BJP Janaspandana Program Highlights: ಬಿಜೆಪಿ ಜನಸ್ಪಂದನ ಕಾರ್ಯಕ್ರಮ: ಪ್ರವೀಣ್ ಕುಟುಂಬಕ್ಕೆ ಕೆಲಸ ನೀಡುವುದಾಗಿ ಸಿಎಂ ಘೋಷಣೆ
Karnataka Government Janaspandana Program Highlights: ಉದ್ಘಾಟನೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸಬೇಕಿತ್ತು. ಅವರ ಬದಲಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಭಾಗವಹಿಸಲಿದ್ದಾರೆ.
ಬೆಂಗಳೂರು ಗ್ರಾಮಾಂತರ: ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಶಕ್ತಿ ಪ್ರದಶರ್ನಕ್ಕೆ ಆಡಳಿತ ಪಕ್ಷ ಬಿಜೆಪಿ ಮುಂದಾಗಿದ್ದು, ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶ ಆಯೋಜನೆ ಮಾಡಿದೆ. ಆ ಮೂಲಕ ಮುಂಬರುವ ವಿಧಾನಸಭಾ ಚುಣಾವಣೆ ಗೆಲುವಿಗೆ ಸಜ್ಜಾಗಿದೆ. ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಜನಸ್ಪಂದನ ಸಮಾವೇಶ ಆಯೋಜನೆ ಮಾಡಿದ್ದು, 3 ಲಕ್ಷ ಜನರಿಗೆ ಊಟದ ವ್ಯವಸ್ಥೆ, ಸುಮಾರು 200 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ, ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ 5 ಸಾವಿರ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿ ಹಲವು ಗಣ್ಯರು ಭಾಗಿ ಸಾಧ್ಯತೆ ಇದೆ.
ಈ ಹಿಂದೆ ಅನಿವಾರ್ಯ ಕಾರಣಗಳಿಂದಾಗಿ ಜನಸ್ಪಂದನ ಸಮಾವೇಶ ಮೂಂದುಡಲಾಗಿತ್ತು. ಆದರೆ ಈ ಭಾರಿ ನಿಗದಿಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇನ್ನೂ ಉದ್ಘಾಟನೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸಬೇಕಿತ್ತು. ಆದರೆ ಪೂರ್ವ ನಿಯೋಜಿತ ಕಾರ್ಯಕ್ರಗಳಿರುವುದರಿಂದ ಆಗಮಿಸುತ್ತಿಲ್ಲ ಎನ್ನಲಾಗುತ್ತಿದೆ. ಅವರ ಬದಲಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಭಾಗವಹಿಸಲಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಸಚಿವರು, ಶಾಸಕರು ಹಾಗೂ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಸಮಾವೇಶಕ್ಕೆ ಬರುವವರಿಗೆ ಬೆಳಗ್ಗೆಯಿಂದಲೇ ತಿಂಡಿ ವ್ಯವಸ್ಥೆ ಮಾಡಿದ್ದು. ತಿಂಡಿಗೆ ರೈಸ್ಬಾತ್, ಮೊಸರನ್ನ ಹಾಗೂ ಬಾದುಷಾ ತಯಾರಿಸಲಾಗಿದೆ. 900 ಬಾಣಸಿಗರು ಹಾಗೂ ಭಟ್ಟರಿಂದ ಅಡುಗೆ ತಯಾರಿ ಮಾಡಲಾಗುತ್ತಿದ್ದು, ಜನಸ್ಪಂದನ ಸಮಾವೇಶದಲ್ಲಿ 200 ಊಟದ ಕೌಂಟರ್ಗಳು, 20 ಕೌಂಟರ್ ವಿಶೇಷ ಚೇತನರಿಗೆ, 40 ಮಹಿಳೆಯರಿಗೆ, ಪುರುಷರಿಗೆ 140 ಊಟದ ಕೌಂಟರ್ಗಳನ್ನ ತೆರೆಯಲಾಗಿದೆ. ನೀರಿನ ಬಳಕೆಗೆ 200 ತಾತ್ಕಾಲಿಕ ಕೊಳಾಯಿಗಳ ಸ್ಥಾಪನೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
LIVE NEWS & UPDATES
-
BJP Janaspandana Program Live: ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಜನಸ್ಪಂದನ ಸಮಾವೇಶ ಮುಕ್ತಾಯ
ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಜನಸ್ಪಂದನ ಸಮಾವೇಶ ಮುಕ್ತಾಯಗೊಂಡಿದೆ. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಮಳೆರಾಯನ ಎಂಟ್ರಿಯಾಗಿದೆ. ದೊಡ್ಡಬಳ್ಳಾಪುರ ಸುತ್ತಾಮುತ್ತ ಮಳೆಯಿಂದಾಗಿ ಬಸ್ಗಳಿಗೆ ತೆರಳಲು ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬ್ಯಾನರ್, ಕಟೌಟ್, ಬಾವುಟ, ಕೈಗೆ ಸಿಕ್ಕಿದ್ದನ್ನು ತಲೆ ಮೇಲೆ ಹಾಕಿಕೊಂಡು ಜನರು ಮಳೆಯಿಂದ ರಕ್ಷಣೆ ಪಡೆಯುತ್ತಿದ್ದಾರೆ.
