Cubbon Park: ಇನ್ನಷ್ಟು ಸುಧಾರಣೆಯಾಗಲಿ ಕಬ್ಬನ್​ ಪಾರ್ಕ್​; ಸಾರ್ವಜನಿಕರೇ ನೀಡಿದ ಸಲಹೆಗಳು ಹೀಗಿವೆ..

|

Updated on: Feb 23, 2021 | 1:12 PM

ಬೆಂಗಳೂರಿನ ಹೃದಯ ಭಾಗದಲ್ಲಿರುವ, ಪ್ರಮುಖ ಪ್ರದೇಶಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಕಬ್ಬನ್​ ಪಾರ್ಕ್ (Cubbon Park) ​ ಫಿಟ್ನೆಸ್​ ತಾಣವಾಗಿದೆ. ಹಸಿರು ಮರಗಳು, ಬಣ್ಣಬಣ್ಣದ ಹೂವುಗಳಿಂದ ಕಂಗೊಳಿಸುವ ಈ ಪಾರ್ಕ್​ 1870ರಲ್ಲಿ ನಿರ್ಮಾಣವಾಯಿತು. 300ಕ್ಕೂ ಹೆಚ್ಚು ಎಕರೆ ವಿಸ್ತರಣೆಯಲ್ಲಿದೆ. ಲಾಲ್​ಬಾಗ್​ ಬಿಟ್ಟರೆ, ಜನರು ಹೆಚ್ಚು ಇಷ್ಟಪಡುವ ಜಾಗ ಕಬ್ಬನ್​ ಪಾರ್ಕ್​..ಆದರೆ ಇಲ್ಲಿನ ಮೂಲಸೌಕರ್ಯ, ಅಭಿವೃದ್ಧಿಯನ್ನು ಗಮನಿಸಿದರೆ, ಇನ್ನೂ ಸುಧಾರಣೆಯಾಗುವ ಅಗತ್ಯ ಕಂಡುಬರುತ್ತದ ಎಂಬುದು ನಗರದ ಜನರ ಅಭಿಪ್ರಾಯ. ಕಬ್ಬನ್​ಪಾರ್ಕ್​ನ್ನು ಹೇಗೆಲ್ಲ ಅಭಿವೃದ್ಧಿಗೊಳಿಸಬಹುದು ಎಂಬ ಬಗ್ಗೆ ಕಳೆದ ವಾರ […]

Cubbon Park: ಇನ್ನಷ್ಟು ಸುಧಾರಣೆಯಾಗಲಿ ಕಬ್ಬನ್​ ಪಾರ್ಕ್​; ಸಾರ್ವಜನಿಕರೇ ನೀಡಿದ ಸಲಹೆಗಳು ಹೀಗಿವೆ..
ಕಬ್ಬನ್​ ಪಾರ್ಕ್​ (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರಿನ ಹೃದಯ ಭಾಗದಲ್ಲಿರುವ, ಪ್ರಮುಖ ಪ್ರದೇಶಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಕಬ್ಬನ್​ ಪಾರ್ಕ್ (Cubbon Park) ​ ಫಿಟ್ನೆಸ್​ ತಾಣವಾಗಿದೆ. ಹಸಿರು ಮರಗಳು, ಬಣ್ಣಬಣ್ಣದ ಹೂವುಗಳಿಂದ ಕಂಗೊಳಿಸುವ ಈ ಪಾರ್ಕ್​ 1870ರಲ್ಲಿ ನಿರ್ಮಾಣವಾಯಿತು. 300ಕ್ಕೂ ಹೆಚ್ಚು ಎಕರೆ ವಿಸ್ತರಣೆಯಲ್ಲಿದೆ. ಲಾಲ್​ಬಾಗ್​ ಬಿಟ್ಟರೆ, ಜನರು ಹೆಚ್ಚು ಇಷ್ಟಪಡುವ ಜಾಗ ಕಬ್ಬನ್​ ಪಾರ್ಕ್​..ಆದರೆ ಇಲ್ಲಿನ ಮೂಲಸೌಕರ್ಯ, ಅಭಿವೃದ್ಧಿಯನ್ನು ಗಮನಿಸಿದರೆ, ಇನ್ನೂ ಸುಧಾರಣೆಯಾಗುವ ಅಗತ್ಯ ಕಂಡುಬರುತ್ತದ ಎಂಬುದು ನಗರದ ಜನರ ಅಭಿಪ್ರಾಯ. ಕಬ್ಬನ್​ಪಾರ್ಕ್​ನ್ನು ಹೇಗೆಲ್ಲ ಅಭಿವೃದ್ಧಿಗೊಳಿಸಬಹುದು ಎಂಬ ಬಗ್ಗೆ ಕಳೆದ ವಾರ ಜನರು ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.

