ಹಿಂದೂ ಪದಕ್ಕೆ ಹೀನಾರ್ಥ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ಕಾಂಗ್ರೆಸ್​ಗೆ ಹೊಡೆತ: ಸಾಮಾಜಿಕ ಮಾಧ್ಯಮದಲ್ಲಿ ಗರಿಗೆದರಿದ ಪರ-ವಿರೋಧ ಚರ್ಚೆ

ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಮತ್ತು ಅದರ ನಂತರ ಬೆಳವಣಿಗೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಗರಿಗೆದರಿದೆ. ಹಲವರು ಫೇಸ್​ಬುಕ್ ಪೋಸ್ಟ್​ಗಳ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಅಂಥ ಕೆಲ ಪೋಸ್ಟ್​ಗಳನ್ನು ಇಲ್ಲಿ ಕೊಡಲಾಗಿದೆ.

ಹಿಂದೂ ಪದಕ್ಕೆ ಹೀನಾರ್ಥ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ಕಾಂಗ್ರೆಸ್​ಗೆ ಹೊಡೆತ: ಸಾಮಾಜಿಕ ಮಾಧ್ಯಮದಲ್ಲಿ ಗರಿಗೆದರಿದ ಪರ-ವಿರೋಧ ಚರ್ಚೆ
ಜಾನಪದ ಸಂಶೋಧಕ ವಡ್ಡಗೆರೆ ನಾಗರಾಜಯ್ಯ, ನಿವೃತ್ತ ಪ್ರಾಧ್ಯಾಪಕ ಎಂ.ಜಿ.ಚಂದ್ರಶೇಖರಯ್ಯ, ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Nov 09, 2022 | 11:20 AM


ಬೆಂಗಳೂರು: ಹಿಂದೂ ಪದಕ್ಕೆ ಹೀನಾರ್ಥವಿದೆ. ಹಿಂದೂ ಶಬ್ದಕ್ಕೆ ಇರುವ ಅರ್ಥ ಸೋತವರು ಅಥವಾ ಗುಲಾಮರು ಎಂಬ ತಮ್ಮ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ (Satish Jarkiholi) ಇಂದು (ನ 9) ಮತ್ತೊಮ್ಮೆ ಸಮರ್ಥಿಸಿಕೊಂಡರು. ವಿಕಿಪೀಡಿಯಾ ಮತ್ತು ಕೋರಾ (Quora) ಆನ್​ಲೈನ್ ​ ವೇದಿಕೆಗಳಲ್ಲಿರುವ ವಿವರಗಳ ಜೊತೆಗೆ ‘ಬಸವ ಭಾರತ’ ಪಾಕ್ಷಿಕ ಪತ್ರಿಕೆಯಲ್ಲಿ ಬಸವ ತತ್ವ ಪ್ರಚಾರಕ ಡಾ.ಜಿ.ಎಸ್.ಪಾಟೀಲ್ ಬರೆದ ಲೇಖನವನ್ನೂ ನಿನ್ನೆ (ನ 8) ಮಾಧ್ಯಮ ಪ್ರತಿನಿದಿಗಳಿಗೆ ನೀಡಿದ್ದರು. ‘ನೀವು ಹಿಂದೂ ಧರ್ಮಕ್ಕೆ ಸೇರಿದವರೇ’ ಎಂಬ ಪ್ರಶ್ನೆಗೆ ಉತ್ತರಿಸುವಾಗ, ‘ನಾನು ಭಾರತೀಯ’ ಎಂದು ಹೇಳಿಕೊಂಡಿದ್ದರು.

ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ರಣದೀಪ್ ಸುರ್ಜೆವಾಲ್ ತಿರಸ್ಕರಿಸಿದ್ದರು. ಸುರ್ಜೇವಾಲ ಹೇಳಿಕೆಗೆ ನನ್ನ ಸಹಮತವಿದೆ ಎಂದು ಸಿದ್ದರಾಮಯ್ಯ ಸಹ ಸತೀಶ್ ಜಾರಕಿಹೊಳಿ ಹೇಳಿಕೆಗೆ ಒಪ್ಪಿಗೆ ಇಲ್ಲ ಎಂದು ಪರೋಕ್ಷವಾಗಿ ಹೇಳಿದರು. ‘ಹಿಂದೂ ಪದಕ್ಕೆ ಹೀನಾರ್ಥವಿದೆ’ ಎಂಬ ತಮ್ಮ ಹೇಳಿಕೆಯ ವಿವಾದದ ಬಗ್ಗೆ ಇಂದು (ನ 9) ‘ಟಿವಿ 9’ ಸುದ್ದಿವಾಹಿನಿಯಲ್ಲಿ ನಡೆದ ಸಂವಾದಲ್ಲಿ ಪ್ರತಿಕ್ರಿಯಿಸಿದ್ದ ಸತೀಶ್ ಜಾರಕಿಹೊಳಿ, ‘ನನ್ನ ಹೇಳಿಕೆಗೆ ನಾನು ಬದ್ಧ’ ಎಂದು ಮತ್ತೊಮ್ಮೆ ತಮ್ಮ ನಿಲುವು ಸ್ಪಷ್ಟಪಡಿಸಿದರು.

ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಮತ್ತು ಅದರ ನಂತರ ಬೆಳವಣಿಗೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಗರಿಗೆದರಿದೆ. ಹಲವರು ಫೇಸ್​ಬುಕ್ ಪೋಸ್ಟ್​ಗಳ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಅಂಥ ಕೆಲ ಪೋಸ್ಟ್​ಗಳನ್ನು ಇಲ್ಲಿ ಕೊಡಲಾಗಿದೆ.

ಕಾಂಗ್ರೆಸ್ ಅವನತಿಗೆ ಇಂಥ ಎಡವಟ್ಟುಗಳೇ ಕಾರಣ: ಚಂದ್ರಶೇಖರಯ್ಯ

‘ಕಾಂಗ್ರೆಸ್‌ ಪಕ್ಷದ ಅವನತಿಗೆ ಬಿಜೆಪಿ ಮಾಡಿದ ಅಪಪ್ರಚಾರಕ್ಕಿಂತ ಕಾಂಗ್ರೆಸ್ ಪಕ್ಷದ ಇಂತಹ ನಾಯಕರು ಮಾಡುವ ಎಡವಟ್ಟುಗಳು ಬಹುಮಟ್ಟಿಗೆ ಕಾರಣವಾಗಿದೆ. ಸತೀಶ್ ಜಾರಕಿಹೊಳಿಯವರು ಸ್ಮಶಾನದಲ್ಲಿ ಕವಿಗೋಷ್ಠಿ, ಊಟ ಮಾಡುವುದನ್ನೇ ವೈಚಾರಿಕತೆ ಎಂದು ತಿಳಿದುಕೊಂಡು, ಶುಷ್ಕ ವೈಚಾರಿಕರ ಪರಾಕಿಗೆ ಉಬ್ಬಿಹೋಗಿ ಈಗ ಕಾಂಗ್ರೆಸ್‌ನವರು ಇಂತಹ ತಪ್ಪು ಮಾಡಲೆಂದು ಕಾಣುತ್ತಿರುವ ಬಿಜೆಪಿಗೆ ಸುಲಭದ ತುತ್ತಾಗಿದ್ದಾರೆ. ಹಿಂದೂ ಶಬ್ದದ ನಿಷ್ಪತ್ತಿ ತಿಳಿಯದೆ, ಅಲ್ಲಿ ಹೇಳಿದೆ ಇಲ್ಲಿ ಹೇಳಿದೆ ಎಂದು ಗಾಳಿಸುದ್ದಿ ಮಾಡಿ ಈಗ ನನ್ನ ಭಾಷಣ ತಪ್ಪಾಗಿ ಅರ್ಥೈಸಲಾಗಿದೆ ಎಂದು ತಮ್ಮ ತಪ್ಪನ್ನು ಬೇರೆಯವರ ಹೆಗಲಿಗೆ ಹಾಕಲು ಹೊರಟಿದ್ದಾರೆ’ ಎಂದು ದೊಡ್ಡಬಳ್ಳಾಪುರದ ನಿವೃತ್ತ ಕನ್ನಡ ಪ್ರಾಧ್ಯಾಪಕ ಎಂ.ಜಿ.ಚಂದ್ರಶೇಖರಯ್ಯ ಬರೆದುಕೊಂಡಿದ್ದಾರೆ.

