ದೇವನಹಳ್ಳಿ: ಇನ್ನೂ ಮಗು ಹುಟ್ಟಿಲ್ಲ, ಈಗಲೇ ಅಧಿಕಾರಕ್ಕಾಗಿ ಕಿತ್ತಾಟ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ (Congress) ಪಕ್ಷದಲ್ಲಿ ಸಿಎಂ ಅಭ್ಯರ್ಥಿಗಾಗಿ ಕಿತ್ತಾಟ ವಿಚಾರವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದರು. ಕಾಂಗ್ರೆಸ್ನವರಿಗೆ ಯಾವ ಶಾಸ್ತ್ರದವರು ಹೇಳಿದ್ದಾರೋ ಗೊತ್ತಿಲ್ಲ. ಅವರಪ್ಪನಾಣೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರಗೆ ಸಚಿವ ಡಾ.ಕೆ.ಸುಧಾಕರ್ಟಾಂಗ್ ಕೊಟ್ಟರು.
ಸಾಯುವತನಕ ನೀವೇ ಸಿಎಂ ಆಗಿರಿ, ಆದರೆ ಜನ ನಿಮ್ಮನ್ನು ಆಯ್ಕೆ ಮಾಡಬೇಕು ಅಲ್ವಾ: ಈಶ್ವರಪ್ಪ
ಇದೇ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಯಾರು ಸಿಎಂ ಆಗ್ಬಾರ್ದು ಅಂತಾ ಹೇಳಿಲ್ಲ. ಸಾಯೋತನಕ ನೀವೆ ಮುಖ್ಯಮಂತ್ರಿ ಆಗಿರೀ. ಜನ ನಿಮ್ಮನ್ನು ಆಯ್ಕೆ ಮಾಡಬೇಕಲ್ವಾ ಎಂದು ಡಿಕೆ ಶಿವಕುಮಾರ ಮತ್ತು ಸಿದ್ದರಾಮಯ್ಯಗೆ ಮಾಜಿ ಸಚಿವ ಈಶ್ವರಪ್ಪ ತಿರುಗೇಟು ನೀಡಿದರು. ನಿಶ್ಚಿತಾರ್ಥ ಆಗಿಲ್ಲ. ಮದುವೆ ಆಗಿಲ್ಲ. ಮಗು ಆಗಿಲ್ಲ, ಆದರೆ, ಇಬ್ಬರೂ ನಾನೇ ಅಪ್ಪ, ನಾನೇ ಅಪ್ಪ ಎಂದು ಹೇಳುತ್ತಿದ್ದಾರೆ. ಫಸ್ಟ್ ಜನ ನಿಮ್ಮನ್ನು ಗುರುತಿಸಿ, ಆಯ್ಕೆ ಮಾಡಲಿ. ನಿಮ್ಮ ಪಾರ್ಟಿ ಅಧಿಕಾರಕ್ಕೆ ತಂದಾಗ ಯಾರು ಮುಖ್ಯಮಂತ್ರಿ ನಂತರ ನೋಡಿ. ಎಲ್ಲಾ ಚುನಾವಣೆ ಸೋತಿದ್ದೀರಿ, ಸರ್ಕಾರ ಕಳೆದುಕೊಂಡಿದ್ದೀರಿ. ಆದರೂ, ನೀವೀಬ್ಬರೂ ಕನಸು ಕಾಣುತ್ತಿದ್ದೀರಿ.
ಮೊದಲು ನೀವು ಸ್ಫರ್ಧಿಸುವ ಕ್ಷೇತ್ರ ಯಾವುದು, ಕ್ಷೇತ್ರ ತೀರ್ಮಾನ ಮಾಡಿದ್ರೂ, ಅಲ್ಲಿನ ಜನ ಒಪ್ಪುತ್ತಾರಾ ಗೇಲ್ತಿರಾ ಸೋಲ್ತಿರಾ ಅದನ್ನ ಯೋಚಿಸಿ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದೇ ನಾನೇ ಸಿಎಂ ಎನ್ನುತ್ತಿದ್ದೀರಿ ಎಂದು ಹೇಳಿದರು. ಒಕ್ಕಲಿಗರೆಲ್ಲಾ ನನ್ ಜೊತೆ ನಿಂತುಕೊಳ್ಳಿ ಎಂದು ಡಿಕೆ ಶಿವಕುಮಾರ ಹೇಳುತ್ತಾರೆ. ಜಾತಿವಾದಿ ಪಕ್ಷ, ಜಾತಿ ಮೇಲೆ ಸಿಎಂ ಆಗೋಕೆ ಕೇಳ್ತಾರಲ್ಲಾ ನಾಚಿಕೆಯಾಗಬೇಕು. ಸಿದ್ದರಾಮಯ್ಯ ಬಿಡಿ ಅವರು ಜಾತಿವಾದಿನೇ. ಎಷ್ಟು ಬೈದ್ರೂ ಅಷ್ಟೇ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಕಾಂಗ್ರೆಸ್ನವರಿಗೆ ಸೋನಿಯಾ ಚಿಂತೆ, ಬಿಜೆಪಿಯವರಿಗೆ ಮೋದಿ ಚಿಂತೆ: ಇಬ್ರಾಹಿಂ
ಕಾಂಗ್ರೆಸ್ನವರಿಗೆ ಸೋನಿಯಾ ಚಿಂತೆಯಾದರೇ, ಬಿಜೆಪಿಯವರಿಗೆ ಮೋದಿ ಚಿಂತೆ. ಆದರೆ ಜೆಡಿಎಸ್ಗೆ ರೈತರು ಮತ್ತು ಕನ್ನಡ ನಾಡಿನ ಚಿಂತೆ ಎಂದು ರಾಮನಗರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದರು. ಮುಂದಿನ ಉತ್ಸವಕ್ಕೆ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿ ಬರುತ್ತಾರೆ. ಸಾಬರು ಹೇಳುವ ಮಾತು ಎಂದೂ ಸುಳ್ಳು ಆಗುವುದಿಲ್ಲ. ಕಾಂಗ್ರೆಸ್ ಪಕ್ಷದವರು ವ್ಯಕ್ತಿಯ ಉತ್ಸವ ಮಾಡುತ್ತಿದ್ದಾರೆ. ಆದರೆ ಹೆಚ್.ಡಿ.ಕುಮಾರಸ್ವಾಮಿಯವರು ಜಲೋತ್ಸವ ಮಾಡಿದರು ಎಂದು ಹೇಳಿದರು.