ಕೆಂಪೇಗೌಡ ಏರ್ಪೋಟ್​​ನಲ್ಲಿ ಮಿತಿ ಮೀರಿದ ಸೈಡ್ ಪಿಕಪ್ ಚಾಲಕರ ಹಾವಳಿ: ಲಾಂಗ್​​ ಹಿಡಿದು ಅಟ್ಟಾಡಿಸಿದ ಭೂಪ ಅರೆಸ್ಟ್

ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋಟ್​ನಲ್ಲಿ ಚಾಲಕನೊಬ್ಬ ಲಾಂಗ್ ಹಿಡಿದು ಇನ್ನೊಬ್ಬ ಚಾಲಕನ ಮೇಲೆ ಹಲ್ಲೆ ಮಾಡಲು ಯತ್ನಿಸಿರುವಂತಹ ಘಟನೆ ನಡೆದಿದೆ. ಸದ್ಯ ಈ ಘಟನೆಯಿಂದ ಏರ್ಪೋಟ್​ನಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಬೆಚ್ಚಿಬಿದ್ದಿದ್ದರು. ಸದ್ಯ ಏರ್ಪೋಟ್ ಭದ್ರತಾ ಪಡೆ ಸಿಬ್ಬಂದಿ ಓರ್ವ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಕೆಂಪೇಗೌಡ ಏರ್ಪೋಟ್​​ನಲ್ಲಿ ಮಿತಿ ಮೀರಿದ ಸೈಡ್ ಪಿಕಪ್ ಚಾಲಕರ ಹಾವಳಿ: ಲಾಂಗ್​​ ಹಿಡಿದು ಅಟ್ಟಾಡಿಸಿದ ಭೂಪ ಅರೆಸ್ಟ್
ಚಾಲಕರ ಮಧ್ಯೆ ಗಲಾಟೆ
Edited By:

Updated on: Nov 17, 2025 | 8:41 PM

ದೇವನಹಳ್ಳಿ, ನವೆಂಬರ್​​ 17: ಏರ್ಪೋಟ್ ಅಂದ ಮೇಲೆ ಅಲ್ಲಿ ಪ್ರಯಾಣಿಕರ (Passengers) ಜಂಗುಳಿ ಜೊತೆಗೆ ಕೈನಲ್ಲಿ ಲಗೇಜ್ ಹಿಡಿದುಕೊಂಡು ಹೋಗುವುದು ಸಹಜ. ಆದರೆ ತಲ್ವಾರ್​ನಂತಹ ಉದ್ದುದ್ದ ಲಾಂಗ್ ಹಿಡಿದುಕೊಂಡು ಒಡಾಡಿದಿದ್ದಾರೆ. ನಂಬುವುದಕ್ಕೆ ಕಷ್ಟವಾದರೂ ಇಂತಹದೊಂದು ಘಟನೆ ಕೆಂಪೇಗೌಡ ಏರ್ಪೋಟ್​​ನಲ್ಲಿ (Kempegowda Airport) ನಡೆದಿದ್ದು, ಒಂದು ಕ್ಷಣ ಪ್ರಯಾಣಿಕರ ಜೊತೆಗೆ ಸಿಬ್ಬಂದಿ ಸಹ ಬೆಚ್ಚಿ ಬಿದ್ದಿದ್ದಾರೆ.

ಮಧ್ಯರಾತ್ರಿ ಸಮಯ ಕೆಂಪೇಗೌಡ ಏರ್ಪೋಟ್​​ನಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ಬಂದ ಪ್ರಯಾಣಿಕರನ್ನ ಕ್ಯಾಬ್​​ನಲ್ಲಿ ಕರೆದುಕೊಂಡು ಹೋಗಿ ಡ್ರಾಪ್ ಮಾಡುವ ಭರದಲ್ಲಿ ಕೆಲ ಚಾಲಕರಿದ್ದರೆ, ಇನ್ನು ಕೆಲವರು ಸ್ವಂತ ವಾಹನಗಳಲ್ಲಿ ಮನೆ ಸೇರಿಕೊಳ್ಳುವ ತವಕದಲ್ಲಿದ್ದರು. ಆದರೆ ಇದೇ ವೇಳೆ ಪ್ರಯಾಣಿಕರನ್ನ ಮನೆಗೆ ಸೇರಿಸುವ ಕೆಲಸ ಮಾಡಲು ಬಂದ ಚಾಲಕನೊಬ್ಬ ಶಸ್ತ್ರಸಜ್ಜಿತ ಭದ್ರತಾ ಪಡೆ ಮುಂದೆಯೇ ಕೈಯಲ್ಲಿ ಲಾಂಗು ಹಿಡಿದು ಅಟ್ಟಹಾಸ ಮೆರೆಯುವ ಮೂಲಕ ಪ್ರಯಾಣಕರಲ್ಲಿ ಆತಂಕ ಮೂಡಿಸಿದ್ದಾನೆ.