‘ವೈಚಾರಿಕತೆ ಎಂದರೆ ವಿವಾದ ಉಂಟು ಮಾಡುವ ಹೇಳಿಕೆ ನೀಡುವುದು ಎಂದು ಕೆಲವರು ತಿಳಿದಿದ್ದಾರೆ. ಪೋಲಂಕಿ ರಾಮಮೂರ್ತಿ, ಕೆ.ಎಸ್.ಭಗವಾನ್, ಸತೀಶ್ ಜಾರಕಿಹೊಳಿ, ಯೋಗೀಶ್ ಮಾಸ್ಟರ್ ಮುಂತಾದ ಅನೇಕರಿಂದ ನಿಜವಾದ ವೈಚಾರಿಕತೆಗೆ ತುಂಬ ಪೆಟ್ಟು ಬಿದ್ದಿದೆ. ವೈಚಾರಿಕತೆಗೆ ಸಂಪ್ರದಾಯವಾದಿಗಳಿಗಿಂತ ಇಂತಹವರಿಂದ ಬಿದ್ದಿರುವ ಹೊಡೆತವೇ ದೊಡ್ಡದು. ಶಿವರಾಮ ಕಾರಂತರು, ಕುವೆಂಪು, ತೇಜಸ್ವಿ, ಲಂಕೇಶ್, ದೇವನೂರು ಮುಂತಾದವರು ಹೇಳುವ ಗಟ್ಟಿ ವೈಚಾರಿಕತೆಗೆ ಸಾಂಸ್ಕೃತಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಜವಾಬ್ದಾರಿ ಇದೆ. ಆದರೆ ಭಗವಾನ್, ಮುಂತಾದವರು ಕೇಲವರು ವೈಚಾರಿಕತೆ ಹೆಸರಿನಲ್ಲಿ ಧೂಳು ಏಳಿಸಿದರೇ ವಿನಃ ಅದರಿಂದ ಸಂಸ್ಕೃತಿ ಮತ್ತು ವೈಚಾರಿಕತೆಗೆ ಯಾವುದೇ ಪ್ರಯೋಜನ ಆಗಲಿಲ್ಲ, ಅಷ್ಟೇ ಅಲ್ಲ, ಧಕ್ಕೆ ಆಗಿದೆ’ ಎಂದು ಅವರು ಚರ್ಚೆಯನ್ನು ವಿಸ್ತರಿಸಿದ್ದಾರೆ.

ವಿವಾದ ಬೇಡ, ಸಂವಾದ ನಡೆಯಲಿ: ಸನತ್ ಕುಮಾರ್ ಬೆಳಗಲಿ

‘ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆ ಬಗ್ಗೆ ಚರ್ಚೆಯಾಗಲಿ. ಸಂವಾದದ ಮೂಲಕ ಸತೀಶರನ್ನು ಎದುರಿಸಲಿ. ಚುನಾವಣೆ ಮುಂದಿರುವಾಗ ಸತೀಶ ಈ ಮಾತು ಯಾಕೆ ಆಡಿದರೋ ಗೊತ್ತಿಲ್ಲ. ಸತೀಶ ಹೇಳಿದ್ದು ಧರ್ಮದ ಬಗ್ಗೆ ಅಲ್ಲ. ಹಿಂದೂ ಪದದ ಬಗ್ಗೆ. ಶಂ,ಬಾ,ಜೋಶಿಯವರು, ಗೌರೀಶ ಕಾಯ್ಕಿಣಿಯವರು ಸೇರಿದಂತೆ ಬೌದ್ಧಿಕ ವಲಯದಲ್ಲಿ ಆಗಾಗ ಇಂಥ ಚರ್ಚೆಗಳು ನಡೆದಿವೆ. ಈಗಲೂ ನಡೆಯಲಿ. ಸಂವಾದ ಇರಲಿ. ವಿವಾದ ಬೇಡ’ ಎಂಬ ಚಿಂತಕ ಹಾಗೂ ಹಿರಿಯ ಪತ್ರಕರ್ತ ಸನತ್ ಕುಮಾರ ಬೆಳಗಲಿ ಫೇಸ್​ಬುಕ್​ನಲ್ಲಿ ಬರೆದಿದ್ದಾರೆ.

