ನೆಲಮಂಗಲ, ಅ.24: ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿ (Ambulance Accident) ಹೊಡೆದಿದ್ದು ಆ್ಯಂಬುಲೆನ್ಸ್ನಲ್ಲಿದ್ದ ರೋಗಿ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಚಿತ್ರದುರ್ಗ ಮೂಲದ ರೋಗಿ ವಿಜಯ್ಕುಮಾರ್(40) ಸಾವನ್ನಪ್ಪಿದ್ದಾರೆ (Death). ಅಪಘಾತದ ಬಳಿಕ ಚಾಲಕ, ಲಾರಿ ಸಮೇತ ಎಸ್ಕೇಪ್ ಆಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾರೋಗದಿಂದ ಬಳಲುತ್ತಿದ್ದ ಚಿತ್ರದುರ್ಗ ಮೂಲದ ವಿಜಯ್ಕುಮಾರ್ ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿನ ಕ್ಯಾನ್ಸರ್ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕರೆದುಕೊಂಡು ಬರಲಾಗುತ್ತಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 4 ಬೊಮ್ಮನಹಳ್ಳಿ ಗ್ರಾಮದ ಬಳಿ ಬ್ರೇಕ್ ಸರ್ಕ್ಯೂಟ್ನಲ್ಲಿ ಸಮಸ್ಯೆಯಾಗಿದ್ದು ಆ್ಯಂಬುಲೆನ್ಸ್ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಆ್ಯಂಬುಲೆನ್ಸ್ನಲ್ಲಿದ್ದ ರೋಗಿ ವಿಜಯ್ ಪ್ರಾಣಬಿಟ್ಟಿದ್ದಾರೆ. ಅಪಘಾತದ ಬಳಿಕ ಲಾರಿ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದೊಡ್ಡೇರಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಹಿಂಬದಿ ಕುಳಿತಿದ್ದ ಚಂದಾಪುರದ ಸುಜಾತಾ(45) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಸವಾರ ನವೀನ್ಗೆ ಗಂಭೀರ ಗಾಯಗಳಾಗಿವೆ. ಗಾಯಾಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ಮಂಗಳಾದೇವಿ ದೇವಸ್ಥಾನದ ಮುಂದೆ ಹುಲಿವೇಷ ಕುಣಿತದ ವೇಳೆ ಆಯತಪ್ಪಿ ಬಿದ್ದು ಯುವಕನಿಗೆ ಗಾಯ, ಆಸ್ಪತ್ರೆಗೆ ದಾಖಲು
ಯಾದಗಿರಿ ಹೊರವಲಯದ ವರ್ಕನಹಳ್ಳಿ ರಸ್ತೆಯಲ್ಲಿ 2 ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಘಟನೆಯಲ್ಲಿ ಓರ್ವ ಸವಾರ ಮೃತಪಟ್ಟಿದ್ದಾನೆ. ಯಾದಗಿರಿಯ ಕುಂಬಾರಹಳ್ಳಿ ನಿವಾಸಿ ಭೀಮಾಶಂಕರ್(55) ಮೃತ ದುರ್ದೈವಿ. ಮತ್ತೊಬ್ಬ ಸವಾರ ಮಲ್ಲಿಕಾರ್ಜುನ್ಗೆ ಗಾಯಗಳಾಗಿದ್ದು, ಯಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಜಿಲ್ಲೆ ತುರುವೇಕೆರೆಯ ತೊರೆಮಾವಿನಹಳ್ಳಿ ಗೇಟ್ ಬಳಿ ಲಾರಿ ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ್ದು ಲಾರಿ ಟೈರ್ ನಡಿ ಸಿಲುಕಿ ಬೈಕ್ ಸವಾರ ಅಶೋಕ್(55) ಸ್ಥಳದಲ್ಲೇ ಪ್ರಯಾಬಿಟ್ಟಿದ್ದಾರೆ. ಮೃತ ಅಶೋಕ್ ತುರುವೇಕೆರೆ ತಾಲೂಕಿನ ಎ.ಹೊಸಹಳ್ಳಿ ಗ್ರಾಮದ ನಿವಾಸಿ. ತುರುವೇಕೆರೆ ಕಡೆಯಿಂದ ಕೆ.ಬಿ.ಕ್ರಾಸ್ ಮಾರ್ಗವಾಗಿ ತೆರಳುತ್ತಿದ್ದ ಲಾರಿಗೆ ಕೆ.ಬಿ.ಕ್ರಾಸ್ ಕಡೆಯಿಂದ ತುರುವೇಕೆರೆ ಮಾರ್ಗವಾಗಿ ಬರ್ತಿದ್ದ ಅಶೋಕ್ ಬೈಕ್ ಡಿಕ್ಕಿ ಹೊಡೆದಿದೆ. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:34 pm, Tue, 24 October 23