-
BJP Janaspandana Program Live: ಕನ್ನಡದಲ್ಲೇ ಭಾಷಣ ಆರಂಭಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ
ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕನ್ನಡದಲ್ಲೇ ಭಾಷಣ ಆರಂಭಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅರಳಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಭೇದ-ಭಾವ ಮಾಡಿದ್ದಾರೆ. ಕರ್ನಾಟಕದಲ್ಲಿ ಸಿಎಂ ಬೊಮ್ಮಾಯಿ ಉತ್ತಮ ಆಡಳಿತ ನೀಡ್ತಿದ್ದಾರೆ. 7 ವರ್ಷಗಳಲ್ಲಿ ಕೇಂದ್ರದಿಂದ ಹಲವು ಹೆದ್ದಾರಿಗಳ ನಿರ್ಮಾಣ ಮಾಡಲಾಗಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ್ದಾರೆ. ದೇಶದಲ್ಲೇ ಎನ್ಇಪಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂದು ಸಿಎಂ ಬೊಮ್ಮಾಯಿಗೆ ಸ್ಮೃತಿ ಇರಾನಿ ಅಭಿನಂದನೆ ಸಲ್ಲಿಸಿದ್ರು.
ರೇಷ್ಮೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡ್ತಿದೆ. ಆತ್ಮನಿರ್ಭರ್ ಯೋಜನೆಯಡಿ ರೇಷ್ಮೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮಾಡ್ತಿದ್ದಾರೆ. ರಾಹುಲ್ ಗಾಂಧಿಗೆ ನಾನು ಕೇಳಲು ಬಯಸುತ್ತೇನೆ. ದೇಶವನ್ನು ಇಬ್ಭಾಗ ಯಾರು ಮಾಡಿದ್ದಾರೆ ಮೊದಲು ಹೇಳಲಿ ಎಂದು ಗಾಂಧಿ ಕುಟುಂಬದ ವಿರುದ್ಧ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.
-
BJP Janaspandana Program Live: ಕಾರ್ಯಕ್ರಮ ಮುಕ್ತಾಯಕ್ಕೂ ಮುನ್ನವೇ ಹೊರಟ ಜನ
ಜನಸ್ವಂದನಾ ಕಾರ್ಯಕ್ರಮ ಮುಕ್ತಾಯಕ್ಕೂ ಮುನ್ನವೇ ಸಮಾವೇಶದಿಂದ ಸಾವಿರಾರು ಜನ ಹೊರಟು ಹೋಗಿದ್ದಾರೆ. ಒಮ್ಮೆಲೆ ಜನ ಮತ್ತು ವಾಹನಗಳ ಓಡಾಟ ಹಿನ್ನೆಲೆ ದೊಡ್ಡಬಳ್ಳಾಪುರ ದೇವನಹಳ್ಳಿ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ. ರಸ್ತೆಯಲ್ಲಿ ಬಸ್ಗಳು ಸಾಲುಗಟ್ಟಿ ನಿಂತಿವೆ. ನೂರಾರು ಬಸ್ಗಳ ಆಗಮನ ದಿಂದ ಭಾರಿ ಟ್ರಾಫಿಕ್ ಜಾಮ್ ಆಗಿದೆ.
BJP Janaspandana Program Live: ಪ್ರವೀಣ್ ಕುಟುಂಬಕ್ಕೆ ಕೆಲಸ ನೀಡುವುದಾಗಿ ಸಿಎಂ ಘೋಷಣೆ
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಿಎಂ ಕಚೇರಿಯಲ್ಲಿ ಕೆಲಸ ನೀಡುವುದಾಗಿ ಜನಸ್ಪಂದನ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ದ.ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಿಹಿ ಸುದ್ದಿ ನೀಡಿದ್ದಾರೆ.
BJP Janaspandana Program Live: ಬಿಜೆಪಿ ಸೇರಿದ ಮಾಜಿ ಎಂಎಲ್ಸಿ ಎಂ.ಡಿ ಲಕ್ಷ್ಮೀನಾರಾಯಣ
ಜನಸ್ಪಂದನ ಸಮಾವೇಶದಲ್ಲೇ ಮಾಜಿ ಎಂಎಲ್ಸಿ ಎಂ.ಡಿ ಲಕ್ಷ್ಮೀನಾರಾಯಣ ಬಿಜೆಪಿ ಸೇರ್ಪಡೆಯಾಗಿದ್ದಾರೆ.
BJP Janaspandana Program Live: ಸಚಿವೆ ಸ್ಮೃತಿ ಇರಾನಿ, ಡಿಕೆ ಅರುಣಾರಿಗೆ ಕೈಮಗ್ಗದ ಪ್ರತಿಕೃತಿ ಮಗ್ಗದ ಸೀರೆ ಉಡುಗೊರೆ
ಜನಸ್ಪಂದನ ಸಮಾವೇಶದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ರಾಜ್ಯ ಸಹ ಉಸ್ತುವಾರಿ ಡಿಕೆ ಅರುಣಾ ಅವರಿಗೆ ಕೈಮಗ್ಗದ ಪ್ರತಿಕೃತಿ ಮತ್ತು ಮಗ್ಗದ ಸೀರೆ ಉಡುಗೊರೆ ನೀಡಲಾಯಿತು. ದೊಡ್ಡಬಳ್ಳಾಪುರ ನೇಕಾರರು ತಯಾರಿಸಿದ ಸೀರೆಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಉಡುಗೊರೆಯಾಗಿ ನೀಡಿದರು.
