ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಸಿ ಇಂದು ‘ಬೆಂಗಳೂರು ಬಂದ್’ ಮಾಡಲಾಹಗಿದೆ. ಪರಿಣಾಮ ಶಾಲಾ-ಕಾಲೇಜುಗಳು ಸಂಪೂರ್ಣ ಬಂದ್ ಆಗಲಿದ್ದು, ಸಾರಿಗೆ ಸಂಚಾರ, ಮಾರುಕಟ್ಟೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ‘ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು’ ಸಂಘಟನೆ ನೇತೃತ್ವದಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಬಂದ್ ಇರಲಿದೆ. ಇದಕ್ಕೆ ಕನ್ನಡಪರ, ರೈತಪರ ಸಂಘಟನೆಗಳು, ಸಾರಿಗೆ, ಶಿಕ್ಷಕರ ಸಂಘಟನೆಗಳು, 150ಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳು ಪೂರ್ಣ ಬೆಂಬಲ ನೀಡಿವೆ. ಎಫ್‌ಕೆಸಿಸಿಐ, ಬೀದಿ ಬದಿ ವ್ಯಾಪಾರಸ್ಥರು ಸೇರಿ 50ಕ್ಕೂ ಹೆಚ್ಚು ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿವೆ. ಇನ್ನು ಮಧ್ಯರಾತ್ರಿಯಿಂದಲೇ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಪೊಲೀಸ್ ಬಿಗಿ ಬಂದೋಬಸ್ಥ್ ಮಾಡಲಾಗಿದೆ. ಇದೇ ವೇಳೆ, ರಾಮನಗರ ಜಿಲ್ಲೆ, ಮಂಡ್ಯದ ಕೆ.ಆರ್.ಪೇಟೆ, ಮಳವಳ್ಳಿ ಬಂದ್‌ಗೂ ಕರೆ ನೀಡಲಾಗಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ನಾಳೆ(ಸೆ.27) ನಡೆಯಲಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಬಳಿಕ ಮಲೆ ಮಹದೇಶ್ವರ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಇನ್ನು ಸಿಎಂಗೆ ಸ್ಥಳೀಯ ಶಾಸಕ ಗಣೇಶ್ ಪ್ರಸಾದ್, ಎ.ಆರ್ ಕೃಷ್ಣಮೂರ್ತಿ, ಮಂಜುನಾಥ್, ಸಚಿವ ಕೆ.ವೆಂಕಟೇಶ್ ಸಾಥ್ ಕೊಟ್ಟಿದ್ದಾರೆ.
ಬೆಳಗಾವಿ: ಕೊಟ್ಟ ಸಾಲ ಹಿಂದಿರುಗಿಸದಿದ್ದಕ್ಕೆ ಯೋಧನ ಮೇಲೆ ಮತ್ತೋರ್ವ ಸೈನಿಕ ಗುಂಡುಹಾರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ನಡೆದಿದೆ. ಆರೋಪಿ ನಂಜುಂಡಿ ಬೂದಿಹಾಳ ಎಂಬಾತ ಯೋಧ ಬಸಪ್ಪ ಬಂಬರಗಾ ಮೇಲೆ ಗುಂಡುಹಾರಿಸಿ ಹತ್ಯೆಗೆ ಯತ್ನಿಸಿದ್ದಾನೆ.
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ಹಿನ್ನಲೆ ಇಂದು ಬೆಂಗಳೂರು ಬಂದ್ ಮಾಡಲಾಗಿತ್ತು. ಅದರಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ‘ಬಂದ್ ಡಿಸಿಎಂಗೆ ಅಗತ್ಯವಿಲ್ಲದಿರಬಹುದು, ರಾಜ್ಯಕ್ಕೆ ಬಂದ್ ಅಗತ್ಯವಿದೆ ಎಂದಿದ್ದಾರೆ.
ರಾಯಚೂರು: ಸುಕ್ಷೇತ್ರ ಅಕ್ಕಲಕೋಟೆಯ ಮಠದ ಚಿಕ್ಕರೇವಣಸಿದ್ದ ಶವಶರಣರು(65) ಲಿಂಗೈಕ್ಯರಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಇದೇ ಅಕ್ಟೋಬರ್ 10 ಕ್ಕೆ 66 ನೇ ವಸಂತೋತ್ಸವ ಆಚರಿಸಿಕೊಳ್ಳಬೇಕಿದ್ದರು. ಮಹಾರಾಷ್ಟ್ರದ ಅಕ್ಕಲಕೋಟೆಯ ಶ್ರೀಮಠದ ಸ್ವಾಮಿಗಳಾಗಿದ್ದ ಸದ್ಗುರು ಚಿಕ್ಕರೇವಣಸಿದ್ದ ಶಿವಶರಣರು, ಕಳೆದ ಆರು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಬೆಂಗಳೂರು: ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶ ರಾಜ್ಯದ ಪಾಲಿಗೆ ಮರಣ ಶಾಸನ ಎಂದು ಟ್ವೀಟ್ ಮೂಲಕ CWRC ಆದೇಶವನ್ನು ಮಾಜಿ ಸಿಎಂ ಯಡಿಯೂರಪ್ಪ ಅವರು ಖಂಡಿಸಿದ್ದಾರೆ. ತಮಿಳುನಾಡಿಗೆ ಮತ್ತೆ ನೀರು ಹರಿಸಿದರೆ ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆಯಾದಂತೆ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಕಾವೇರಿ ಪ್ರಾಧಿಕಾರದ ಆದೇಶ ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ಮತ್ತೆ ನೀರು ಬಿಟ್ಟರೆ, ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆಯಾದಂತೆಯೇ ಸರಿ. ಕಾವೇರಿ ನೀರಿನ ಕುರಿತಂತೆ ರಾಜ್ಯ ಸರ್ಕಾರದ ನಿರ್ಲಕ್ಷ್ಯತನದಿಂದ ಇಂದು ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬರದ ಮಧ್ಯೆ ತಮಿಳುನಾಡಿಗೆ ಈಗಾಗಲೇ ಹೆಚ್ಚಿನ ನೀರು ಬಿಟ್ಟು,…
— B.S.Yediyurappa (@BSYBJP) September 26, 2023
ಮೈಸೂರು: ತಮಿಳುನಾಡಿಗೆ ಮತ್ತೆ 18 ದಿನ ನೀರು ಹರಿಸುವಂತೆ CWRC ಆದೇಶ ವಿಚಾರ ‘ಕಾನೂನು ತಜ್ಞರ ಜೊತೆ ಚರ್ಚೆ ಬಳಿಕ ಸರ್ಕಾರದ ನಿರ್ಧಾರ ತಿಳಿಸುತ್ತೇನೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಸೆ.28ರಿಂದ 18 ದಿನ ನೀರು ಹರಿಸುವಂತೆ CWRC ಆದೇಶ ನೀಡಿದೆ. ಹೀಗಾಗಿ ನಾವು ತೀರ್ಮಾನ ತೆಗೆದುಕೊಳ್ಳಲು ಇನ್ನೂ ಸಮಯವಿದೆ ಎಂದರು.
