
ಬೆಂಗಳೂರು, ಆಗಸ್ಟ್ 29: ಬೆಂಗಳೂರಿನಲ್ಲಿ ನಕಲಿ ವೈದ್ಯ(Fake Doctor)ರ ಹಾವಳಿ ವಿಪರೀತವಾಗಿದೆ. ಒಂದು ನಕಲಿ ಕ್ಲಿನಿಕ್ಗಳನ್ನು ತೆರೆದುಕೊಂಡು ಪರಿಣಿತರು ಅಲ್ಲದಿದ್ದರೂ ಕೂಡ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವ ದೂರುಗಳು ಆರೋಗ್ಯ ಇಲಾಖೆಗೆ ಬಂದಿವೆ. ಇದೀಗ ಈ ನಕಲಿ ವೈದ್ಯರ ಆಟವನ್ನು ನಿಲ್ಲಿಸಲು ಇಲಾಖೆಯು ಹೊಸ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ. ಹಾಗಾದರೆ ಅದೇನು ಎಂಬುದನ್ನು ತಿಳಿಯಲು ಸಂಪೂರ್ಣ ಸುದ್ದಿ ಓದಿ.
ಟಿವಿ 9 ವರದಿ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ
ಕೆಲ ದಿನಗಳ ಹಿಂದೆಯಷ್ಟೇ ಕೋರಮಂಗಲದಲ್ಲಿ ಆಯುರ್ವೇದ ಓದಿಕೊಂಡಿದ್ದ ವೈದ್ಯರೊಬ್ಬರು ಕಳೆದ 10 ವರ್ಷಗಳಿಂದಲೂ ಅಲೋಪತಿ ಚಿಕಿತ್ಸೆ ಕೊಡುತ್ತಿರುವುದು ಬಯಲಾಗಿತ್ತು. ಈ ಬಗ್ಗೆ ಟಿವಿ9 ವರದಿ ಮಾಡಿತ್ತು. ಈ ಬಳಿಕ ಬೆಂಗಳೂರು, ಕಲಬುರಗಿ, ಬೆಳಗಾವಿ ಸೇರಿದಂತೆ 100 ಕ್ಕೂ ಹೆಚ್ಚು ನಕಲಿ ವೈದ್ಯರ ಪಟ್ಟಿಯನ್ನು ವೈದ್ಯರ ಸಂಘಟನೆ ಆರೋಗ್ಯ ಇಲಾಖೆಗೆ ನೀಡಿತ್ತು. ಟಿವಿ9 ಕೂಡಾ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಸರಣಿ ವರದಿಯನ್ನ ಮಾಡಿದ ಬೆನ್ನಲ್ಲೇ ಆರೋಗ್ಯ ಇಲಾಖೆ ಕೂಡಾ ಈಗ ಅಲರ್ಟ್ ಆಗಿದೆ.
ನಾಯಿಕೊಡೆಗಳಂತೆ ನಕಲಿ ವೈದ್ಯರ ಕ್ಲಿನಿಕ್‌ಗಳು ಬೆಂಗಳೂರಿನಲ್ಲಿ ತಲೆ ಎತ್ತುತ್ತಿವೆ. ಈ ಬಗ್ಗೆ ಆರೋಗ್ಯ ಇಲಾಖೆಗೆ ಸಾಲು ಸಾಲು ದೂರುಗಳು ಬರುತ್ತದ್ದು, ನಕಲಿ ವೈದ್ಯರ ಹಾವಳಿ ತಡೆಯಲು ಇಲಾಖೆ ಹೊಸ ಉಪಾಯ ಮಾಡಿದೆ.
