ಬೆಂಗಳೂರು ತರಕಾರಿಯಲ್ಲಿ ಲೋಹದ ಅಂಶ, ವಿಷ: ಸಮಗ್ರ ಅಧ್ಯಯನಕ್ಕೆ ಸಮಿತಿ

|

Updated on: Oct 24, 2024 | 10:54 AM

ಬೆಂಗಳೂರಿಗೆ ಬರುವ ತರಕಾರಿಗಳಲ್ಲಿ ಹೆವಿ ಮೆಟಲ್ ಮತ್ತು ವಿಷಕಾರಿ ಅಂಶಗಳಿವೆ ಎಂಬುದು ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು. ಸಿಲಿಕಾನ್ ಸಿಟಿ ಜನರ ಆತಂಕಕ್ಕೂ ಕಾರಣವಾಗಿತ್ತು. ಇದೀಗ ತರಕಾರಿ ವಿಷದ ಬಗ್ಗೆ ಅಧ್ಯಯನಕ್ಕಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ.

ಬೆಂಗಳೂರು ತರಕಾರಿಯಲ್ಲಿ ಲೋಹದ ಅಂಶ, ವಿಷ: ಸಮಗ್ರ ಅಧ್ಯಯನಕ್ಕೆ ಸಮಿತಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಅಕ್ಟೋಬರ್ 24: ಬೆಂಗಳೂರಿನ ತರಕಾರಿಗಳಲ್ಲಿ ವಿಷಾಂಶ ಮತ್ತು ಮೆಟಲ್ ಅಂಶ ಪತ್ತೆಯಾಗಿರುವ ಬಗ್ಗೆ ಸಮಗ್ರ ಅಧ್ಯಯನಕ್ಕಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಸೂಚಿಸಿದೆ. ಪರಿಸರ ನಿರ್ವಹಣಾ ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್‌ಐ) ನಡೆಸಿದ ಅಧ್ಯಯನದಲ್ಲಿ ತರಕಾರಿಗಳಲ್ಲಿ ಲೋಹದ ಅಂಶ ಪತ್ತೆಯಾಗಿರುವ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠ ವಿವರಗಳನ್ನು ಕೋರಿತ್ತು. ಅದರ ಬೆನ್ನಲ್ಲೇ ಇದೀಗ ಉನ್ನತ ಮಟ್ಟದ ಸಮಿತಿ ರಚನೆ ಬಗ್ಗೆ ಪ್ರಸ್ತಾಪಿಸಲಾಗಿದೆ.

ಬೆಂಗಳೂರಿನ ತರಕಾರಿಗಳ ಸುಮಾರು 400 ಮಾದರಿಗಳ ಅಧ್ಯಯನ ನಡೆಸಿದ್ದ ಇಎಂಪಿಆರ್‌ಐ, ತರಕಾರಿಗಳಲ್ಲಿ ಕಬ್ಬಿಣ, ಕ್ಯಾಡ್ಮಿಯಮ್, ಸೀಸ ಮತ್ತು ನಿಕಲ್ ಅಂಶಗಳು ಆಹಾರ ಮತ್ತು ಕೃಷಿ ಸಂಸ್ಥೆಯು ಸೂಚಿಸಿದ ಮಿತಿಗಳಿಗಿಂತ ಹೆಚ್ಚಾಗಿದೆ ಎಂದು ಹೇಳಿತ್ತು.