ಚುನಾವಣೆಯ ತಯಾರಿಯಲ್ಲಿ ನಡುಸುತ್ತುಗಳು: ರಾಜಾರಾಮ್ ತಲ್ಲೂರ್

‘ಒಂದು ಗುರಿ, ಅದನ್ನು ತಲುಪುವ ಹಾದಿ ಮತ್ತು ತಲುಪುವ ತಂತ್ರಗಳು ಸ್ಪಷ್ಟ ಇಲ್ಲದಾಗ ಹೀಗೆಲ್ಲ ಆಗುತ್ತದೆ. ಪ್ರಜಾತಂತ್ರದಲ್ಲಿ ವಿಶ್ವಾಸ ಇಟ್ಟಿರುವವರು ಈಗ ಸೆಣಸಬೇಕಿರುವುದು ಒಂದು ಸುವ್ಯವಸ್ಥಿತವಾದ, ಸರ್ವಸನ್ನದ್ಧ ಚುನಾವಣೆ ಗೆಲ್ಲುವ ಯಂತ್ರದ ವಿರುದ್ಧ ಎಂಬ ಕಲ್ಪನೆ ಇಲ್ಲದಿರುವಾಗ, ಈ ರೀತಿಯ ವಿವಾದಗಳು ಸುಲಭವಾಗಿ ಹುಟ್ಟಿಕೊಳ್ಳುತ್ತವೆ’ ಎಂದು ಚಿಂತಕ ರಾಜಾರಾಮ್ ತಲ್ಲೂರ್ ಫೇಸ್​ಬುಕ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ. ‘ಈ ವಿವಾದವನ್ನು ಸತೀಶ್ ಜಾರಕಿಹೊಳಿಯವರು ಉದ್ದೇಶಪೂರ್ವಕವಾಗಿ ಹುಟ್ಟುಹಾಕಬೇಕೆಂದೇನಿಲ್ಲ, ಒಮ್ಮೆ ವಿವಾದ ಹುಟ್ಟಿದ ಬಳಿಕ ಅದು ಹುಟ್ಟಿಸಿದವರ ಕೈಯಲ್ಲಿರುವುದಿಲ್ಲ. ಇವೆಲ್ಲ ಚುನಾವಣೆಯ ತಯಾರಿಯಲ್ಲಿ ನಡುಸುತ್ತುಗಳು. ಇಂತಹ ವಿವಾದಗಳನ್ನು ಹುಡುಹುಡುಕಿ ಎತ್ತಿ ತೆಗೆದು, ಹೇಗೆ ಅರ್ಥ ಮಾಡಿಕೊಳ್ಳಬೇಕೆಂದು ತಮ್ಮ ಮತದಾರರಿಗೆ ಸರಳ ಸಮೀಕರಣಗಳ ಮೂಲಕ ತಿಳಿಸುವ ಕೌಶಲ ಒಂದು ಸರ್ವಸನ್ನದ್ಧ ಪರಿವಾರ ವ್ಯವಸ್ಥೆಗೆ ಬಹಳ ಚೆನ್ನಾಗಿದೆ ಎಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ’ ಎಂದು ಅವರು ಹೇಳಿದ್ದಾರೆ.

