AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮಹಿಳೆಯ ಖಾಸಗಿ ಫೋಟೋಗಳನ್ನ ಹರಿಬಿಡೋದಾಗಿ ಬ್ಲ್ಯಾಕ್​ಮೇಲ್ ; ಮೂವರ ವಿರುದ್ಧ ಕೇಸ್ ದಾಖಲು

ವಿಧವೆ ಮಹಿಳೆಯೊಂದಿಗೆ ಸ್ನೇಹದ ನೆಪದಲ್ಲಿ ಹತ್ತಿರವಾದ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು, ಆಕೆಯ ಅಶ್ಲೀಲ ಫೋಟೀಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬೆದರಿಕೆಯೊಡ್ಡಿದ್ದಾನೆ. ಇದರಿಂದ ಬೇಸತ್ತ ಸಂತ್ರಸ್ತೆ ಆರೋಪಿಯ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು: ಮಹಿಳೆಯ ಖಾಸಗಿ ಫೋಟೋಗಳನ್ನ ಹರಿಬಿಡೋದಾಗಿ ಬ್ಲ್ಯಾಕ್​ಮೇಲ್ ; ಮೂವರ ವಿರುದ್ಧ ಕೇಸ್ ದಾಖಲು
ಮಹಿಳೆಯ ಖಾಸಗಿ ಫೋಟೋಗಳನ್ನು ಲೀಕ್ ಮಾಡುವುದಾಗಿ ಬೆದರಿಸಿದ ಚಂದ್ರಶೇಖರ್
ಶಾಂತಮೂರ್ತಿ
| Updated By: ಭಾವನಾ ಹೆಗಡೆ|

Updated on: Oct 25, 2025 | 10:40 AM

Share

ಬೆಂಗಳೂರು, ಅಕ್ಟೋಬರ್ 25: ಮಹಿಳೆಯ ಖಾಸಗಿ ಫೋಟೋಗಳನ್ನ ಹರಿಬಿಡೋದಾಗಿ ಬ್ಲ್ಯಾಕ್​ಮೇಲ್ (Blackmail) ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗಂಡನನ್ನು ಕಳೆದುಕೊಂಡ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯವಾಗಿದ್ದ ವ್ಯಕ್ತಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು (Physical Abuse), ಅಶ್ಲೀಲವಾಗಿ ನಿಂದಿಸಿ ಖಾಸಗಿ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಈ ಕುರಿತು ಆರೋಪಿಯ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಹಾಯದ ಹೆಸರಿನಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ಸಂತ್ರಸ್ತೆ 2021ರಲ್ಲಿ ಪತಿಯನ್ನು ಕಳೆದುಕೊಂಡು ತನ್ನ 4 ವರ್ಷದ ಹೆಣ್ಣು ಮಗುವಿನೊಂದಿಗೆ ಜೀವನ ನಡೆಸುತ್ತಿದ್ದರು. ಪತಿಯ ನಿಧನದ ಬಳಿಕ ಆತ ನೋಡಿಕೊಳ್ಳುತ್ತಿದ್ದ ಗಾರ್ಮೆಂಟ್ಸ್ ಒಂದರ ಜವಾಬ್ದಾರಿ ಹೊತ್ತು ಮುನ್ನಡೆಸುತ್ತಿದ್ದರು. 2025 ರ ಫೆಬ್ರುವರಿಯಲ್ಲಿ ಮಹಿಳೆಯನ್ನು ಚಂದ್ರಶೇಖರ್ ಎಂಬ ವ್ಯಕ್ತಿ ಹಿಂಬಾಲಿಸಿ, ಸಹಾಯ ಮಾಡುವುದಾಗಿ ಹೇಳಿದ್ದ. ಆಕೆ ಎಷ್ಟೇ ನಿರಾಕರಿಸಿದರೂ ಪ್ರತಿದಿನ ಆಕೆಯನ್ನು ಮಾತನಾಡಿಸುತ್ತಾ, ಆಕೆಯ ಸ್ನೇಹ ಸಂಪಾದಿಸಿದ್ದ. ಹೀಗೆ ಮುಂದುವರೆದು, ನನ್ನನ್ನು ಮದುವೆಯಾಗು ಎಂದೂ ಕೇಳಿಕೊಂಡಿದ್ದ . ಆಕೆ ತನಗೊಂದು ಚಿಕ್ಕ ಮಗುವಿರುವುದಾಗಿ ಹೇಳಿದ್ದರೂ, ನನ್ನನ್ನು ನಿರಾಶೆಗೊಳಿಸಬೇಡ, ಜೊತೆಯಲ್ಲಿಯೇ ಕೆಲಸ ಮಾಡಿಕೊಂಡು ಹೋಗೋಣವೆಂದು ಫುಸಲಾಯಿಸಿ ಮಹಿಳೆಯ ಇಚ್ಚೆಗೆ ವಿರುದ್ಧವಾಗಿ ಹಲವಾರು ಬಾರಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದ.

