ದೊಡ್ಡಬಳ್ಳಾಪುರ : ಇತಿಹಾಸ ಪ್ರಸಿದ್ಧ ಕನಸವಾಡಿಯ ಶನಿಮಹಾತ್ಮ ದೇವಸ್ಥಾನಕ್ಕೆ ಶನಿವಾರ(ಮಾರ್ಚ್ 11) ಗುಲಾಬಿ ಹೂವಿನ ಹಾರದಲ್ಲಿ ಮಾಂಸದ ತುಂಡು ಪೋಣಿಸಿಕೊಂಡು ತಂದಿದ್ದ ಇಬ್ಬರನ್ನು ದೇವಾಲಯದ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ದೇವಸ್ಥಾನಕ್ಕೆ ಮಾಂಸದ ಹಾರ ತರಲಾಗಿತ್ತು. ಸದ್ಯ ಈಗ ಕಿಡಿಗೇಡಿಗಳನ್ನು ಹಿಡಿದು ದೊಡ್ಡಬೆಳವಂಗಲ ಪೊಲೀಸರಿಗೆ ಒಪ್ಪಿಸಲಾಗಿದೆ. ಹೊಸಕೋಟೆಯ ಕುಂಬಲಹಳ್ಳಿಯ ರಾಜು, ವೈಟ್ ಫೀಲ್ಡ್ ಮೂಲದ ಸೋಮಶೇಖರ್ ಬಂಧಿತ ಕಿಡಿಗೇಡಿಗಳು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯ ಶನಿಮಹಾತ್ಮ ದೇವಸ್ಥಾನದಲ್ಲಿ ಮಾಂಸದ ಹಾರ ಇಟ್ಟು ಎಸ್ಕೇಪ್ ಆಗಲು ರಾಜು ಮತ್ತು ಸೋಮಶೇಖರ್ ಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ದೇವಾಲಯಕ್ಕೆ ಕೆಟ್ಟ ಹೆಸರು ತರಲು ಕೆಲವರು ಷಡ್ಯಂತ್ರ ರೂಪಿಸಿದ್ದು ಮೂರು ಸಾವಿರ ಹಣಕ್ಕೆ ಆಸೆಪಟ್ಟು ಮಾಂಸದ ಹಾರ ತಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಹಣಕೊಟ್ಟು ಮಾಂಸದ ಹಾರ ಕಳಿಸಿ ದೇವಾಲಯ ಅಪವಿತ್ರ ಮಾಡಿಸುವ ಹುನ್ನಾರ ನಡೆದಿದೆ. ಹಣ ಕೊಟ್ಟು ಮಾಂಸದ ಹಾರ ಕಳಿಸಿದವರು ಯಾರು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಕೂಡ ಕಿಡಿಗೇಡಿಗಳು ಇದೇ ರೀತಿ ಮಾಂಸದ ಹಾರವನ್ನು ದೇವಸ್ಥಾನಕ್ಕೆ ತಂದಿದ್ದರು. ಅಂದು ಮಧ್ಯಾಹ್ನ ಆಗಿದ್ದರಿಂದ ದೇವಾಲಯದ ಸಿಬ್ಬಂದಿ ಹೂವಿನ ಹಾರದ ಪ್ಲಾಸ್ಟಿಕ್ ಕವರ್ ಬಾಗಿಲಿನಲ್ಲೇ ಪಡೆದು ಸಂಜೆಯ ಅಲಂಕಾರಕ್ಕೆ ಬಳಸಲಾಗುವುದು ಎಂದು ಹೇಳಿ ಕಿಡಿಗೇಡಿಗಳನ್ನು ಕಳುಹಿಸಿದ್ದರು. ಸಂಜೆ ಕವರ್ ತೆಗೆದಾಗ ಹಾರದಲ್ಲಿ ಮಾಂಸದ ತುಂಡು ಪತ್ತೆಯಾಗಿತ್ತು. ಆರೋಪಿಗಳು ದೇವಾಲಯಕ್ಕೆ ಬಂದು ಹೋಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ದೇವಾಲಯದ ಸಿಬ್ಬಂದಿ ಆರೋಪಿಗಳಿಗಾಗಿ ಕಾಯುತ್ತಿದ್ದರು. ದೊಡ್ಡಬೆಳವಂಗಲ ಪೊಲೀಸರೂ ಹುಡುಕಾಟ ನಡೆಸಿದ್ದರು. ಆದರೆ, ಆರೋಪಿಗಳು ಪತ್ತೆಯಾಗಿರಲಿಲ್ಲ. ಇದೇ ಆರೋಪಿಗಳು ಶನಿವಾರ ದೇವಾಲಯಕ್ಕೆ ಹಾರ ಕೊಡಲು ಬಂದಾಗ ದೇವಾಲಯದ ಸಿಬ್ಬಂದಿ ಅವರನ್ನು ಗುರುತಿಸಿ, ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:18 pm, Sun, 12 March 23