AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಾಯುಕ್ತ ಭರ್ಜರಿ ಬೇಟೆ: ಚಿನ್ನದ ಬಿಸ್ಕತ್, ಚಿನ್ನಾಭರಣ ರಾಶಿ, ಕಂತೆ ಕಂತೆ ನಗದು, ಲಕ್ಷಾಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ

ಕರ್ನಾಟಕದ ಹಲವೆಡೆ ಇಂದು ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಬೆಂಗಳೂರು, ಬಳ್ಳಾರಿ, ಮೈಸೂರು, ಕೊಪ್ಪಳ ಸೇರಿದಂತೆ ಹಲವೆಡೆ ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪ ಹೊತ್ತ ಅಧಿಕಾರಿಗಳ ಬೆವರಿಳಿಸಿದ್ದಾರೆ. ದಾಳಿ ವೇಳೆ ಸಿಕ್ಕ ಚಿನ್ನಾಭರಣ, ಬೆಳ್ಳಿಯ ಪಾತ್ರೆ-ಪಗಡಿ, ಕಂತೆ ಕಂತೆ ನಗದು ಲೋಕಾ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.

ಲೋಕಾಯುಕ್ತ ಭರ್ಜರಿ ಬೇಟೆ: ಚಿನ್ನದ ಬಿಸ್ಕತ್, ಚಿನ್ನಾಭರಣ ರಾಶಿ, ಕಂತೆ ಕಂತೆ ನಗದು, ಲಕ್ಷಾಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ
ಬಳ್ಳಾರಿಯಲ್ಲಿ ಲೋಕಾಯುಕ್ತ ದಾಳಿ ವೇಳೆ ಸಿಕ್ಕಿದ ಆಭರಣಗಳು
Ganapathi Sharma
|

Updated on: Jul 23, 2025 | 2:18 PM

Share

ಬೆಂಗಳೂರು, ಜುಲೈ 23: ಪ್ಯಾಕೆಟ್​ಗಳಲ್ಲಿ ಚಿನ್ನದ ಬಿಸ್ಕತ್, 15ಕ್ಕೂ ಹೆಚ್ಚು ಚಿನ್ನದ ಕಿವಿಯೋಲೆಗಳು, ಸಾಲು ಸಾಲು ಚಿನ್ನದ ಸರಗಳು, ಬೆಳ್ಳಿಯ ಆಭರಣಗಳು, ಬೆಳ್ಳಿಯ ಬಟ್ಟಲು, ಬೆಳ್ಳಿ ತಟ್ಟೆ, ಬೆಳ್ಳಿಯ ದೀಪ, ಕಂತೆ ಕಂತೆ ನಗದು ಹಣ! ಇವೆಲ್ಲ ರಾಜ್ಯದ ವಿವಿಧೆಡೆ ದಾಳಿ ನಡೆಸಿದ ಲೋಕಾಯುಕ್ತ (Lokayukta Raid) ಅಧಿಕಾರಿಗಳಿಗೆ ಸಿಕ್ಕ ಅಕ್ರಮ ಸಂಪತ್ತು. ಬೆಂಗಳೂರು, ಮೈಸೂರು, ಕೊಪ್ಪಳ ಸೇರಿದಂತೆ ಅನೇಕ ಕಡೆಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟರ ಬೇಟೆಯಾಡಿದ್ದಾರೆ. ಈ ವೇಳೆ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಆಸ್ತಿ, ಸಂಪತ್ತು ಪತ್ತೆಯಾಗಿದೆ.

ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿದ್ದ ಸರ್ಕಾರಿ ಕುಬೇರರ ಮೇಲೆ ಕಣ್ಣಿಟ್ಟಿದ್ದ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆ ಭರ್ಜರಿ ಶಾಕ್ ಕೊಟ್ಟಿದ್ದಾರೆ. ಮುಂಜಾನೆ ಚುಮು ಚುಮು ಚಳಿಯಲ್ಲೇ ಭ್ರಷ್ಟರ ಬೆವರಿಳಿಸಿದ್ದಾರೆ. ಬೆಂಗಳೂರು, ಬೆಂಗಳೂರು, ಬಳ್ಳಾರಿ, ಮೈಸೂರು, ಕೊಪ್ಪಳ, ಬೀದರ್, ತುಮಕೂರು, ಹುಬ್ಬಳ್ಳಿ ಸೇರಿ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಐಎಎಸ್ ಅಧಿಕಾರಿ ವಾಸಂತಿ ಅಮರ್ ನಿವಾಸದ ಮೇಲೆ ದಾಳಿ

ಬೆಂಗಳೂರಿನಲ್ಲಿ ಐಎಎಸ್ ಅಧಿಕಾರಿ ವಾಸಂತಿ ಅಮರ್ ನಿವಾಸ ಸೇರಿ ಬೆಂಗಳೂರಿನ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಾಸಂತಿ ಅಮರ್ ಸದ್ಯ ಬೆಂಗಳೂರು ನಗರ ವಿಶೇಷ ಡಿಸಿಯಾಗಿದ್ದು, ಇಂದು ಆರ್​.ಟಿ.ನಗರದಲ್ಲಿರುವ ಇವರ ನಿವಾಸದ ಮೇಲೆ ಲೋಕಾ ರೇಡ್ ನಡೆದಿದೆ.

