ಕ್ಯಾನ್ಸರ್ ಸೇರಿ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರೋಗ್ಯ ಇಲಾಖೆ ಗುಡ್ ನ್ಯೂಸ್: ಮನೆ ಬಾಗಿಲಿಗೆ ಬರಲಿದೆ ಉಚಿತ ಚಿಕಿತ್ಸೆ
ಆರೋಗ್ಯ ಇಲಾಖೆ ಬಡವರು, ಕ್ಯಾನ್ಸರ್ ಪೀಡಿತರು ಮತ್ತು ವೃದ್ಧರಿಗೆ ಮನೆ ಬಾಗಿಲಿಗೆ ಉಚಿತ ಒಪಿಡಿ ಸೇವೆ ಒದಗಿಸಲು ಹೊಸ ಯೋಜನೆ ಆರಂಭಿಸಿದೆ. ಸದ್ಯ ಈ ಯೋಜನೆ ಸಿವಿ ರಾಮನ್ ನಗರದಲ್ಲಿ ಮೊಬೈಲ್ ಆಸ್ಪತ್ರೆ ಮಾದರಿಯಲ್ಲಿ ಸೇವೆ ನೀಡಲಾಗುತ್ತಿದೆ. ಈ ಯೋಜನೆಯಿಂದ ಬಡವರಿಗೆ ಉತ್ತಮ ಆರೋಗ್ಯ ಸೇವೆ ಸಿಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಬೆಂಗಳೂರು, ಜೂನ್ 09: ಬಡ ವರ್ಗದ ಜನರಿಗೆ ಅದರಲ್ಲೂ ಕ್ಯಾನ್ಸರ್ ಪೀಡಿತರಿಗೆ, ವೃದ್ಧರಿಗೆ ಹಾಗೂ ಗಂಭೀರ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಇಲಾಖೆ (Health Department) ನಯಾ ಪ್ಲಾನ್ ಮಾಡಿದ್ದು, ಮನೆ ಬಾಗಿಲಿಗೆ ಒಪಿಡಿ (OPD) ಸೌಲಭ್ಯ ನೀಡಲು ಮುಂದಾಗಿದೆ. ಹೀಗಾಗಿ ಸಿವಿ ರಾಮನ್ ನಗರದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಸಕಲ ಸಿದ್ಧತೆಗಳನ್ನ ಮಾಡಿಕೊಂಡು ಆಯ್ದ ಏರಿಯಾಗಳಲ್ಲಿ ಚಿಕಿತ್ಸೆ ನೀಡಲು ಸಜ್ಜಾಗಿದೆ.
ಕರ್ನಾಟಕದಲ್ಲೇ ಮೊದಲ ಬಾರಿಗೆ ಕ್ಯಾನ್ಸರ್ ಪೀಡಿತರಿಗೆ, ಬ್ರೇನ್ ಹ್ಯಾಮರೇಜ್, ವೃದ್ಧರು ಹಾಗೂ ಗಂಭೀರ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರೋಗ್ಯ ಇಲಾಖೆ ಮನೆ ಮನೆಗೆ ತೆರಳಿ ಉಚಿತ ಒಪಿಡಿ ಚಿಕಿತ್ಸೆ ನೀಡಲು ಮುಂದಾಗಿದೆ. ಪೈಲೆಟ್ ಯೋಜನೆಯಡಿ ಸಿವಿ ರಾಮನ್ ನಗರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾರಂಭಿಕವಾಗಿ ಈ ಒಪಿಡಿ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ.