BJP Janaspandana Program Live: ಕಾಣೆಯಾಗಿದ್ದ ಶಾಸಕರೆಲ್ಲಾ ಬಿಜೆಪಿ ಜನಸ್ಪಂದನ ಕಾರ್ಯಕ್ರಮದಲ್ಲಿ ಪತ್ತೆ
ರಾಜ್ಯದಲ್ಲಿ ಮಳೆಯ ರುದ್ರನರ್ತನ, ಸಂತ್ರಸ್ತರ ನೋವಿನ ರೋಧನೆ, ಬಿಜೆಪಿಯದ್ದು ಮೋಜಿನ ನರ್ತನೆ. ನೆರೆ ಬಂದಾಗ ಕಾಣೆಯಾಗಿದ್ದ ಸಚಿವರು, ಶಾಸಕರೆಲ್ಲ ದೊಡ್ಡಬಳ್ಳಾಪುರದಲ್ಲಿ ಪತ್ತೆ! ಅತ್ತ ಜನತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಇತ್ತ ಸಂಭ್ರಮಾಚರಣೆಯಲ್ಲಿದೆ ಬಿಜೆಪಿ ಸರ್ಕಾರ. ಇದು ಲಜ್ಜೆಗೇಡಿತನದ ಪರಮಾವಧಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ರಾಜ್ಯದಲ್ಲಿ ಮಳೆಯ ರುದ್ರನರ್ತನೆ,ಸಂತ್ರಸ್ತರ ನೋವಿನ ರೋಧನೆ,ಬಿಜೆಪಿಯದ್ದು ಮೋಜಿನ ನರ್ತನೆ.
ನೆರೆ ಬಂದಾಗ ಕಾಣೆಯಾಗಿದ್ದ ಸಚಿವರು, ಶಾಸಕರೆಲ್ಲ ದೊಡ್ಡಬಳ್ಳಾಪುರದಲ್ಲಿ ಪತ್ತೆ!
ಅತ್ತ ಜನತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಇತ್ತ ಸಂಭ್ರಮಾಚರಣೆಯಲ್ಲಿದೆ @BJP4Karnataka ಸರ್ಕಾರ.ಇದು ಲಜ್ಜೆಗೇಡಿತನದ ಪರಮಾವಧಿ.#BJPBrashtotsava pic.twitter.com/dN0g2avXbV
— Karnataka Congress (@INCKarnataka) September 10, 2022
ಯಾವ ಕಾರಣಕ್ಕಾಗಿ ಈ ಸಂತೋಷ, ಸಡಗರ, ಸಂಭ್ರಮ @BJP4Karnataka?
◆ಅತಿವೃಷ್ಟಿಯಲ್ಲಿ ಜನರ ಬದುಕು ಮುಳುಗಿರುವುದಕ್ಕಾ?
◆ಆತ್ಮಹತ್ಯೆಯಲ್ಲಿ ಕರ್ನಾಟಕ 5ನೇ ಸ್ಥಾನ ಪಡೆದಿರುವುದಕ್ಕಾ?
◆ಸರ್ಕಾರಿ ಹುದ್ದೆಗಳು ಲಾಭದಾಯಕವಾಗಿ ಸೇಲ್ ಆಗಿರುವುದಕ್ಕಾ?
◆40% ಕಮಿಷನ್ ಲೂಟಿಯನ್ನು ಯಶಸ್ವಿಯಾಗಿ ಮಾಡುತ್ತಿರುವುದಕ್ಕಾ?#BJPBrashtotsava pic.twitter.com/bxFWkgvurx
— Karnataka Congress (@INCKarnataka) September 10, 2022
BJP Janaspandana Program Live: ಜನಸ್ಪಂದನ ಸಮಾವೇಶಕ್ಕೆ ಸಿದ್ದರಾಮಯ್ಯ ಲೇವಡಿ
ಜನಸ್ಪಂದನ ಸಮಾವೇಶಕ್ಕೆ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಜನಸ್ಪಂದನ ಅಂದ್ರೆ ಏನು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಮಳೆ ಬಂದು ರಾಜ್ಯದ ಎಲ್ಲ ಕಡೆ ಪ್ರವಾಹ ಬಂದಿದೆ. 7 ಲಕ್ಷ ಹೆಕ್ಟೇರ್ ಪ್ರದೇಶ ಮಳೆಯಿಂದ ಹಾನಿಯಾಗಿದೆ. ಮಳೆಯಿಂದ ಅಪಾರ ಹಾನಿಯಾಗಿದ್ರೂ ಪರಿಹಾರ ಕೊಟ್ಟಿಲ್ಲ. ಸಮಸ್ಯೆಗೆ ಸ್ಪಂದಿಸದೆ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಬಿಜೆಪಿ ನಾಯಕರಿಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ. ಲಂಚದ ದುಡ್ಡಲ್ಲಿ ಜನಸ್ಪಂದನ ಸಮಾವೇಶ ಮಾಡಿದ್ದಾರೆ. ಪ್ರವಾಹ ಬಂದ್ರೂ ಜಿಲ್ಲಾ ಉಸ್ತುವಾರಿ ಸಚಿವರು ಹೋಗ್ತಿಲ್ಲ. ಇಂತಹ ಕೆಟ್ಟ ಪರಿಸ್ಥಿತಿಗೆ ಬಿಜೆಪಿ ಕಾರಣ. ಅಮೃತ ಮಹೋತ್ಸವದ ಪ್ರತಿಯಾಗಿ ಜನಸ್ಪಂದನ ಸಮಾವೇಶ ಮಾಡುತ್ತಿದ್ದಾರೆ. ನಮ್ಮ ಕಾರ್ಯಕ್ರಮಕ್ಕೆ ಜನರು ತಾವಾಗಿಯೇ ಬಂದಿದ್ದರು. ಬಿಜೆಪಿಯವರ ಕಾರ್ಯಕ್ರಮಕ್ಕೆ ಜನರು ಹಾಗೆ ಬರ್ತಾರಾ? ಎಂದು ಹುಬ್ಬಳ್ಳಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
