ಫೋನ್ ಪೇ, ಗೂಗಲ್ ಪೇ ಬಳಸುವ ಅಂಗಡಿ ಮಾಲಿಕರೇ ಎಚ್ಚರ! ಕಳ್ಳರಿಂದ ದುಡ್ಡು ಕದಿಯಲು ಹೊಸ ಪ್ಲ್ಯಾನ್
ಫೋನ್ ಪೇ ಮತ್ತು ಗೂಗಲ್ ಪೇ ಬಳಸುವ ಅಂಗಡಿ ಮಾಲೀಕರು ಎಚ್ಚರಿಕೆಯಿಂದ ಇರಬೇಕಾಗಿದೆ. ಏಕೆಂದರೆ ಖದೀಮರು ಯುಪಿಎ ಸರ್ವಿಸ್ ನೀಡುವ ನೆಪದಲ್ಲಿ ಬಂದು ಹಣ ದೋಚುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಇದೇ ರೀತಿ ಘಟನೆಗಳು ಬೆಳಕಿಗೆ ಬಂದಿವೆ.

ನೆಲಮಂಗಲ, ಜುಲೈ 24: ಚಾಲಾಕಿ ಖದೀಮರು ದುಡ್ಡು ಮಾಡಲು ಹೊಸ ಕಳ್ಳ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಯುಪಿಐ (UPI) ಸರಿ ಇದೆಯಾ ಎಂಬ ನೆಪದಲ್ಲಿ ಕ್ಷಣ ಮಾತ್ರದಲ್ಲಿ ದುಡ್ಡು ದೋಚುತ್ತಿದ್ದಾರೆ. ಬೆಂಗಳೂರು ನಗರ (bangaluru) ಹಾಗೂ ಗ್ರಾಮಾಂತರದಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ದಿನಸಿ, ಕಾಂಡಿಮೆಂಟ್ಸ್ ಹಾಗೂ ಹಣದ ವಹಿವಾಟು ನಡೆಯುವ ಮಳಿಗೆಗಳನ್ನು ಟಾರ್ಗೆಟ್ ಮಾಡುತ್ತಿದ್ದು, ಫೋನ್ ಪೇ, ಗೂಗಲ್ ಪೇ ಬಳಸುವ ಅಂಗಡಿ ಮಾಲಿಕರು ಎಚ್ಚರ ವಹಿಸಬೇಕಾಗಿದೆ.
ಕ್ಷಣಾರ್ಧದಲ್ಲಿ ಹಣ ಟ್ರಾನ್ಸ್‌ಫರ್ ಮಾಡಿ ಪರಾರಿ
ಚಾಲಾಕಿ ಖದೀಮರು ದಿನಸಿ, ಕಾಂಡಿಮೆಂಟ್ಸ್ ಹಾಗೂ ಹಣದ ವಹಿವಾಟು ನಡೆಯುವ ಮಳಿಗೆಗಳನ್ನು ಟಾರ್ಗೆಟ್ ಮಾಡಿ, ಬ್ಯುಸಿ ಇದ್ದ ಸಮಯದಲ್ಲೇ ಫೋನ್ ಪೇ ಸ್ಕ್ಯಾನರ್ ಸರಿ ಇದೆಯಾ ಎಂದು ಬರುತ್ತಾರೆ. ಸರ್ವಿಸ್ ನೀಡುವ ನೆಪದಲ್ಲಿ ಮೊಬೈಲ್ ಕೇಳುತ್ತಾರೆ. ಒಂದು ರೂ ಹಣ ಹಾಕಿ ಸರಿಯಾಗಿದೆ, ಸರ್ವಿಸ್ ಆಗಿದೆ ಎನ್ನುತ್ತಾರೆ. ಬಳಿಕ ಕ್ಷಣಾರ್ಧದಲ್ಲಿ ಹಣವನ್ನು ತಮ್ಮ ಖಾತೆಗೆ ಹಾಕಿಕೊಂಡು ಪರಾರಿ ಆಗುತ್ತಾರೆ.
ಇದನ್ನೂ ಓದಿ: ಲೋಕಾಯುಕ್ತ ಭರ್ಜರಿ ಬೇಟೆ: ಚಿನ್ನದ ಬಿಸ್ಕತ್, ಚಿನ್ನಾಭರಣ ರಾಶಿ, ಕಂತೆ ಕಂತೆ ನಗದು, ಲಕ್ಷಾಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ
ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದೆ. ಬಾಬು ಸ್ಟೋರ್ ದಿನಸಿ ಅಂಗಡಿಗೆ ಬಂದಿದ್ದ ಖತರ್ನಾಕ್ ಕಳ್ಳ, ಫೋನ್ ಪೇ ಸ್ಕ್ಯಾನರ್ ಸರ್ವಿಸ್ ಮಾಡುವ ನೆಪದಲ್ಲಿ ಮೊಬೈಲ್ ಪಡೆದಿದ್ದಾನೆ. ಬಳಿಕ 75 ಸಾವಿರ ರೂ ಹಣ ವರ್ಗಾವಣೆ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಬ್ಬರು ಸ್ನೇಹಿತೆಯರಿಗೆ ಡಿಜಿಟಲ್ ಅರೆಸ್ಟ್: ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ
ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಕೈಚಳಕ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಮೊಬೈಲ್ನಲ್ಲಿ ಹಣ ವರ್ಗಾವಣೆ ಮಾಡಿಕೊಂಡು ಎಸ್ಕೇಪ್ ಆಗುತ್ತಿರುವ ದೃಶ್ಯ ಟಿವಿ9 ಗೆ ಲಭ್ಯವಾಗಿದೆ.
ವರದಿ: ಮಂಜುನಾಥ್ ಟಿವಿ9
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
