ಬೆಂಗಳೂರಿನ ಆನೇಕಲ್​ ಬಳಿ ಮತ್ತೊಂದು ಅಗ್ನಿ ಅವಘಡ: ಮನೆಯ ಸಿಲಿಂಡರ್​ ಸ್ಫೋಟ

| Updated By: ವಿವೇಕ ಬಿರಾದಾರ

Updated on: Nov 03, 2023 | 11:16 AM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಪಾಟಾಕಿ ಗೋಡೌನ್​​ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಇದು ಮಾಸುವ ಮುನ್ನೆವೇ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಆನೇಕಲ್​ ಬಳಿಯ ಬನ್ನೇರುಘಟ್ಟದ ಸುದರ್ಶನ್​ ಲೇಔಟ್​ನ ಮನೆಯೊಂದರಲ್ಲಿನ ಸಿಲಿಂಡರ್​ ಸ್ಫೋಟಗೊಂಡಿದೆ.

ಬೆಂಗಳೂರಿನ ಆನೇಕಲ್​ ಬಳಿ ಮತ್ತೊಂದು ಅಗ್ನಿ ಅವಘಡ: ಮನೆಯ ಸಿಲಿಂಡರ್​ ಸ್ಫೋಟ
ಸ್ಪೋಟಗೊಂಡಿರುವ ಸಿಲಿಂಡರ್​
Follow us on

ಆನೇಕಲ್ ನ.03: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ಆನೇಕಲ್​ ಬಳಿಯ ಬನ್ನೇರುಘಟ್ಟದ (Bannerghatta) ಸುದರ್ಶನ್​ ಲೇಔಟ್​ನ ಮನೆಯೊಂದರಲ್ಲಿನ ಸಿಲಿಂಡರ್​ (Cylinder) ಸ್ಫೋಟಗೊಂಡು ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜೇಂದ್ರ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪೋಟ ಸಂಭವಿಸಿದ ಮನೆಯಲ್ಲಿ ರಾಜೇಂದ್ರ ಹಾಗೂ ಮಗಳು ಇದ್ದರು. ರಾಜೇಂದ್ರ ಎಂದಿನಂತೆ ಇಂದು (ನ.03) ಬೆಳಿಗ್ಗೆ 5 ಗಂಟೆಗೆ ಸಿಲಿಂಡರ್ ಆನ್ ಮಾಡಲು ಹೋಗಿದ್ದರು. ಈ ವೇಳೆ ಏಕಾಏಕಿ ಸಿಲಿಂಡರ್ ಸ್ಪೋಟಗೊಂಡಿದೆ. ಸ್ಪೋಟದಿಂದಾಗಿ ರಾಜೆಂದ್ರ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ 3-4 ಮನೆಗಳಿಗೂ ಹಾನಿಯಾಗಿದೆ. ಅಕ್ಕಪಕ್ಕ ಮನೆಯ ಬಾಗಿಲು, ಡೋರ್ ಹಾಗೂ ಮನೆಯಲ್ಲಿದ್ದ ವಸ್ತುಗಳೆಲ್ಲ ಛಿದ್ರ ಛಿದ್ರ ಆಗಿವೆ. ಮನೆಯ ಮುಂಭಾಗ ನಿಲ್ಲಿಸಿದ್ದ ಕಾರು ಹಾಗೂ ಬೈಕ್​​ಗಳಿಗೂ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣಾ ಸಿಬ್ಬಂದಿ, ಬನ್ನೇರುಘಟ್ಟ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಗ್ಯಾಸ್​ ಸಿಲಿಂಡರ್ ಸ್ಫೋಟ; ಶಿಕ್ಷಕರು ಸೇರಿ ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಮುಂಜಾನೆ 5:30 ರ ಸುಮಾರಿಗೆ ಸ್ಪೋಟದ ಶಬ್ದ ಕೇಳಿಸಿತು. ಬಾಡಿಗೆಗೆ ನೀಡಿದ್ದ ಮನೆಯಲ್ಲಿ ಸ್ಪೋಟ ಸಂಭವಿಸಿದೆ. ಸ್ಪೋಟದ ಶಬ್ದಕ್ಕೆ ಮನೆಯ ಕಿಟಕಿ ಬಾಗಿಲುಗಳು ಛಿದ್ರವಾಗಿವೆ. ಅಕ್ಕಪಕ್ಕದ ಮನೆಯ ಬಾಗಿಲು ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಅಕ್ಕಪಕ್ಕದ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ತಾರಸಿ ಸಿಮೆಂಟ್ ತಗಡಿನ ಶೀಟುಗಳು ಧ್ವಂಸವಾಗಿವೆ. ರಾಜೇಂದ್ರ ಕುಟುಂಬ ಆರು ತಿಂಗಳ ಹಿಂದೆ ಬಾಡಿಗೆಗೆ ಬಂದಿದೆ. ರಾಜೇಂದ್ರ ಬನ್ನೇರುಘಟ್ಟ ಪಾರ್ಕ್​ನಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದಾರೆ. ಮಗಳು, ಅಳಿಯ ರಾಜೇಂದ್ರ ಜೊತೆ ವಾಸವಾಗಿದ್ದಾರೆ. ಘಟನೆ ನಡೆದಾಗ ತಂದೆ ಮಗಳು ಮಾತ್ರ ಇದ್ದರು ಎಂದು ಮನೆ ಮಾಲೀಕ ಶಿವಕುಮಾರ್ ಹೇಳಿದರು.