BJP Janaspandana Program Live: ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ನಿಮ್ಮ ವಿಶ್ವಾಸಕ್ಕೆ ನಾವು ದ್ರೋಹ ಮಾಡಲ್ಲ
ಜನಸ್ಪಂದನ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ರು. ಈ ವೇಳೆ ಅವರು, ದಾಖಲೆಯ ಸಂಖ್ಯೆಯಲ್ಲಿ ಸೇರಿದ್ದಕ್ಕೆ ನಿಮಗೆ ಅಭಿನಂದನೆ. ಇಲ್ಲಿಂದ ಇಡೀ ರಾಜ್ಯಕ್ಕೆ ಕೇಳಿಸುವಂತೆ ಸಂದೇಶ ನೀಡಿದ್ದೇವೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂಬ ಸಂದೇಶ ರವಾನೆ ಆಗುತ್ತೆ. ನೀವು ಇಟ್ಟಿರುವ ವಿಶ್ವಾಸಕ್ಕೆ ನಾವು ದ್ರೋಹ ಮಾಡಲ್ಲ. 2019ರಲ್ಲೇ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಬೇಕಿತ್ತು. ಆದರೆ ಕಾಂಗ್ರೆಸ್ನ ಹುನ್ನಾರದಿಂದ ಅದು ಕೈತಪ್ಪಿತ್ತು. ಕಾಂಗ್ರೆಸ್ನಿಂದ ಬಂದ ಎಲ್ಲ ಶಾಸಕರೂ ವೀರರು. ನಾವು ಸಮರ್ಥವಾಗಿ ಕೊವಿಡ್ ಎದುರಿಸಿದ್ದೇವೆ. ಜನರಿಗೆ ಉಚಿತವಾಗಿ ಕೊವಿಡ್ ಲಸಿಕೆ ನೀಡಿದ್ದೇವೆ. ಕಾಂಗ್ರೆಸ್ನವರು ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಾರೆ. ಅನ್ನಭಾಗ್ಯ ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳ್ತಾರೆ. ಚೀಲದಲ್ಲಿದ್ದ ಅಕ್ಕಿ ಮೋದಿದು, ಚೀಲ ಮಾತ್ರ ನಿಮ್ಮದು. ಅನ್ನಭಾಗ್ಯದಲ್ಲಿ ಅವ್ಯವಹಾರ ಆಯ್ತು. ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ದಂಧೆ ಮಾಡಿದ್ರಿ. ಲ್ಯಾಪ್ಟಾಪ್ ಕೊಡುವುದರಲ್ಲಿ ಹಗರಣ ಮಾಡಿದ್ರಿ ಎಂದು ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
BJP Janaspandana Program Live: ಕಾಂಗ್ರೆಸ್ ಇಂದು ಡಬಲ್ ಡೋರ್ ಬಸ್ ಆಗಿದೆ
ಜನಸ್ಪಂದನ ಸಮಾವೇಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸುಧಾಕರ್ ಮಾತನಾಡಿದ್ದು ಇದು ಯಾವುದೇ ವ್ಯಕ್ತಿಯ ಉತ್ಸವ ಅಲ್ಲ. ಯಾವುದೇ ವ್ಯಕ್ತಿಯನ್ನು ವೈಭವೀಕರಿಸುವ ಉತ್ಸವ ಅಲ್ಲ. ನಾವು ಆರಂಭದಲ್ಲಿ ಜನೋತ್ಸವ ಅಂತಾ ಹೆಸರು ಇರಿಸಿದ್ದು ನಿಜ. ನಮ್ಮದು ವೈಯಕ್ತಿಕ ವೈಭವೀಕರಣ ಅಲ್ಲ. ಜನರ ಉತ್ಸವ ಅಂದರೆ ಏನು ಎಂಬುದನ್ನು ವಿಪಕ್ಷ ಕಾಂಗ್ರೆಸ್ ತಿಳಿದುಕೊಳ್ಳಬೇಕಾಗಿದೆ. ಕಾಂಗ್ರೆಸ್ ನಲ್ಲಿ ಖಾಲಿ ಇಲ್ಲದ ಸಿಎಂ ಕುರ್ಚಿಗೆ ಪೈಪೋಟಿ ಇದೆ. ಕಾಂಗ್ರೆಸ್ ಇಂದು ಡಬಲ್ ಡೋರ್ ಬಸ್ ಆಗಿದೆ. ಮುಂದೆ ಯಾರು ಯಾರನ್ನು ಇಳಿಸುತ್ತಾರೆ ಅಂತಾ ಮುಂದೆ ಗೊತ್ತಾಗುತ್ತದೆ. ಬಯಲುಸೀಮೆಗೆ ಎತ್ತಿನ ಹೊಳೆ ಪ್ರಮುಖ ಯೋಜನೆ. ಕಾಂಗ್ರೆಸ್, ಸಮ್ಮಿಶ್ರ ಸರ್ಕಾರ ಬಂದ ಮೇಲೆ ಎತ್ತಿನಹೊಳೆ ಯೋಜನೆಯ ದಾರಿ ತಪ್ಪಿದೆ, ವೇಗ ಕುಂಠಿತಗೊಂಡಿದೆ. ಕಾಂಗ್ರೆಸ್ ಕಚ್ಚಾಟ ನೋಡಿ ಬಾನಿಗೊಂದು ಎಲ್ಲೆ ಎಲ್ಲಿದೆ ಎಂಬ ಹಾಡು ನೆನಪಾಗುತ್ತಿದೆ ಎಂದರು.
