ಕೋಗಿಲು ಜನ ಕೂಗಿಗೆ ಕಿವಿಯಾದ ಮಕ್ಕಳ ಆಯೋಗ: ಮನೆಗಳನ್ನ ನೆಲಸಮ ಮಾಡಿದ್ದ ಅಧಿಕಾರಿಗಳ ವಿರುದ್ಧ ಕೇಸ್ ಬುಕ್

ಯಲಹಂಕದ ಕೋಗಿಲಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಡೆಸಿದ್ದ ಮನೆ ತೆರವು ಕಾರ್ಯಾಚರಣೆಯಿಂದ ನೂರಾರು ಮಕ್ಕಳು ಮತ್ತು ಬಾಣಂತಿಯರು ಬೀದಿಗೆ ಬಿದ್ದಿದ್ದಾರೆ. ಚಳಿಯಿಂದ 500ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಈ ಕುರಿತು ಟಿವಿ9 ವರದಿ ಆಧರಿಸಿ ರಾಜ್ಯ ಮಕ್ಕಳ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜಿಬಿಎಗೆ ಖಡಕ್​ ಸೂಚನೆ ನೀಡಿದೆ.

ಕೋಗಿಲು ಜನ ಕೂಗಿಗೆ ಕಿವಿಯಾದ ಮಕ್ಕಳ ಆಯೋಗ: ಮನೆಗಳನ್ನ ನೆಲಸಮ ಮಾಡಿದ್ದ ಅಧಿಕಾರಿಗಳ ವಿರುದ್ಧ ಕೇಸ್ ಬುಕ್
ರಾಜ್ಯ ಮಕ್ಕಳ ಆಯೋಗ, ಜಿಬಿಎ
Edited By:

Updated on: Dec 23, 2025 | 3:11 PM

ಬೆಂಗಳೂರು, ಡಿಸೆಂಬರ್​​ 23: ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಯಲಹಂಕದ ಕೋಗಿಲು ಬಂಡೆ ಬಳಿ ನಿರ್ಮಿಸಲಾಗಿದ್ದ 150ಕ್ಕೂ ಹೆಚ್ಚು ಮನೆಗಳನ್ನು ಇತ್ತೀಚೆಗೆ ನೆಲಸಮಗೊಳಿಸಲಾಗಿತ್ತು. ಜಿಬಿಎ (Greater Bengaluru Authority) ನಡೆಸಿದ್ದ ಅಕ್ರಮ ಒತ್ತುವರಿ ತೆರವಿನಲ್ಲಿ ನೂರಾರು ಜನರು ತಮ್ಮ ಮನೆ ಕಳೆದುಕೊಂಡಿದ್ದರು. ಯಾವುದೇ ಸೂಚನೆ ಅಥವಾ ನೋಟಿಸ್​ ಕೊಡದೇ ಮನೆಗಳನ್ನು ಕೆಡವಿದ್ದರಿಂದ ಕುಟುಂಬಗಳು ಬೀದಿಗೆ ಬಿದ್ದಿವೆ. ಸದ್ಯ ಕರ್ನಾಟಕ ರಾಜ್ಯ ಮಕ್ಕಳ ಆಯೋಗ ನಿರಾಶ್ರಿತರ ರಕ್ಷಣೆಗೆ ಮುಂದಾಗಿದೆ. ಟಿವಿ9 ವರದಿ ಆಧರಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿರುದ್ಧ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ.

ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮೀಸಲಾಗಿರುವ ಜಾಗ ಎಂದು ಬೆಂಗಳೂರು ನಗರ ಜಿಲ್ಲೆಯ ಯಲಹಂಕದ ಕೋಗಿಲು ಬಡಾವಣೆಯ ಬಂಡೆ ಬಳಿಯ 150ಕ್ಕೂ ಹೆಚ್ಚು ಶೆಡ್​​ಗಳನ್ನು ಬಿಡಿಎ ಅಧಿಕಾರಿಗಳು ಕಳೆದ ಶನಿವಾರ ತೆರವುಗೊಳಿಸಿದ್ದರು.

ಇದನ್ನೂ ಓದಿ: ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಶೆಡ್‌, ಶೀಟ್‌ ಮನೆಗಳು ನೆಲಸಮ: ಸಿಡಿದೆದ್ದ ಸ್ಥಳೀಯರು

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಬಿಎ ವಿರುದ್ಧ ರಾಜ್ಯ ಮಕ್ಕಳ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ. ಮನೆಗಳ ತೆರವಿನಿಂದ ಮಕ್ಕಳು ಮತ್ತು ಬಾಣಂತಿಯರು ವಸತಿ ಹೀನರಾಗಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಅಂತಾ ಸುಮೋಟೋ ಕೇಸ್​​​​ ದಾಖಲಿಸಲಾಗಿದೆ. ವಾತಾವರಣ ಏರುಪೇರಿನಿಂದ 500ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಮಕ್ಕಳು ಮತ್ತು ಬಾಣಂತಿಯರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ಮಕ್ಕಳ ಆಯೋಗ ಜಿಬಿಎಗೆ ವರದಿ ನೀಡುವಂತೆ  ಸೂಚಿಸಿದೆ.

ಸಚಿವ ಕೃಷ್ಣಬೈರೇಗೌಡ ನಿವಾಸಕ್ಕೆ ಮುತ್ತಿಗೆ ಯತ್ನ

ಇನ್ನು ಏಕಾಏಕಿ ಮನೆ ಕೆಡವಿದ್ದರಿಂದ ಆಕ್ರೋಶಗೊಂಡ ನಿರಾಶ್ರಿತರು ಇತ್ತೀಚೆಗೆ ಸಚಿವ ಕೃಷ್ಣಭೈರೇಗೌಡ ನಿವಾಸಕ್ಕೆ ಮುತ್ತಿಗೆ ಹಾಕಲ ಯತ್ನಿಸಿದ್ದರು. ಮನೆ ಬಳಿ ನೂರಾರು ಜನರು ಜಮಾಯಿಸಿದ್ದರು. ಬೆಂಗಳೂರು ಸಹಕಾರನಗರದಲ್ಲಿರೋ ನಿವಾಸ ಬಳಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಮೈಕೊರೆಯೋ ಚಳಿಯನ್ನೂ ಲೆಕ್ಕಿಸದೇ ವೃದ್ಧರು, ಮಕ್ಕಳು, ಮಹಿಳೆಯರು ಧರಣಿಗೆ ಕುಳಿತಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ

ಪ್ರತಿಭಟನಾಕಾರರು ಮನೆ ಕೊಡಿ ಇಲ್ಲ, ಜೈಲಿಗೆ ಕಳುಹಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ನಿರಾಶ್ರಿತರನ್ನ ನಿಯಂತ್ರಿಸಲು ಪೊಲೀಸರು ಪರದಾಡಿದ್ದರು. ಬಡವರು ಅಂದರೆ ಬೆಲೆ ಇಲ್ವಾ ಅಂತಾ ನಿರಾಶ್ರಿತರು ಕಣ್ಣೀರು ಹಾಕಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.