ಬೆಂಗಳೂರು, (ಜುಲೈ 21): ಕರ್ನಾಟಕದ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಂದ 14 ಗಂಟೆ ಕೆಲಸ ನಿರ್ವಹಿಸುವ ನೂತನ ಪ್ರಸ್ತಾಪವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಹೌದು…ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ತಿದ್ದುಪಡಿಯಲ್ಲಿ ತಮ್ಮ ಬೇಡಿಕೆಯಾದ ಕೆಲಸದ ಅವಧಿ ವಿಸ್ತರಣೆಯನ್ನು ಸೇರಿಸಬೇಕು ಎಂದು ಐಟಿ ಕಂಪೆನಿಗಳು ಮನವಿ ಮಾಡಿವೆ ಎಂದು ತಿಳಿದುಬಂದಿದೆ. ಆದ್ರೆ, ಸರ್ಕಾರ ಇನ್ನೂ ಈ ಪಸ್ತಾವನೆ ಕುರಿತು ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಇನ್ನು ಈ ವಿಚಾರ ತಿಳಿಯಿತ್ತಿದ್ದಂತೆಯೇ ಕಂಪನಿಗಳ ಈ ನಡೆಗೆ ಕಾರ್ಮಿಕ ಸಂಘಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ಇದೊಂದು ಅಮಾನವೀಯ ನಡೆಯಾಗಿದೆ. ಕೆಲಸದ ಅವಧಿ 9ರಿಂದ 14 ಗಂಟೆಗೆ ಹೆಚ್ಚಿಸುವುದರಿಂದ ಉದ್ಯೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ ಐಟಿ-ಬಿಟಿ ಕಂಪನಿಗಳು ಉದ್ಯೋಗ ಕಡಿತಗೊಳಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Bengaluru Real Estate: ಮನೆ ಖರೀದಿಸಲು ಎನ್ಆರ್ಐಗಳಿಗೆ ಬೆಂಗಳೂರೇ ಇಷ್ಟವಂತೆ; ಕಾರಣಗಳಿವು…
ಹೊಸ ಪ್ರಸ್ತಾವನೆಯಂತೆ ಐಟಿ ಉದ್ಯೋಗಿಗಳು, ಬಿಪಿಓಗಳಲ್ಲಿ 12 ಗಂಟೆಗೂ ಅಧಿಕ ಕೆಲಸ ಮಾಡಲು ಅವಕಾಶ ನೀಡಬೇಕು. ಅಲ್ಲದೇ ನಿಯಮಿತವಾಗಿ ಮೂರು ತಿಂಗಳು 125 ಗಂಟೆ ಮೀರದಂತೆ ಕೆಲಸ ಇರಬೇಕು ಎಂದು ಮನವಿ ಮಾಡಲಾಗಿದೆ. ಈ ಪ್ರಸ್ತಾವನೆ ಕುರಿತು ಸರ್ಕಾರ ಒಂದು ಸುತ್ತಿನ ಮಾತುಕತೆ ನಡೆಸಿದೆ. ಐಟಿ ಕಂಪನಿಗಳ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ಈ ಕುರಿತು ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಿದೆ.
ಐಟಿ ಕಂಪನಿಗಳ ಈ ಪ್ರಸ್ತಾವನೆಗೆ ಆರಂಭದಲ್ಲಿಯೇ ಸಾಕಷ್ಟು ವಿರೋಧ ಕೇಳಿ ಬಂದಿದೆ. ಕರ್ನಾಟಕ ರಾಜ್ಯ ಐಟಿ/ ಐಟಿಇಎಸ್ ನೌಕರರ ಸಂಘ (ಕೆಐಟಿಯು) ಸಹ ಪ್ರಸ್ತಾವನೆಯನ್ನು ವಿರೋಧಿಸಿದೆ. ಈ ಪಸ್ತಾವನೆಗೆ ಒಪ್ಪಿಗೆ ನೀಡಿದರೆ ಕಂಪನಿಗಳು ಈಗಿರುವ 3 ಶಿಫ್ಟ್‌ಗಳಿಂದ 2 ಶಿಫ್ಟ್‌ಗಳಿಗೆ ಬದಲಾಗಲಿವೆ. ಆದ್ದರಿಂದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಕೆಐಟಿಯು ಅಂದಾಜಿಸಿದೆ.
ಅಲ್ಲದೇ ಈಗಾಗಲೇ ಐಟಿ ಉದ್ಯೋಗಿಗಳು ಒತ್ತಡದಿಂದ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ವೇಳೆ 14 ಗಂಟೆ ಕೆಲಸದ ಅವಧಿಗೆ ಒಪ್ಪಿಗೆ ನೀಡಿದರೆ ಉದ್ಯೋಗಿಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ. ಈ ಕುರಿತು ಈಗಾಗಲೇ ನಡೆದಿರುವ ಹಲವು ಸಮೀಕ್ಷೆಗಳನ್ನು ಕೆಐಟಿಯು ಉಲ್ಲೇಖಿಸಿದೆ.
ಐಟಿ ಕಂಪನಿಗಳ ಉದ್ಯೋಗಿಗಳನ್ನು ಸರ್ಕಾರ ಯಂತ್ರದಂತೆ ನೋಡಬಾರದು. ಅವರು ಸಹ ಮನುಷ್ಯರು, 14 ಗಂಟೆಗಳ ಕೆಲಸದ ಅವಧಿಗೆ ಒಪ್ಪಿಗೆ ನೀಡುವುದು ಸರಿಯಲ್ಲ. ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ವಿವರವಾದ ಅಧ್ಯಯನ ನಡೆಸಬೇಕು ಎಂದು ಐಟಿ ಉದ್ಯೋಗಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಕರ್ನಾಟಕ ಸರ್ಕಾರ 14 ಗಂಟೆ ಕೆಲಸದ ಅವಧಿ ವಿಸ್ತರಣೆಗೆ ಕಾನೂನು ಒಪ್ಪಿಗೆ ನೀಡುವ ಪ್ರಸ್ತಾವನೆಗೆ ಒಪ್ಪಿಲ್ಲ. ಆದರೆ ಐಟಿ ಕಂಪನಿಗಳ ಜೊತೆಗಿನ ಸಭೆಯಲ್ಲಿ ಯಾವ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.