ಬೆಂಗಳೂರು: ಇಂದು ಕಾವೇರಿ ನೀರಿಗೆ ಸಂಬಂಧಪಟ್ಟಂತೆ ಕೆಲ ಸಂಘಟನೆ, ರಾಜಕೀಯ ಪಕ್ಷಗಳು ಬಂದ್ಗೆ ಕರೆ ನೀಡಿದ್ದವು. ಅದರಂತೆ ಬೆಂಗಳೂರು ನಗರದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ. ಇಂದು ಬೆಳಗ್ಗೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ಬಿಜೆಪಿಯ ಮೂವರು ಶಾಸಕರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಬಿಡುಗಡೆ ಮಾಡಲಾಗಿದೆ ಎಂದರು.
ಮಂಡ್ಯ: ಮತ್ತೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ಹಿನ್ನೆಲೆ ಮಂಡ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಇಂದು(ಸೆ.26) ಬೆಂಗಳೂರಿನ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿದ್ದರು. ಈ ಹಿನ್ನಲೆ ಬಿಡುಗಡೆಗಾಗಿ ಪೊಲೀಸ್ ಠಾಣೆ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಇನ್ನೂ ಕೂಡ ಶಾಸಕ ರಾಮಮೂರ್ತಿಯನ್ನು ಪೊಲೀಸರು ಬಿಡುಗಡೆಗೊಳಿಸಿಲ್ಲ.
ತುಮಕೂರು: ಕಲುಷಿತ ಆಹಾರ ಸೇವಿಸಿ 25ಕ್ಕೂ ಹೆಚ್ಚು ಮಂದಿ ಅಸ್ವಸ್ತರಾದ ಘಟನೆ ತುಮಕೂರು ತಾಲ್ಲೂಕಿನ ಶೆಟ್ಟಪ್ಪನಹಳ್ಳಿಯಲ್ಲಿ ನಡೆದಿದೆ. ವಾಂತಿ-ಭೇದಿ, ಸುಸ್ತಿನಿಂದ ಬಳಲುತ್ತಿದ್ದು, 6ಮಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಗಣೇಶ ವಿಸರ್ಜನೆ ಸಮಯದಲ್ಲಿ ಪ್ರಸಾದ ಸೇವಿಸಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು: ತಮಿಳುನಾಡಿಗೆ ಮತ್ತೆ 18 ದಿನ ನೀರು ಹರಿಸುವಂತೆ CWRC ಆದೇಶ ‘ತಮಿಳುನಾಡು 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕೇಳಿತ್ತು. ಆದರೆ, CWRC ತಮಿಳುನಾಡು ಮನವಿ ತಿರಸ್ಕರಿಸಿದ್ದು. ಬಹಳ ಸಂತಸವಾಗಿದೆ ಎಂದು ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು ಗ್ರಾಮಾಂತರ: ತಮಿಳುನಾಡಿಗೆ ಕಾವೇರಿ ನೀರು, ‘ಸರ್ಕಾರ ಹಾಗೂ ಸಂಘಟನೆ ಜನರ ಎಲ್ಲರೂ ಅಭಿಪ್ರಾಯವೂ ಒಂದೇ. ಸರ್ಕಾರದ ಜೊತೆ ಎಲ್ಲರೂ ನಿಂತರೆ ಶಕ್ತಿ ಬರಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ‘ಸುಪ್ರೀಂಕೋರ್ಟ್ ಬಳಿ ಹನಿ ನೀರು ಕೊಡಲು ಸಾಧ್ಯವಿಲ್ಲವೆಂದು ಹೇಳಿದ್ದೇವೆ. ಬಂದ್ ಮಾಡೋದ್ರಿಂದ ಯಾವುದೇ ಪ್ರಯೋಜನವಾಗಲ್ಲ. ನಮ್ಮ ಭಿನ್ನಾಭಿಪ್ರಾಯಗಳು ಬೇರೆ ಇದ್ದು, ಸರ್ಕಾರ ಸಕಾರಾತ್ಮಕವಾಗಿ ಕೆಲಸ ಮಾಡ್ತಿಲ್ಲ ಅಂದಾಗ ಪ್ರತಿಭಟನೆ ಮಾಡಬಹುದು. ನಾವೆಲ್ಲರೂ ಸೇರಿ ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರೋಣ ಎಂದು ಖರ್ಗೆ ಹೇಳಿದರು.
ಮೈಸೂರು: ಕಾವೇರಿ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಮೈಸೂರು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ‘ರಾಜಕೀಯ ಕಾರಣಕ್ಕೆ ಬಿಜೆಪಿ, ಜೆಡಿಎಸ್ ಹೋರಾಟ ಮಾಡುತ್ತಿದ್ದು, ರಾಜ್ಯ ಸರ್ಕಾರದ ವೈಫಲ್ಯದಿಂದ ನೀರು ಹೋಗಿದೆ ಎಂದು ಹೇಳುತ್ತಾರೆ. ಹೆಚ್.ಡಿ.ದೇವೇಗೌಡ, ಯಡಿಯೂರಪ್ಪ ಕಾಲದಲ್ಲೂ ಅದೇ ತಂಡ ಇತ್ತು. ನಮ್ಮ ಕಾಲದಲ್ಲೂ ಅದೇ ವಕೀಲರ ತಂಡವಿದೆಯೆಂದು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: KRS ಡ್ಯಾಂನಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ಹಾಸನದಲ್ಲಿ ಮಾಜಿ ಪ್ರಧಾನಿ, JDS ವರಿಷ್ಠ ಹೆಚ್.ಡಿ.ದೇವೇಗೌಡ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ‘ಭಾರತ-ಬಾಂಗ್ಲಾ ನಡುವಿನ 30 ವರ್ಷದ ನೀರಿನ ಸಮಸ್ಯೆಯನ್ನ ನನಗೆ ಸಿಕ್ಕ 10 ತಿಂಗಳ ಅಧಿಕಾರ ಅವಧಿಯಲ್ಲಿಯೇ ಬಗೆಹರಿಸಿದ್ದೆ ಎಂದಿದ್ದಾರೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ 10 ವರ್ಷ ಆಡಳಿತ ನಡೆಸಿದ್ದರು. ಈಗಿನ ಎನ್ಡಿಎ ನೇತೃತ್ವದ ಸರ್ಕಾರ 2ನೇ ಬಾರಿ ಆಡಳಿತ ನಡೆಸುತ್ತಿದೆ. ಪರೋಕ್ಷವಾಗಿ ಕಾವೇರಿ ವಿವಾದ ಪರಿಹರಿಸಲು ಅವಕಾಶವಿದೆ ಎಂದಿದ್ದಾರೆ.
