ರಾಜ್ಯದಲ್ಲಿದ್ದಾರೆ 1 ಸಾವಿರಕ್ಕೂ ಅಧಿಕ ನಕಲಿ ವೈದ್ಯರು: ಆರೋಗ್ಯ ಇಲಾಖೆಗೆ ದೂರು
ಕೆಲವರಿಗೆ ದೇಹ ಮತ್ತು ಮುಖ ಸೌಂದರ್ಯದ ಬಗ್ಗೆ ಬಹಳ ಕಾಳಜಿ ತಿರುತ್ತದೆ. ಸಿಲ್ಕಿ ತಲೆ ಕೂದಲು ಇರಬೇಕು, ಮುಖದಲ್ಲಿ ಮೊಡವೆ ಇರಬಾರದು ಹೀಗೆ ತಮ್ಮ ಸೌಂದರ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ದೇಹ ಅಥವಾ ಮುಖ ಸೌಂದರ್ಯ ಹೆಚ್ಚಿಸಿಕೊಳ್ಳಲು ಕೆಲವರು ಚಿಕಿತ್ಸೆ ಪಡೆಯುತ್ತಾರೆ. ಆದರೆ, ಇನ್ಮುಂದೆ ಚಿಕಿತ್ಸೆ ಪಡೆಯುವ ಮುನ್ನ, ನಿಮಗೆ ಚಿಕಿತ್ಸೆ ನೀಡುವ ವೈದ್ಯರ ಬಗ್ಗೆಯೂ ತಿಳಿದುಕೊಳ್ಳುವುದು ಉತ್ತಮ.

ಬೆಂಗಳೂರು, ಜುಲೈ 29: ಬೆಂಗಳೂರಿನಲ್ಲಿರುವ ನಕಲಿ ವೈದ್ಯರು (Fake Doctors) ಕಾನೂನು ಬಾಹಿರವಾಗಿ ಚರ್ಮದ ಚಿಕಿತ್ಸೆ, ಕೂದಲು ಕಸಿ ಮತ್ತು ಸೌಂದರ್ಯ ಚಿಕಿತ್ಸೆಗಳನ್ನು ನೀಡುತ್ತಿದ್ದು, ಇವರ ವಿರುದ್ಧ ಕ್ರಮಗೈಗೊಳ್ಳುವಂತೆ ಚರ್ಮರೋಗ ತಜ್ಞರು ಆರೋಗ್ಯ ಇಲಾಖೆಗೆ (Health Department) ದೂರು ನೀಡಿದ್ದಾರೆ. ಎಂಬಿಬಿಎಸ್ ಪದವಿ ಪಡೆಯದೆ, ಚರ್ಮರೋಗ ಶಾಸ್ತ್ರ ಅಭ್ಯಾಸ ಮಾಡದೆ ಬ್ಯೂಟಿ ಕ್ಲಿನಿಕ್ ನಡೆಸಿ ಲಕ್ಷ ಲಕ್ಷ ಹಣ ಪಡೆಯುತ್ತಿದ್ದಾರೆ. ಕೂದಲು ಕಸಿ ಬೋರ್ಡ್ ಹಾಕಿಕೊಂಡು ವಂಚಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಭಾರತೀಯ ದಂತ ಪರಿಷತ್ ಸಾರ್ವಜನಿಕ ಅಧಿಸೂಚನೆಯಿಂದ ನೈತಿಕ ಶಿಕ್ಷಣವಿಲ್ಲದೆ ದಂತಶಾಸ್ತ್ರ ಪದವಿಧರರು ಹಾಗೂ OMFS ದಂತ ತಜ್ಞರು ಚರ್ಮ ಸಂಬಂಧಿತ ಸೌಂದರ್ಯ ಪ್ರಕ್ರಿಯೆಗಳನ್ನು ನಡೆಸಬಹುದೆಂದು ತಪ್ಪಾಗಿ ಅರ್ಥೈಸಲಾಗಿದೆ. ಆದರೆ, ರಾಷ್ಟ್ರೀಯ ವೈದ್ಯಕೀಯ ಆಯೋಗ 2022 ರಲ್ಲಿ ಪ್ರಕಟಿಸಿದ ಸುತ್ತೋಲೆಯಲ್ಲಿ, ಚರ್ಮ ವೈದ್ಯಕೀಯ ಅಥವಾ ಪ್ಲಾಸ್ಟಿಕ್ ಸರ್ಜರಿಯಲ್ಲಿ MD, DNB, DVL, DDV ಹಾಗೂ Mch ಪ್ಲಾಸ್ಟಿಕ್ ಸರ್ಜರಿ ಪಿಜಿ ಅರ್ಹತೆ ಹೊಂದಿರಬೇಕು ಅಂತ ಇದೆ. ಈ ಅರ್ಹತೆ ಹೊಂದಿರುವ ವೈದ್ಯರಷ್ಟೇ ಈ ರೀತಿಯ ಚಿಕಿತ್ಸೆಗಳನ್ನು ನಡೆಸಬಹುದೆಂದು ಸ್ಪಷ್ಟವಾಗಿ ಹೇಳಲಾಗಿದೆ.
ಇದನ್ನೂ ಓದಿ: ಆನ್‌ಲೈನ್ ನಲ್ಲಿ ಫುಡ್ ಆರ್ಡರ್ ಮಾಡಿ ಊಟ ಮಾಡುವವರು ಈ ಸುದ್ದಿ ಓದಲೇಬೇಕು!
ಆದರೂ, ಯಾವುದೇ ಅಹರ್ತೆ ಇಲ್ಲದೆ ಸರ್ಜರಿ ಮಾಡಲಾಗುತ್ತಿದೆ. ರಾಜ್ಯದಲ್ಲಿ 1 ಸಾವಿರಕ್ಕೂ ಅಧಿಕ ಸೌಂದರ್ಯ ಚಿಕಿತ್ಸೆ ನೀಡುವ ನಕಲಿ ವೈದ್ಯರು ಇದ್ದಾರೆ. ಮತ್ತು ಬೆಂಗಳೂರಿನಲ್ಲಿ ತಲೆ ಎತ್ತಿರುವ 50 ಕ್ಕೂ ಅಧಿಕ ಸೌಂದರ್ಯ ಚಿಕಿತ್ಸೆ ನೀಡುವ ಕ್ಲಿನಿಕ್ಗಳ ಬಗ್ಗೆ ಗಮನ ಹರಿಸುವಂತೆ ಚರ್ಮತಜ್ಞರ ಸಂಘ ಆರೋಗ್ಯ ಇಲಾಖೆಗೆ ದೂರು ನೀಡಿದೆ.
ಖುದ್ದು ಚರ್ಮತಜ್ಞರು ನಗರದ ವಿವಿಧ ಕ್ಲಿನಿಕ್ಗಳಿಗೆ ಗ್ರಾಹಕರ ಸೋಗಿನಲ್ಲಿ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ನಕಲಿ ಇರುವ ಕ್ಲಿನಿಕ್ಗಳ ಪಟ್ಟಿ ಮಾಡಿ, ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ವೈದ್ಯರ ದೂರು ಸ್ವೀಕರಿಸಿರುವ ಇಲಾಖೆ, ಶೀಘ್ರದಲ್ಲೇ ಖಡಕ್ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.




