ಆನೇಕಲ್: ಹಸು ಮೇಯಿಸಲು ಹೋಗಿದ್ದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ
ದನ ಮೇಯಿಸಲು ಹೋಗಿದ್ದ ವೇಳೆ ಕಾಡಾನೆ ದಾಳಿಯಾಗಿ ಅಲಗಪ್ಪ ಮೃತಪಟ್ಟಿದ್ದರು. ಕುಟುಂಬಸ್ಥರು ಅಲಗಪ್ಪನಿಗಾಗಿ ಹುಡುಕಾಟ ನಡೆಸಿದ್ದು ಮೃತ ದೇಹ ಪತ್ತೆಯಾಗಿದೆ.
ಆನೇಕಲ್: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸೊಳ್ಳೆಪುರ ದೊಡ್ಡಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾಗಿದ್ದಾರೆ. ಅಲಗಪ್ಪ(50) ಮೃತ ದುರ್ದೈವಿ. ಮೂರು ದಿನದ ಹಿಂದೆ ದನ ಮೇಯಿಸಲು ಹೋಗಿದ್ದ ವೇಳೆ ಕಾಡಾನೆ ದಾಳಿಯಾಗಿ ಅಲಗಪ್ಪ ಮೃತಪಟ್ಟಿದ್ದರು. ಕುಟುಂಬಸ್ಥರು ಅಲಗಪ್ಪನಿಗಾಗಿ ಹುಡುಕಾಟ ನಡೆಸಿದ್ದು ಕಾಡಾನೆ ದಾಳಿ ವಿಚಾರ ಬಯಲಾಗಿದೆ.
ಈ ವೇಳೆ ಒಂದು ಆಕಳು ದಾರಿ ತಪ್ಪಿಸಿಕೊಂಡಿತ್ತು. ಆಕಳು ಹುಡುಕುತ್ತಾ ಅಲಗಪ್ಪ ಕಾಡಿನ ಮಧ್ಯೆ ತೆರಳಿದ್ದರು. ಆಗ ಕಾಡಾನೆ ದಾಳಿ ಮಾಡಿದೆ. ಸ್ಥಳದಲ್ಲಿಯೇ ಅಲಗಪ್ಪ ಪ್ರಾಣಬಿಟ್ಟಿದ್ದಾರೆ. ಅಲಗಪ್ಪ ಮನೆಗೆ ಬಾರದ ಕಾರಣ ಕುಟುಂಬಸ್ಥರು ಕಾಡಿನಲ್ಲಿ ಹುಡುಕಾಟ ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಕುಟುಂಬದವರು ಹುಡುಕಾಡಿದ್ದು ನಿನ್ನೆ(ಮಾರ್ಚ್ 01) ಸಂಜೆ ಕಾಡಿನಲ್ಲಿ ಮೃತ ದೇಹ ಪತ್ತೆಯಾಗಿದೆ. ಹಾರೋಹಳ್ಳಿ ಬೀಟ್ ಗುಲ್ಲೆಟ್ಟಿ ಕಾವಲ್ ಬಳಿ ಮೃತದೇಹ ಪತ್ತೆಯಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ರಾಮನಗರ: ಗದ್ದೆಗೆ ತೆರಳಿದ್ದ ಬಾಲಕನ ಮೇಲೆ ಏಕಾಏಕಿ ಚಿರತೆ ದಾಳಿ: ಆಸ್ಪತ್ರೆಗೆ ದಾಖಲು
ಮಂಗಳೂರು: ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಸಾವು
ದಕ್ಷಿಣ ಕನ್ನಡ(ಫೆ.20): ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡಬ ತಾಲೂಕಿನ ಮೀನಾಡಿ ಎಂಬಲ್ಲಿ ನಡೆದಿದೆ. ಸ್ಥಳೀಯ ಪೇರಡ್ಕ ಹಾಲು ಸೊಸೈಟಿಯ ಸಿಬ್ಬಂದಿಯಾಗಿರುವ ರಂಜಿತಾ(21) ಮನೆಯಿಂದ ಸೊಸೈಟಿಗೆ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಜೊತೆಗೆ ಇದೇ ವೇಳೆ ಸ್ಥಳದಲ್ಲಿದ್ದ ರಮೇಶ್ ರೈ(60) ಎಂಬವರ ಮೇಲೂ ದಾಳಿ ನಡೆಸಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು, ರಂಜಿತಾ ನೆಲ್ಯಾಡಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:47 pm, Thu, 2 March 23