡಿಸೆಂಬರ್ 29ರೊಳಗೆ ತನಿಖಾ ವರದಿ ಸಲ್ಲಿಸಲು ಎಸ್ಐಟಿ ಪೊಲೀಸರಿಗೆ ಸೂಚಿಸಿದೆ.

ಇದೇ ಕೇಸಿನಲ್ಲಿ ಜೈಲಿಗೆ ಹೋಗಿದ್ದ ಸೂರಜ್

ಇನ್ನು ಜೆಡಿಎಸ್‌ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಡಾ.ಸೂರಜ್‌ ರೇವಣ್ಣ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಸೂರಜ್‌ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿತ್ತು. ಈ ಹಿನ್ನೆಲೆ ಸೂರಜ್​ ಒಂದು ತಿಂಗಳ ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು.

ಇದನ್ನೂ ಓದಿ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್​ ರೇವಣ್ಣಗೆ ಬಿಗ್ ರಿಲೀಫ್

ಈಗಾಗಲೇ ಎಚ್‌ಡಿ ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಪುತ್ರ ಸೂರಜ್‌ ಸಹ ಜಾಮೀನು ಸಿಕ್ಕಿದೆ. ಇನ್ನು ರೇವಣ್ಣನವರ ಮತ್ತೋರ್ವ ಪುತ್ರ ಪ್ರಜ್ವಲ್ ರೇವಣ್ಣ ಜೀವಿತಾವಧಿ ಶಿಕ್ಷಗೆ ಗುರಿಯಾಗಿದ್ದು, ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಪ್ರಕರಣದ ಹಿನ್ನೆಲೆ

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 2024ರ ಜೂನ್ 22 ರಂದು ಸಂತ್ರಸ್ತ ದೂರು ನೀಡಿದ್ದರು. ಇದರ ಆಧಾರದಲ್ಲಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್​​ಗಳ ಅಡಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಹಾಸನದ ಜಿಲ್ಲಾ ಪೊಲೀಸ್ ಠಾಣೆಗೆ ಸಂತ್ರಸ್ತ ದೂರು ನೀಡಲು ಆಗಮಿಸಿದ್ದರು. ಆದರೆ, ನಂತರ ಅದನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ವರ್ಗಾಯಿಸಲಾಗಿತ್ತು. ಅದರಂತೆ, ಜೂನ್ 23 ರಂದು ಸೂರಜ್ ರೇವಣ್ಣರನ್ನು ಬಂಧಿಸಲಾಗಿತ್ತು.

ಮತ್ತೊಂದೆಡೆ, ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎಂಬವರು ಸಂತ್ರಸ್ತನ ವಿರುದ್ಧ ಪ್ರತಿ ದೂರು ನೀಡಿದ್ದರು. ಸೂರಜ್ ರೇವಣ್ಣ ವಿರುದ್ಧ ದೂರುದಾರ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿ, ಐದು ಕೋಟಿ ರೂ. ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಬ್ಲ್ಯಾಕ್​​ಮೇಲ್ ಮಾಡಿದ್ದರು ಎಂದು ಶಿವಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ರಾಜ್ಯ ಸರ್ಕಾರ, ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