
ಬೆಂಗಳೂರು,ನ.29: ರಾಜ್ಯದಲ್ಲಿ (Karnataka weather) ಚಳಿ ಶುರುವಾಗಿದೆ. ಇದರ ನಡುವೆ ಸಣ್ಣ ಪ್ರಮಾಣದಲ್ಲಿ ಇಂದು (ನ.29) ಮತ್ತು ನಾಳೆ (ನ.30) ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಇತರ ಜಿಲ್ಲೆಗಳ ಕೆಲವು ಪ್ರದೇಶದಲ್ಲಿ ಚಂಡಮಾರುತದ ಪ್ರಭಾವ ಇದ್ದು, ಈ ಭಾಗದಲ್ಲಿ ಮಳೆಯಾಗುವ ಸಾಧ್ಯ ಇದೆ. ಆದರೆ ಕರ್ನಾಟಕದ ಕೆಲವೊಂದು ಭಾಗದಲ್ಲಿ ಅಷ್ಟೊಂದು ಚಳಿ ಇಲ್ಲ ಎಂದು ಹೇಳಲಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಒಣಹವೆ ಇದೆ. ಇನ್ನು ಇಲಾಖೆ ತಿಳಿಸಿರುವಂತೆ ಮುಂದಿನ 3 ದಿನಗಳಲ್ಲಿ ಅಂದರೆ ನವೆಂಬರ್ 29ರಿಂದ ಡಿಸೆಂಬರ್ 2ರ ವರೆಗೂ ರಾಜ್ಯದಲ್ಲಿ ಮಿಶ್ರ ವಾತಾವರಣ ಇರಲಿದೆ.
ನಗರದ ತಾಪಮಾನವು 25°C ಮತ್ತು 16°C ಇದೆ ಮತ್ತು ನಗರದಲ್ಲಿ ಮೋಡ ಕವಿದ ವಾತಾವರಣವಿದೆ. ಐಎಂಡಿ ಮುನ್ಸೂಚನೆಯ ಪ್ರಕಾರ, ನೈಋತ್ಯ ಬಂಗಾಳಕೊಲ್ಲಿಯಲ್ಲಿ ಮತ್ತು ಶ್ರೀಲಂಕಾ ಕರಾವಳಿ ಭಾಗದಲ್ಲಿ ದಿಟ್ವಾ ಚಂಡಮಾರುತ ಇರುವುದರಿಂದ ತಾಪಮಾನದಲ್ಲಿ ಇಳಿಕೆ ಕಂಡುಬಂದಿದೆ. ಮುಂದಿನ ವಾರ ಬೆಂಗಳೂರು (ಗ್ರಾಮೀಣ), ಬೆಂಗಳೂರು (ನಗರ), ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ದಕ್ಷಿಣ ಒಳನಾಡಿನ ಇತರ ಜಿಲ್ಲೆಗಳ ಕೆಲವು ಪ್ರದೇಶದಲ್ಲಿ ಚಂಡಮಾರುತದ ಪ್ರಭಾವದಿಂದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇನ್ನು ಉತ್ತರ ಜಿಲ್ಲೆಗಳಲ್ಲಿ ತಾಪಮಾನ ಕಡಿಮೆಯಾಗಿ ಚಳಿಯ ಪ್ರಭಾವ ಹೆಚ್ಚಾಗಲಿದೆ.
ಇದನ್ನೂ ಓದಿ: ಚಳಿಯ ನಡುವೆ ವರುಣನ ಅಬ್ಬರ
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಂಗಳೂರಿನ ಕೆಲವೊಂದು ಕಡೆ ರೆಡ್ ಹಾಗೂ ಆರೆಂಜ್ ಅಲರ್ಟ್ ನೀಡಲಾಗಿದೆ. ಡಿ 1ರಂದು ಚಿಕ್ಕಮಗಳೂರು, ಶಿವಮೊಗ್ಗದ ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಒಣಹವೆ ವಾತಾವರಣ:
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ ಮತ್ತು ವಿಜಯಪುರ ಸೇರಿದಂತೆ ಬಹುತೇಕ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ವಾತಾವರಣ ಇರಲಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣದ ಜೊತೆಗೆ ಲಘು ಮಳೆಯಾಗುವ ಸೂಚನೆ ಇದೆ. ಇದರ ಜತೆಗೆ ನಗರದಲ್ಲಿ ಮೋಡ ಕವಿದ ವಾತಾವರಣ ಇರುವುದರಿಂದ ನಗರದ ವಿವಿಧ ಭಾಗಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಇಳಿಕೆ ಕಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.