ಬೆಂಗಳೂರು, ಮೇ 12: ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ (Fake bomb threat) ಇ-ಮೇಲ್ ಬಂದಿದೆ. ಆ ಮೂಲಕ ಸಿಲಿಕಾನ್ ಸಿಟಿಯಲ್ಲಿ ಹುಸಿ ಬಾಂಬ್ ಬೆದರಿಕೆ ಮೇಲ್ ಮುಂದುವರೆದಿದೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಾಗವಾರದ ಸೇಂಟ್ ಫಿಲೋಮಿನಾ ಸೇರಿದಂತೆ ನಾರಾಯಣ ಹೆಲ್ತ್ , ಸಾಗರ್ ಆಸ್ಪತ್ರೆ, ಸಮರ್ಥ, ಜೆಎಂಜೆ ಹಾಗೂ ವಿಮಲಾಲಯ್ಯ ಆಸ್ಪತ್ರೆಗಳಿಗೂ ಬಾಂಬ್ ಬೆದರಿಕೆ ಬಗ್ಗೆ ಇ ಮೇಲ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಬಾರಿ ನೇರವಾಗಿ ಬೆಂಗಳೂರು ಪೊಲೀಸರ ಇ-ಮೇಲ್ ಅಕೌಂಟ್ಗೆ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ಬೆದರಿಕೆ ಇ-ಮೇಲ್ ಹಿನ್ನೆಲೆ ಪೊಲೀಸರು ತಪಾಸಣೆ ನಡೆಸಿದ್ದು, ಈ ವೇಳೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಹೀಗಾಗಿ ತಪಾಸಣೆ ನಂತರ ಹುಸಿ ಬಾಂಬ್ ಬೆದರಿಕೆ ಬಗ್ಗೆ ಪೊಲೀಸರು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ, ಎಫ್ಐಆರ್ ದಾಖಲು
ಇತ್ತೀಚೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಕೆಲವು ವಿಮಾನಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಬಾಂಬ್ ಬೆದರಿಕೆ ಬಂದಿತ್ತು. ಬಾಂಬ್ ಬೆದರಿಕೆ ಕಳಸಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ದೂರು ದಾಖಲಿಸಿದ್ದರು.
ಅಪರಿಚಿತ ಆರೋಪಿ ವಿರುದ್ಧ ಮೇ 2 ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಏರ್ಇಂಡಿಯಾ ವಿಮಾನದಿಂದ ಕೆಳಗೆ ಹಾರುತ್ತೇನೆ ಎಂದು ಬೆದರಿಕೆಯೊಡ್ಡಿದ್ದ ವ್ಯಕ್ತಿಯ ಬಂಧನ
ಟರ್ಮಿನಲ್ ಮ್ಯಾನೇಜರ್ ಗೀತಾ ರಾಣಿ ಅವರು ತಮ್ಮ ದೂರಿನಲ್ಲಿ, ವಿಮಾನ ನಿಲ್ದಾಣದ ಪ್ರತಿಕ್ರಿಯೆ ಇಮೇಲ್ ಐಡಿಗೆ ಮೇಲ್ ಕಳುಹಿಸಲಾಗಿದೆ ಎಂದು ಹೇಳಿದ್ದರು. ಬಾಂಬ್‌ಗಳನ್ನು ಇಟ್ಟಿದ್ದು, ಅವು ಕೆಲವೇ ಗಂಟೆಗಳಲ್ಲಿ ಸ್ಫೋಟಗೊಳ್ಳುತ್ತವೆ. ಮೇಲ್ ಮಾಡಿದವನು ತಾನು ಭಯೋತ್ಪಾದಕ ಗುಂಪಿನಿಂದ ಬಂದವನು ಎಂದು ಹೇಳಿಕೊಂಡಿದ್ದಾನೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:27 pm, Sun, 12 May 24