ಆನೆಕಲ್​ ತಾಲೂಕಿನ ಅತ್ತಿಬೆಲೆ ಪಟಾಕಿ ಅಗ್ನಿ ದುರಂತ

ಅಕ್ಟೋಬರ್​ 8 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಲಾರಿಯಿಂದ ಪಟಾಕಿ ಅನ್​ಲೋಡ್ ಮಾಡುವಾಗ ಆಕಸ್ಮಿಕ ಬೆಂಕಿ ತಗುಲಿ ಪಟಾಕಿ ಅಂಗಡಿ ಹೊತ್ತಿ ಉರಿದಿತ್ತು. ಅವಘಡದಿಂದ 17 ಜನರು ಮೃತಪಟ್ಟಿದ್ದರು. ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿ ಅಗ್ನಿಗಾಹುತಿಯಾಗಿತ್ತು. 1 ಕ್ಯಾಂಟ್ರೋ, 2 ಬೊಲೆರೋ, 7 ಬೈಕ್​ಗಳು ಸಹ ಬೆಂಕಿಗಾಹುತಿ ಆಗಿದ್ದವು. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು.

ಸಿಲಿಂಡರ್​ ಸ್ಪೋಟಗೊಂಡು ಪಬ್​​ನಲ್ಲಿ ಬೆಂಕಿ

ಅಕ್ಟೋಬರ್ 18 ರಂದು ಬೆಂಗಳೂರು ನಗರದ ಕೊರಮಂಗಲದ ಫೋರಂ ಮಾಲ್ ಮುಂಭಾಗದಲ್ಲಿರುವ ಮಾರುತಿ ಕಾರು ಷೋ ರೂಂನ ನಾಲ್ಕನೇ ಮಹಡಿಯಲ್ಲಿದ್ದ ಮಡ್ ಪೈಪ್ ಹುಕ್ಕಾ ಕೆಫೆನಲ್ಲಿದ್ದ ಕಟ್ಟಡದಲ್ಲಿದ್ದ 8 ರಿಂದ 10 ಸಿಲಿಂಡರ್​ಗಳು ಸ್ಫೋಟಗೊಂಡಿದ್ದವು. ಪ್ರಾಣ ಉಳಿಸಿಕೊಳ್ಳಲು ಪ್ರೇಮ್​ ಎಂಬುವರು ನಾಲ್ಕನೇ ಮಹಡಿಯಿಂದ ಗಿಡದ ಮೇಲೆ ಜಿಗಿದಿದ್ದರು. ಅವರಿಗೆ ಗಾಯಗಳಾಗಿದ್ದು, ನಿಮ್ಹಾನ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಕ್ಕದ ಕಟ್ಟಡಕ್ಕೂ ಬೆಂಕಿ ಹರಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:01 am, Fri, 3 November 23