ಇದನ್ನೂ ಓದಿ: Karnataka Rains: ಬೆಂಗಳೂರು ಸೇರಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಚುರುಕು
ವಯೋವೃದ್ಧರು, ಕ್ಯಾನ್ಸರ್ ಪೀಡಿತರು, ಬ್ರೇನ್ ಹ್ಯಾಮರೇಜ್ ಸೇರಿದ್ದಂತೆ ಗಂಭೀರ ಸಮಸ್ಯೆಯಿಂದ ಬಳಲುವ ರೋಗಿಗಳು ಇನ್ಮುಂದೆ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಬೇಕಿಲ್ಲ, ಮನೆಯ ಬಳಿಯೇ ಒಪಿಡಿ ವ್ಯವಸ್ಥೆ ಮಾಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಕ್ಯಾನ್ಸರ್, ಹೃದಯ ಸಮಸ್ಯೆ ಬ್ರೈನ್ ಹ್ಯಾಮರೇಜ್ , ಸೇರಿದಂತೆ ಮಾರಣಾಂತಿಕ ರೋಗಗಳಿಂದ ಬಳಲುತ್ತಿರುವವರಿಗೆ ಈ ಸೇವೆ ಸಿಗಲಿದೆ.
ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುವವರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಆಸ್ಪತ್ರೆಗೆ ಬಂದಾಗ ಕ್ಯೂನಲ್ಲಿ ನಿಂತು ಕಾಯುವ ಪರಿಸ್ಥಿತಿ ಇರುತ್ತದೆ. ಈ ಹಿನ್ನೆಲೆ ಅಂತವರಿಗಾಗಿ ತುರ್ತಾಗಿ ಚಿಕಿತ್ಸೆ ನೀಡುವ ಸಲುವಾಗಿ ಈ ಸೇವೆ ನೀಡಲು ಇಲಾಖೆ ನಿರ್ಧರಿಸಿದೆ.
5ಕ್ಕೂ ಹೆಚ್ಚು ಕಡೆಗಳಲ್ಲಿ ಸೇವೆ
ಮೊಬೈಲ್ ಆಸ್ಪತ್ರೆ ಮಾದರಿಯ ಮೂಲಕ ವೈದ್ಯರಿಂದ ಚಿಕಿತ್ಸೆ ಸಿಗಲಿದೆ. ಸದ್ಯ ಸಿವಿ ರಾಮನ್ ನಗರ ಆಸ್ಪತ್ರೆಯಿಂದ 5ಕ್ಕೂ ಹೆಚ್ಚು ಕಡೆಗಳಲ್ಲಿ ಸೇವೆ ನೀಡಲು ಸಜ್ಜಾಗಿದ್ದು, ಮುಂದಿನ ದಿನಗಳಲ್ಲಿ ಸೇವೆಯನ್ನ ವಿಸ್ತರಿಸಲು ಪ್ಲಾನ್ ಮಾಡಲಾಗುತ್ತಿದೆ ಎಂದು ಸಿವಿ ರಾಮನ್ ನಗರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ರಾಜೇಶ್ ಹೇಳಿದ್ದಾರೆ.
ಇದನ್ನೂ ಓದಿ: ರಾಯಚೂರಿನಲ್ಲಿ ಸುರಿದ ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ
ಈ ಯೋಜನೆಯಿಂದ ಬಡ ಜನರಿಗೆ ತುಂಬಾ ಸಹಾಯವಾಗಲಿದೆ. ಹೀಗಾಗಿ ಸರ್ಕಾರ ಬೆಂಗಳೂರಿನ ಎಲ್ಲಾ ಏರಿಯಾಗಳಲ್ಲಿಯೂ ಈ ಸೇವೆಯನ್ನ ಜಾರಿಗೆ ತರಬೇಕು ಎಂದು ಓರ್ವ ರೋಗಿಯ ತಾಯಿ ಆಶಾದೇವಿ ಎನ್ನುವವರು ಒತ್ತಾಯ ಮಾಡಿದ್ದಾರೆ. ಒಟ್ಟಿನಲ್ಲಿ ಬಡವರ್ಗದ ಎಲ್ಲರಿಗೂ ಉತ್ತಮ ಹಾಗೂ ಉಚಿತ ಚಿಕಿತ್ಸೆ ದೃಷ್ಠಿಯಿಂದ ಮಹತ್ವದ ಯೋಜನೆಯಾಗಿದ್ದು, ಸರ್ಕಾರ ಈ ಯೋಜನೆಯನ್ನ ಎಲ್ಲೆಡೆ ವಿಸ್ತರಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.