ಹೆವಿ ಮೆಟಲ್ಸ್ ಮತ್ತು ಕೀಟನಾಶಕಗಳ ಮಾದರಿಗಳ ಬಗ್ಗೆ ಎಫ್‌ಎಸ್‌ಎಸ್‌ಎಐ-ಅನುಮೋದಿತ ಪ್ರಯೋಗಾಲಯಗಳಲ್ಲಿ ಮಾತ್ರ ಅಧ್ಯಯನ ಕೈಗೊಳ್ಳಬೇಕು. ತರಕಾರಿಗಳಲ್ಲಿನ ಅವಶೇಷಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನ ಪ್ರಕಾರ, ಎಫ್‌ಎಸ್‌ಎಸ್‌ಎಐ ಸೂಚಿಸಿದ ಮಾನದಂಡಗಳೊಂದಿಗೆ ಮಾತ್ರ ಹೋಲಿಸಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ತರಕಾರಿಗಳಲ್ಲಿ ಪತ್ತೆಯಾದ ಲೋಹಗಳು ಮತ್ತು ಕೀಟನಾಶಕಗಳಿಗೆ ಸಂಬಂಧಿಸಿದಂತೆ ವಾಸ್ತವವನ್ನು ಖಚಿತಪಡಿಸಿಕೊಳ್ಳಲು, ಹೆಚ್ಚಿನ ಸಮಗ್ರ ಅಧ್ಯಯನದ ಅಗತ್ಯವಿದೆ ಎಂದು ಮಂಡಳಿ ಹೇಳಿದ್ದು, ಐದು ಸದಸ್ಯರ ಸಮಿತಿ ರಚನೆ ಬಗ್ಗೆ ಪ್ರಸ್ತಾಪಿಸಿದೆ.

ಸಮಿತಿಯಲ್ಲಿ ಯಾರೆಲ್ಲ?

ಸಿಪಿಸಿಬಿ ಲ್ಯಾಬ್‌ಗಳು ಎಫ್‌ಎಸ್‌ಎಸ್‌ಎಐನಿಂದ ಮಾನ್ಯತೆ ಪಡೆಯದ ಕಾರಣ, ಸಮಿತಿಯು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಸಂಘ (ಎಫ್‌ಎಸ್‌ಎಸ್‌ಎಐ) ಮತ್ತು ಭೋಪಾಲ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೋಲ್ ಸೈನ್ಸ್‌ನ ಸದಸ್ಯರನ್ನು ಒಳಗೊಂಡಿರಬೇಕು. ಬೆಂಗಳೂರಿನ ಸಿಪಿಸಿಬಿ ಪ್ರಾದೇಶಿಕ ನಿರ್ದೇಶಕರನ್ನು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಕರ್ನಾಟಕ ವಿಭಾಗದ ಸದಸ್ಯರೊಬ್ಬರು ಮತ್ತು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸದಸ್ಯರೊಬ್ಬರನ್ನು ಒಳಗೊಂಡಿರಬೇಕು ಎಂದು ಸೂಚಿಸಲಾಗಿದೆ.

ಅಧ್ಯಯನ ವರದಿ ಸಲ್ಲಿಸಲು 4 ತಿಂಗಳ ಕಾಲಾವಕಾಶ

ಸಮೀಕ್ಷೆ, ಮಾದರಿ ಗಾತ್ರ, ಸ್ಥಳ ಮತ್ತು ಪ್ರಯೋಗಾಲಯಗಳು ಸೇರಿದಂತೆ ಅಧ್ಯಯನಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಮಿತಿಯು ನಿರ್ಧರಿಸಬೇಕು. ಎನ್‌ಜಿಟಿಗೆ ಸಲ್ಲಿಸಬೇಕಾದ ವಿಶ್ಲೇಷಣಾ ಫಲಿತಾಂಶಗಳು ಮತ್ತು ವರದಿಯ ಅಂತಿಮಗೊಳಿಸುವಿಕೆಗೆ ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ತರಕಾರಿ ಹಸಿರಾಗಿ, ಫ್ರೆಶ್ ಆಗಿದೆ ಎಂದು ಮೋಸ ಹೋಗಬೇಡಿ; ಈ ವಿಡಿಯೋ ನೋಡಿ

ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಮತ್ತು ತಜ್ಞ ಸದಸ್ಯ ಸತ್ಯಗೋಪಾಲ್ ಕೊರ್ಲಪಾಟಿ ಅವರಿದ್ದ ಎನ್‌ಜಿಟಿ ಪೀಠವು ಅಕ್ಟೋಬರ್ 15 ರ ವಿಚಾರಣೆಯಲ್ಲಿ ಡಿಸೆಂಬರ್ 2 ರೊಳಗೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಮಂಡಳಿಗೆ ಸೂಚಿಸಿದೆ ಎಂದು ವರದಿ ಉಲ್ಲೇಖಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