ಏರ್ಪೋಟ್​ನಲ್ಲಿ ಚಾಲಕರ ನಡುವೆ ಕಿರಿಕ್

ಅಂದಹಾಗೆ ಸಾರ್ವಜನಿಕರ ಸ್ಥಳದಲ್ಲೇ ಕೈಯಲ್ಲಿ ಲಾಂಗ್ ಹಿಡಿದು ಸಹ ಚಾಲಕನನ್ನ ಅಟ್ಟಾಡಿಸಿ ಕೊನೆಗೆ ಏರ್ಪೋಟ್ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿರುವನ ಹೆಸರು ಸುಹೇಲ್. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಥಾಣದಲ್ಲಿ ತಡರಾತ್ರಿ ಪ್ರಯಾಣಿಕರನ್ನ ಸೈಡ್ ಪಿಕ ಅಪ್ ಮಾಡುವುದಕ್ಕೆ ಅಂತ ಬಂದಿದ್ದು, ಸುಹೇಲ್ ಮತ್ತು ಜಗದೀಶ್​​ ಎನ್ನುವ ಚಾಲಕರು ಪ್ರಯಾಣಿಕರನ್ನ ತಮ್ಮ ಕ್ಯಾಬ್​ನತ್ತ ಸೆಳೆಯಲು ಮುಂದಾಗಿದ್ದಾರೆ. ಜೊತೆಗೆ ಇಬ್ಬರು ಒಬ್ಬರ ಪ್ಯಾಸೆಂಜರ್​ನ ಬ್ಯಾಗ್ ಹಿಡಿದುಕೊಂಡು ಕಿತ್ತಾಡಿದ್ದು, ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಇದನ್ನೂ ಓದಿ: ದೆಹಲಿ ಸ್ಫೋಟ ಪ್ರಕರಣ: ಪ್ರಯಾಣಿಕರಿಗೆ ಬೆಂಗಳೂರು ಏರ್‌ಪೋರ್ಟ್‌ನಿಂದ ವಿಶೇಷ ಸೂಚನೆ

ಇನ್ನು ಇಬ್ಬರು ಹೊಡೆದಾಡಿಕೊಳ್ಳುತ್ತಿದ್ದಂತೆ ಏರ್ಪೋಟ್​ನಲ್ಲಿದ್ದ ಭದ್ರತಾ ಪಡೆ ಸಿಬ್ಬಂದಿ ಇಬ್ಬರ ಜಗಳ ಬಿಡಿಸಿ ಕಳುಹಿಸಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಸುಹೇಲ್ ಮತ್ತೆ ತಡರಾತ್ರಿ ಏರ್ಪೋಟ್​ಗೆ ಬಂದು ಲಾಂಗ್​ನಂತಹ ಉದ್ದದ ಚಾಕು ಕೈಯಲ್ಲಿ ಹಿಡಿದುಕೊಂಡು ಜಗದೀಶ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಸುಹೇಲ್ ಕೈ ನಲ್ಲಿ ಚಾಕು ಕಂಡ ಜಗದೀಶ್ ತಪ್ಪಿಸಿಕೊಳ್ಳಲು ಪಾರ್ಕಿಂಗ್ ಏರಿಯಾ ಕಡೆ ಓಡಿದ್ದು, ಟರ್ಮಿನಲ್​​ನಲ್ಲಿ ಜನರ ನಡುವೆಯೇ ಅಟ್ಟಾಡಿಸಿ ಹಲ್ಲೆ ಮಾಡಲು ಮುಂದಾಗಿರುವುದನ್ನು ಕಂಡ ಪ್ರಯಾಣಿಕರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

