ದೇವನಹಳ್ಳಿ ಶಿಕ್ಷಕನಿಂದ ಬರೋಬ್ಬರಿ 32.25 ಲಕ್ಷ ರೂ. ದೋಚಿದ ಸೈಬರ್ ಖದೀಮ, ಹೇಗೆಲ್ಲ ನಂಬಿಸ್ತಾರೆ ನೋಡಿ..!
ಕ್ರೈಂ ಬ್ರಾಂಚ್ ಪೊಲೀಸರ ಸೋಗಿನಲ್ಲಿ ದೇವನಹಳ್ಳಿ ಶಿಕ್ಷಕರೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಪಾಸ್‌ಪೋರ್ಟ್‌ಗಳ ಸಂಬಂಧ ವಿಚಾರಣೆ ನಡೆಸಬೇಕಿದೆ ಎಂದು ಹೇಳಿ ಶಿಕ್ಷಕನಿಂದ ಬರೋಬ್ಬರಿ 32.25 ಲಕ್ಷ ರೂ, ದೋಚಿದ್ದಾರೆ. ಇದೀಗ ಹಣ ಕಳೆದುಕೊಂಡು ಕಂಗಾಲಾಗಿರುವ ಶಿಕ್ಷಕ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರು (ಸೆಪ್ಟೆಂಬರ್, 06): ಪಾಸ್‌ಪೋರ್ಟ್‌ಗಳ (Passport) ಸಂಬಂಧ ವಿಚಾರಣೆ ನಡೆಸಬೇಕಿದೆ ಎಂದು ಹೇಳಿ ಶಿಕ್ಷಕರೊಬ್ಬರಿಂದ (Teacher) ಬರೋಬ್ಬರಿ 32.25 ಲಕ್ಷ ರೂಪಾಯಿ ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು(Bengaluru) ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಿವಾಸಿ ಚತುರ ರಾವ್ ಹಣ ಕಳೆದುಕೊಂಡಿದ್ದಾರೆ. ಮುಂಬೈ ನಗರದ ಕ್ರೈಂ ಬ್ರಾಂಚ್ ಪೊಲೀಸರೆಂದು(Mumbai crime branch officer) ಹೇಳಿ ವಂಚಿಸಿದ್ದಾರೆ. ಹಣ ಕಳೆದುಕೊಂಡ ಚತುರ ರಾವ್ ಅವರು ಇದೀಗ ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆ. 2ರಂದು ಫೆಡೆಕ್ಸ್ ಕೊರಿಯರ್ ಕಂಪನಿಯ ಪ್ರತಿನಿಧಿ ಹೆಸರಿನಲ್ಲಿ ಶಿಕ್ಷಕ ಚತುರರಾವ್ ಅವರಿಗೆ ಖದೀಮನೊಬ್ಬ ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಕೊರಿಯರ್ ಪಾರ್ಸೆಲ್ ಬಂದಿದ್ದು, ಅದರಲ್ಲಿ ನಿಮ್ಮ ಮೊಬೈಲ್ ನಂಬರ್, ಆಧಾರ್ ನಂಬರ್, ಐದು ಪಾಸ್‌ಪೋರ್ಟ್, ಐದು ಕ್ರೆಡಿಟ್ ಕಾರ್ಡ್ ಮತ್ತು ಒಂದು ಲ್ಯಾಪ್‌ಟಾಪ್ ಇವೆ. ಈ ಪ್ರಕರಣವನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ಬೆದರಿಸಿದ್ದಾನೆ.
ಇದನ್ನೂ ಓದಿ: ಆನೇಕಲ್: ಮಗಳು-ಅಳಿಯನ ಕುತಂತ್ರ, ನಿಧಿಯ ಆಸೆಗೆ ಹಣ, ಜಮೀನು ಕಳೆದುಕೊಂಡ ತಂದೆ
ಬಳಿಕ ಸ್ವಲ್ಪ ಸಮಯದ ನಂತರ ಮತ್ತೆ ಚತುರರಾವ್ ಅವರಿಗೆ ಕರೆ ಮಾಡಿ ಪಾಸ್‌ಪೋರ್ಟ್ ಪತ್ತೆ ಸಂಬಂಧ ವಿಚಾರಣೆಗೆ ವಿಡಿಯೋ ಕರೆ ಮೂಲಕ ಮಾತನಾಡಬೇಕಾಗುತ್ತದೆ. ಆದ್ದರಿಂದ ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿ ಎಂದು ಹೇಳಿದ್ದಾನೆ. ಇದರಿಂದ ಭಯಗೊಂಡ ಚತುರರಾವ್ ಅವರು ಪೊಲೀಸರೇ ಇರಬಹುದು ಎಂದು ನಂಬಿ ವಿಡಿಯೋ ಕರೆ ಸ್ವೀಕರಿಸಿದ್ದರು. ಆ ವೇಳೆ ಖದೀಮ ತಾನು ಮುಂಬೈ ಕ್ರೈಂ ಬ್ರಾಂಚ್‌ನ ಆ್ಯಂಟಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದು, ಕೆಲವರು ನಿಮ್ಮ ಹೆಸರಿನ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಶಿಕ್ಷಕರಿಗೆ ಹೇಳಿದ್ದಾನೆ.
ಈ ಬಗ್ಗೆ ತಿಳಿದುಕೊಳ್ಳಬೇಕಾದರೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾಯಿಸಬೇಕು ಎಂದು ಸೂಚಿಸಿದ್ದಾನೆ. ಅದರಂತೆ ಚತುರರಾವ್, ವಂಚಕ ಹೇಳಿದ್ದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 32.25 ಲಕ್ಷ ರೂ. ಹಣವನ್ನು ವರ್ಗಾಯಿಸಿದ್ದಾರೆ. ನಂತರ ಸಂಪರ್ಕ ಕಡಿತವಾಗಿದೆ. ಕೊನೆಗೆ ತಾವು ಮೋಸಗೊಳಗಾಗಿರುವುದು ಚತುರರಾವ್ ಅವರಿಗೆ ಅರಿವಾಗಿದ್ದು, ಬಳಿಕ ಅವರು ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