ದೊಡ್ಡಬಳ್ಳಾಪುರ: ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಶಕ್ತಿ ಪ್ರದಶರ್ನಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಅದ್ದೂರಿ ಬಿಜೆಪಿ ಜನಸ್ಪಂದನ ಸಮಾವೇಶ ಆಯೋಜನೆ ಮಾಡಿದೆ. ಈ ಮೂಲಕ ಮುಂಬರುವ ವಿಧಾನಸಭಾ ಚುಣಾವಣೆ ತಯಾರಿ ನಡೆಸಿದೆ. ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಜನಸ್ಪಂದನ ಸಮಾವೇಶ ಆಯೋಜನೆ ಮಾಡಿದ್ದು, 3 ಲಕ್ಷ ಜನರಿಗೆ ಊಟದ ವ್ಯವಸ್ಥೆ, ಸುಮಾರು 200 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ, ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ 5 ಸಾವಿರ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿ ಮುಂಡರು, ಶಾಸಕರು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿ ಹಲವು ಗಣ್ಯರು ಭಾಗಿಯಾಗಿದ್ದಾರೆ.
ಇನ್ನು ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಿಎಂ ಕಚೇರಿಯಲ್ಲಿ ಕೆಲಸ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ದ.ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಕೆಲಸ ನೀಡುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ವೇದಿಕೆ ಮೇಲೆ ಭಾಷಣ ಮಾಡಿದ ಸಿಎಂ, ದಾಖಲೆಯ ಸಂಖ್ಯೆಯಲ್ಲಿ ಸೇರಿದ್ದಕ್ಕೆ ನಿಮಗೆ ಅಭಿನಂದನೆ. ಇಲ್ಲಿಂದ ಇಡೀ ರಾಜ್ಯಕ್ಕೆ ಕೇಳಿಸುವಂತೆ ಸಂದೇಶ ನೀಡಿದ್ದೇವೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂಬ ಸಂದೇಶ ರವಾನೆ ಆಗಿದೆ. ನೀವು ಇಟ್ಟಿರುವ ವಿಶ್ವಾಸಕ್ಕೆ ನಾವು ದ್ರೋಹ ಮಾಡಲ್ಲ. 2019ರಲ್ಲೇ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಬೇಕಿತ್ತು. ಆದರೆ ಕಾಂಗ್ರೆಸ್ನ ಹುನ್ನಾರದಿಂದ ಅದು ಕೈತಪ್ಪಿತ್ತು. ಕಾಂಗ್ರೆಸ್ನಿಂದ ಬಂದ ಎಲ್ಲ ಶಾಸಕರೂ ವೀರರು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಚೀಲದಲ್ಲಿದ್ದ ಅಕ್ಕಿ ಮೋದಿದು, ಚೀಲ ಮಾತ್ರ ನಿಮ್ಮದು
ನಾವು ಸಮರ್ಥವಾಗಿ ಕೊವಿಡ್ ಎದುರಿಸಿದ್ದೇವೆ. ಜನರಿಗೆ ಉಚಿತವಾಗಿ ಕೊವಿಡ್ ಲಸಿಕೆ ನೀಡಿದ್ದೇವೆ. ಕಾಂಗ್ರೆಸ್ನವರು ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಾರೆ. ಅನ್ನಭಾಗ್ಯ ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳ್ತಾರೆ. ಚೀಲದಲ್ಲಿದ್ದ ಅಕ್ಕಿ ಮೋದಿದು, ಚೀಲ ಮಾತ್ರ ನಿಮ್ಮದು. ಅನ್ನಭಾಗ್ಯದಲ್ಲಿ ಅವ್ಯವಹಾರ ಆಯ್ತು. ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ದಂಧೆ ಮಾಡಿದ್ರಿ. ಲ್ಯಾಪ್ಟಾಪ್ ಕೊಡುವುದರಲ್ಲಿ ಹಗರಣ ಮಾಡಿದ್ರಿ ಎಂದು ಸಿದ್ದರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ರು.