ಕಬ್ಬನ್ ಪಾರ್ಕ್​ ಭೂ ಪ್ರದೇಶವನ್ನು ಇನ್ನೂ ಸುಂದರವಾಗಿ ವಿನ್ಯಾಸಗೊಳಿಸಬೇಕು. ಯಾರಾದರೂ ವೃತ್ತಿಪರ ಡಿಸೈನರ್​​ ಬಳಿ ವಿನ್ಯಾಸ ಮಾಡಿಸಬೇಕು ಎಂಬ ಸಲಹೆಗಳನ್ನು ನಾಗರಿಕರು ನೀಡಿದ್ದಾರೆ. ಕಬ್ಬನ್​ ಪಾರ್ಕ್​ನ್ನು ಇನ್ನಷ್ಟು ಪರಿಸರ ಸ್ನೇಹಿಯನ್ನಾಗಿ ಹೇಗೆ ರೂಪಿಸಬಹುದು? ಇಲ್ಲಿಗೆ ಭೇಟಿ ನೀಡುವವರಿಗಾಗಿ ಏನು ಅನುಕೂಲ ಮಾಡಬಹುದು? ಟ್ರಾಫಿಕ್​ ನಿರ್ವಹಣೆ ಹೇಗೆ ಮಾಡಬಹುದು ಹಾಗೂ ಒಟ್ಟಾರೆ ಪಾರ್ಕ್​ ನಿರ್ವಹಣೆಯನ್ನು ಹೇಗೆ ಮಾಡಬಹುದು ಎಂಬ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ. ಜನರು ಸೋಷಿಯಲ್ ಮೀಡಿಯಾಗಳಲ್ಲಿ ನೀಡಿದ ಸಲಹೆಗಳು ಹೀಗಿವೆ:

ಕಬ್ಬನ್​ಪಾರ್ಕ್​ನ್ನು ಇನ್ನಷ್ಟು ಪರಿಸರ ಸ್ನೇಹಿ ಮಾಡಲು ಏನೆಲ್ಲ ಮಾಡಬಹುದು?
ಕಬ್ಬನ್​ಪಾರ್ಕ್​ ಈಗಾಗಲೇ ದೊಡ್ಡದೊಡ್ಡ ಮರಗಳು, ಕಲ್ಲುಬಂಡೆಗಳು, ಹಸಿರು ಹುಲ್ಲುಗಳನ್ನು ಒಳಗೊಂಡಿದೆ. ಅದೆಷ್ಟೋ ರೀತಿಯ ಹೂವುಗಳು ಕಂಗೊಳಿಸುತ್ತಿವೆ. ಹೀಗೆ ಹೂವು, ಹಣ್ಣುಗಳನ್ನು ಬಿಡುವ ಮರಗಳ ಮೇಲೆ ಅನೇಕ ವಿಧದ ಹಕ್ಕಿಗಳ ಕಲರವವನ್ನೂ ನೋಡಬಹುದು. ಅಷ್ಟಾದರೂ ಸಹ ಇನ್ನೂ ಪರಿಸರ ಸ್ನೇಹಿಯಾಗಬೇಕು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿರುವ ಕೆಲವು ಕಾಂಕ್ರೀಟ್​ ವಿನ್ಯಾಸಗಳನ್ನು ತೆಗೆದುಹಾಕಬೇಕು. ಅದರ ಬದಲು ಮರದಲ್ಲೇ ಮಾಡಲಾದ ವಿನ್ಯಾಸಗಳನ್ನು ಅಳವಡಿಸಬೇಕು. ಇನ್ನೂ ಹೆಚ್ಚಿನ ಗಿಡಗಳನ್ನು ನೆಡಬೇಕು. ಈಗಿರುವ ಗಿಡಮರಗಳ ನಿರ್ವಹಣೆ ಇನ್ನಷ್ಟು ಉತ್ತಮವಾಗಿ ನಡೆಯಬೇಕು. ಕಸ ನಿರ್ವಹಣೆ ಸರಿಯಾಗಿ ಆಗಬೇಕು ಎಂಬ ಸಲಹೆ ವ್ಯಕ್ತವಾಗಿದೆ.

