ದೇವನಹಳ್ಳಿ, ನವೆಂಬರ್ 17: ಅಹಾರ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಅವರು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರದಲ್ಲಿಯೇ ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದೆ ಪರದಾಡುವಂತಾಗಿದೆ. ಪರಿಣಾಮವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ (Devanahalli) ತಾಲೂಕಿನ ಗೋಕರೆ ಗ್ರಾಮದಲ್ಲಿ ಒಂದು ಕುಟುಂಬದವರು ರಾತ್ರಿಯಿಂದ ಶವವನ್ನು ಮನೆ ಮುಂದಿಟ್ಟುಕೊಂಡು ಕೂರುವಂತಾಗಿದೆ. ಗ್ರಾಮದ ಜಯಚಂದ್ರ (34) ಎಂಬವರು ಗುರುವಾರ ಸಂಜೆ ಮೃತಪಟ್ಟಿದ್ದರು. ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು.
ಗ್ರಾಮದ ದಲಿತರು ಈ ಹಿಂದಿನಿಂದ ಕೆರೆಯಂಗಳದಲ್ಲಿ ಅಂತ್ಯಸಂಸ್ಕಾರ ಮಾಡಿಕೊಂಡು ಬರ್ತಿದ್ದರು. ಆದರೆ, ಇದೀಗ ಕೆರೆಯಂಗಳ ನೀರಿನಿಂದ ಮುಳುಗಡೆಯಾದ ಹಿನ್ನೆಲೆ ಬೇರೆಡೆ ಜಾಗವಿಲ್ಲದೆ ಪರದಾಡುವಂತಾಗಿದೆ.
ಈ ಮಧ್ಯೆ, ಸ್ಮಶಾನಕ್ಕೆ ಭೂಮಿ ನೀಡುವಂತೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಿನಿಂದ ಎರಡು ಮೂರು ಕಡೆ ಭೂಮಿ ತೋರಿಸಿ ನಂತರ ಅಧಿಕಾರಿಗಳೇ ತಡೆಯೊಡ್ಡಿದ್ದಾರೆ. ಹೀಗಾಗಿ ಅಂತ್ಯಸಂಸ್ಕಾರದ ಭೂಮಿಗಾಗಿ ಕುಟುಂಬಸ್ಥರು ಕಾದು ಕುಳಿತಿದ್ದಾರೆ. ಸಾವಿನ ನೋವಿನ ಜೊತೆಗೆ ಅಂತ್ಯ ಸಂಸ್ಕಾರಕ್ಕೂ ಜಾಗವಿಲ್ಲ ಅಂತ ಕುಟುಂಬಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಐದು ವರ್ಷದಿಂದ ನೆನೆಗುಂದಿಗೆ ಬಿದ್ದ ಏರ್ಪೋಟ್ ಪರ್ಯಾಯ ರಸ್ತೆ: ರಸ್ತೆ ಕಾಮಗಾರಿ ಮುಗಿಸದ ಅಧಿಕಾರಿಗಳಿಗೆ ಗ್ರಾಮಸ್ಥರ ತರಾಟೆ
ದೇವನಹಳ್ಳಿಯಲ್ಲಿ ಅಭಿವೃದ್ಧಿಚಟುವಟಿಕೆಗಳಾಗದಿರುವ ಬಗ್ಗೆ, ಮೂಲಸೌಕರ್ಯ ಕೊರತೆ ಬಗ್ಗೆ ಈ ಹಿಂದೆಯೂ ಹಲವು ಬಾರಿ ಜನ ಪ್ರತಿಭಟನೆ ನಡೆಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಿಲ್ಕ್ ಬೋರ್ಡ್ ಕಡೆಯಿಂದ ಕೆಂಪೇಗೌಡ ಏರ್ಪೋಟ್ ಸಂಪರ್ಕ ಕಲ್ಪಿಸೋ ಪರ್ಯಾಯ ರಸ್ತೆಗೆ ಐದು ವರ್ಷಗಳ ಹಿಂದೆಯೇ ಸರ್ಕಾರ ಕೋಟ್ಯಂತರ ರೂ. ಹಣ ಬಿಡುಗಡೆ ಮಾಡಿದ್ದರೂ ಕಾಮಗಾರಿ ಪೂರ್ಣವಾಗದ ಬಗ್ಗೆ ಕೆಲ ದಿನಗಳ ಹಿಂದೆ ದೇವನಹಳ್ಳಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಚಿವರ ಜಿಲ್ಲೆಯಲ್ಲೇ ಈ ರೀತಿ ಆಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