Bengaluru Coronavirus: ಬೆಂಗಳೂರಿನಲ್ಲಿ ಐದೇ ದಿನದಲ್ಲಿ 242 ಮಕ್ಕಳಿಗೆ ಕೊರೊನಾ; ಹೆಚ್ಚಾಯ್ತು 3ನೇ ಅಲೆಯ ಭೀತಿ
Covid in Children | ಭಾರತದಲ್ಲಿ ಈಗಾಗಲೇ ಕೊರೊನಾ 3ನೇ ಅಲೆ ಶುರುವಾಗಿದೆ ಎಂದು ತಜ್ಞರು ಹೇಳಿಕೆ ನೀಡಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ ಮಕ್ಕಳ ಸಂಖ್ಯೆ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು: ಕರ್ನಾಟಕದ ಕೊರೊನಾ ಕೇಸುಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮತ್ತೆ ಆತಂಕ ಎದುರಾಗಿದೆ. ಕೊವಿಡ್ 3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಬರೋಬ್ಬರಿ 242 ಮಕ್ಕಳಿಗೆ ಕೊವಿಡ್ ಪಾಸಿಟಿವ್ (COVID Positive) ಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ನಿನ್ನೆ 1338 ಹೊಸ ಕೊರೊನಾ ಪ್ರಕರಣಗಳು (Coronavirus Cases) ಪತ್ತೆಯಾಗಿದ್ದು, 31 ಜನರು ಸಾವನ್ನಪ್ಪಿದ್ದಾರೆ. ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಐದೇ ದಿನದಲ್ಲಿ 19 ವರ್ಷದೊಳಗಿನ 242 ಜನರು ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ಈಗಾಗಲೇ ಕೊರೊನಾ 3ನೇ ಅಲೆ ಶುರುವಾಗಿದೆ ಎಂದು ತಜ್ಞರು ಹೇಳಿಕೆ ನೀಡಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ ಮಕ್ಕಳ ಸಂಖ್ಯೆ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 5 ದಿನದಲ್ಲಿ 9 ವರ್ಷದೊಳಗಿನ 106 ಮತ್ತು 9ರಿಂದ 19 ವರ್ಷದೊಳಗಿನ 136 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಕೊರೊನಾ ಕೇಸುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮಕ್ಕಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಮುಂದಿನ ಕೆಲವು ದಿನಗಳಲ್ಲಿ ಇದಕ್ಕಿಂತಲೂ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದು ಬಹಳ ಅಪಾಯಕಾರಿ ಬೆಳವಣಿಗೆ. ಮಕ್ಕಳನ್ನು ಆದಷ್ಟು ಮನೆಯಿಂದ ಹೊರಗೆ ಹೋಗಲು ಬಿಡದೆ ಎಚ್ಚರಿಕೆಯಿಂದ ನೋಡಿಕೊಳ್ಳುವುದೇ ಕೊರೊನಾದಿಂದ ಪಾರಾಗಲು ಇರುವ ಏಕೈಕ ಮಾರ್ಗ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕದಲ್ಲಿ ನಿನ್ನೆ ಹೊಸದಾಗಿ 1,338 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,21,049 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 28,61,499 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ನಿನ್ನೆ ಕೊರೊನಾ ಸೋಂಕಿನಿಂದ 31 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 36,848 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 315 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,31,097 ಕ್ಕೆ ಏರಿಕೆಯಾಗಿದೆ. 12,31,097 ಸೋಂಕಿತರ ಪೈಕಿ 12,06,980 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಮಂಗಳವಾರ ಕೊರೊನಾ ಸೋಂಕಿಗೆ 3 ಮಂದಿ ಬಲಿಯಾಗಿದ್ದಾರೆ.
ಇದನ್ನೂ ಓದಿ: Coronavirus cases in India: ದೇಶದಲ್ಲಿ 38,353 ಹೊಸ ಕೊವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಮುಖ
Covid 19 New Guidelines: ಬೆಂಗಳೂರಿಗೆ ಶೀಘ್ರದಲ್ಲೆ ಮತ್ತೆ ಟಫ್ ರೂಲ್ಸ್ ಜಾರಿ!
(Bengaluru Coronavirus over 242 Children in Bangalore Tested Covid-19 Positive in 5 days Scare of 3rd Wave Increases)
Published On - 3:48 pm, Wed, 11 August 21