ಬೆಂಗಳೂರು ಗ್ರಾಮಾಂತರ, ಅ.14: ಇಸ್ರೇಲ್(Israel) ಮತ್ತು ಹಮಾಸ್(Hamas)ನಡುವೆ ಸಂಘರ್ಷ ಹಿನ್ನೆಲೆ ಇದೀಗ ಇಸ್ರೇಲ್ನಲ್ಲಿದ್ದ ಭಾರತೀಯರು(Indians), ಆಪರೇಷನ್ ಅಜಯ್ ಮೂಲಕ ತಾಯ್ನಾಡಿಗೆ ವಾಪಾಸ್ ಆಗಿದ್ದಾರೆ. 2 ನೇ ಬ್ಯಾಚ್ನ 12:40 ರ ಏರ್ ಇಂಡಿಯಾ ವಿಮಾನದಲ್ಲಿ 6 ಜನ ಪುರುಷರು ಹಾಗೂ 3 ಮಹಿಳೆಯರ ಸೇರಿದಂತೆ ಒಟ್ಟು 9 ಜನ ಕನ್ನಡಿಗರು ಆಗಮಿಸಿದ್ದಾರೆ. ಹೌದು, ದಕ್ಷಿಣ ಮೂರ್ತಿ, ಶಾಂತಮೂರ್ತಿ, ಉತ್ತಾಶ್ ದೇವನೂರು, ಸತೀಶ್ ಚಕ್ರಪಾಣಿ, ಶಿಲ್ಪ ಶ್ರೀ, ಸುಮತಿ, ಸೂರಜ್ ಕೃಷ್ಣ, ಪುಣ್ಯಕೋಟಿ ಮತ್ತು ಅಕ್ಷರ ಅವರು ಇಸ್ರೇಲ್ನಿಂದ ದೆಹಲಿಗೆ ಬಂದು, ಅಲ್ಲಿಂದ ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದಿದ್ದಾರೆ. ಇವರನ್ನು ಅಧಿಕಾರಿಗಳು ಬರಮಾಡಿಕೊಂಡಿದ್ದು, ತವರಿಗೆ ಕಳಿಸಲಿದ್ದಾರೆ.
ಕೆಂಪೇಗೌಡ ಏರ್ಪೊರ್ಟ್ಗೆ ಇಸ್ರೇಲ್ನಿಂದ ಆಗಮಿಸಿದವರಲ್ಲಿ ಒಬ್ಬರಾದ ಪುಣ್ಯಕೋಟಿ ಎಂಬುವವರು ಮಾತನಾಡಿ, ‘ಇಸ್ರೇಲ್ನ ಉತ್ತರ ಭಾಗದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದರೆ, ನಮ್ಮ ಸುಮಾರು ಜನ ಸ್ನೇಹಿತರು ಅಲ್ಲಿನ ಘಟನೆಗಳ ಬಗ್ಗೆ ಹೇಳುತ್ತಿದ್ದರೆ, ತುಂಬಾ ಬೇಸರವಾಗುತ್ತಿತ್ತು. ಆಫೀಸ್ನಲ್ಲಿ ಬಹಳ ಭಯದಿಂದ ಎಲ್ಲರೂ ಕೆಲಸ ಮಾಡುತ್ತಿದ್ದರು. ತುಂಬಾ ಜನ ನಮ್ಮ ಸ್ನೇಹಿತರು ಗಾಜಾದಲ್ಲಿ ತೊಂದರೆ ಸಿಲುಕಿರುವುದು ಹೇಳುತ್ತಿದ್ದರು. ಇದೆಲ್ಲ ಕೇಳಿದಾಗ ತುಂಬಾ ಬೇಜಾರಾಗುತ್ತಿತ್ತು. ಎಲ್ಲವೂ ಸರಿ ಹೋದ ನಂತರ ನಾವು ಮತ್ತೆ ವಾಪಸ್ ತೆರಳುವ ವಿಶ್ವಾಸವಿದೆ ಎಂದರು.
ಹೌದು, ಇಸ್ರೇಲ್ನಲ್ಲಿ ಯುದ್ದ ಪರಿಸ್ಥಿತಿ ಇರುವುದರಿಂದ ಅಲ್ಲಿರುವ ಭಾರತೀಯರನ್ನು ಆಪರೇಷನ್ ಅಜಯ್ ಮೂಲಕ ತವರು ದೇಶಕ್ಕೆ ಕರೆದುಕೊಂಡು ಬರುವ ಕೆಲಸ ನಡೆಯುತ್ತಿದೆ. ಅದರಂತೆ ನಿನ್ನೆ(ಅ.13) ರಾತ್ರಿ ಇಸ್ರೇಲ್ನಿಂದ 212 ಭಾರತೀಯರನ್ನು ಹೊತ್ತ ಮೊದಲ ವಿಮಾನ ಭಾರತಕ್ಕೆ ಆಗಮಿಸಿತ್ತು. ಅದರಲ್ಲಿ ವಿಜಯಪುರ ಮೂಲದ ಈರಣ್ಣ ಎಂಬುವವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಏರ್ಪೋರ್ಟ್ಗೆ ಆಗಮಿಸಿ, ಇಸ್ರೇಲ್ನಲ್ಲಿ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