ಮೈಸೂರು: ತಮಿಳುನಾಡಿಗೆ ಮತ್ತೆ 18 ದಿನ ನೀರು ಹರಿಸುವಂತೆ CWRC ಆದೇಶ ನೀಡಿದೆ. ಇದರಿಂದ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶ ಖಂಡಿಸಿ ಮೈಸೂರಿನ ಗನ್ಹೌಸ್ ಬಳಿ ಮಾನವ ಸರಪಳಿ ನಿರ್ಮಿಸಿ, ರಾಜ್ಯ ಸರ್ಕಾರದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. CWRCಯಲ್ಲಿ ಕರ್ನಾಟಕ ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾಗಿದೆ. ತಮಿಳುನಾಡು, ಕರ್ನಾಟಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು: ಶಿವಮೊಗ್ಗ ಭದ್ರಾ ಡ್ಯಾಂ ನಿಂದ ನೀರು ಬಿಡುಗಡೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉರುಳು ಸೇವೆ ಮಾಡಿದ್ದಾರೆ. ಈ ಹಿಂದೆ ನೂರು ದಿನ ನೀರು ಬಿಡುವ ಬಗ್ಗೆ ಲಖಿತ ಆದೇಶ ನೀಡಲಾಗಿತ್ತು. ಇದನ್ನೆ ನಂಬಿ ದಾವಣಗೆರೆ ಜಿಲ್ಲೆಯ ರೈತರು ಭತ್ತ ನಾಟಿಮಾಡಿದ್ದು. ಆದ್ರೆ, ಈಗ ನೀರು ನಿಲುಗಡೆ ಮಾಡಿದ್ದು ಸರಿಯಲ್ಲ. ತಕ್ಷಣಕ್ಕೆ ಭದ್ರಾ ಡ್ಯಾಂನಿಂದ ಭದ್ರಾ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ನವದೆಹಲಿ: ಕಾವೇರಿ ನೀರು ಹರಿಸಲು ಆದೇಶ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಯಿತು. ವರ್ಚುವಲ್ ಮೂಲಕ ನಡೆದ ನಿಯಂತ್ರಣ ಸಮಿತಿ ಸಭೆಯಲ್ಲಿ ಕರ್ನಾಟಕ, ತಮಿಳುನಾಡು ಅಧಿಕಾರಿಗಳು ವರ್ಚುವಲ್ ಮೂಲಕ ಭಾಗಿಯಾಗಿ, ವಾಸ್ತವ ಸ್ಥಿತಿಯನ್ನು ತಿಳಿಸಿದರು. ಎರಡು ಕಡೆಯ ವಾದವನ್ನು ಆಲಿಸಿದ ಸಮಿತಿ ತಮಿಳುನಾಡಿಗೆ ಮುಂದಿನ 15 ದಿನ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ್ಕೆ ಆದೇಶ ನೀಡಿದೆ.
ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ಎಲ್ಲ ಸಂಘಟನೆಗಳು ಬಂದ್ಗೆ ಕರೆ ನೀಡಿವೆ. ನಮ್ಮ ಹೋರಾಟದ ಜೊತೆ ಸರ್ಕಾರವು ಇರುತ್ತೆ. ನಿಮ್ಮ ಹೋರಾಟದ ವಿಚಾರ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇವೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಸಂಕಷ್ಟ ಸೂತ್ರದಡಿ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಕ್ರಮಕೈಗೊಳ್ಳಬೇಕು. ಕಾವೇರಿ ವ್ಯಾಪ್ತಿಯ ನಾಲ್ಕು ರಾಜ್ಯಗಳ ಸಿಎಂಗಳನ್ನು ಕರೆದು ಸಭೆ ಮಾಡಬೇಕು. ನಾವು ಕೂಡ ನಿಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ನಿಮ್ಮ ಮನವಿಗಳನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಚರ್ಚೆ ಮಾಡುತ್ತೇವೆ ಎಂದು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಶಿವಮೊಗ್ಗ: ತಮಿಳುನಾಡಿಗೆ ಕಾವೇರಿ ನೀರು ಹರಿ ಬಿಡುತ್ತಿರುವ ಹಿನ್ನೆಲೆಯಲ್ಲಿ ತಮಿಳ್ ಸೇವಾ ಸಂಘ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದೆ.
ಕಾವೇರಿ ನೀರು ಹರಿಸಲು ಆದೇಶ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಆರಂಭವಾಗಿದೆ. ಸಭೆಯಲ್ಲಿ ಕರ್ನಾಟಕ ವಾಸ್ತವ ಸ್ಥಿತಿಯನ್ನು ಸಮಿತಿಗೆ ಮನವರಿಕೆ ಮಾಡಿಕೊಡುತ್ತಿದೆ. 25.09.2023 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಟ್ಟೂ ಒಳಹರಿವಿನ ಕೊರತೆ ಶೇ 53.04 ರಷ್ಟು ಆಗಿದೆ. ಕರ್ನಾಟಕ ಸರ್ಕಾರವು ದಿನಾಂಕ 13.09.2023 ರ ಆದೇಶದಲ್ಲಿ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು 34 ತಾಲೂಕುಗಳನ್ನು ಮಧ್ಯಮ ಬರ ಪೀಡಿತ ಎಂದು ಘೋಷಿಸಿದೆ. ಈ ಪೈಕಿ 32 ತೀವ್ರ ಬರ ಪೀಡಿತ ತಾಲೂಕುಗಳು ಮತ್ತು 15 ಮಧ್ಯಮ ಬರ ಪೀಡಿತ ತಾಲೂಕುಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ. ಈ ಅಂಶವು ಸಮಿತಿ ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿಕೊಂಡಿದೆ. ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ. ರಾಜ್ಯದ ಜಲಾಶಯಗಳಿಂದ ಯಾವುದೇ ಹರಿವನ್ನು ಅಂತಾರಾಜ್ಯ ಗಡಿಯಾದ ಬಿಳಿಗುಂಡ್ಲುನಲ್ಲಿ ನಿರ್ವಹಿಸಲು ಸಾಧ್ಯವಿಲ್ಲ ಎಂದಿದೆ.
ಬೆಂಗಳೂರು: ಬೆಂಗಳೂರು ಪೊಲೀಸ್ ರಾಜ್ಯವಾಗಿದೆ. ಪ್ರತಿಭಟನೆ ಮಾಡುವುದಕ್ಕೆ ಬಿಡದೆ ನಮ್ಮನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಮೂಲಕ ಸರ್ಕಾರ ಪ್ರತಿಭಟನಾಕಾರರನ್ನು ಹತ್ತಿಕ್ಕುತ್ತಿದೆ. ಹೋರಾಟ ಹತ್ತಿಕ್ಕಲು ಪೊಲೀಸ್ ಫೋರ್ಸ್ ಬಳಸಬಾರದು. ಹೋರಾಟಗಾರರು ರಾಜ್ಯದ ಒಳತಿಗಾಗಿ ಬೀದಿಗಿಳಿದಿದ್ದಾರೆ. ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು. ಇಲ್ಲವಾದರೇ ಸೆ.29ರಂದು ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ ಎಚ್ಚರಿಕೆ ನೀಡಿದರು.