‘ಕಳೆದ ಚುನಾವಣೆಗಳಲ್ಲಿ ಸಿದ್ಧರಾಮಯ್ಯನವರ ಮೀನೂಟ/ಬಾಡೂಟ, ಅವರ ಕಾರಿನ ಮೇಲೆ ಕುಳಿತ ಕಾಗೆ ಇವೆಲ್ಲ ಅದನ್ನು ಕಲಿಸಿಕೊಟ್ಟಿವೆ. ಚುನಾವಣೆಗಳಿಗೆ ಮೊದಲು ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಇಂತಹದೊಂದು ಪ್ಯಾಟರ್ನ್​ನಿಂದ ಕಲಿಯಲು ಸಾಧ್ಯವಾಗಿಲ್ಲ, ಅಥವಾ ಕನಿಷ್ಠ ಪ್ಯಾಟರ್ನ್‌ ಅನ್ನು ಗುರುತಿಸಿ ಅರ್ಥ ಮಾಡಿಕೊಳ್ಳಲು ಸಾಧ್ಯ ಆಗಿಲ್ಲ ಎಂದರೆ, ಅದಕ್ಕೆ ಅರ್ಥ ಆಗದವರೇ ಹೊಣೆ. ಕಾಂಗ್ರೆಸ್ಸಿನೊಳಗೆ ಬೇರೆ ನಾಯಕರಿಗಿಂತ ಸಿದ್ಧರಾಮಯ್ಯ, ಬಿ.ಕೆ.ಹರಿಪ್ರಸಾದ್, ಸತೀಶ್ ಜಾರಕಿಹೊಳಿಯಂತಹ ನಾಯಕರೇ ಯಾಕೆ ಹೆಚ್ಚಾಗಿ ಈ ರೀತಿಯ ದಾಳಿಗೆ ಗುರಿಯಾಗುತ್ತಿದ್ದಾರೆ ಎಂಬ ಪ್ಯಾಟರ್ನನ್ನಾದರೂ ಅರ್ಥ ಮಾಡಿಕೊಳ್ಳದಿದ್ದರೆ, ಈ ಯುದ್ಧ ರೈಫಲ್ ಹೊಂದಿರುವವರ ವಿರುದ್ಧ ಕಲ್ಲು ದೊಣ್ಣೆಗಳೊಂದಿಗೆ, ಯಾವುದೇ ವ್ಯೂಹವಿಲ್ಲದೆ ಹೋರಾಡುವ ಅಸಮ ಯುದ್ಧವೇ ಸೈ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸವಾಲು ಸ್ವೀಕರಿಸುವ ಎದೆಗಾರಿಕೆ ತೋರಿಸಲಿ: ದಿನೇಶ್ ಅಮೀನ್ ಮಟ್ಟು

‘ತಮ್ಮ ಹೇಳಿಕೆ ತಪ್ಪೆಂದು ಸಾಬೀತು ಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸತೀಶ್ ಜಾರಕಿಹೊಳಿ ಅವರು ತಮ್ಮ ರಾಜಕೀಯ ಜೀವನವನ್ನು ಪಣಕ್ಕಿಟ್ಟು ಸವಾಲು ಹಾಕಿದ್ದಾರೆ. ಹಿಂದೂ ಧರ್ಮ ರಕ್ಷಕರೆಂದು ಎದೆ ಬಡಿದುಕೊಳ್ಳುವವರು ಈಗ ಜಾರಕಿಹೊಳಿ ಅವರ ಸವಾಲನ್ನು ಸ್ವೀಕರಿಸುವ ಎದೆಗಾರಿಕೆ ತೋರಿಸಬೇಕು’ ಎಂದು ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ತಮ್ಮ ಪೋಸ್ಟ್​ನಲ್ಲಿ ಕರೆ ನೀಡಿದ್ದಾರೆ.

