ಬೆಂಗಳೂರು ಟ್ರಾಫಿಕ್​ನಿಂದ ವರ್ಷಕ್ಕೆ ಎರಡೂವರೆ ತಿಂಗಳು ನಷ್ಟ! ಟೆಕ್ಕಿಯ ಲೆಕ್ಕಾಚಾರದ ಪೋಸ್ಟ್ ವೈರಲ್

ಬೆಂಗಳೂರು ಟ್ರಾಫಿಕ್ ಸಮಸ್ಯೆಯ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ನಗರವಾಸಿಗಳೆಲ್ಲರೂ ಈ ಸಮಸ್ಯೆಯ ಸಂತ್ರಸ್ತರೇ. ತಾಸುಗಟ್ಟಲೆ ಟ್ರಾಫಿಕ್​ನಲ್ಲಿ ಸಿಲುಕಿ ಅಮೂಲ್ಯ ಸಮಯವನ್ನು ಕಳೆಯಬೇಕಾದ ಪರಿಸ್ಥಿತಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಒದಗಿಬರುತ್ತಿದೆ. ಸಂಚಾರ ದಟ್ಟಣೆಯಿಂದ ಒಂದಿಡೀ ವರ್ಷದಲ್ಲಿ ನಮಗಾಗುವ ಸಮಯ ನಷ್ಟ ಎಷ್ಟೆಂದು ಯಾರಾದರೂ ಲೆಕ್ಕ ಹಾಕಿದರೆ ಹೇಗಿರಬಹುದು!? ಟೆಕ್ಕಿಯೊಬ್ಬರ ಲೆಕ್ಕಾಚಾರ ಪೋಸ್ಟ್ ಈಗ ವೈರಲ್ ಆಗಿದೆ

ಬೆಂಗಳೂರು ಟ್ರಾಫಿಕ್​ನಿಂದ ವರ್ಷಕ್ಕೆ ಎರಡೂವರೆ ತಿಂಗಳು ನಷ್ಟ! ಟೆಕ್ಕಿಯ ಲೆಕ್ಕಾಚಾರದ ಪೋಸ್ಟ್ ವೈರಲ್
ಬೆಂಗಳೂರು ಟ್ರಾಫಿಕ್​ನ ಸಾಂದರ್ಭಿಕ ಚಿತ್ರ

Updated on: Sep 20, 2025 | 2:31 PM

ಬೆಂಗಳೂರು, ಸೆಪ್ಟೆಂಬರ್ 20: ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೊಸದೇನಲ್ಲ. ನಗರದಲ್ಲಿ ಹೆಚ್ಚುತ್ತಿರುವ  ಜನಸಂಖ್ಯೆ ಮತ್ತು ಉದ್ಯೋಗಾವಕಾಶಗಳು ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುತ್ತಿದೆ. ಕಳೆದ ಒಂದು ವರ್ಷದಲ್ಲಿ ಬೆಂಗಳೂರಿನಲ್ಲಿ 7 ಲಕ್ಷಕ್ಕೂ ಹೆಚ್ಚು ಹೊಸ ವಾಹನಗಳು ನೋಂದಣಿಯಾಗಿವೆ. ಹೀಗಿರುವಾಗ ಪ್ರತಿನಿತ್ಯ ಓಡಾಡುವ ಜನರು ಟ್ರಾಫಿಕ್ ಸಮಸ್ಯೆ ಎದುರಿಸುವುದು ಸಾಮಾನ್ಯ. ಈ ಬಗ್ಗೆ ಟೆಕ್ಕಿಯೊಬ್ಬರು ಹಂಚಿಕೊಂಡ ರೆಡ್ಡಿಟ್ ಪೋಸ್ಟ್ ಇದೀಗ ವೈರಲ್​ ಆಗುತ್ತಿದೆ.
.

ವೈರಲ್​ ಪೋಸ್ಟ್​ನಲ್ಲಿ ಏನಿದೆ?

Traffic is the new tax
byu/Proof-Ad-1019 inBengaluru

ಬೆಂಗಳೂರಿನ ಜೆ.ಪಿ ನಗರದ ನಿವಾಸಿಯಾಗಿರುವ ಈ ಟೆಕ್ಕಿ ದಿನನಿತ್ಯ ನಗರದಲ್ಲಿ ಸಂಚರಿಸುವಾಗ ಅವರು ಎದುರಿಸುವ ಸಮಸ್ಯೆಗಳನ್ನು ರೆಡ್ಡಿಟ್​ನಲ್ಲಿ ಹಂಚಿಕೊಂಡಿದ್ದಾರೆ. ಇವರ ವಾರ್ಷಿಕ ಆದಾಯ 28 ಲಕ್ಷ ರೂಪಾಯಿಗಳಾಗಿದ್ದು, ಅದರಲ್ಲಿ 6.5  ಲಕ್ಷ ರೂ.ಗಳಷ್ಟು ತೆರಿಗೆ ಕಟ್ಟುತ್ತಾರೆ. ಇದರೊಂದಿಗೆ ದಿನನಿತ್ಯದ ಖರ್ಚು ವೆಚ್ಚದಲ್ಲಿ ವರ್ಷಕ್ಕೆ  1.4 ಲಕ್ಷ ರೂ.ಗಳಷ್ಟು GST ಪಾವತಿಸುತ್ತಾರೆ.