ಪ್ರವಾಸಿಗರಿಗಾಗಿ ಏನೆಲ್ಲ ಅನುಕೂಲ ಕಲ್ಪಿಸಬಹುದು?
ಬೆಂಗಳೂರಿಗರಿಗೆ ಕಬ್ಬನ್​ಪಾರ್ಕ್​ ಅತಿ ನೆಚ್ಚಿನ ತಾಣ. ಬರಿ ನಗರವಾಸಿಗಳಿಗೆ ಅಷ್ಟೇ ಅಲ್ಲ, ಹೊರಗಿನ ಊರುಗಳಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಹಾಗಾಗಿ ಪ್ರವಾಸಿಗರ ಸ್ನೇಹಿಯಾಗಿ ಕಬ್ಬನ್​ಪಾರ್ಕ್​ ಇನ್ನಷ್ಟು ಬದಲಾಗಬೇಕು ಎಂಬುದು ಹಲವರ ಅಭಿಪ್ರಾಯ. ಕಬ್ಬನ್​ಪಾರ್ಕ್​ ಪ್ರವೇಶಿಸಿದ ನಂತರ ಹೇಗೆ ಹೋಗಬೇಕು ಎಂದು ಅಷ್ಟು ಬೇಗ ಅರ್ಥವಾಗುವುದಿಲ್ಲ. ಅದರಲ್ಲಿ ಮೊದಲ ಬಾರಿಗೆ ಕಬ್ಬನ್​ಪಾರ್ಕ್​ ಪ್ರವೇಶಿಸಿದಾಗ ಈ ಸಮಸ್ಯೆ ಹೆಚ್ಚಾಗಿ ಎದುರಾಗುತ್ತದೆ. ಹಾಗಾಗಿ ಪಾರ್ಕ್​ ಪ್ರವೇಶದಿಂದ ಹಿಡಿದು ಕೆಲವು ಆಯ್ದ ಸ್ಥಳಗಳಲ್ಲಿ ಮಾರ್ಗ ಸೂಚಿಸುವ ಸಂಕೇತಗಳನ್ನು ಅಳವಡಿಸಬೇಕು. ಇದರಿಂದ ದಾರಿ ತಪ್ಪುವುದಿಲ್ಲ ಎಂದೂ ಓರ್ವ ಮಹಿಳೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸ್ಥಳಗಳನ್ನು ನಿರ್ಮಾಣ ಮಾಡಬೇಕು. ಹಾಗೇ, ನಡೆಯಲು ಸಾಧ್ಯವಾಗದವರು, ತುಂಬ ವೃದ್ಧರು ಮತ್ತು ಅಂಗವಿಕಲರಿಗಾಗಿ ವೀಲ್​ಚೇರ್ ಬಳಕೆ ಮಾಡುವ ಅವಕಾಶವನ್ನು ಕಬ್ಬನ್​ಪಾರ್ಕ್​ನಲ್ಲಿ ಕಲ್ಪಿಸಬೇಕು ಎಂದೂ ಹೇಳಲಾಗಿದೆ. ಇದು ಪುಟ್ಟಮಕ್ಕಳನ್ನು ಕರೆದುಕೊಂಡು ಬರುವ ತಾಯಂದಿರಿಗೂ ಸಹಾಯವಾಗಲಿದೆ ಎಂದು ಹೇಳಲಾಗಿದೆ. ಇನ್ನು ಹಳತಾದ, ಶಿಥಿಲವಾದ ಬೆಂಚ್​ಗಳನ್ನೆಲ್ಲ ತೆಗೆದು, ಎಲ್ಲ ಹವಾಮಾನಕ್ಕೂ ಸೂಕ್ತವಾಗಿರುವ ಗ್ರೆನೈಟ್​ ಬೆಂಚ್​ಗಳನ್ನು ಅಳವಡಿಸಬೇಕು ಎಂಬ ಸಲಹೆಯನ್ನೂ ಕೊಡಲಾಗಿದೆ.

