Bengaluru: ಬೆಂಗಳೂರಿನಲ್ಲಿ ಸಾಲು ಸಾಲು ಬೆಂಕಿ ದುರಂತ; ಅಪಾಯದಲ್ಲಿರುವ 13 ಸಾವಿರಕ್ಕೂ ಹೆಚ್ಚು ಕಟ್ಟಡಗಳ ಕತೆಯೇನು?

| Updated By: ಸುಷ್ಮಾ ಚಕ್ರೆ

Updated on: Sep 21, 2021 | 8:02 PM

Bangalore Fire Accident: ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆಯಾ? ಇಲ್ಲವಾ? ಎಂಬ ಬಗ್ಗೆ ಆಡಿಟ್ ಮಾಡಲು ಕಾರಣ 2010ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಲ್​ಟನ್ ಟವರ್ ದುರಂತ. ಆ ದುರಂತ ನಡೆದು 11 ವರ್ಷಕ್ಕೆ ಸರಿಯಾಗಿ ಬೆಂಗಳೂರಿನಲ್ಲಿ ಮತ್ತೊಂದು ದೊಡ್ಡ ಬೆಂಕಿ ದುರಂತ ನಡೆದಿದೆ.

Bengaluru: ಬೆಂಗಳೂರಿನಲ್ಲಿ ಸಾಲು ಸಾಲು ಬೆಂಕಿ ದುರಂತ; ಅಪಾಯದಲ್ಲಿರುವ 13 ಸಾವಿರಕ್ಕೂ ಹೆಚ್ಚು ಕಟ್ಟಡಗಳ ಕತೆಯೇನು?
ಸಿಲಿಂಡರ್ ಸ್ಫೋಟವಾಗಿ ಹೊತ್ತಿ ಉರಿದ ಬೆಂಗಳೂರಿನ ಅಪಾರ್ಟ್​ಮೆಂಟ್
Follow us on

ಬೆಂಗಳೂರು: ಬೆಂಗಳೂರಿನ ದೇವರಚಿಕ್ಕನಹಳ್ಳಿಯ ಅಪಾರ್ಟ್​ಮೆಂಟ್​ನ ಫ್ಲ್ಯಾಟ್​ನಲ್ಲಿ ಸಿಲಿಂಡರ್​ ಸ್ಫೋಟವಾಗಿ (Cylinder Blast in Bengaluru) ಭಾರೀ ಅಗ್ನಿ ಅವಘಡ ಸಂಭವಿಸಿದೆ. ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು (Fire Safety Rules) ಅಳವಡಿಕೆ ಮಾಡಿಕೊಳ್ಳಲಾಗಿದೆಯಾ? ಇಲ್ಲವಾ? ಎಂಬ ಬಗ್ಗೆ ಆಡಿಟ್ (Fire Audit) ಮಾಡಲು ಕಾರಣ 2010ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಲ್​ಟನ್ ಟವರ್ ದುರಂತ(Carlton Tower Fire Accident). ಆ ದುರಂತ ನಡೆದು 11 ವರ್ಷಕ್ಕೆ ಸರಿಯಾಗಿ ಬೆಂಗಳೂರಿನಲ್ಲಿ ಮತ್ತೊಂದು ದೊಡ್ಡ ಬೆಂಕಿ ದುರಂತ (Fire Attack) ನಡೆದಿದೆ. ಬೆಂಗಳೂರಿನಲ್ಲಿ ನಿಜವಾಗಿಯೂ ಹಲವಾರು ಗಗನಚುಂಬಿ ಕಟ್ಟಡಗಳು ಬೆಂಕಿ ಸುರಕ್ಷತೆ ಬಗ್ಗೆ ಗಮನಹರಿಸಿಲ್ಲ ಇಲ್ಲಿದೆ ಮಾಹಿತಿ…