ಮಹಿಳೆಯ ಅಶ್ಲೀಲ ಫೋಟೋಗಳನ್ನು ಗೋಡೆಗೆ ಅಂಟಿಸುವುದಾಗಿ ಬ್ಲ್ಯಾಕ್​ಮೇಲ್

ಹೀಗಿರುವಾಗ ಒಂದು ದಿನ ಚಂದ್ರಶೇಖರನ ಹೆಂಡತಿಯೆಂದು ಹೇಳಿಕೊಂಡು ಕವಿತಾ ಎನ್ನುವ ಮಹಿಳೆ ಕರೆ ಮಾಡಿ, ‘ನೀನು ಯಾರು? ನನ್ನ ಗಂಡನಿಗೂ ನಿನಗೂ ಏನು ಸಂಬಂಧ’ ಎಂದು ಗದರಿಸಿದ್ದಳು.ಈ ವಿಷಯ ತಿಳಿದ ಚಂದ್ರಶೇಖರ ತಾನು ಎಲ್ಲವನ್ನೂ ನೋಡಿಕೊಳ್ಳುವುದಾಗಿ ಹೇಳಿ, ಮತ್ತೊಮ್ಮೆ ಈಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಇದರಿಂದಾಗಿ ಮಹಿಳೆ ಗರ್ಭಿಣಿಯಾಗಿದ್ದರು. ಈಗಲೇ ಮಗು ಬೇಡವೆಂದು ಹೇಳಿದ ಚಂದ್ರಶೇಖರ, ಆಕೆಗೆ ಮಾತ್ರೆಯೊಂದನ್ನು ತಂದು ಕೊಟ್ಟಿದ್ದ. ಮಾತ್ರೆ ತೆಗೆದುಕೊಂಡ ಮಹಿಳೆಗೆ ಮರುದಿನವೇ ತೀವ್ರ ಹೊಟ್ಟೆ ನೋವಿನೊಂದಿಗೆ ರಕ್ತಸ್ರಾವವೂ ಆಗಿತ್ತು. ಇದನ್ನು ತಿಳಿಸಿದಾಗ ಆರೊಪಿ, ಕವಿತಾ ಮತ್ತು ಸಾಕಮ್ಮ ಎಂಬ ಮಹಿಳೆಯೂ ಸೇರಿ ಮೂವರು ಸಂತ್ರಸ್ತೆಯೊಂದಿಗೆ ಜಗಳವಾಡಿದ್ದರು.

ಮರುದಿನ ಈ ಮೂವರು ಮತ್ತೊಮ್ಮೆ ಗಾರ್ಮೆಂಟ್ಸ್ ಬಳಿ ಬಂದು ಇದೆಲ್ಲದರ ಕುರಿತು ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರು. ಇದರ ಬಳಿಕ ಚಂದ್ರಶೇಖರ ಮತ್ತೊಮ್ಮೆ ಗಾರ್ಮೆಂಟ್ ಬಳಿ ಬಂದು ಆಕೆಯ ಅಶ್ಲೀಲ ಫೋಟೋಗಳು ತನ್ನ ಬಳಿ ಇರುವುದಾಗಿಯೂ,  ಆಕೆ ಪೊಲೀಸರಿಗೆ ದೂರು ನೀಡಿದರೆ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿಯೂ ಹೇಳಿದ್ದ. ಅಷ್ಟೇ ಅಲ್ಲದೇ ಆಕೆಗೆ ಜಾತಿ ನಿಂದನೆ ಮಾಡಿ, ಗಾರ್ಮೆಂಟ್ಸ್​ನ ಗೋಡೆಗಳಿಗೆ ಆಕೆಯ ಅಶ್ಲೀಲ ಫೋಟೋಗಳನ್ನು ಅಂಟಿಸುವುದಾಗಿಯೂ ಬೆದರಿಸಿದ್ದ. ಇದೆಲ್ಲದರೊಂದಿಗೆ ಕೊಲೆ ಬೆದರಿಕೆಯನ್ನೂ ಹಾಕಿ ಹೋಗಿದ್ದ. ಇದೆಲ್ಲದರಿಂದ ಮಾನಸಿಕವಾಗಿ ಕುಗ್ಗಿದ ಮಹಿಳೆ, ಆರೋಪಿ ಚಂದ್ರಶೇಖರ್,ಕವಿತಾ ಮತ್ತು ಸಾಕಮ್ಮ ಇವರ ವಿರುದ್ಧ ಬ್ಯಾಡರಹಳ್ಳಿ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.