BJP Janaspandana Program Live: 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯ
ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಸಮಾವೇಶದಲ್ಲಿ ಸಚಿವ ಶ್ರೀರಾಮುಲು ಮಾತನಾಡಿದ್ದು ಕಾಂಗ್ರೆಸ್ ನಲ್ಲಿ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಇದೆ. 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯ. ವಿದ್ಯಾ ಸಿರಿ ಯೋಜನೆ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ವ್ಯವಸ್ಥೆ ಮಾಡಿದೆ. ಸಾರಿಗೆ ಇಲಾಖೆಯಲ್ಲಿ ಅನೇಕ ಬದಲಾವಣೆ ತಂದಿದ್ದೇವೆ. ಆದಷ್ಟು ಬೇಗ ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಕೊಡುವ ಕೆಲಸ ಮಾಡುತ್ತೇವೆ. 150 ಸ್ಥಾನಗಳ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.
BJP Janaspandana Program Live: ಸಮಾವೇಶದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಭಾಷಣ
ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಭಾಷಣ ಮಾಡಿದ್ದಾರೆ. ಸುಧಾಕರ್ ಪರಿಶ್ರಮದಿಂದ ಈ ಭಾಗದಲ್ಲಿ ಪಕ್ಷಕ್ಕೆ ಬಲ ಬಂದಿದೆ. ಹೆಚ್ಚಿನ ಸ್ಥಾನಗಳನ್ನ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನನ್ನ ಜೀವನ ಬಹಳ ಸಮಯ ರೈತರಿಗೆ ಮೀಸಲಿಟ್ಟಿದ್ದೇನೆ. ನೇಕಾರರು, ರೈತರಿಗೆ ನಮ್ಮ ಸರ್ಕಾರದಿಂದ ಸಾಕಷ್ಟು ನೆರವು ನೀಡಿದ್ದೇವೆ. ಪ್ರಧಾನಿ ಮೋದಿಯವರಿಂದ ಕ್ರಾಂತಿಕಾರಿ ಬದಲಾವಣೆಯಾಗಿದೆ ಎಂದರು.
BJP Janaspandana Program Live: ಸಮಾವೇಶದ ವೇದಿಕೆಗೆ ಆಗಮಿಸಿದ ಸಚಿವೆ ಸ್ಮೃತಿ ಇರಾನಿ
ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನ ಸ್ಪಂದನ ಸಮಾವೇಶ ವೇದಿಕೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಆಗಮಿಸಿದರು. ಸಮಾವೇಶ ಉದ್ಘಾಟನೆಗೊಂಡ 5 ನಿಮಿಷಗಳ ಬಳಿಕ ವೇದಿಕೆಗೆ ಆಗಮಿಸಿದರು.