ಹಲ್ಲೆಗೆ ಯತ್ನ: ಕಿರುಚಾಡಿದ ಪ್ರಯಾಣಿಕರು 

ರಾತ್ರಿ ವಿಮಾನಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಏರ್ಪೋಟ್​​ನಲ್ಲಿ ಪ್ರಯಾಣಿಕರು ಸಹ ಅಧಿಕವಾಗಿದ್ದು, ಲಾಂಗ್ ಹಿಡಿದು ಹಲ್ಲೆ ಮಾಡಲು ಮುಂದಾಗಿದ್ದನ್ನ ಕಂಡ ಪ್ರಯಾಣಿಕರು ಕಿರುಚಾಡಿದ್ದಾರೆ. ಪ್ರಯಾಣಿಕರ ಕಿರುಚಾಟ ಕೇಳ್ತಿದ್ದಂತೆ ಎಚ್ಚೆತ್ತ ಏರ್ಪೋಟ್ ಭದ್ರತಾ ಪಡೆ ಸಿಬ್ಬಂದಿ, ಲಾಂಗ್ ಹಿಡಿದು ಅಟ್ಟಾಡಿಸುತ್ತಿದ್ದ ಸುಹೇಲ್ ನನ್ನ ವಶಕ್ಕೆ ಪಡೆದು ಲಾಂಗ್ ಕಿತ್ತುಕೊಂಡಿದ್ದಾರೆ.

ಇತ್ತೀಚೆಗೆ ಏರ್ಪೋಟ್​ನಲ್ಲಿ ಸೈಡ್ ಪಿಕ್ ಅಪ್ ಚಾಲಕರ ಹಾವಳಿ ಹೆಚ್ಚಾಗಿದ್ದು, ಹಲವು ಭಾರಿ ಗಲಾಟೆಗಳನ್ನ ಮಾಡಿಕೊಂಡಿದ್ದು, ಅವರನ್ನ ಭದ್ರತಾ ಪಡೆ ಸಿಬ್ಬಂದಿ ಸ್ಥಳಿಯ ಪೊಲೀಸರ ವಶಕ್ಕೆ ನೀಡಿದ್ದರು. ಆದರೆ ಸ್ಥಳಿಯ ಏರ್ಪೋಟ್ ಪೊಲೀಸರ ನಿರ್ಲಕ್ಷ್ಯದಿಂದ ಮತ್ತೆ ಮತ್ತೆ ಸೈಡ್ ಪಿಕ್ ಅಪ್ ಚಾಲಕರು ಏರ್ಪೋಟ್​​ಗೆ ಲಾಂಗ್ ತಂದು ಅಟ್ಟಹಾಸ ಮೆರೆಯುತ್ತಿದ್ದಾರೆ. ಚಾಲಕರ ಈ ವರ್ತನೆ ಕಂಡು ಪ್ರಯಾಣಿಕರು ಬೆಚ್ಚಿಬಿದ್ದಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ಏರ್​​​ಪೋರ್ಟ್​ನೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿ: ಪೊಲೀಸರಿಂದ ತೀವ್ರ ವಿಚಾರಣೆ

ಒಟ್ಟಾರೆ ಅತ್ಯಾಧುನಿಕ ಸೌಲಭ್ಯ ತಂತ್ರಜ್ಞಾನದಿಂದ ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇತ್ತೀಚೆಗೆ ಗಲಾಟೆ, ಗದ್ದಲ, ಕೊಲೆಯಂತಹ ಪ್ರಕರಣಗಳಿಂದ ಸುದ್ದಿಯಾಗುತ್ತಿರುವುದು ನಿಜಕ್ಕೂ ದುರಂತ. ಇನ್ನಾದರೂ ಏರ್ಪೋಟ್ ಪೊಲೀಸರು ಮತ್ತು ಭದ್ರತಾ ಪಡೆ ಎಚ್ಚೆತ್ತು ಇಂತಹ ಘಟನೆಗಳು ಮತ್ತೊಮ್ಮೆ ನಡೆಯದಂತೆ ಎಚ್ಚರವಹಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.