Dr K Sudhakar: ಆರೋಗ್ಯ ಸಚಿವರೇ! 9 ತಿಂಗಳು ತುಂಬಿದೆ, ದಾಬಸ್ಪೇಟೆ ಟ್ರಾಮಾ ಸೆಂಟರ್ಗೆ ತುರ್ತು ಚಿಕಿತ್ಸೆ ನೀಡಿ ಇನ್ನಾದರೂ ಆಸ್ಪತ್ರೆ ಬಾಗಿಲು ತೆಗೆಯಿರಿ
Dabaspete trauma center: ಜಿಲ್ಲಾ ಉಸ್ತುವಾರಿ ಸಚಿವರು ದಾಬಸ್ಪೇಟೆ ಮಾತ್ರವಲ್ಲದೇ, ಮೋಟಗಾನಹಳ್ಳಿಯ ಆರೋಗ್ಯ ಕೇಂದ್ರಕ್ಕೂ ಇದೇ ರೀತಿ ಸಿಬ್ಬಂದಿ ನೀಡದೇ ತಾರತಮ್ಯ ಮಾಡುತ್ತಿದ್ದಾರೆ ಎಂಬುದು ಗಮನಾರ್ಹ -ಡಾ. ಕೆ. ಶ್ರೀನಿವಾಸ್ ಮೂರ್ತಿ, ಶಾಸಕ, ನೆಲಮಂಗಲ ವಿಧಾನಸಭಾ ಕ್ಷೇತ್ರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆ ಆರೋಗ್ಯ ಕೇಂದ್ರದಲ್ಲಿ ( Dabaspete Trauma Center) ನಿರ್ಮಾಣವಾಗಿರುವ ಅಪಘಾತ ಆರೈಕೆ ಕೇಂದ್ರವು ಉದ್ಘಾಟನೆಯಾಗಿ 9 ತಿಂಗಳು ಕಳೆದರೂ ಈವರೆಗೆ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಿಲ್ಲ, ಇತ್ತ ರಾಜಕೀಯ ನಾಯಕರು ಇದೇ ವಿಷಯವನ್ನ ದಾಳವಾಗಿಸಿಕೊಂಡು ಕೆಸರೆರಚಾಟಕ್ಕೆ ಮುಂದಾಗಿದ್ದಾರೆ. ರಾಜ್ಯದ ಆರೋಗ್ಯ ಸಚಿವರೂ ಆದ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ, ಖುದ್ದು ವೈದ್ಯರಾಗಿರುವ ಡಾಕ್ಟರ್ ಕೆ ಸುಧಾಕರ್ (Dr K Sudhakar, Health Minister) ಮತ್ತು ನೆಲಮಂಗಲ ತಾಲೂಕಿನ ಹಾಲಿ ಶಾಸಕರು (Nelamangala MLA) ಕೂಡ ವೈದ್ಯರೇ ಆಗಿದ್ದು – ಡಾ. ಕೆ ಶ್ರೀನಿವಾಸಮೂರ್ತಿ ಅವರ ನೇತೃತ್ವದಲ್ಲಿ ಉದ್ಘಾಟನೆ ಆಗಿರುವ ಈ ಆಸ್ಪತ್ರೆಯು 75 ಲಕ್ಷ ರೂ. ಗಳ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಉದ್ಘಾಟನೆಯಾದ ದಿನದಿಂದ ಈ ದಿನದವರೆಗೂ ಯಾವುದೇ ವೈದ್ಯರಾಗಲಿ, ಸಿಬ್ಬಂದಿಯಾಗಲಿ ಮತ್ತು ಪರಿಕರಗಳನ್ನಾಗಲೀ ಒದಗಿಸದೆ ಕಟ್ಟಡಕ್ಕೆ ಬೀಗ ಜಡಿದು ಕಟ್ಟಡ ಬಳಕೆಯಾಗದೆ ಹಾಳು ಕೊಂಪೆಯಂತಾಗಿದೆ.