BJP Janaspandana Program Live: ಹೆಚ್ಚಿನ ಸ್ಥಾನಗಳನ್ನ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ
ಸುಧಾಕರ್ ಪರಿಶ್ರಮದಿಂದ ಈ ಭಾಗದಲ್ಲಿ ಪಕ್ಷಕ್ಕೆ ಬಲ. ಹೆಚ್ಚಿನ ಸ್ಥಾನಗಳನ್ನ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನನ್ನ ಜೀವನ ಬಹಳ ಸಮಯ ರೈತರಿಗೆ ಮೀಸಲಿಟ್ಟಿದ್ದೇನೆ. ನೇಕಾರರು, ರೈತರಿಗೆ ನಮ್ಮ ಸರ್ಕಾರದಿಂದ ಸಾಕಷ್ಟು ನೆರವು. ಪ್ರಧಾನಿ ಮೋದಿಯವರಿಂದ ಕ್ರಾಂತಿಕಾರಿ ಬದಲಾವಣೆ ಎಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
BJP Janaspandana Program Live: ದಿ.ಉಮೇಶ್ ಕತ್ತಿ, ಪ್ರವೀಣ್ ಭಾವಚಿತ್ರಕ್ಕೆ ಪುಷ್ಪನಮನ
ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಸೇರಿ ಬಿಜೆಪಿ ನಾಯಕರಿಂದ ದಿ.ಉಮೇಶ್ ಕತ್ತಿ, ಪ್ರವೀಣ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
BJP Janaspandana Program Live: ಈ ಕಾರ್ಯಕ್ರಮ ಜನರ ಉತ್ಸವ ಎಂದ ಡಾ.ಕೆ.ಸುಧಾಕರ್
ಇತಿಹಾಸದಲ್ಲಿ ಇಂತಹ ಒಂದು ಸಮಾವೇಶ ನಡೆದಿರಲಿಲ್ಲ. ಪ್ರವೀಣ್ ಹತ್ಯೆಯಾದಾಗ ಕಾರ್ಯಕ್ರಮ ಮುಂದೂಡಿದ್ವಿ. ಈ ಜನಸ್ಪಂದನ ಸಮಾವೇಶ ವ್ಯಕ್ತಿಯ ಉತ್ಸವ ಅಲ್ಲ. ಸರ್ಕಾರದ ಸಾಧನೆ ಅನಾವರಣಗೊಳಿಸುವ ಸಮಾವೇಶ. ಈ ಸಮಾವೇಶ ಯಾವುದೇ ವ್ಯಕ್ತಿಯ ವೈಭವೀಕರಣ ಅಲ್ಲ. 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಲವು ಯೋಜನೆ. ಆ ಯೋಜನೆಗಳ ಅನುದಾನ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಈ ಕಾರ್ಯಕ್ರಮ ಜನರ ಉತ್ಸವ ಎಂದು ಡಾ.ಕೆ.ಸುಧಾಕರ್ ಹೇಳಿದರು.
BJP Janaspandana Program Live: ‘ಜನಸ್ಪಂದನ’ ಸಮಾವೇಶಕ್ಕೆ ಡಿ.ಕೆ.ಶಿವಕುಮಾರ್ ಲೇವಡಿ
3 ವರ್ಷ ಜನರಿಗೆ ಸ್ಪಂದಿಸಿಲ್ಲ ಎಂದು ಈಗ ಸಮಾವೇಶ. ಈಗ ಜನಸ್ಪಂದನ ಸಮಾವೇಶ ಮಾಡಿ ತೋರಿಸುತ್ತಿದ್ದಾರೆ. ನಾವು ನಿಮ್ಮ ಜೊತೆಗಿದ್ದೇವೆಂದು ತೋರಿಸಲು ಸಮಾವೇಶ. ಈ ಬಗ್ಗೆ ನಾನು ಹೆಚ್ಚು ಕಮೆಂಟ್ ಮಾಡಲ್ಲ ಎಂದು ‘ಜನಸ್ಪಂದನ’ ಸಮಾವೇಶಕ್ಕೆ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.
BJP Janaspandana Program Live: ಜನಸ್ಪಂದನ ಸಮಾವೇಶದಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರುತ್ತೆ
ಜನಸ್ಪಂದನ ಸಮಾವೇಶದಿಂದ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ ಎಂದು ಟಿವಿ9ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದರು. ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಪಕ್ಷಕ್ಕೆ ಶಕ್ತಿ ಇರಲಿಲ್ಲ. ಜನಸ್ಪಂದನ ಸಮಾವೇಶದಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರುತ್ತೆ. ಜನಸ್ಪಂದನ ಸಮಾವೇಶಕ್ಕೆ ಕಾಂಗ್ರೆಸ್ ನಾಯಕರ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ವಿರೋಧ ಪಕ್ಷದವರು ಇರುವುದೇ ಟೀಕೆ ಮಾಡುವುದಕ್ಕೆ. ವಿರೋಧ ಪಕ್ಷದಿಂದ ಬೇರೆ ಏನು ನಿರೀಕ್ಷೆ ಮಾಡಲು ಸಾಧ್ಯ ಎಂದು ಹೇಳಿದರು.
BJP Janaspandana Program Live: ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಮಲ ಅರಳಲಿದೆ
ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಮಲ ಅರಳಲಿದೆ ಎಂದು ಟಿವಿ9ಗೆ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದರು. ನಮ್ಮ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡ್ತೇವೆ. ನಮ್ಮದು ಜನರಿಂದ ಜನರಿಗಾಗಿ ನಡೆಯುತ್ತಿರುವ ಸಮಾವೇಶ. ಸಿದ್ದರಾಮೋತ್ಸವ ಬಗ್ಗೆ ಅಬಕಾರಿಯವರನ್ನ ಕೇಳಿದ್ರೆ ಗೊತ್ತಾಗುತ್ತೆ. ಬೆಂಗಳೂರು ಕೆರೆಗಳನ್ನು ನುಂಗಿ ನೀರು ಕುಡಿದವರು ಕಾಂಗ್ರೆಸ್ಸಿಗರು. ಕಾಂಗ್ರೆಸ್ನವರಿಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಈ ಭಾಗದಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಆರ್.ಅಶೋಕ್ ಹೇಳಿದರು.