ಮತ್ತಷ್ಟು ಓದಿ: ರಾಜ್ಯದಲ್ಲಿದ್ದಾರೆ 1 ಸಾವಿರಕ್ಕೂ ಅಧಿಕ ನಕಲಿ ವೈದ್ಯರು: ಆರೋಗ್ಯ ಇಲಾಖೆಗೆ ದೂರು
ಅದೇನೆಂದರೆ ಕರ್ನಾಟಕ ಆಯುರ್ವೇದ, ನೈಸರ್ಗಿಕ ಚಿಕಿತ್ಸಾ, ಸಿದ್ಧ, ಯುನಾನಿ ಮತ್ತು ಯೋಗ ವೈದ್ಯರ ನೋಂದಣಿ ಹಾಗೂ ವೈದ್ಯಕೀಯ ವೃತ್ತಿಪರರ ಮಿಶ್ರ ನಿಯಮಾವಳಿ ಕಾಯ್ದೆ, 1961 ಪ್ರಕಾರ, ನೋಂದಾಯಿತ ವೈದ್ಯರು ಅಥವಾ ಕರ್ನಾಟಕ ಮೆಡಿಕಲ್ ರಿಜಿಸ್ಟ್ರೇಷನ್ ಆಕ್ಟ್, 1961 ಅಡಿಯಲ್ಲಿ ನೋಂದಾಯಿತ ವೈದ್ಯರು, ಹೋಮಿಯೋಪಥಿಕ್ ಪ್ರಾಕ್ಟಿಷನರ್ಸ್ ಆಕ್ಟ್, 1961 ಅಡಿಯಲ್ಲಿ ನೋಂದಾಯಿತ ವೈದ್ಯರು, ಇಂಡಿಯನ್ ಮೆಡಿಕಲ್ ಕೌನ್ಸಿಲ್ ಆಕ್ಟ್, 1956 ಅಡಿಯಲ್ಲಿ ಇಂಡಿಯನ್ ಮೆಡಿಕಲ್ ರಿಜಿಸ್ಟರ್‌ನಲ್ಲಿ ಹೆಸರು ಹೊಂದಿರುವವರು ಮಾತ್ರ ವೈದ್ಯಕೀಯ ಸೇವೆ ನೀಡಬಹುದು.
ನೋಂದಣಿ ಇಲ್ಲದೆ ವೈದ್ಯಕೀಯ, ಶಸ್ತ್ರಚಿಕಿತ್ಸೆ ಅಥವಾ ಸೇವೆ ನೀಡುವುದು ನಿಷಿದ್ಧವಾಗಿದೆ..ಈ ಹಿನ್ನೆಲೆ ಕಾಯ್ದೆಯನ್ನ ಉಲ್ಲಂಘಿಸಿದವರಿಗೆ ಹೆಚ್ಚು ಮೊತ್ತದ ದಂಡ ವಿಧಿಸಲು ಹೊಸ ನಿಯಮ ಜಾರಿಗೆ ತಂದಿದೆ. ಡಿಸಿ ಹಂತದಲ್ಲಿ ಈ ಬಗ್ಗೆ ತಂಡ ರಚಿಸಿದ್ದು, ವೈದ್ಯರ ಹಾವಳಿ ತಡೆಯಲು ಮುಂದಾಗಿದೆ.
ನಕಲಿ ವೈದ್ಯರ ವಿರುದ್ಧ ದಂಡಾಸ್ತ್ರ
– ಮೊದಲ ತಪ್ಪಿಗೆ 25,000 ದಂಡ
– ಎರಡನೇ ತಪ್ಪಿಗೆ 2,50,000 ದಂಡ ಮತ್ತು1 ವರ್ಷದ ಶಿಕ್ಷೆ
– ನಂತರದ ತಪ್ಪುಗಳಿಗೆ 5,00,000 ದಂಡ ಮತ್ತು 3 ವರ್ಷಗಳವರೆಗೆ ಶಿಕ್ಷೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಕಲಿ ಕ್ಲಿನಿಕ್ ನಿಯಂತ್ರಣಕ್ಕೆ ಕಡಿವಾಣ ಹಾಕಲಾಗುತ್ತಿದೆ. ನಕಲಿ ವೈದ್ಯರು ಹಾಗೂ ಯಾವುದೇ ಅನುಮತಿ ಇಲ್ಲದೆ ಕ್ಲಿನಿಕ್ ನಡೆಸುವುದನ್ನುತಡೆಯುವುದಕ್ಕೆ, ಜಿಲ್ಲಾಮಟ್ಟದಲ್ಲಿ ಜಿಲ್ಲಾಧ್ಯಕ್ಷರ ಸಮಿತಿ ಇದೆ. ಕಲಬುರಗಿಯಲ್ಲಿ ನಾಲ್ಕು ಜನರು ನಕಲಿ ವೈದ್ಯರಿಂದ ಜೀವ ಹಾನಿಯಾಗಿದೆ.ಪಾರಂಪರಿಕ ನಾಟಿಯಲ್ಲಿ ನಾವು ನೈಜತೆ ಮಾನಿಟರ್ ಮಾಡಲು ಆಗುತ್ತಿಲ್ಲ.ಹೀಗಾಗಿಯೂ ನಾವು ಕಾನೂನು ಉತ್ತರ ನೀಡುತ್ತಿದ್ದೇವೆ ಎಂದಿದ್ದಾರೆ.
ಒಟ್ಟಿನ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಇದನ್ನ ತಡೆಗಟ್ಟಲು ಇಲಾಖೆ ಮುಂದಾಗಿದೆ.ಈ ಹಿನ್ನೆಲೆ ಈ ದಂಡಾಸ್ತ್ರದ ಪ್ರಯೋಗ ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:16 am, Fri, 29 August 25