ಟ್ರಾಫಿಕ್ ನಿರ್ವಹಣೆಗೆ ಒಂದಿಷ್ಟು ಸಲಹೆಗಳು
ಕಬ್ಬನ್​ಪಾರ್ಕ್​ ಸುತ್ತಲೂ ರಸ್ತೆಗಳಿದ್ದು, ಇಲ್ಲಿ ಪ್ರತಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಹೊರತು ಪಡಿಸಿ ಉಳಿದೆಲ್ಲ ದಿನವೂ ವಾಹನಗಳ ಸಂಚಾರ ಇರುತ್ತದೆ. ಇದರಿಂದ ಸಹಜವಾಗಿಯೇ ಟ್ರಾಫಿಕ್ ಉಂಟಾಗುತ್ತಿದೆ. ಕೆಲವು ದಿನವಂತೂ ಇಲ್ಲಿನ ಟ್ರಾಫಿಕ್​ ನಿರ್ವಹಣೆ ಒಂದು ದೊಡ್ಡ ಸವಾಲೇ ಆಗಿರುತ್ತದೆ. ಹಾಗಾಗಿ ಎಲ್ಲದಿನವೂ ಇಲ್ಲಿ ವಾಹನಗಳ ಸಂಚಾರ ನಿಷೇಧಿಸಬೇಕು ಎಂದು ನಾಗರಿಕರು ಹೇಳಿದ್ದಾರೆ. ಹಾಗೊಮ್ಮೆ ಇಲ್ಲಿ ವಾಹನ ಸಂಚಾರ ನಿಷೇಧ ಮಾಡಲು ಸಾಧ್ಯವೇ ಇಲ್ಲದಿದ್ದರೆ, ಗೇಟ್​ಗಳನ್ನು ನಿರ್ಮಿಸಿ ಟ್ರಾಫಿಕ್​ ನಿರ್ವಹಣೆ ಮಾಡಬಹುದು. ದ್ವಿಚಕ್ರವಾಹನಗಳಿಗೆ, ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಸುಸ್ಥಿರಗೊಳಿಸಬೇಕು ಎಂಬ ಸಲಹೆಗಳೂ ವ್ಯಕ್ತವಾಗಿವೆ.

ಒಟ್ಟಾರೆ ಪಾರ್ಕ್​ ನಿರ್ವಹಣೆ ಹೀಗಿರಲಿ
ಯಾವುದೇ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸಿದರೂ ಅದನ್ನು ಸರಿಯಾಗಿ ನಿರ್ವಹಣೆ ಮಾಡದೆ ಇದ್ದರೆ, ಬಹುಕಾಲ ಬಾಳಿಕೆಗೆ ಬರುವುದಿಲ್ಲ. ಕಬ್ಬನ್​ಪಾರ್ಕ್​ನ್ನು ಒಟ್ಟಾರೆ ಸರಿಯಾಗಿ ನಿರ್ವಹಣೆ ಮಾಡಬೇಕು. ಮುಖ್ಯವಾಗಿ ಕಬ್ಬನ್​ಪಾರ್ಕ್​ ಸೌಂದರ್ಯ, ಸ್ವಚ್ಛತೆ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಬೇಕು. ಪಾರ್ಕ್​ನಲ್ಲಿ ಏನು ಮಾಡಬಹುದು, ಏನು ಮಾಡಲೇಬಾರದು ಎಂಬ ಲಿಸ್ಟ್​ನ್ನು ಹಾಕಬೇಕು. ಹಾಗೇ, ಇಲ್ಲಿ ರಕ್ಷಣಾ ಸಿಬ್ಬಂದಿ ಇರಬೇಕು. ಅವರು ವಿದ್ಯುಚ್ಚಾಲಿತ ವಾಹನದ ಮೂಲಕ ಇಡೀ ಪಾರ್ಕ್​ನ್ನು ಸುತ್ತುತ್ತ ಇರಬೇಕು. ಸಿಸಿಟಿವಿ ಕ್ಯಾಮರಾಗಳು, ಲೈಟ್​ ವ್ಯವಸ್ಥೆ ಸರಿಯಾಗಿ ಆಗಬೇಕು ಎಂದು ಹಲವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ರೆಸಿಡೆಂಟ್ ವಾಚ್​ ವರದಿ ಮಾಡಿದೆ.

ಹೀಗೆ ಅನೇಕರು ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುವ ವೇಳೆ ಅಲ್ಲಿ ಭಿನ್ನಾಭಿಪ್ರಾಯಗಳು, ವಾಗ್ವಾದವೂ ನಡೆದಿದೆ. ಅದರೆಲ್ಲದರ ಆಚೆ ಸಾರ್ವಜನಿಕರು ನೀಡಿದ ಕೆಲವು ಸಲಹೆಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Jaggesh Controversy: ಜಗ್ಗೇಶ್ ಇರೋದೆ ಹೀಗೆ… ತಪ್ಪೊ, ಸರಿಯೋ ಎಲ್ಲದಕ್ಕೂ ಮೂಗು ತೂರಿಸುತ್ತಾರೆ!

ಟಿವಿ9 ವರದಿ ನೋಡಿ ಮಗುವಿನ ಚಿಕಿತ್ಸೆಗೆ ಮುಂದಾದ ಯುವಕರು: ಯುನೈಟೆಡ್ ಫ್ರೆಂಡ್ಸ್ ಕ್ರಿಕೆಟ್ ತಂಡದಿಂದ ಕಂದನಿಗೆ ನೆರವು

Published On - 12:52 pm, Tue, 23 February 21