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕೆಆರ್ಎಸ್ ಜಲಾಶಯದಲ್ಲಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ ನಡೆಸಿದೆ. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ಕಾರ್ಯಕರ್ತರು ಕೆಆರ್ಎಸ್ ಡ್ಯಾಂಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರಾಜಭವನದ ಎದುರು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಸೇರಿದಂತೆ ಹಲವರು ರಾಜಭವನ ಪ್ರವೇಶಿಸಲು ಯತ್ನಿಸಿದ್ದು, ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ.
ಮೈಸೂರು: ಕಾವೇರಿ ನೀರಿಗಾಗಿ ಮೈಸೂರು ಬ್ರಾಹ್ಮಣ ಸಂಘ ಸಾಮೂಹಿಕ ಭಜನೆ ಮಾಡುವ ಮೂಲಕ ಪ್ರತಿಭಟನೆ ಮಾಡುತ್ತಿದೆ. ಶಂಖ ಜಾಗಟೆ ಘಂಟಾ ನಾದದ ಮೂಲಕ ವಿನೂತನ ಪ್ರತಿಭಟನೆ ಮಾಡುತ್ತಿದೆ. ಮೈಸೂರು ಜಿಲ್ಲಾ ಪಂಚಾಯತಿ ಮುಂಭಾಗ ಪ್ರತಿಭಟನೆ ಮಾಡುತ್ತಿದ್ದಾರೆ.
ಬೆಂಗಳೂರು: ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆ ನಡೆಯುತ್ತಿದೆ. ಕೆಆರ್ಎಸ್ ಜಲಾಶಯಕ್ಕೆ ಒಳಹರಿವು ಪ್ರಮಾಣ ಹೆಚ್ಚಾಗುತ್ತಿದೆ. ಕೆಆರ್ಎಸ್ಗೆ ಸುಮಾರು 10 ಸಾವಿರ ಕ್ಯೂಸೆಕ್ ಒಳಹರಿವು ಇದೆ. ರಾಜ್ಯದ ಹಿತಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು ಬಂದ್ಗೆ ವಕೀಲರ ಸಂಘ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಕಾವೇರಿ ನಮ್ಮದು ಎಂದು ಘೋಷಣೆ ಕೂಗಿದ್ದಾರೆ.
ಕಾವೇರಿ ನೀರು ವಿಚಾರವಾಗಿ ಹೆಚ್ಡಿ ದೇವೇಗೌಡರು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರವನ್ನು ನಾವು ಸ್ವಾಗತಿಸುತ್ತೇವೆ. ಈಗ ಅವರದ್ದು ಬಿಜೆಪಿ ಜೊತೆಗೆ ಹೊಸ ಪ್ರೇಮ ಬೆಳದಿದೆ. ಅವರು ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಲಿ. ಆದರೆ ಸರ್ಕಾರ ಸರಿಯಾದ ನಿರ್ಧಾರ ಕೈಗೊಳ್ಳಲಿಲ್ಲ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿರುವುದನ್ನು ನಾವು ಒಪ್ಪುವುದಿಲ್ಲ. ಸರ್ಕಾರ ಎಲ್ಲಾ ಹಂತದಲ್ಲೂ ನಾಡಿನ ಜನರ ರಕ್ಷಣೆಗೆ ಬದ್ಧವಾಗಿಯೇ ಇದೆ. ಕಾನೂನು ತಜ್ಞರು ಸರಿಯಾಗಿ ವಾದ ಮಾಡಿಲ್ಲ ಎಂಬ ಆರೋಪಗಳು ಸುಳ್ಳು. ಹಿಂದಿನ ಎಲ್ಲಾ ಸರ್ಕಾರಗಳು ಇದ್ದಾಗಲೂ ಇದ್ದ ಲೀಗಲ್ ಟೀಮ್ ಈಗಲೂ ಇದೆ. ಅವರೇ ವಾದ ಮಾಡಿದ್ದಾರೆ. ಕಾನೂನು ತಜ್ಞರಲ್ಲಿ ಯಾವ ಬದಲಾವಣೆ ಆಗಿಲ್ಲ. ಹೀಗಾಗಿ ಸಮರ್ಥ ವಾದ ಮಂಡಿಸಿಲ್ಲ ಎಂಬುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಕಾವೇರಿ ನೀರು ಹರಿಸಲು ಆದೇಶ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಆರಂಭವಾಗಿದೆ. ವರ್ಚುವಲ್ ಮೂಲಕ ನಡೆಯುತ್ತಿರುವ ನಿಯಂತ್ರಣ ಸಮಿತಿ ಸಭೆಯಲ್ಲಿ ಕರ್ನಾಟಕ, ತಮಿಳುನಾಡು ಅಧಿಕಾರಿಗಳು ವರ್ಚುವಲ್ ಮೂಲಕ ಭಾಗಿಯಾಗಿದ್ದಾರೆ.
ಮೇಕೆದಾಟು ಯೋಜನೆಯಿಂದ ಕಾವೇರಿ ನೀರಿನ ಸಮಸ್ಯೆ ಇತ್ಯರ್ಥ ಪಡಿಸಬಹುದು. ಕರ್ನಾಟಕ-ತಮಿಳುನಾಡು ನಡುವಿನ ನೀರಿನ ಸಮಸ್ಯೆ ಬಗೆಹರಿಸಬಹುದು. ಮೇಕೆದಾಟು ಯೋಜನೆಗೆ ಅನುಮತಿ ನೀಡಿದರೆ ಸಮಸ್ಯೆ ಸರಿಪಡಿಸಬಹುದು. ಮೇಕೆದಾಟು ಡ್ಯಾಂ ನಿರ್ಮಿಸಿದರೆ 67 ಟಿಎಂಸಿ ನೀರು ಸಂಗ್ರಹಿಸಬಹುದು. ಮಳೆ ಕೊರತೆ ಸಂದರ್ಭದಲ್ಲಿ ಉಭಯ ರಾಜ್ಯಗಳು ನೀರು ಬಳಸಬಹುದು ಎಂದು ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಅವಕಾಶವಿದೆ. ಪ್ರತಿಭಟನೆ ಮಾಡುವುದಕ್ಕೆ ನಾವು ಯಾವುದೇ ಅಡ್ಡಿಪಡಿಸುವುದಿಲ್ಲ. ಕಾವೇರಿ ನದಿ ವಿಚಾರದಲ್ಲಿ ವಿಪಕ್ಷಗಳು ರಾಜಕೀಯ ಮಾಡುತ್ತೀವೆ. ಜನರ ಹಿತಕ್ಕಾಗಿ ವಿಪಕ್ಷಗಳು ಹೋರಾಟ ಮಾಡುತ್ತಿಲ್ಲ. ಕರ್ನಾಟಕ ಜನರ ಹಿತ ಕಾಪಾಡುವುದು ನಮ್ಮ ಸರ್ಕಾರ ಬದ್ಧ. ಕಾವೇರಿ ವಿಚಾರದಲ್ಲಿ ನಾವು ವಿಫಲವಾಗಿದ್ದೇವೆ ಅನ್ನೋದು ಸರಿಯಲ್ಲ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು ನಗರ ಬಂದ್ಗೆ ಜೆಡಿಎಸ್ ಪಕ್ಷ ಬೆಂಬಲ ನೀಡಿದೆ. ನಮ್ಮ ನೋವು ನಮ್ಮ ಪಕ್ಕದ ರಾಜ್ಯದವರು ಅರ್ಥ ಮಾಡಿಕೊಳ್ಳಬೇಕು. ಸ್ವಲ್ಪವಾದರೂ ಬದಲಾವಣೆಗೆ ಮುಂದಾಗಲಿ ಎಂದು ಬಂದ್ ಮಾಡಲಾಗುತ್ತಿದೆ. ತಮಿಳುನಾಡು ರೈತರು ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಮನಸಿನ ನೋವಿನ ಸಂದೇಶವನ್ನು ಶಾಂತಿಯುತವಾಗಿ ಕಳಿಸಬೇಕು. ಹೀಗಾಗಿ ಬೆಂಗಳೂರು ನಗರ ಬಂದ್ಗೆ ಜೆಡಿಎಸ್ ಪಕ್ಷ ಬೆಂಬಲ ನೀಡಿದೆ. ರೈತರು, ಕನ್ನಡಪರ ಸಂಘಗಳ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಬೆಂಬಲ ನೀಡಬೇಕು. ಮಾಜಿ ಮುಖ್ಯಮಂತ್ರಿಗಳಾದ ಹೆಚ್ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಎಲ್ಲರೂ ಬೆಂಬಲ ಕೊಟ್ಟಿದ್ದಾರೆ. ಎಲ್ಲರೂ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಹೇಳಿದರು.