ಆರೋಗ್ಯ ಸಚಿವರನ್ನು ಈ ಬಗ್ಗೆ ಕೇಳಿದರೆ ಶಾಸಕರು ರಾಜಕೀಯವಾಗಿ ಮಾತನಾಡಿದ್ದಾರೆ. ಅವರೂ ಕೂಡ ವೈದ್ಯರಾಗಿದ್ದು, ಯಾಕೆ ಮಾಡ್ಲಿಲ್ಲ? ನೆಲಮಂಗಲ ಮೇಲೆ ನಮಗೆ ವಿಶೇಷ ಕಾಳಜಿ ಇದೆ. ಅದಕ್ಕೋಸ್ಕರ ಅಪಘಾತ ಆರೈಕೆ ಕೇಂದ್ರ ಮಾಡಿದ್ದು ಅಂತಾರೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್.
ಜಿಲ್ಲಾ ಉಸ್ತುವಾರಿ ಸಚಿವರು ದಾಬಸ್ಪೇಟೆ ಮಾತ್ರವಲ್ಲದೇ, ಮೋಟಗಾನಹಳ್ಳಿಯ ಆರೋಗ್ಯ ಕೇಂದ್ರಕ್ಕೂ ಇದೇ ರೀತಿ ಸಿಬ್ಬಂದಿ ನೀಡದೇ ತಾರತಮ್ಯ ಮಾಡುತ್ತಿದ್ದಾರೆ ಎಂಬುದು ಗಮನಾರ್ಹ. ಈ ಬಗ್ಗೆ ನಾನು ಹಲವು ಬಾರಿ ಸಚಿವರ ಗಮನಕ್ಕೆ ತಂದರೂ ಅವರು ಯಾವುದೇ ಕೆಲಸ ಮಾಡುತ್ತಿಲ್ಲ, ಕ್ಷೇತ್ರದಲ್ಲಿ ಜನರು ಕೇಳುವ ಪ್ರಶ್ನೆಗಳಿಗೆ ನಾನು ಹೊಣೆಗಾರನಾಗಿರುತ್ತೇನೆ. ಆದ್ದರಿಂದ ದಯವಿಟ್ಟು ಬೇಗನೆ ಸಿಬ್ಬಂದಿ, ಪರಿಕರಗಳನ್ನು ನೀಡಿ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುವಂತೆ ಮನವಿ ಮಾಡುತ್ತೇನೆ. ಇದರಲ್ಲಿ ರಾಜಕೀಯವಾಗಿ ಮಾತನಾಡಿರುವುದು ಏನೂ ಇಲ್ಲ ಅನ್ನುತ್ತಾರೆ ಡಾ. ಕೆ. ಶ್ರೀನಿವಾಸ್ ಮೂರ್ತಿ, ಶಾಸಕರು, ನೆಲಮಂಗಲ ವಿಧಾನಸಭಾ ಕ್ಷೇತ್ರ.
ಒಟ್ಟಾರೆ ದಾಬಸ್ಪೇಟೆ ಆರೋಗ್ಯ ಕೇಂದ್ರದಲ್ಲಿ ನಿರ್ಮಾಣವಾಗಿರುವ ಅಪಘಾತ ಆರೈಕೆ ಕೇಂದ್ರ ಉದ್ಘಾಟನೆಯಾಗಿ ವರ್ಷವಾಗುತ್ತಾ ಬಂದರು ಕೂಡ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ನೆನೆಗುದಿಗೆ ಬಿದ್ದಿದೆ. ಅಪಘಾತ ಆರೈಕೆ ಕಟ್ಟಡ ಕಟ್ಟಿದ ಉದ್ದೇಶವಾದರೂ ಎನು ಅಂತಾ ಸಾರ್ವಜನಿಕರು ಪಶ್ನೆ ಮಾಡುವಂತಾಗಿದೆ.
ವರದಿ: ವಿನಾಯಕ್ ಗುರವ್, ಟಿವಿ 9, ನೆಲಮಂಗಲ
Published On - 9:01 am, Thu, 19 January 23