ಬೆಂಗಳೂರು, ಮಾರ್ಚ್ 03: ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ (Bengaluru Rameshwaram Cafe Bomb Blast) ಸಂಭವಿಸಿದ ದಿನ ನಾನು ಸ್ಥಳಕ್ಕೆ ಹೋಗಿದ್ದೆ. ರಾಮೇಶ್ವರಂ ಕೆಫೆಯವರು 12 ಕಡೆ ಹೊಟೇಲ್ ಪ್ರಾರಂಭ ಮಾಡಿದ್ದಾರೆ. ಉದ್ಯಮದಲ್ಲಿ ಬೆಳವಣಿಗೆಯಾಗುತ್ತಿರುವುದನ್ನು ಸಹಿಸಲಾಗದವರು ಈ ರೀತಿ ಮಾಡಿರಬಹುದು ಅಂತ ಅಲ್ಲಿನ ಜನ ಹೇಳ್ಳುತ್ತಿದ್ದರು. ಇದಲ್ಲದೆ ಲೋಕಸಭೆ ಚುನಾವಣೆ ಸಮಯದಲ್ಲಿ ಯಾವುದಾದರೂ ಸಂಘಟನೆ ಬೆಂಗಳೂರನ್ನು ಅನ್ಸೇಫ್ ನಗರ ಮಾಡಬೇಕು ಅಂತ, ನಗರಕ್ಕೆ ಹೆಚ್ಚಿನ ಹೂಡಿಕೆ ಹರಿದು ಬರುತ್ತಿದ್ದು, ಈ ಸಮಯದಲ್ಲಿ ಹೀಗೆ ಮಾಡಿದರೆ ಬಂಡವಾಳ ಹಾಕುವವರು ಬರುವುದಿಲ್ಲ ಅಂತ ಹೀಗೆ ಮಾಡಿರಬಹುದು. ಅಥವಾ ಬೇರೆ ಯಾವುದೋ ಕಾರಣ ಇರಬಹುದು. ಒಟ್ಟಿನಲ್ಲಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಎಷ್ಟೇ ಕಷ್ಟವಾದರೂ ಪ್ರಕರಣ ಬೇಧಿಸುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parmeshwara) ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ತನಿಖೆ ಈಗಾಗಲೆ ಎಂಡು ತಂಡಗಳನ್ನು ರಚನೆ ಮಾಡಿದ್ದೇವೆ. ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ. ಅಲ್ಲದೆ ಎನ್ಐಎ ಮತ್ತು ಎನ್ಎಸ್ಜಿ ತಂಡದವರೂ ತನಿಖೆ ನಡೆಸುತ್ತಿದ್ದಾರೆ. ಕೆಲವು ಮಾಹಿತಿಗಳು ನಮಗೆ ಲಭ್ಯವಾಗಿವೆ. ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ. ಎಫ್ಎಸ್ಎಲ್ನವರು ಈಗಾಗಲೇ ಮಾದರಿಗಳನ್ನು ಸಂಗ್ರಹಿಸಿ ಟೆಕ್ನಿಕಲ್ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸ್ಫೋಟಿಸಿದ ವ್ಯಕ್ತಿಯ ಮಾಹಿತಿ ಸಿಕ್ಕಿದೆ. ವ್ಯಕ್ತಿಯನ್ನು ಆದಷ್ಟು ಬೇಗ ಹಿಡಿಯುತ್ತೇವೆ ಎಂದು ಭರವಸೆ ನೀಡಿದರು.
ಮಂಗಳೂರು ಕುಕ್ಕರ್ ಸ್ಫೋಟಕ್ಕೂ ಮತ್ತು ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಟೆಕ್ನಿಕಲ್ ಸಾಮ್ಯತೆ ಇದೆ. ಹಾಗಂತ ಅವರೇ ಮಾಡಿದ್ದಾರೆ ಅಂಥ ಅರ್ಥ ಅಲ್ಲ. ಬ್ಯಾಟಿರಿ, ಮೊಳೆ, ಟೈಮರ್ ಎಲ್ಲವನ್ನು ನೋಡಿದರೆ ಸಾಮ್ಯತೆ ಇದೆ. ಈ ಬಗ್ಗೆ ಇನ್ನೂ ತನಿಖೆ ಮಾಡಬೇಕು ಎಂದರು.