ಕಾವೇರಿ ಸಮಸ್ಯೆ ಈ ವರ್ಷವೂ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು ರೈತರು ಹೋರಾಟ ನೆಡೆಸುತ್ತಿದ್ದಾರೆ. ಕನ್ನಡದ ನೆಲ ಜಲ ಭಾಷೆಯ ಎಲ್ಲ ಹೋರಾಟಗಳಲ್ಲಿ ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಮುಂಗಾರುಮಳೆಯ ಅಭಾವದಿಂದ ರೈತರಿಗೆ ಜನತೆಯ ಕೃಷಿ ಮಾತ್ರವಲ್ಲದೆ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಮುಂಗಾರಿನ ಹೊರತಾಗಿ ನಮಗೆ ಕುಡಿಯುವ ನೀರಿಗಾಗಿ ಬೇರೆ ಮೂಲಗಳಿಲ್ಲ ನಾವು ಕಾವೇರಿಯನ್ನೇ ನಂಬಿದ್ದೇವೆ. ನಾನು ತಿಳಿದುಕೊಂಡಂತೆ ಬರ ಅಧ್ಯಯನ ಸಮಿತಿ- ಕಾವೇರಿ ಸಮಿತಿಯ ತಂತ್ರಜ್ಞ ರು ಕೂಡಲೇ ಟ್ರಬಿನಲ್ ನ್ಯಾಯಾಲಯಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತುತ ಕರ್ನಾಟಕ ದ ಬರ ಪರಿಸ್ಥಿತಿ ಯನ್ನು ತುರ್ತಾಗಿ ಮನವರಿಕೆ ಮಾಡಿಕೊಡಬೇಕಿದೆ. ಹಿಂದಿನ ಕೆಲವು ಮುಖ್ಯಮಂತ್ರಿ ಗಳಂತೆಯೇ ನಮ್ಮ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ತಮಿಳುನಾಡಿನ ಮುಖ್ಯ ಮಂತ್ರಿಗಳೊಂದಿಗೆ ಸೌಹಾರ್ದ ಮಾತುಕತೆ ಯ ಮೂಲಕ ಸಮಸ್ಯೆಯನ್ನು ತಾತ್ಕಾಲಿಕ ವಾಗಿ ಬಗೆಹರಿಸಬಹುದು ಎಂದು ಹಿರಿಯರು ಹೇಳಿದ್ದನ್ನು ಕೇಳಿ ತಿಳಿದುಕೊಂಡಿದ್ದೇನೆ. ಸದ್ಯದ ಬರ -ಜಲ ಹಾಹಾಕಾರಕ್ಕೆ ಪರಿಹಾರ ಒದಗಿಸಲು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ದ ಪರಿಸ್ಥಿಯನ್ನು ಅರ್ಥ ಮಾಡಿಸಲು ಎಲ್ಲ ಪಕ್ಷದ ನಾಯಕರು ಒಗ್ಗಟ್ಟಾಗಿ ಮುಂದಾಗಲು ಮನವಿ ಮಾಡುತ್ತೇನೆ ತಮಿಳುನಾಡು ರೈತರಿಗೂ ಕುರವೈ ಬೆಳೆಗೆ ನೀರು ಸಿಗಲಿ ಆದರೆ ನಮ್ಮ ಕುಡಿಯುವ ನೀರಿನ ಅಭಾವ ಮೊದಲು ಬಗೆಹರಿಯಲಿ.ಆದಷ್ಟು ಬೇಗ ಈ ಸಮಸ್ಯೆ ಬಗೆ ಹರಿದು ಹೋರಾಟಕ್ಕೆ ಜಯವಾಗಲಿ, ಇದರ ಜೊತೆಗೆ ಉತ್ತರ ಕರ್ನಾಟಕದ ಕೃಷ್ಣಾ ನದಿ -ಮಹದಾಯಿ ನದಿ ಮತ್ತು ಕಳಸಾ ಬಂಡೂರಿ ವಿವಾದಗಳು ಬಗೆ ಹರಿದು ಜನರ ಸಂಕಷ್ಟ ತೀರಲೆಂದು ಆಶಿಸುವೆ. ನಮ್ಮ ಜಲ ನಮ್ಮ ಹಕ್ಕು ಎಂದು ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಕಾವೇರಿ ನೀರು ವಿವಾದ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತಿದ್ದ ವೇಳೆ ರೈತ ಮತ್ತೆ ಮರಕ್ಕೆ ನೇಣು ಹಾಕಿಕೊಳ್ಳುವ ಯತ್ನಿಸಿದ್ದಾನೆ. ಎರಡನೇ ಬಾರಿ ನೇಣು ಹಾಕಿಕೊಳ್ಳಲು ಯತ್ನಿಸಿದ ವೇಳೆ ಪೊಲೀಸರು ತಡೆದಿದ್ದಾರೆ. ಇನ್ನು ರೈತ ಅಸ್ವಸ್ಥಗೊಂಡಿದ್ದಾರೆ.