ಅವರ ಆಫೀಸು ಔಟರ್ ರಿಂಗ್​ ರೋಡ್​ನಲ್ಲಿರುವ ಕಾರಣ ದಿನಾಲೂ ಅವರು ಮನೆಯಿಂದ  14 ಕಿ.ಮೀ ಚಲಿಸಬೇಕು. ಇಷ್ಟು ದೂರ ಚಲಿಸಲು ಸಾಮಾನ್ಯವಾಗಿ 30 ನಿಮಿಷಗಳು ಸಾಕು. ಆದರೆ ಟ್ರಾಫಿಕ್​ನ ಕಾರಣದಿಂದಾಗಿ ಪ್ರತಿದಿನ ಮನೆಯಿಂದ ಆಫೀಸು ತಲುಪಲು 90 ನಿಮಿಷಗಳ ಕಾಲಾವಧಿ ತೆಗೆದುಕೊಳ್ಳುತ್ತಾರೆ. ಮರಳಿ ಮನೆಗೆ ಬರುವಾಗಲೂ ಮತ್ತದೇ 90 ನಿಮಿಷ ಟ್ರಾಫಿಕ್​ನಲ್ಲಿ ಕಳೆಯುತ್ತಾರೆ. ‘ಬೆಂಗಳೂರಿನ ಈ ಟ್ರಾಫಿಕ್​ನಿಂದ ನನ್ನ ಒಂದು ವರ್ಷದಲ್ಲಿ ಎರಡೂ ವರೆ ತಿಂಗಳುಗಳು ಟ್ರಾಫಿಕ್​ನಲ್ಲೇ ಕಳೆದು ಹೋಗುತ್ತಿವೆ ‘ಎಂದು ರೆಡ್ಡಿಟ್​ನಲ್ಲಿ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ Bengaluru Traffic: ಬೆಳ್ಳಂದೂರು, ಮಾರತ್ತಹಳ್ಳಿ ಸುತ್ತಮುತ್ತ ಸಂಚಾರ ದಟ್ಟಣೆ ನಿವಾರಣೆಗೆ ಹೊಸ ಪ್ಲಾನ್!

ಇವರ ಈ ಪೋಸ್ಟ್​ಗೆ ರೆಡ್ಡಿಟ್ ಬಳಕೆದಾರರ ಪ್ರತಿಕ್ರಿಯೆ ಹೇಗಿತ್ತು?

ಟೆಕ್ಕಿಯ ಟ್ರಾಫಿಕ್ ಬಗೆಗಿನ ಈ ಪೋಸ್ಟ್ ಹಲವಾರು ನೆಟ್ಟಿಗರ ಗಮನ ಸೆಳೆದಿದೆ. ಹಲವರು ಪೋಸ್ಟ್​ಗೆ ಕಾಮೆಂಟ್ ಮಾಡಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ‘ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರುಗಳನ್ನು ಸ್ವಚ್ಛವಾದ ಗಾಳಿಯಿರುವ ಮತ್ತು ಟ್ರಾಫಿಕ್ ಇಲ್ಲದ ದೇಶಗಳಿಗೆ ವರ್ಗಾಯಿಸಿದರೆ ಅವರ ಕೆಲಸದ ಸಾಮರ್ಥ್ಯ 20 ಪ್ರತಿಶತ ಹೆಚ್ಚಾಗಲಿದೆ’ ಎಂದು ಕಾಮೆಂಟ್​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನೋರ್ವ ಬಳಕೆದಾರರು ‘ಇಷ್ಟು ಜನಸಂದಣಿಯಿರುವ ನಗರದಲ್ಲಿ ಹೈವೇ ನಿರ್ಮಿಸಲು ಸಾಧ್ಯವಿಲ್ಲ. ಇದು ಕೇವಲ ರಾಜಕಾರಣಿಗಳ ತಪ್ಪಲ್ಲ. ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡಲು ಕೇಂದ್ರ ಸರ್ಕಾರವೇಕೆ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿಲ್ಲ? ಇದರಿಂದಾಗಿ ಟ್ರಾಫಿಕ್​ ಸಹ ಕಮ್ಮಿಯಾಗುತ್ತದೆ. ಜೇನು ನೊಣಗಳಂತೆ ಎಲ್ಲರೂ ಬಂದು ಬೆಂಗಳೂರಿನಲ್ಲಿ ಸೇರಿಕೊಂಡು ದುಬೈನಂತಹ ಇನ್ಪ್ರಾಸ್ಟ್ರಕ್ಷರ್ ನಿರೀಕ್ಷಿಸುತ್ತಿದ್ದಾರೆ ‘ಎಂದು ಕಾಮೆಂಟ್ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