ಬಾಂಬ್ ತೀವ್ರತೆ ಬಹಳ ಕಡಿಮೆ ಇದೆ. ಹೀಗಾಗಿ ದೊಡ್ಡ ಅನಾಹುತ ಆಗಿಲ್ಲ. ಕ್ವಾಂಟಿಟಿ ಕಡಿಮೆ ಇರಬಹುದು. ಹೆಚ್ಚು ಕ್ವಾಂಟಿಟಿ ಉಪಯೋಗಿಸಿದ್ದರೇ ಇಂಪ್ಯಾಕ್ಟ್ ಜಾಸ್ತಿ ಆಗುತ್ತಿತ್ತು. ಬಾಂಬ್ ಸಿಡಿದಾಗ ಮೊಳೆಗಳು, ನಟ್ಗಳು ಎಲ್ಲವೂ ಮೇಲೆ ಹೋಗಿವೆ. ಅದು ಮೇಲೆ ಹೋಗದೆ ಪಕ್ಕಕ್ಕೆ ಸಿಡಿದಿದ್ದರೆ ಬಹಳ ಜನರ ಪ್ರಾಣಾಪಾಯ ಆಗುತ್ತಿತ್ತು. ಅದೃಷ್ಟವಶಾತ್ ಮೊಳೆಗಳು ಮೇಲೆ ಹೋಗಿವೆ.
ಪಾಕಿಸ್ತಾನ ಜಿಂದಾಬಾದ್ ಎಂಬ ಪ್ರಕರಣದಲ್ಲಿ ಎಫ್ಎಸ್ಎಲ್ ವರದಿ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ನಾನು ಯಾವತ್ತೂ 48 ಗಂಟೆಯಲ್ಲಿ ವರದಿ ಬರುತ್ತೆ ಅಂತಾ ಹೇಳಿಲ್ಲ. 5-6 ಆಯಾಮಗಳಲ್ಲಿ ಪರಿಶೀಲನೆ ಮಾಡಬೇಕಾಗುತ್ತೆ. ಎಫ್ಎಸ್ಎಲ್ ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುತ್ತೆ. ಎಲ್ಲಾ ಕೆಲಸ ಬಿಟ್ಟು ಇದನ್ನೇ ಮೊದಲು ಮಾಡಿ ಎಂದು ಹೇಳಿದ್ದೇನೆ ಎಂದು ತಿಳಸಿದರು.
ಇನ್ನು ಶರಣಪ್ರಕಾಶ ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ಹೆಚ್ಚು ಮಾಹಿತಿ ಇರುವುದಿಲ್ಲ. ನೀವೆಲ್ಲ ಹೋಗಿ ಕೇಳಿದಾಗ ಹೇಳಿರುತ್ತಾರೆ. ಅದು ಅಧಿಕೃತ ಅಂತ ಅನ್ನಿಸುವುದಿಲ್ಲ. ಅವರ ದೃಷ್ಟಿಕೋನದಲ್ಲಿ ಅವರು ಹೇಳಿರುತ್ತಾರೆ. ನಾವು ಅನೇಕ ಮಾಹಿತಿಯನ್ನು ಇಟ್ಟುಕೊಂಡು ಹೇಳಿರುತ್ತೇವೆ. ನಾನು, ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಹೇಳಿದಾಗ ಜವಾಬ್ದಾರಿಯಿಂದ ಹೇಳಿರುತ್ತೇವೆ. ಎಲ್ಲರಿಗೂ ವಿನಂತಿ ಮಾಡಿಕೊಳ್ಳುತ್ತೇನೆ, ಮುಖ್ಯಮಂತ್ರಿಗಳು, ನಾನು ಅಥವಾ ಗೃಹ ಇಲಾಖೆ ಹೇಳಿದರೇ ಮಾತ್ರ ಅಧಿಕೃತ ಹೇಳಿಕೆ ಅಂತ ಪರಿಗಣಸಿಬೇಕು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:13 am, Sun, 3 March 24