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಬಂದೋಬಸ್ತ್ನಲ್ಲಿದ್ದ ಯಶವಂತಪುರ ಟ್ರಾಫಿಕ್ ಪೊಲೀಸರಿಗೆ ತಂದಿದ್ದ ಊಟದಲ್ಲಿ ಇಲಿ ಪತ್ತೆಯಾಗಿದೆ. ಊಟದಲ್ಲಿ ಇಲಿ ಕಂಡು ಪೊಲೀಸರು ಶಾಕ್ ಆಗಿದ್ದಾರೆ.
ಬೆಂಗಳೂರು: ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಆರ್ಎಎಫ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವಂತೆ ಆಗ್ರಹಿಸಿ ಕರೆ ನೀಡಿರುವ ಬೆಂಗಳೂರು ಬಂದ್ ಅಂಗವಾಗಿ ರೈತರು ಬಾರುಕೋಲು ಬೀಸುವ ಮೂಲಕ ಪ್ರತಿಭಟನೆ ನಡೆಸುತ್ತಿದೆ.
VIDEO | A group of farmers stage protest as part of the ‘Bengaluru bandh’ called by them over the release of Cauvery river water to Tamil Nadu. pic.twitter.com/14J7uH3D0W
— Press Trust of India (@PTI_News) September 26, 2023
ಬೆಂಗಳೂರು: ಇಂದಿನ ಬೆಂಗಳೂರು ಬಂದ್ ಗೆ ನಮ್ಮ ಬೆಂಬಲ ಇಲ್ಲ. ಆದರೆ ನಮ್ಮ ಹೋರಾಟ ನಿರಂತರವಾಗಿರುತ್ತೆ. ಕನ್ನಡ ಭಾಷೆ, ನೆಲ, ಜಲ ಅಂತ ಬಂದಾಗ ನಮ್ಮ ಹೋರಾಟ ಮುಂಚೂಣಿಯಲ್ಲಿರುತ್ತೆ. ಜನರೂ ಸ್ವಯಂ ಪ್ರೇರಿತರಾಗಿ ಬಂದ್ಗೆ ಬೆಂಬಲ ಕೊಡುತ್ತಿದ್ದಾರೆ. ಇಂದು ನಾವು ರಾಜಭವನಕ್ಕೆ ತೆರಳಿ ಮುತ್ತಿಗೆ ಹಾಕಲಿದ್ದೇವೆ. ವಾಟಳ್ ನಾಗರಾಜ್ ಅವರ ಜೊತೆಗೂಡಿ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ. ಇದು ರಾಜಕೀಯ ಪಕ್ಷಗಳು ಸೇರಿಕೊಂಡು ಮಾಡುತ್ತಿರುವ ಬಂದ್. ಕೇಂದ್ರ ಹಾಗೂ ರಾಜ್ಯ ಸರ್ಕಾರ ರಾಜ್ಯದ ಜನರ ಹಿತ ಕಾಪಾಡಬೇಕು. ಎರಡು ದೇಶಗಳ ನಡುವಿನ ಸಮಸ್ಯೆಗಳನ್ನೇ ಪ್ರಧಾನಿಯವರು ಬಗೆಹರಿಸುತ್ತಾರೆ. ಇದು ಎರಡು ರಾಜ್ಯಗಳ ನಡುವಿನ ಸಮಸ್ಯೆ, ಇದನ್ನ ಸುಲಭವಾಗಿ ಬಗೆಹರಿಸಬಹುದು. ಸೋನಿಯಾ ಗಾಂಧಿ ತಮಿಳುನಾಡಿನ ಸಿಎಂ ಸ್ಟಾಲಿನ್ ಹಾಗೂ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಬೇಕು. ನೀರು ಬಿಡಲು ಸಾಧ್ಯವಿಲ್ಲ ಅಂತ ಹೇಳಬೇಕು. ಇದೇ ತಿಂಗಳ 29ರಂದು ಕರ್ನಾಟಕ ಬಂದ್ ಮಾಡಲಿದ್ದೇವೆ. ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನ ಕೂಡಲೇ ನಿಲ್ಲಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು.
ಮೈಸೂರು: ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಕಾವೇರಿ ನದಿ ವಿವಾದ ಉದ್ಭವವಾಗಿದೆ. ರಾಜ್ಯದ ನಾಯಕರು ಅವರವರ ಹೊಡೆದಾಟದಲ್ಲಿ ಮುಳುಗಿರಬೇಕು. ಕಾಂಗ್ರೆಸ್ನವರು ತಮಿಳುನಾಡನ್ನು ಓಲೈಸಿಕೊಳ್ಳಲು ಮುಂದಾಗಿರಬೇಕು. ಸರ್ಕಾರ ಸರಿಯಾಗಿ ಕಾವೇರಿ ಕೊಳ್ಳದ ಅಧ್ಯಯನ ನಡೆಸದೇ ಇರಬಹುದು. ಹೀಗಾಗಿಯೇ ರಾಜ್ಯ ಸರ್ಕಾರ ಪ್ರಾಧಿಕಾರಕ್ಕೆ ಸೂಕ್ತ ಮಾಹಿತಿ ನೀಡಿಲ್ಲ. ಸರ್ಕಾರ ನ್ಯಾಯಾಲಯಕ್ಕೂ ಕೂಡ ಸೂಕ್ತ ಅಂಕಿ ಅಂಶ ನೀಡಿಲ್ಲ. ಇದರ ಬದಲು ಪ್ರಧಾನಿಯನ್ನು ದೂರುವ ಕೆಲಸ ಮಾಡುತ್ತಿದ್ದಾರೆ. ಮೋದಿ ಕೇವಲ ತಮಿಳುನಾಡು, ಕರ್ನಾಟಕಕ್ಕೆ ಪ್ರಧಾನಿ ಅಲ್ಲ, ಬೇರೆ ರಾಜ್ಯಗಳ ಜಲ ವಿವಾದ ಕೂಡ ಪ್ರಧಾನಿಗಳು ಬಗೆಹರಿಸಬೇಕಿದೆ. ಕೇಂದ್ರ ಸರ್ಕಾರ, ಬಿಜೆಪಿ ರಾಜ್ಯದ ರೈತರು, ಕನ್ನಡ ಸಂಘಗಳ ಜೊತೆಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬೆಂಗಳೂರು ಬಂದ್ಗೆ ಕನ್ನಡ ಚಿತ್ರೋದ್ಯಮ ಸಂಪೂರ್ಣ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ಬಂದ್ ಆಗಿದೆ. ಅಲ್ಲದೇ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಸ್ಥಗಿತ ಮಾಡಲಾಗಿದೆ. ಬಂದ್ ಗೆ ಬೆಂಬಲ
ನಗರದಲ್ಲಿ ಇವತ್ತು ಚಿತ್ರಮಂದಿರಗಳಲ್ಲಿ ಇಂದು ಸಿನಿಮಾ ಪ್ರದರ್ಶನವಿಲ್ಲ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಟೆಲಿವಿಷನ್ ಅಸೋಸಿಯೇಷನ್ ಕೋಡ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಸೀರಿಯಲ್ ಹಾಗೂ ರಿಯಾಲಿಟಿ ಶೋ ಚಿತ್ರೀಕರಣಗಳು ನಡೆಯುತ್ತಿಲ್ಲ.