ಟೌನ್ ಪ್ಲ್ಯಾನಿಂಗ್ ಸಹಾಯಕ ನಿರ್ದೇಶಕನ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ

ಮಾರುತಿ ಬಗಲಿ, ಬೆಂಗಳೂರು ಟೌನ್ ಆ್ಯಂಡ್ ರೂರಲ್ ಪ್ಲ್ಯಾನಿಂಗ್ ಆಫೀಸರ್. ಮಾರುತಿಗೆ ಸೇರಿದ ಬೆಂಗಳೂರಿನ ನಿವಾಸ ಮತ್ತು ಬಳ್ಳಾರಿಯ ಮೂರು ಕಡೆ ದಾಳಿ ನಡೆದಿದೆ. ಬೆಂಗಳೂರಿನ ನಿವಾಸದಲ್ಲಿ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನದ ಆಭರಣ, ನಗದು, ಹಾಗೂ ದುಬಾರಿ ವಾಚ್​ಗಳು ಪತ್ತೆಯಾಗಿವೆ. ಸದ್ಯ ಬೆಂಗಳೂರು ನಿವಾಸಿಯಾಗಿರುವ ಅಧಿಕಾರಿ ಮಾರುತಿ ಬಗಲಿ ವಿರುದ್ಧ ರಾಜ್ಯದ ಹಲವೆಡೆ ಆಸ್ತಿ ಮಾಡಿರುವ ಆರೋಪ ಇದೆ.

Ballari Lokayukta Raid Jwellery

ಮಾರುತಿ ಅತ್ತೆಯ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ಗ್ರಾಮಪಂಚಾಯತ್ ಅಧ್ಯಕ್ಷೆ ರಜನಿ ಷಣ್ಮುಖಗೌಡ (ಮಾರುತಿ ಅತ್ತೆ) ಮನೆ ಮೇಲೆ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಯೆರಪ್ಪ ರೆಡ್ಡಿ ನಿವಾಸದ ಮೇಲೆ ದಾಳಿ

ಬಿಬಿಎಂಪಿ ಕಾರ್ಯನಿರ್ವಾಹಕ ಇಂಜಿನಿಯರ್​​ ಯೆರಪ್ಪ ರೆಡ್ಡಿ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯರೆಪ್ಪ ರೆಡ್ಡಿ ಕೆಲ ದಿನಗಳ ಹಿಂದಷ್ಟೇ 10 ಲಕ್ಷ ರೂಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು.

ಎಸ್.ಎಂ.ಚವ್ಹಾಣ್ ನಿವಾಸದಲ್ಲಿ 4 ಲಕ್ಷ ರೂ. ನಗದು, ಚಿನ್ನಾಭರಣ

ಇನ್ನು ಕೊಪ್ಪಳ ಜಿಲ್ಲಾ ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಟ್ಯಾಕ್ಸ್ ಉಪ ನಿರ್ದೇಶಕ ಎಸ್.ಎಂ ಚವ್ಹಾಣ ಮೇಲೂ ಲೋಕಾಯಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರದ ದತ್ತನಗರದಲ್ಲಿನ ನಿವಾಸದಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ 4 ಲಕ್ಷ ರೂ. ನಗದು, ಚಿನ್ನಾಭರಣ ಇರೋ ಬಗ್ಗೆ ಮಾಹಿತಿ ಸಿಕ್ಕಿದೆ. ಅಷ್ಟೇ ಅಲ್ಲ ಹಲವೆಡೆ ಇರುವ ಸೈಟ್ ಮತ್ತು ಜಮೀನನ ದಾಖಲೆ ಸಹ ಲಭ್ಯ ವಾಗಿದೆ ಎನ್ನಲಾಗಿದೆ. ಒಟ್ಟು 12 ಸೈಟ್, ಅಪಾರ ಪ್ರಮಾಣದ ಚಿನ್ನಾಭರಣ ಲಭ್ಯವಾಗಿದೆ.

ಇದನ್ನೂ ಓದಿ: Lokayukta Raid: ಆದಾಯಕ್ಕೂ ಮೀರಿ ಗಳಿಕೆ ಆರೋಪ; ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ

ಇನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ, ರಾಮನಗರದ ಜಿಲ್ಲಾಸ್ಪತ್ರೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಲೋಕಾಯುಕ್ತ ಎಸ್​ಪಿ ಸ್ನೇಹಾ ನೇತೃತ್ವದಲ್ಲಿ ದಾಳಿ ನಡೆದಿದೆ. ಕೆಲ ಅವ್ಯವಹಾರ ಆರೋಪ ಹಿನ್ನೆಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಮೈಸೂರಿನಲ್ಲಿ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಪಾಲಿಕೆ ಉಪ ವಿಭಾಗಧಿಕಾರಿ ವೆಂಕಟರಾಮ್, ಕೌಶಲ್ಯಾಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥಸ್ವಾಮಿ ಕಚೇರಿ ಮನೆಗಳ ಮೇಲೆ ದಾಳಿ ನಡೆಸಿದ ಪರಿಶೀಲಿಸಲಾಗಿದೆ. ತುಮಕೂರು, ಬೀದರ್​ನಲ್ಲೂ ಲೋಕಾಯುಕ್ತ ದಾಳಿ ನಡೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