BJP Janaspandana Program Live: ಸಮಾವೇಶಕ್ಕೆ ಬಂದ ಬಸ್ಗಳಿಂದ ಭಾರಿ ಟ್ರಾಫಿಕ್ ಜಾಮ್
ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶ ಹಿನ್ನೆಲೆ ಬಂದ ಬಸ್ಗಳಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ದೊಡ್ಡಬಳ್ಳಾಪುರದಲ್ಲಿ ಟ್ರಾಫಿಕ್ನಿಂದ ವಾಹನ ಸವಾರರ ಪರದಾಡುವಂತ್ತಾಗಿದೆ. ಆಂಧ್ರದಿಂದ ಬರುವ ಬಸ್ಗಳು, ಕಾರುಗಳು ಟ್ರಾಫಿಕ್ನಲ್ಲಿ ಸಿಲುಕಿವೆ.
BJP Janaspandana Program Live: ಹಿಜಾಬ್ ಧರಿಸಿ ಬಂದ ಮಹಿಳೆಯರು
ಜನಸ್ವಂದನಾ ಸಮಾವೇಶಕ್ಕೆ ಹಿಜಾಬ್ ಧರಿಸಿ ಮಹಿಳೆಯರು ಬರುತ್ತಿದ್ದಾರೆ. ಚಿಕ್ಕಬಳ್ಳಾಪುರ ಕಡೆಯಿಂದ ಹಿಜಾಬ್ ಧರಿಸಿಕೊಂಡು ಗುಂಪು ಗುಂಪಾಗಿ ಮಹಿಳಾ ಮಣಿಯರು ಆಗಮಿಸುತ್ತಿದ್ದಾರೆ. ಬುರ್ಕಾ ಧರಿಸಿ ವೇದಿಕೆ ಮುಂಭಾಗದತ್ತ ಹೆಜ್ಜೆ ಹಾಕುತ್ತಿದ್ದಾರೆ.
BJP Janaspandana Program Live: ‘ಜನಸ್ಪಂದನ’ ಸಮಾವೇಶದ ಕುರಿತು ಶ್ರೀರಾಮುಲು ಮಾತು
ದೊಡ್ಡಬಳ್ಳಾಪುರದಲ್ಲಿ ಟಿವಿ9ಗೆ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದು, ಸರ್ಕಾರದ ಸಾಧನೆಗಳು ಸಾಕಷ್ಟಿವೆ, ಅವನ್ನ ಜನರಿಗೆ ತಿಳಿಸ್ತೇವೆ. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಕಾಂಗ್ರೆಸ್ವನವರು ನಿರಂತರ ಭ್ರಷ್ಟಾಚಾರದಲ್ಲಿ ಮುಳುಗಿದ್ದರು. ಇದಕ್ಕಾಗಿ ಕಾಂಗ್ರೆಸ್ನವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದರು.
BJP Janaspandana Program Live: ಸಮಾವೇಶಕ್ಕೆ ತೆರಳುವ ಮುನ್ನ ದೇವರ ಮೊರೆ ಹೋದ ಸಿಎಂ
ಸಮಾವೇಶಕ್ಕೆ ತೆರಳುವ ಮುನ್ನ ಸಿಎಂ ಬೊಮ್ಮಾಯಿ ದೇವರ ಮೊರೆ ಹೋಗಿದ್ದು, ಪ್ಯಾಲೇಸ್ ರೋಡ್ನಲ್ಲಿರುವ ಭಗವಾನ್ ಶ್ರೀ ಮಾರುತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಿರ್ವಿಜ್ಞವಾಗಿ ಸಮಾವೇಶ ನಡೆಯಲೆಂದು ದೇವರಿಗೆ ಪೂಜೆ ಸಲ್ಲಿಕೆ ಮಾಡಿದ್ದು, ಈ ಹಿಂದೆ ಎರಡು ಬಾರಿ ಜನಸ್ಪಂದನ ಸಮಾವೇಶ ರದ್ದಾಗಿತ್ತು.
BJP Janaspandana Program Live: ಮುಂದಿನ ದಿನಗಳಲ್ಲಿ ದಾಖಲೆ ಮಟ್ಟದಲ್ಲಿ ವಿಜಯ ಸಾಧಿಸ್ತೇವೆ: ಸಿಎಂ ಬೊಮ್ಮಾಯಿ
ಬೆಂಗಳೂರು: ಮುಂದಿನ ದಿನಗಳಲ್ಲಿ ದಾಖಲೆ ಮಟ್ಟದಲ್ಲಿ ವಿಜಯ ಸಾಧಿಸ್ತೇವೆ. ಇದರ ಪ್ರಯುಕ್ತ ಇಂದು ಜನಸ್ಪಂದನ ಸಮಾವೇಶ ಮಾಡ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು. ಈಗಾಗಲೇ ಸಾಕಷ್ಟು ಯೋಜನೆಗಳನ್ನು ಮಾಡಿದ್ದೇವೆ. ಆ ಯೋಜನೆಗಳ ಅನುಷ್ಠಾನದ ಕುರಿತು ಹೇಳಲಾಗುತ್ತದೆ ಎಂದು ಹೇಳಿದರು.