ಬೆಂಗಳೂರು: ಇದೆಂಥಾ ಚೋದ್ಯ? ಒಂದು ಕಡೆ ಮೇಕೆದಾಟು ಬೇಕು ಎಂದು ಪಾದಯಾತ್ರೆ ಮಾಡಿದವರನ್ನು, ಕಾವೇರಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ರೈತರನ್ನು, ಹೋರಾಟಗಾರರನ್ನು ಬಂಧಿಸಿದ್ದಾರೆ. ರಾತ್ರೋರಾತ್ರಿ ಹೋರಾಟಗಾರರನ್ನು ಬಂಧಿಸಿರುವುದು ಕಾಂಗ್ರೆಸ್ ಸರಕಾರದ ಕಿಡಿಗೇಡಿತನದ ಪರಮಾವಧಿ. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಒಂದು ನ್ಯಾಯ, ಕನ್ನಡಿಗರಿಗೆ ಇನ್ನೊಂದು ನ್ಯಾಯ ಎನ್ನುವುದು ಇದೆಯಾ? ಎಂದು ಮಾಜಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಇದೆಂಥಾ ಚೋದ್ಯ? ಒಂದು ಕಡೆ ಮೇಕೆದಾಟು ಬೇಕು ಎಂದು ಪಾದಯಾತ್ರೆ ಮಾಡಿದವರು, ಇಂದು ಕಾವೇರಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ರೈತರನ್ನು, ಹೋರಾಟಗಾರರನ್ನು ಬಂಧಿಸಿದ್ದಾರೆ. ರಾತ್ರೋರಾತ್ರಿ ಹೋರಾಟಗಾರರನ್ನು ಬಂಧಿಸಿರುವುದು @INCKarnataka ಸರಕಾರದ ಕಿಡಿಗೇಡಿತನದ ಪರಮಾವಧಿ. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಒಂದು ನ್ಯಾಯ,…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 26, 2023
ಬೆಂಗಳೂರು: ನಾನು ಯಾವುದೇ ಬಂದ್ಗೆ ಬೆಂಬಲ ಕೊಡಲ್ಲ. ಕನ್ನಡ ಭಾಷೆ, ನೆಲ, ಜಲದ ವಿಚಾರವಾಗಿ ನನ್ನ ಹೋರಾಟ ಮುಂದುವರಿಯುತ್ತೆ. ಬಂದ್ನಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತೆ. ದಿನಗೂಲಿ ನೌಕಕರಿಗೆ ಈ ಬಂದ್ನಿಂದ ತೊಂದರೆ ಆಗುತ್ತೆ. ಬಂದ್ ನಿಂದ ಕಾವೇರಿಯನ್ನ ಉಳಿಸಿಕೊಳ್ಳಲು ಆಗಲ್ಲ. ಬಂದ್ ಅಂದರೇ ಟೌನ್ ಹಾಲ್ನಿಂದ ಮೆರವಣಿಗೆ ಬರುವುದು ಅಷ್ಟೇನಾ? ಮಾತಿಗೆ ಮುಂಚೆ ಬಂದ್ ಒಂದೇ ಬ್ರಹ್ಮಾಸ್ತ್ರ ಆಗಬಾರದು. ರಾಜಕಾರಿಣಿಗಳನ್ನು ನಂಬಿಕೊಂಡು ಹೋರಾಟಕ್ಕೆ ಹೋಗಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದರು.
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತುರುವುದನ್ನು ವಿರೋಧಿ ವಿವಿಧ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆಕೊಟ್ಟಿದ್ದು, ಫ್ರೀಡಂ ಪಾರ್ಕ್ನಲ್ಲಿ ಓರ್ವ ರೈತ ಟವಲ್ನಿಂದ ಮರಕ್ಕೆ ನೇಣು ಹಾಕಿಕೊಳ್ಳುವ ಯತ್ನಿಸಿದ್ದಾನೆ.
ಮಂಡ್ಯ: ಮಂಡ್ಯದಲ್ಲಿ ಕಾವೇರಿ ಹೋರಾಟ ಮುಂದುವರೆದಿದೆ. ತಮಿಳುನಾಡಿನ ನೀರು ಹರಿಸುತ್ತಿರುವುದನ್ನ ವಿರೋಧಿಸಿ ಮಳವಳ್ಳಿ ಬಂದ್ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ವ್ಯಾಪಾರ ವಹಿವಾಟು ಸ್ಥಗಿತವಾಗಿದೆ.
ಬೆಂಗಳೂರು: ಕನ್ನಡಿಗರ ರಕ್ಷಣಾ ವೇದಿಕೆ ಕಾರ್ಯಕರ್ತರು ತೆರೆದ ವಾಹನದಲ್ಲಿ ಟೌನ್ಹಾಲ್ನತ್ತ ರ್ಯಾಲಿ ಹೊರಟಿದ್ದಾರೆ. ಕನ್ನಡ ಪ್ರಕಾಶ್ ನೇತೃತ್ವದಲ್ಲಿ ರ್ಯಾಲಿ ನಡೆಯುತ್ತಿದೆ.
ಬೆಂಗಳೂರು: ಬೆಂಗಳೂರು ಬಂದ್ ಎಫಕ್ಟ್ ರೋಗಿಗಳಿಗೂ ತಟ್ಟಿದೆ. ಶಿವಮೊಗ್ಗದ ಮಾನಸ ಆಸ್ಪತ್ರೆಗೆ ಹೋಗಲು ಆಂಧ್ರಪ್ರದೇಶದಿಂದ ಮೆಜೆಸ್ಟಿಕ್ಗೆ ಪ್ರಯಾಣಿಕರು ಬಂದಿದ್ದಾರೆ. ಇಲ್ಲಿಂದ ಚಿಕಿತ್ಸೆಗಾಗಿ ಶಿವಮೊಗ್ಗ ಹೋಗಲು ನಿರ್ಧರಿಸಿದ್ದಾರೆ. ಆದರೆ ಪ್ರಯಾಣಿಕ ಸಂಖ್ಯೆ ಇಲ್ಲ ಅಂತ ಕೆಎಸ್ಆರ್ಟಿಸಿ ಶಿವಮೊಗ್ಗಕ್ಕೆ ಬಸ್ ಬಿಡುತ್ತಿಲ್ಲ. ಹೀಗಾಗಿ ರೋಗಿಗಳು ಪರದಾಡುತ್ತಿದ್ದಾರೆ.