ಸರ್ಕಾರಕ್ಕೆ ಪರ್ಸೆಂಟೇಜ್ ಸರ್ಕಾರ ಎಂದು ಹೇಳುತ್ತೀರಿ. ನೀವು ಕೆಲಸ ಮಾಡದೇ ಬರೀ ಬಿಲ್ ಪಡೆದ್ದೀರಿ. ನಿಮ್ಮದು 100% ಕಮಿಷನ್ ಸರ್ಕಾರ ಎಂದು ನೀವು ನಮಗೆ ಹೇಳುತ್ತೀರಾ ಎಂದು ಸಿಎಂ ಕಿಡಿ ಕಾರಿದ್ದಾರೆ. ನಿಮ್ಮ ನಾಟಕ ನಡೆಯುವುದಿಲ್ಲ, ಇದನ್ನ ಕೊನೆಗಾಣಿಸಬೇಕು. ಕೂಲಿಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಮಾಡಿದ್ದೇವೆ. ಶಕ್ತಿಇಲ್ಲದ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ನೀಡಿದ್ದೇವೆ. ಹಾಲು ಉತ್ಪಾದಕರಿಗೆ ಒಂದು ಬ್ಯಾಂಕ್ ಸ್ಥಾಪಿಸುತ್ತಿದ್ದೇವೆ. ಕೋಲಾರ-ಚಿಕ್ಕಬಳ್ಳಾಪುರ ಜನರಿಗೆ ಹೆಚ್ಚು ಲಾಭವಾಗಲಿದೆ. SC, ST ವಿದ್ಯಾರ್ಥಿಗಳ ಹಾಸ್ಟೆಲ್ ಹೆಚ್ಚಳ ಮಾಡಿದ್ದೇವೆ. ಸ್ತ್ರಿಶಕ್ತಿ ಸಂಘಗಳ 5 ಲಕ್ಷ ಸದಸ್ಯರಿಗೆ ಉದ್ಯೋಗ ನೀಡ್ತೇವೆ. ನೀರಾವರಿಗೆ ನಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ. ಎತ್ತಿನಹೊಳೆ ಯೋಜನೆಯನ್ನ ನಾವು ಆರಂಭಿಸಿದ್ದೇವೆ. ವರಿಗೆ ಎತ್ತಿನಹೊಳೆ ಯೋಜನೆ ಬಗ್ಗೆ ಏನೂ ಗೊತ್ತಿಲ್ಲ. ಇದೇ ವರ್ಷ ಎತ್ತಿನಹೊಳೆ ನೀರನ್ನ ಹರಿಸುತ್ತೆ. ಕೋಲಾರ-ಚಿಕ್ಕಬಳ್ಳಾಪುರಕ್ಕೆ ಟೌನ್ಶಿಪ್ ಬಗ್ಗೆ ಚಿಂತನೆ ನಡೆದಿದೆ. ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದೇವೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಗುರಿ ಹೊಂದಿದ್ದೇವೆ ಎಂದರು.
ನಾವು ರಾಜ್ಯದಲ್ಲಿ ಮತ್ತೆ ಕಮಲವನ್ನು ಅರಳಿಸುತ್ತೇವೆ
ನಾನು ಕಾಂಗ್ರೆಸ್ ಪಕ್ಷಕ್ಕೆ ಹೇಳಲು ಬಯಸುತ್ತೇನೆ. ನಿಮ್ಮ ಕನಸು ಕೇವಲ ಕನಸು ಕನಸಾಗಿಯೇ ಉಳಿಯುತ್ತೆ. ನಾವು ರಾಜ್ಯದಲ್ಲಿ ಮತ್ತೆ ಕಮಲವನ್ನು ಅರಳಿಸುತ್ತೇವೆ. ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ತಡೆದು ನಿಲ್ಲಿಸಿ. ಜನಶಕ್ತಿ ಮುಂದೆ ಯಾರು ಕೂಡ ದೊಡ್ಡವರಲ್ಲ. ಇಲ್ಲಿಂದ ನಾನು ನನ್ನ ಶಕ್ತಿಯನ್ನ ಇಮ್ಮಡಿಗೊಳಿಸಿ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಸಿಎಂ ಬೊಮ್ಮಾಯಿ ಸವಾಲೆಸೆದಿದ್ದಾರೆ.
Published On - 3:07 pm, Sat, 10 September 22