ಲೈಂಗಿಕ ದೌರ್ಜನ್ಯ ಆರೋಪ: ಬೆಂಗಳೂರಿನ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಅರೆಸ್ಟ್

| Updated By: ಆಯೇಷಾ ಬಾನು

Updated on: Nov 09, 2022 | 11:28 AM

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಕ್ಕೆ ಬೆಂಗಳೂರಿನ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಆಂಜಿನಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ರಾಜ್ಯದಲ್ಲಾದ ಕ್ರೈಂ ಸುದ್ದಿಗಳ ಕ್ರೈಂ ರೌಂಡಪ್ ಇಲ್ಲಿದೆ.

ಲೈಂಗಿಕ ದೌರ್ಜನ್ಯ ಆರೋಪ: ಬೆಂಗಳೂರಿನ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಅರೆಸ್ಟ್
ಸಾಂಧರ್ಬಿಕ ಚಿತ್ರ
Follow us on

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ನಾಲ್ಕು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಕ್ಕೆ ಸಂಬಂಧಿಸಿ ದೈಹಿಕ ಶಿಕ್ಷಕ ಆಂಜಿನಪ್ಪ (50)ನನ್ನು ಪೋಕ್ಸೋ ಕಾಯ್ದೆಯಡಿ ಬೆಂಗಳೂರಿನ ಹೆಬ್ಬಾಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮೊಬೈಲ್ ಕದ್ದ ಆರೋಪ: ಬಾಲಕನ ಮೇಲೆ ಪೊಲೀಸ್ ಕಾನ್ಸ್‌ಟೇಬಲ್‌ ಹಲ್ಲೆ

ಮೊಬೈಲ್ ಕದ್ದ ಆರೋಪದ ಮೇಲೆ ಪೊಲೀಸ್ ಕಾನ್ಸ್‌ಟೇಬಲ್‌ ಬಾಲಕನ‌ ಮೇಲೆ ಹಲ್ಲೆ ನಡೆಸಿದ್ದು ಬಾಲಕ ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಎಂಟನೇ ತರಗತಿ ವಿದ್ಯಾರ್ಥಿ ಪ್ರೀತಂ (14) ಹಲ್ಲೆಗೊಳಗಾದ ಬಾಲಕ. ಹಾಸನದ ಬೇಲೂರು ತಾಲೂಕಿನ ಮುಂಡುಗಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹಾಸ್ಟೆಲ್‌ನಲ್ಲಿ ಓದಿಕೊಂಡಿದ್ದ ಪ್ರೀತಂ ರಜೆ ಇದ್ದಿದ್ದರಿಂದ ತನ್ನ ಅಜ್ಜಿಯ ಮನೆಗೆ ಬಂದಿದ್ದ. ಈ ವೇಳೆ ಸಂಬಂಧಿಕರ ಮದುವೆ ಹಿನ್ನೆಲೆ ಪ್ರೀತಂ ಕೂಡ ಮದುವೆಗೆ ಬಂದಿದ್ದ. ಮದುವೆ ಮನೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಶಾಲಿನಿ ಮೊಬೈಲ್ ಕಳ್ಳತನವಾಗಿದೆ. ಪತ್ನಿ ಮೊಬೈಲ್ ಕಾಣೆಯಾದ ಬಗ್ಗೆ ಪೊಲೀಸ್ ಕಾನ್ಸ್ಟೇಬಲ್ ಆಗಿರುವ ಶಾಲಿನಿ ಪತಿ ಜಗದೀಶ್ ಬಾಲಕನನ್ನು ಕರೆದು ಮೊಬೈಲ್ ಕದ್ದ ಬಗ್ಗೆ ವಿಚಾರಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಜಗದೀಶ್ ಮದುವೆ ದಿನ ಮೊಬೈಲ್ ಕಾಣೆಯಾಗಿದ್ದರಿಂದ ಬಾಲಕ ಪ್ರೀತಂ ಮೊಬೈಲ್ ಕದ್ದಿರೋ ಅನುಮಾನದಿಂದ ವಿಚಾರಣೆ ಮಾಡಿದ್ದಾರೆ. ಪ್ರೀತಂ ನನಗೆ ಗೊತ್ತಿಲ್ಲ ಎಂದು ಹೇಳಿದರೂ ಕೇಳದೆ ಹಲ್ಲೆ ಮಾಡಿದ್ದಾರೆ. ಪ್ರೀತಂನನ್ನ ಕರೆದೊಯ್ದು ಜೋಳದ ಹೊಲದಲ್ಲಿ ಹಗ್ಗದಿಂದ ಕಟ್ಟಿ ಪೊಲೀಸ್ ಪೇದೆ ಜಗದೀಶ್ ಹಾಗೂ ಆತನ ಸ್ನೇಹಿತ ಶೈಲೇಶ್ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಲ್ಲೆ ನಂತರ ಕೈಕಾಲು ಕಟ್ಟಿ ಜೋಳದ ಹೊಲದಲ್ಲೇ ಬಿಟ್ಟು ಹೋಗಿದ್ದಾಗಿ ಪೋಷಕರು ಆರೋಪ ಮಾಡಿದ್ದಾರೆ. ಬಾಲಕನ ನರಳಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಪ್ರೀತಂನನ್ನು ರಕ್ಷಿಸಿದ್ದಾರೆ. ಸದ್ಯ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರೀತಂ ಚಿಕಿತ್ಸೆ ಪಡೆಯುತ್ತಿದ್ದು ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವೀಸಾ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿ ಬಂಧನ