ಬೆಂಗಳೂರು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯಾಗುತ್ತಲೇ ಇದೆ. ಬೆಂಗಳೂರಿನ ವಿಸ್ತೀರ್ಣವೂ ಹೆಚ್ಚಾಗುತ್ತಿದೆ. ಪ್ರತಿವರ್ಷವೂ ಹೊಸ ಗಗನಚುಂಬಿ ಕಟ್ಟಡಗಳು ಏಳುತ್ತಲೇ ಇದೆ. ಆದರೆ, ಈ ಕಟ್ಟಡಗಳಲ್ಲಿ ಎಷ್ಟರ ಮಟ್ಟಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ? ಎಂಬ ಮಾಹಿತಿಯನ್ನು ಕೆದಕಲು ಹೋದರೆ ಆಶ್ಚರ್ಯವಾಗುವುದು ಗ್ಯಾರಂಟಿ. ಏಕೆಂದರೆ ನಿಯಮಗಳನ್ನು ಗಾಳಿಗೆ ತೂರಿ ಅನುಮತಿ ಪಡೆದದ್ದಕ್ಕಿಂತಲೂ ಹೆಚ್ಚು ಮಹಡಿಗಳನ್ನು ಕಟ್ಟುವ ಮಾಲೀಕರು ಅಗ್ನಿ ಸುರಕ್ಷತಾ ಕ್ರಮಗಳನ್ನು ಕೂಡ ಅನುಸರಿಸುವುದಿಲ್ಲ. ಬೆಂಗಳೂರಿನ ಅಪಾರ್ಟ್​ಮೆಂಟ್​ಗಳಲ್ಲಿ ಸಾಕಷ್ಟು ಮನೆಗಳಿದ್ದರೂ ಬಹುತೇಕ ಅಪಾರ್ಟ್​ಮೆಂಟ್​ಗಳಲ್ಲಿ ಬೆಂಕಿ ಸುರಕ್ಷತಾ ನಿಯಮಗಳನ್ನು ಅಳವಡಿಸಿಕೊಂಡಿರುವುದಿಲ್ಲ.

ಇಂದು ನಡೆದಿರುವ ಅಪಾರ್ಟ್​ಮೆಂಟ್​ನ ಫ್ಲ್ಯಾಟ್​ನ ಬೆಂಕಿ ಅವಘಡದಲ್ಲಿ ವ್ಯಕ್ತಿಯೊಬ್ಬರು ಸಜೀವ ದಹನವಾಗಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ಆರಿಸುವ ಕೆಲಸ ಮಾಡುತ್ತಿವೆ. ದೇವರಚಿಕ್ಕನಹಳ್ಳಿಯ ಆಶ್ರಿತ್​​ ಅಪಾರ್ಟ್​ಮೆಂಟ್​ನಲ್ಲಿ ಸಿಲಿಂಡರ್ ಸ್ಫೋಟದಿಂದ ಉಂಟಾಗಿರುವ ಬೆಂಕಿ ದುರಂತದಿಂದ ಮತ್ತೊಮ್ಮೆ ಬೆಂಗಳೂರಿನ ಕಟ್ಟಡಗಳು ಎಷ್ಟರ ಮಟ್ಟಿಗೆ ಸುರಕ್ಷತವಾಗಿವೆ? ಎಂಬ ಚರ್ಚೆ ಶುರುವಾಗಿದೆ. ಈ ಅಪಾರ್ಟ್​ಮೆಂಟ್​ನ ಮೂರು ಫ್ಲ್ಯಾಟ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೂರು ಫ್ಲ್ಯಾಟ್‌ಗಳ ಪೈಕಿ ಒಂದಕ್ಕೆ ಬೀಗ ಹಾಕಲಾಗಿದೆ. ಬೆಂಗಳೂರಿನಲ್ಲಿರುವ ಬಹುತೇಕ ಬೃಹತ್ ಕಟ್ಟಡಗಳಲ್ಲಿ ಬೆಂಕಿ ಆಡಿಟ್ ಅಥವಾ ಬೆಂಕಿ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಇರುವುದರಿಂದ ಪದೇ ಪದೆ ಈ ರೀತಿಯ ಅನಾಹುತಗಳು ನಡೆಯುತ್ತಲೇ ಇವೆ.

2015ರ ಮಾಹಿತಿ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿ 13,214 ಕಟ್ಟಡಗಳಲ್ಲಿ ಬೆಂಕಿ ಸುರಕ್ಷತೆಗಳಿಲ್ಲ. 2015ರಲ್ಲಿ ನಡೆದ ಆಡಿಟಿಂಗ್ ಅನ್ವಯ, ಕರ್ನಾಟಕದ 14 ಸಾವಿರಕ್ಕೂ ಹೆಚ್ಚು ಕಟ್ಟಡಗಳಲ್ಲಿ ಬೆಂಕಿ ಸುರಕ್ಷತಾ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ಇವುಗಳಲ್ಲಿ 13 ಸಾವಿರಕ್ಕೂ ಹೆಚ್ಚು ಕಟ್ಟಡಗಳು ಬೆಂಗಳೂರಿನಲ್ಲೇ ಇವೆ ಎಂಬುದು ಆತಂಕಕಾರಿ ಸಂಗತಿ. ರಾಜ್ಯದ 14,000ಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣದ ವೇಳೆ ಅಗ್ನಿ ಸೇವೆಗಳ ಇಲಾಖೆಯಿಂದ ಯಾವುದೇ ಕ್ಲಿಯರೆನ್ಸ್ ಪಡೆದುಕೊಂಡಿಲ್ಲ. ಆದರೆ, ಬೆಂಗಳೂರಿನ 2 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನಿರ್ಮಾಣದ ವೇಳೆ ಕ್ಲಿಯರೆನ್ಸ್ ಪಡೆದಿದ್ದರೂ ನಂತರ ಆ ನಿಯಮಗಳನ್ನು ಉಲ್ಲಂಘನೆ ಮಾಡಿವೆ.

