
ಬೆಂಗಳೂರು, ಅಕ್ಟೋಬರ್ 15: ಬೆಂಗಳೂರಿನ ಟ್ರಾಫಿಕ್ (Traffic) ಕಿರಿಕಿರಿಯಿಂದ ಸಿಟಿ ಮಂದಿ ಬೇಸತ್ತು ಹೋಗಿದ್ದಾರೆ. ಟ್ರಾಫಿಕ್ ಸುಧಾರಿಸಲು ಯಾವೆಲ್ಲಾ ಸರ್ಕಸ್ ಮಾಡಿದರೂ ವಾಹನ ದಟ್ಟಣೆ ನಿಯಂತ್ರಿಸುವುದು ಬಹುದೊಡ್ಡ ತಲೆನೋವಾಗಿದೆ. ನಗರದ ವಾಹನಗಳ ದಟ್ಟಣೆ ನಿಯಂತ್ರಣ ಮಾಡುವುದಕ್ಕಾಗಿ ಬರೋಬ್ಬರಿ 12 ಫ್ಲೈ ಓವರ್ಗಳ ನಿರ್ಮಾಣಕ್ಕೆ ಜಿಬಿಎ ಚಿಂತನೆ ನಡೆಸಿದೆ. ಬೆಂಗಳೂರಿನಾದ್ಯಂತ 126 ಕಿಲೋಮೀಟರ್ ಉದ್ದದ ಫ್ಲೈ ಓವರ್, ಎಲಿವೇಟೇಡ್ ಕಾರಿಡಾರ್ ನಿರ್ಮಾಣದ ಯೋಚನೆ ಹೊಂದಿರುವ ಜಿಬಿಎ ಈಗಾಗಲೇ ಕನ್ಸಲ್ಟೆಂಟ್ ಗಳ ಮೂಲಕ ಮಾಹಿತಿ ಕಲೆಹಾಕಲು ಹೊರಟಿದೆ.
ಈಗಾಗಲೇ 3 ಕನ್ಸಲ್ಟೆಂಟ್ ಮೂಲಕ ವಾಹನ ಸಂಚಾರ, ಟ್ರಾಫಿಕ್ ಬಗ್ಗೆ ಅಧ್ಯಯನ ನಡೆಸಲು ಯೋಚಿಸಿರುವ ಜಿಬಿಎ, ಆ ವರದಿ ಆಧರಿಸಿ ಎಲ್ಲೆಲ್ಲಿ ಫ್ಲೈ ಓವರ್ ಹಾಗೂ ಎಲಿವೇಟೆಡ್ ಕಾರಿಡಾರ್ ಗಳನ್ನು ನಿರ್ಮಿಸಬೇಕು ಎನ್ನುವ ಲೆಕ್ಕಾಚಾರ ಹಾಕಿದೆ.ಯೋಜನೆಯ ವಿಸ್ತೃತ ವರದಿ(DPR) ತಯಾರು ಮಾಡಲು ತಯಾರಿ ನಡೆಸಿದೆ. ಇತ್ತ UHPPFRC ಎನ್ನುವ ಹೊಸ ತಂತ್ರಜ್ಞಾನ ಬಳಕೆ ಮಾಡಿ ಎಲಿವೇಟೆಡ್ ಕಾರಿಡಾರ್ ಗಳನ್ನು ನಿರ್ಮಾಣ ಮಾಡೋಕೆ ಬಿಸ್ಮೈಲ್ (BSMILE) ತಯಾರಿ ನಡೆಸಿದ್ದು, ಸದ್ಯ ಮಾಹಿತಿ ಕಲೆ ಹಾಕಿ, ವರದಿ ತಯಾರಾದ ಬಳಿಕ ಅದನ್ನ ತಾಂತ್ರಿಕ ತಜ್ಞರ ಮುಂದಿಟ್ಟು ನಂತರ ಸರ್ಕಾರದ ಮುಂದೆ 18 ಸಾವಿರ ಕೋಟಿ ರೂ. ಪ್ರಾಜೆಕ್ಟ್ ಗೆ ಪ್ರಸ್ತಾವನೆ ಸಲ್ಲಿಸುವ ಆಲೋಚನೆ ಮಾಡಲಾಗಿದೆ ಎಂದು BSMILE ನಿರ್ದೇಶಕ ಪ್ರಹ್ಲಾದ್ ಹೇಳಿದ್ದಾರೆ.
ಜಿಬಿಎ ಸದ್ಯ ಅತಿಹೆಚ್ಚು ವಾಹನ ದಟ್ಟಣೆಯ ರಸ್ತೆಗಳು ಹಾಗೂ ಎಲ್ಲೆಲ್ಲಿ ಸಂಚಾರದಟ್ಟಣೆ ಆಗುತ್ತಿದೆ ಎನ್ನುವುದನ್ನು ಪತ್ತೆಹಚ್ಚಲು ಮುಂದಾಗಿದೆ. ಬಳಿಕ ಸರ್ಕಾರದ ಮುಂದೆ ಈ ಪ್ರಸ್ತಾವನೆ ಸಲ್ಲಿಕೆಗೆ ತೀರ್ಮಾನಿಸಿದೆ. ಇತ್ತ ಸಣ್ಣ ಫ್ಲೈ ಓವರ್, ಮಧ್ಯಮಗಾತ್ರದ ಫ್ಲೈ ಓವರ್ ಹಾಗೂ ದೊಡ್ಡ ಫ್ಲೈ ಓವರ್ ಹೀಗೆ ಮೂರು ಮಾದರಿಗಳಲ್ಲಿ ಫ್ಲೈ ಓವರ್ಗಳನ್ನು ನಿರ್ಮಿಸುವ ಯೋಜನೆ ನಡೆದಿದೆ.
ಸಣ್ಣ ಗಾತ್ರದ ಫ್ಲೈ ಓವರ್
ಮಧ್ಯಮಗಾತ್ರದ ಫ್ಲೈ ಓವರ್
ದೊಡ್ಡಗಾತ್ರದ ಫ್ಲೈ ಓವರ್ಗಳ
ಸದ್ಯ ರಾಜಧಾನಿಯಲ್ಲಿ ಈಗಾಗಲೇ ಕೈಗೊಂಡಿದ್ದ ಈಜೀಪುರ ಫ್ಲೈ ಓವರ್ ಕಾಮಗಾರಿ ಮುಗಿಯದ ಕಥೆಯಾಗಿದೆ. ಇನ್ನು ಹಲವೆಡೆ ಫ್ಲೈ ಓವರ್ ನಿರ್ಮಾಣ ಮಾಡಲು ಹೊರಟರೆ ಟ್ರಾಫಿಕ್ ದಟ್ಟಣೆ ಮಧ್ಯೆ ಕಾಮಗಾರಿ ನಡೆಸುವುದರಿಂದ ಹಲವು ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಇದೆಲ್ಲದರ ಮಧ್ಯೆ ಹೊಸದಾಗಿ ಬರೋಬ್ಬರಿ 12 ಫ್ಲೈ ಓವರ್ಗಳ ನಿರ್ಮಾಣಕ್ಕೆ ಜಿಬಿಎ ಚಿಂತನೆ ನಡೆಸಿದೆ.
Published On - 8:42 am, Wed, 15 October 25