ವೀಸಾ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಕೇರಳ ಮೂಲದ ಶ್ರೀನಾಥ್ ಎಂಬ ಆರೋಪಿಯನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಕೊಡಗು, ದ.ಕನ್ನಡ, ಕೇರಳ ಸೇರಿದಂತೆ ಅನೇಕ ಕಡೆ 60ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿರುವ ಆರೋಪ ಆರೋಪಿ ವಿರುದ್ಧ ಕೇಳಿ ಬಂದಿದೆ. ಆರೋಪಿ, ವೀಸಾ ಕೊಡಿಸಲು ಪ್ರತಿಯೊಬ್ಬರಿಂದ ಲಕ್ಷಾಂತರ ರೂ. ಸಂಗ್ರಹ ಮಾಡಿದ್ದ. ಕೊನೆಗೆ ವೀಸಾ ಸಿಗದೆ, ಹಣ ಕಳೆದುಕೊಂಡು ಜನರು ಕಂಗಾಲಾಗಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರದಲ್ಲಿ ಗಾಂಜಾ ಮತ್ತಿನಲಿದ್ದವರಿಂದ ಹಲ್ಲೆ

ಕೊಟ್ಟಿದ್ದ ಪಾರಿವಾಳ ಕೇಳಲು ಹೋದವನಿಂದ ಮನೆಯವರ ಮೇಲೆ‌‌ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆದಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಗಾಂಧಿ ಸರ್ಕಲ್ ನಲ್ಲಿ ನಡೆದಿದೆ. ಗಾಂಜಾ ಮತ್ತಿನಲಿದ್ದ ಇಮ್ರಾನ್ ಖಾನ್, ರಾಮು ಮತ್ತು ಅವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ರಾಮು ಸಹೋದರ ನಾಗರಾಜ್ ಗೆ ಗಂಭೀರ ಗಾಯಗಳಾಗಿದ್ದು ಮುಖ,ಕೈ ಕಾಲು ಹಾಗೂ ಎದೆ ಭಾಗಕ್ಕೆ ಚಾಕು ಇರಿಯಲಾಗಿದೆ. ಜೊತೆಗೆ ಮೂವರು ಮಹಿಳೆಯರಿಗೂ ಗಾಯಗಳಾಗಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗರಾಜ್, ರಾಜೇಶ್ವರಿ, ನಾಗವೇಣಿ ಹಾಗೂ ಚಂದ್ರಕಲಾ ಗಾಯಗೊಂಡ ಮಹಿಳೆಯರು.

ಪಾರಿವಾಳ ವ್ಯಾಪಾರ ಮಾಡುತ್ತಿದ್ದ ಇಮ್ರಾನ್ ಬಳಿ ರಾಮು ಪಾರಿವಾಳ ತೆಗೆದುಕೊಂಡಿದ್ದ. ಪಾರಿವಾಳ ವಾಪಸ್ ನೀಡಿಲ್ಲ ಎಂದು ಕಳೆದ ರಾತ್ರಿ ಮನೆ ಬಳಿ ಹೋಗಿ ಇಮ್ರಾನ್ ಗಲಾಟೆ ಮಾಡಿದ್ದಾನೆ. ಈ ವೇಳೆ ಜಗಳ ಬಿಡಿಸಲು ಹೋದ ರಾಮು ಸಹೋದರ ನಾಗರಾಜ್ ಮೇಲೆ ಇಮ್ರಾನ್ ಮನಬಂದಂತೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆರೋಪಿ ಇಮ್ರಾನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿ-ಮೂವರು ಸ್ಥಳದಲ್ಲೇ ದುರ್ಮರಣ

ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ನಾವದಗಿ ಬಳಿ ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿ ಹೊಡೆದಿದ್ದು ಘಟನೆಯಲ್ಲಿ ಮೂರು ಮೃತಪಟ್ಟಿದ್ದಾರೆ. ಗೋವಿಂದ(45), ದಾಮೋದರ(17), ರಾಹುಲ್(17) ಮೃತ ದುರ್ದೈವಿಗಳು. ಮೃತರು‌ ಕಮಲಾಪುರ ತಾಲೂಕಿನ ಗೋಗಿ ಕೆ.ತಾಂಡಾ ನಿವಾಸಿಗಳು ಎಂದು ತಿಳಿದು ಬಂದಿದೆ. ಮಹಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 11:28 am, Wed, 9 November 22