2010ರಲ್ಲಿ ಬೆಂಗಳೂರಿನ ಕಾರ್ಲ್​ಟನ್ ಟವರ್​ನಲ್ಲಿ ನಡೆದ ಬೆಂಕಿ ದುರಂತದಲ್ಲಿ 9 ಜನರು ಸಾವನ್ನಪ್ಪಿದ್ದರು. ಬಹುಮಹಡಿಯ ಕಮರ್ಷಿಯಲ್ ಕಾಂಪ್ಲೆಕ್ಸ್​ನಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅವರಲ್ಲಿ ಮೂವರು ಕಟ್ಟಡದಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಳ್ಳಲು ನೋಡಿದ್ದರು. ಆದರೆ, ಕಟ್ಟಡದಿಂದ ಕೆಳಗೆ ಬಿದ್ದ ಪರಿಣಾಮ ಅವರು ಸಾವನ್ನಪ್ಪಿದ್ದರು. 8 ಮಹಡಿಯ ಕಾರ್ಲ್​ಟನ್ ಟವರ್​ನಲ್ಲಿ ಮೇಲಿನ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಆಗ 6 ಜನರು ಉಸಿರಾಡಲು ಸಾಧ್ಯವಾಗದೆ ಕಟ್ಟಡದೊಳಗೆ ಸಾವನ್ನಪ್ಪಿದ್ದರು. ಇನ್ನು ಮೂವರು ಕೆಳಗೆ ಹಾರಿ ಸಾವನ್ನಪ್ಪಿದ್ದರು. ಈ ದುರಂತದಲ್ಲಿ 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಕಾರ್ಲ್​ಟನ್ ಟವರ್​ನ ಲಿಫ್ಟ್​ನಿಂದ ಹರಡಿದ ಬೆಂಕಿ ಬಳಿಕ 8ನೇ ಮಹಡಿಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಆ ಬೆಂಕಿಯಿಂದ ಹರಡಿದ ಹೊಗೆಯಿಂದ ಉಸಿರಾಡಲಾಗದೆ ಅನೇಕರು ಪ್ರಜ್ಞೆ ತಪ್ಪಿ ಬಿದ್ದಿದ್ದರು.

ಇನ್ನು, ಬೆಂಗಳೂರಿನ ಫ್ಯಾಕ್ಟರಿಗಳಲ್ಲಿ ಬೆಂಕಿ ಹೊತ್ತಿಕೊಂಡು ಅನಾಹುತಗಳು ಸಂಭವಿಸಿದ ಅನೇಕ ಘಟನೆಗಳು ನಡೆದಿವೆ. ಕಳೆದ ವರ್ಷವಷ್ಟೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ರೇಖಾ ಕೆಮಿಕಲ್ ಫ್ಯಾಕ್ಟರಿಯಲ್ಲಿ ಕೆಮಿಕಲ್ ಬ್ಯಾರಲ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತ್ತು. 2012ರಲ್ಲಿ ಕೂಡ ಬೆಂಗಳೂರಿನ ಹೊಸೂರು ರಸ್ತೆಯ ಬೊಮ್ಮನಹಳ್ಳಿ ಬರ್ಜರ್ ಪೇಂಟ್ಸ್​ ಗೋದಾಮಿನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿತ್ತು. ಈ ರೀತಿಯ ಅನೇಕ ಬೆಂಕಿ ದುರಂತಗಳು ಬೆಂಗಳೂರಿನಲ್ಲಿ ಆಗಾಗ ನಡೆಯುತ್ತಲೇ ಇವೆ.

ಬೆಂಗಳೂರಿನಲ್ಲಿ ಅಪಾಯದ ಮಟ್ಟದಲ್ಲಿರುವ 12 ಬಹುಮಹಡಿ ಕಟ್ಟಡಗಳನ್ನು ಅಗ್ನಿಶಾಮಕ ದಳ ಇಲಾಖೆ ಅಧಿಕಾರಿಗಳು ಗುರುತಿಸಿದ್ದಾರೆ. ಅತೀ ಅಪಾಯಕಾರಿ ಹಾಗೂ ಅಪಾಯಕಾರಿ ಎಂಬ ಎರಡು ವಿಧದಲ್ಲಿ ಕಟ್ಟಡಗಳನ್ನು ಗುರುತು ಮಾಡಿಕೊಂಡಿದ್ದ ಅಧಿಕಾರಿಗಳು ಪ್ರತಿಯೊಂದು ಕಟ್ಟಡದ ಬಗ್ಗೆಯೂ ಪ್ರತ್ಯೇಕ ವರದಿ ಸಿದ್ಧಪಡಿಸಿ, ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಲ್ಲಿಸಿದ್ದರು. ಅದರ ಆಧಾರದಲ್ಲಿ ಆ 70 ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.

ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಕಟ್ಟಡ ಹಾಗೂ 15 ಮೀಟರ್​ಗಿಂತ ಎತ್ತರದ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮೇಲಿದೆ. ಹೊಸ ಕಟ್ಟಡ ನಿರ್ಮಿಸುವಾಗ ಮಾಲೀಕರು ಸಲ್ಲಿಸುವ ಅರ್ಜಿ ಪರಿಶೀಲಿಸುವ ಅಧಿಕಾರಿಗಳು, ನಿರಾಕ್ಷೇಪಣಾ ಪತ್ರ ನೀಡುತ್ತಾರೆ. ನಿಯಮದ ಪ್ರಕಾರ ಈ ಕೆಳಗಿನ ಕ್ರಮಗಳನ್ನು ಕಟ್ಟಡಗಳ ಮಾಲೀಕರು ಪಾಲಿಸಲೇಬೇಕು.

* ರಸ್ತೆಗೂ ಬಹುಮಹಡಿ ಕಟ್ಟಡಕ್ಕೂ 12 ಮೀಟರ್ ಅಂತರವಿರಬೇಕು.
* ಕಟ್ಟಡದ ಸುತ್ತ ಅಗ್ನಿಶಾಮಕ ವಾಹನ ಸಂಚರಿಸುವಷ್ಟು ಜಾಗವಿರಬೇಕು
* ಚಾವಣಿಯಲ್ಲಿ ಮತ್ತು ನೆಲ ಅಂತಸ್ತಿನಲ್ಲಿ ನೀರಿನ ಟ್ಯಾಂಕ್ ಇರಬೇಕು
* ನೆಲ ಅಂತಸ್ತು ವಾಹನ ನಿಲುಗಡೆಗೆ ಮಾತ್ರ ಬಳಕೆಯಾಗಬೇಕು
* ಕಟ್ಟಡದಲ್ಲಿ ಕಡ್ಡಾಯವಾಗಿ ಒಬ್ಬ ಅಗ್ನಿ ಸುರಕ್ಷತಾ ಅಧಿಕಾರಿ ಇರಬೇಕು
* ನೀರು ಕೊಳವೆ, ಎಲೆಕ್ಟ್ರಿಕ್ ಅಲಾರಾಂ ಹಾಗೂ ಅಗ್ನಿ ನಂದಕ ಸಲಕರಣೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು
* ಕಟ್ಟಡದಲ್ಲಿ ಕನಿಷ್ಠ 2 ಕಡೆ ಮೆಟ್ಟಿಲು, ಲಿಫ್ಟ್ ಇರುವುದು ಕಡ್ಡಾಯ
* ಅಗ್ನಿ ಸುರಕ್ಷತೆ ಬಗ್ಗೆ ಸಿಬ್ಬಂದಿಗೆ ಆಗಾಗ ಪ್ರಾತ್ಯಕ್ಷಿಕೆ ನೀಡಬೇಕು
* ನಿರ್ಗಮನ ದ್ವಾರಗಳು ಕತ್ತಲಲ್ಲೂ ಗೋಚರವಾಗುವಂತೆ ಇರಬೇಕು
ಆದರೆ, ಇವುಗಳನ್ನು ಬೆಂಗಳೂರಿನಲ್ಲಿರುವ ಬಹುತೇಕ ಬಹುಮಹಡಿ ಕಟ್ಟಡಗಳು ಪಾಲಿಸುತ್ತಿಲ್ಲ.

ಇದನ್ನೂ ಓದಿ: ಬೆಂಗಳೂರು: ಸಿಲಿಂಡರ್​ ಸ್ಫೋಟಿಸಿ ಭಾರಿ ಅಗ್ನಿ ಅವಘಡ; ಹೊತ್ತಿ ಉರಿದ ಫ್ಲ್ಯಾಟ್

ಬೆಂಗಳೂರಲ್ಲಿ ಬೆಂಕಿ ಅವಘಡ: ಸೊಳ್ಳೆ ಪರದೆ ತಯಾರಿಕೆ ಕಾರ್ಖಾನೆಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳಿಗೆ ಹಾನಿ

(Bengaluru Fire Accident Shocking News 2015 Auditing Revealed over 13,214 Buildings in Bangalore dont have Fire Safety)

Published On - 7:59 pm, Tue, 21 September 21