BJP Janaspandana Program Live: ಸಮಾವೇಶದ ಕೊನೆಗೆ ಸಚಿವೆ ಸ್ಮೃತಿ ಇರಾನಿ ಭಾಷಣ
ದೊಡ್ಡಬಳ್ಳಾಪುರದಲ್ಲಿ ಇಂದು ಜನಸ್ಪಂದನ ಸಮಾವೇಶ ನಡೆಯಲಿದ್ದು, ಬೆಳಗ್ಗೆ 11.30ಕ್ಕೆ ಬಿಜೆಪಿ ನಾಯಕರು ಮತ್ತು ಸಚಿವರ ಭಾಷಣ ಆರಂಭವಾಗಲಿದೆ. ಮಧ್ಯಾಹ್ನ 12.50ಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭಾಷಣ ಮಾಡಲಿದ್ದು, ನಂತರ ಮಾಜಿ ಸಿಎಂ ಯಡಿಯೂರಪ್ಪ, ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಲಿದ್ದು, ಸಮಾವೇಶದ ಕೊನೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾಷಣ ಮಾಡಲಿದ್ದಾರೆ.
BJP Janaspandana Program Live: ಜನಸ್ಪಂದನ ಸಮಾವೇಶಕ್ಕೆ ಗೈರಾಗಲಿರುವ 6 ಸಚಿವರು
ಇಂದು ಜನಸ್ಪಂದನ ಸಮಾವೇಶಕ್ಕೆ 6 ಸಚಿವರು ಗೈರಾಗಲಿದ್ದಾರೆ. ವಿ. ಸೋಮಣ್ಣ, ಮುರುಗೇಶ್ ನಿರಾಣಿ, ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಹಾಲಪ್ಪ ಆಚಾರ್ ಮತ್ತು ಶಂಕರ ಪಾಟೀಲ್ ಮುನೇನಕೊಪ್ಪ ಗೈರು.
BJP Janaspandana Program Live: ದಿ. ಉಮೇಶ್ ಕತ್ತಿ ಮತ್ತು ದಿ. ಪ್ರವೀಣ್ ನೆಟ್ಟಾರುಗೆ ಶ್ರದ್ದಾಂಜಲಿ
ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಸಚಿವರಾಗಿದ್ದ ದಿ. ಉಮೇಶ್ ಕತ್ತಿ ಮತ್ತು ಬಿಜೆಪಿ ಕಾರ್ಯಕರ್ತನಾಗಿದ್ದ ದಿ. ಪ್ರವೀಣ್ ನೆಟ್ಟಾರು ಅವರಿಗೆ ಬಿಜೆಪಿ ನಾಯಕರು ಶ್ರದ್ದಾಂಜಲಿ ಸಲ್ಲಿಸಲಿದ್ದಾರೆ.
BJP Janaspandana Program Live: ಕೋಲಾರದಿಂದ ಜನರಿಗಾಗಿ 900 ಬಸ್ಗಳ ವ್ಯವಸ್ಥೆ
ಕೋಲಾರ: ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ಹಿನ್ನೆಲೆ, ಜಿಲ್ಲೆಯ ಆರು ತಾಲ್ಲೂಕುಗಳಿಂದ ಹೊರಡಲಿರುವ ಜನರಿಗಾಗಿ 900 ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಮಾಲೂರಿಂದ 300, ಕೆಜಿಎಫ್ನಿಂದ -150, ಕೋಲಾರ -200, ಮುಳಬಾಗಿಲು 50 ಶ್ರೀನಿವಾಸಪುರ 50 ಬಂಗಾರಪೇಟೆ 150, ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
BJP Janaspandana Program Live: ಸಮಾವೇಶದ ಭದ್ರತೆಗೆ 4 ಜಿಲ್ಲೆಗಳ ಪೊಲೀಸರ ನಿಯೋಜನೆ
ದೊಡ್ಡಬಳ್ಳಾಪುರದಲ್ಲಿ ಇಂದು ಬಿಜೆಪಿ ಜನಸ್ಪಂದನ ಸಮಾವೇಶವಿದ್ದು, ಬೆಂಗಳೂರು ಗ್ರಾ. ಎಸ್ಪಿ ಬಾಲದಂಡಿ ನೇತೃತ್ವದಲ್ಲಿ ಭದ್ರತೆಗೆ 4 ಜಿಲ್ಲೆಗಳ ಪೊಲೀಸರ ನಿಯೋಜನೆ ಮಾಡಲಾಗಿದೆ. ಇಬ್ಬರು ಎಎಸ್ಪಿ, 11 ಡಿವೈಎಸ್ಪಿ, 35 ಇನ್ಸ್ಪೆಕ್ಟರ್ಗಳು, 100 PSI, 150 ಎಎಸ್ಐ, 1200 ಕಾನ್ಸ್ಟೇಬಲ್ಗಳು, ಹೆಚ್ಚುವರಿಯಾಗಿ 400 ಗೃಹ ರಕ್ಷಕ ದಳ ಸಿಬ್ಬಂದಿ, 4 KSRP ತುಕಡಿ, 6 ಡಿಆರ್ ತುಕಡಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
Published On - Sep 10,2022 9:23 AM