ಬೆಂಗಳೂರು: ಬಂದ್ ದಿಕ್ಕು ತಪ್ಪಿಸುವ ಕೆಲಸವಾಗಬಾರದು. ಜಲ್ಲಿಕಟ್ಟು ಆದಾಗ ತಮಿಳುನಾಡು ಪೋಲಿಸರು ಸಹಕಾರ ನೀಡಿದರು. ಇಲ್ಲಿ ಪೋಲಿಸರು ಪ್ರತಿಭಟನೆ ಮಾಡುವವರಿಗೆ ಕೆಲವೊಂದು ಸಮಸ್ಯೆ ಆಗುತ್ತಿದೆ ಎಂದು ಗೊತ್ತಾಗಿದೆ. ಸದ್ಯದವರೆಗೂ ಬಂದ್ ಯಶಸ್ವಿಯಾಗಿದೆ. ಎಲ್ಲರೂ ಬೆಂಬಲ ನೀಡಿದ್ದಾರೆ. 144 ಸೆಕ್ಷನ್ ಹಾಕಬಾರದಿತ್ತು. ನಮ್ಮ ಹೋರಾಟ, ಚಳುವಳಿ ಇರಲಿದೆ. ಈಗ ಟೌನ್‌ಹಾಲ್‌ಗೆ ಹೋಗುತ್ತಿದ್ದೇವೆ. ಇಲ್ಲಿ ಏನೇ ನಡೆದರೂ ಇಡೀ ರಾಜ್ಯಕ್ಕೆ ಸಂದೇಶ ಹೋಗುತ್ತದೆ. ಪೋಲಿಸರು ಎಚ್ಚರಿಕೆಯಿಂದ ಇರಬೇಕು ಎಂದು ಕುರುಬೂರು ಶಾಂತಕುಮಾರ್ ಹೇಳಿದರು.
ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಕರ್ನಾಟಕ ಸರ್ಕಾರ ನೀರಗಂಟಿ ಸರ್ಕಾರ.
ನಮ್ಮ ಸರ್ಕಾರ ತಮಿಳುನಾಡಿಗೆ ನೀರು ಹರಿಸಿ ನೀರುಗಂಟಿ ಕೆಲಸ ಮಾಡುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ
ಸುಮಾರು 20 ಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಕುರುಬೂರು ಶಾಂತಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಕರ್ನಾಟಕ ಸರ್ಕಾರ ನೀರಗಂಟಿ ಸರ್ಕಾರ. ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರಿಗಾಗಿ ನಡೆಯುತ್ತಿರುವ ಬೆಂಗಳೂರು ಬಂದ್ಗೆ ನನ್ನ ಪೂರ್ಣ ಬೆಂಬಲವಿದೆ. ಹೋರಾಟ ಶಾಂತಿಯುತವಾಗಿರಲಿ, ಬಂದ್ ಯಶಸ್ವಿ ಆಗಲಿ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಕೂಡ ಬಂದ್ನಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಕೆಆರ್ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಅಂಗಡಿಗಳನ್ನುಸ್ವಯಂ ಪ್ರೇರಿತವಾಗಿ ಬಂದ್ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಯ ನಂತರ ಕೆಆರ್ಮಾರುಕಟ್ಟೆ ಸಂಪೂರ್ಣ ಬಂದ್ ಆಗಲಿವೆ.
ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಇಂದು ಧರಣಿ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. 2 ಕೆಎಸ್ಆರ್ ಪಿ, 1 ವಾಟರ್ ಜೆಟ್ ಹಾಗೂ 10 ಕ್ಕೂ ಹೆಚ್ಚು ಬಸ್ಗಳನ್ನು ನಿಯೋಜಿಸಲಾಗಿದೆ. ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ನತ್ತ ಬರುವ ರ್ಯಾಲಿಯನ್ನು ಮಾರ್ಗ ಮಧ್ಯದಲ್ಲಿಯೇ ತಡೆಯಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ.
ಬೆಂಗಳೂರು ಬಂದ್ಗೆ ಬಿಎಂಆರ್ಸಿಎಲ್ ನೈತಿಕ ಬೆಂಬಲ ಸೂಚಿಸಿದೆ. ಬಂದ್ ನಡುವೆಯೂ ನಮ್ಮ ಮೇಟ್ರೋ ಎಂದಿನಂತೆ ಇರಲಿದೆ. ಬೆಳ್ಗೆಯಿಂದಲೇ ನಮ್ಮ ಮೇಟ್ರೋ ಓಡಾಟ ಆರಂಭವಾಗಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುತ್ತಿರುವುದನ್ನು ವಿರೋಧಿಸಿ ಬೆಂಗಳೂರು ಬಂದ್ಗೆ ಕರೆ ಕೊಟ್ಟಿದ್ದು, ಕೆ.ಆರ್.ಮಾರ್ಕೆಟ್ ವ್ಯಾಪಾರಿಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಮನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರಾಮನಗರದ ಐಜೂರು ಸರ್ಕಲ್ ಬಳಿ ಜಯ ಕರ್ನಾಟಕ ಸಂಘಟನೆ ಧರಣಿ ಮಾಡುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾವೇರಿ ನೀರಿನ ವಿಚಾರವಾಗಿ ಇಂದು ಬೆಂಗಳೂರು ಬಂದ್ಗೆ ಕರೆ ಹಿನ್ನೆಲೆಯಲ್ಲಿ ಫ್ರೀಡಂಪಾರ್ಕ್ನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ. ಫ್ರೀಡಂಪಾರ್ಕ್ ಹೊರತುಪಡಿಸಿ ಬೇರೆ ಕಡೆ ಧರಣಿಗೆ ಅವಕಾಶವಿಲ್ಲ. ನಗರದ ವಿವಿಧೆಡೆ ಪ್ರತಿಭಟನೆ ನಡೆಸಲು ಮುಂದಾದರೆ ವಶಪಡಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
ಬೆಂಗಳೂರು ಬಂದ್ಗೆ ಪೆಟ್ರೋಲ್ ಬಂಕ್ ಒಕ್ಕೂಟ ನೈತಿಕ ಬೆಂಬಲ ಸೂಚಿಸಿದೆ. ಆದರೂ ಕೂಡ ಪೆಟ್ರೋಲ್ ಬಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ತೀವ್ರ ವಿರೋಧಿಸಿ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಕಾವೇರಿ, ಕಬಿನಿ ಹಿತರಕ್ಷಣಾ ಸಮಿತಿಯಿಂದ ಇಂದು ಟಿ.ನರಸೀಪುರ ಬಂದ್ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸರ್ಕಾರಿ ಅನುದಾನ, ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಿಸಿ ಟಿ.ನರಸೀಪುರ ಬಿಇಒ ಶೋಭಾ ಆದೇಶ ಹೊರಡಿಸಿದ್ದಾರೆ. ಟಿ.ನರಸೀಪುರ ಬಂದ್ಗೆ 20ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.
ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ಇಂದು ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಗೇ ಶಿಕ್ಷಕರು, ಉಪನ್ಯಾಸಕರಿಗೂ ರಜೆ ಘೋಷಿಸಿ ಜಿಲ್ಲಾಧಿಕಾರಿ ದಯಾನಂದ್ ಆದೇಶ ಹೊರಡಿಸಿದ್ದಾರೆ.
Published On - 6:36 am, Tue, 26 September 23