‘ಹಿಂದೂ ಧರ್ಮ ಉಳಿದುಕೊಂಡಿದ್ದು ಆಚಾರ್ಯರು, ಸ್ವಾಮಿಗಳಿಂದಲೂ ಅಲ್ಲ, ವೇದ, ಉಪನಿಷತ್, ಪುರಾಣಗಳಿಂದಲೂ ಅಲ್ಲ, ಅದು ಉಳಿದದ್ದು ಬೆಳೆದದ್ದು ಕಾಲಕಾಲಕ್ಕೆ ಬುದ್ದ, ಬಸವ, ನಾರಾಯಣ ಗುರು, ಪುಲೆ, ಅಂಬೇಡ್ಕರ್, ಪೆರಿಯಾರ್, ಗಾಂಧಿ, ಲೋಹಿಯಾರಂತಹವರು ಕೇಳಿದ ಪ್ರಶ್ನೆಗಳಿಂದ ಮತ್ತು ಹುಟ್ಟು ಹಾಕಿದ ಚರ್ಚೆಗಳಿಂದ. ಇವರಲ್ಲಿ ಕೆಲವರು ಹಿಂದೂ ಧರ್ಮವನ್ನೇ ವಿರೋಧಿಸಿದ್ದಾರೆ ನಿಜ, ಆ ವಿರೋಧದಿಂದಾಗಿ ಹಿಂದೂ ಧರ್ಮ ಅನಿವಾರ್ಯವಾಗಿ ಸುಧಾರಣೆಗೊಳಗಾಗಬೇಕಾಯಿತು. ನಾರಾಯಣ ಗುರುಗಳು ಕೇರಳದಲ್ಲಿ ಧಾರ್ಮಿಕ ಸುಧಾರಣೆಗಳಿಗೆ ಕೈಹಾಕದಿದ್ದರೆ ಅಲ್ಲಿನ ಅರ್ಧ ಜನಸಂಖ್ಯೆ ಕ್ರಿಶ್ಚಿಯನರದಾಗುತ್ತಿತ್ತು’ ಎಂದು ಅವರು ಎಚ್ಚರಿಸಿದ್ದಾರೆ.

ಚರ್ಚೆಯಲ್ಲಿ ತಪ್ಪೇನಿದೆ: ವಡ್ಡಗೆರೆ ನಾಗರಾಜಯ್ಯ

‘ಈಗ ಸತೀಶ್ ಜಾರಕಿಹೊಳಿ ಎತ್ತಿರುವ ಪ್ರಶ್ನೆ ಹಿಂದೂ ಎಂಬ ಧರ್ಮದ ವಿರುದ್ಧವಲ್ಲ. ಹಿಂದೂ ಎಂಬ ಪರ್ಷಿಯನ್ ಮೂಲದ ಪದದ ಅರ್ಥ ಮತ್ತು ಆ ಪರಿಕಲ್ಪನೆಯು ಹುಟ್ಟಿಹಾಕಿರುವ ಅಪಕಲ್ಪನೆಗಳ ಬಗ್ಗೆ. ವೇದ ಉಪನಿಷತ್ತು ಭಗವದ್ಗೀತೆ ರಾಮಾಯಣ ಮಹಾಭಾರತ ಭಾಗವತ ಹೀಗೆ ಎಲ್ಲಿಯೂ ಕಾಣದಿರುವ ಹಿಂದೂ ಅಥವಾ ಹಿಂದೂಧರ್ಮ ಎಂಬುದರ ಬಗ್ಗೆ ಸ್ಪಷ್ಟವಾದ ಚರ್ಚೆಯನ್ನು ನಾವು ಬಯಸುವುದರಲ್ಲಿ ತಪ್ಪೇನಿದೆ? ನಮಗೆ ಬೇಕಿರುವುದು ಸಂವಾದವೇ ಹೊರತು ವಿವಾದವಲ್ಲ’ ಎಂದು ಜಾನಪದ ವಿದ್ವಾಂಸ ವಡ್ಡಗೆರೆ ನಾಗರಾಜಯ್ಯ ತಮ್ಮ ಫೇಸ್​ಬುಕ್​ ಪೋಸ್ಟ್​ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Tv9 Exclusive: ಹಿಂದೂ ಪದಕ್ಕೆ ಹೀನಾರ್ಥವಿದೆ ಎಂದ ಸತೀಶ್ ಜಾರಕಿಹೊಳಿ ಹೇಳಿಕೆ ಭಾರತದ ಪರಂಪರೆಗೆ ಮಾಡಿದ ಅವಮಾನ; ಜಿ.ಬಿ.ಹರೀಶ್, ಶೆಲ್ವಪಿಳ್ಳೆ ಅಯ್ಯಂಗಾರ್

 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada