ನೆಲಮಂಗಲ: ಎಣ್ಣೆ ನಶೆಯಲ್ಲಿ ತಮಾಷೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

ಮದ್ಯದ ನಶೆಯಲ್ಲಿದ್ದ ತಾಯಿಯೊಂದಿಗೆ ತಮಾಷೆ ಮಾಡಲು ಹೋಗಿ ಯುವಕನೋರ್ವ ನೆಲಮಂಗಲದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಹಣ ಕೊಡದಿದ್ದಾಗ ಆತ್ಮಹತ್ಯೆ ಬೆದರಿಕೆ ಹಾಕಿದ್ದ ಆತ, ನೇಣಿನ ಕುಣಿಕೆಗೆ ಸಿಲುಕಿ ಅಕಸ್ಮಿಕವಾಗಿ ಮೃತಪಟ್ಟಿದ್ದಾನೆ. ಈ ಹಿಂದೆಯೂ ಇದೇ ರೀತಿ ಆತ ಕುಟುಂಬಸ್ಥರ ಜೊತೆ ತಮಾಷೆ ಮಾಡಿದ್ದ. ಆ ವೇಳೆ ತಾಯಿ ಬುದ್ಧಿ ಹೇಳಿದ್ದರೂ ಚಾಳಿ ಮುಂದುವರಿಸಿದ್ದ ಎನ್ನಲಾಗಿದೆ. ಮಗನ ಹುಚ್ಚಾಟದ ಕಾರಣ ಆತನ ಮದುವೆ ಬಗ್ಗೆ ಯೋಚಿಸಿದ್ದ ತಾಯಿ ಈಗ ಜಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ನೆಲಮಂಗಲ: ಎಣ್ಣೆ ನಶೆಯಲ್ಲಿ ತಮಾಷೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ
ಮೃತ ವಿಜಯ್​​ಕುಮಾರ್​​

Updated on: Dec 31, 2025 | 3:01 PM

ನೆಲಮಂಗಲ, ಡಿಸೆಂಬರ್​​ 31: ಮದ್ಯದ ನಶೆಯಲ್ಲಿ ತಾಯಿಯ ಜೊತೆ ತಮಾಷೆ ಮಾಡಲು ಹೋಗಿ ನೇಣಿಗೆ ಸಿಲುಕಿ ಯುವಕನೋರ್ವ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರೋಹಿತ್​​ ನಗರದಲ್ಲಿ ನಡೆದಿದೆ. ವಿಜಯಕುಮಾರ್(28) ಮೃತ ದುರ್ದೈವಿಯಾಗಿದ್ದು, ಮಗನ ಹುಚ್ಚಾಟಕ್ಕೆ ತಾಯಿ ಹಾಗೂ ಸಂಬಂಧಿಕರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ನಿನ್ನೆ ಸಂಜೆ ಮದ್ಯ ಸೇವಿಸಿ ಮನೆಗೆ ತೆರಳಿದ್ದ ವಿಜಯ್ ಕುಮಾರ್ ತಾಯಿ ಬಳಿ ಖರ್ಚಿಗೆ ಹಣ ನೀಡುವಂತೆ ಕೇಳಿದ್ದ. ಈ ವೇಳೆ ಆಕೆ ಕೊಡಲ್ಲ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಬೆದರಿಕೆ ಹಾಕಿದ್ದ. ಬಳಿಕ ತಮಾಷೆ ಮಾಡಲು ಹೋಗಿ ನೇಣಿನ ಕುಣಿಕೆಗೆ ಸಿಲುಕಿ ವಿಜಯ್ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ 8 ಗಂಟೆಗೆ ಘಟನೆ ನಡೆದಿದ್ದು, ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ನೆಲಮಂಗಲ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: ಲಿಫ್ಟ್​ ಕೊಡುವುದಾಗಿ ಹತ್ತಿಸಿಕೊಂಡು ಕಾರಿನಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಇದೇ ರೀತಿ ಹಿಂದೆಯೂ ತಮಾಷೆ ಮಾಡಿದ್ದ ವಿಜಯ್​​

ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದ ವಿಜಯ್​​ಕುಮಾರ್​​ಗೆ ಮದುವೆ ಮಾಡಬೇಕೆಂದು ತಾಯಿ ಕನಸು ಕಂಡಿದ್ದರು. ಚೆನ್ನಾಗಿ ಮಾತನಾಡುತ್ತಾ ತಮಾಷೆಯ ಸ್ವಾಭಾವ ಹೊಂದಿದ್ದ ವಿಜಯ್​​ ಮದ್ಯಪಾನ ಮಾಡಿ ಬಂದಿದ್ದಕ್ಕೆ ತಾಯಿ ಬೈದಿದ್ದರು. ಆ ವೇಳೆ ಆಕೆಯನ್ನು ತಮಾಷೆಗೆ ಹೆದರಿಸಲು ಹೋಗಿ ವಿಜಯ್​​ ನೇಣಿನ ಕುಣಿಕೆಗೆ ಸಿಲುಕಿದ್ದು, ಮನೆಯವರಿಗೆ ಇದು ಗಮನಕ್ಕೆ ಬರುವಷ್ಟರಲ್ಲಿ ಆತನ​​ ಪ್ರಾಣಪಕ್ಷಿ ಹಾರಿ ಹೋಗಿತ್ತು. ಹೆತ್ತವರ ಬಳಿ ಇದೇ ರೀತಿ ಹಲವು ಬಾರಿ ಈತ ತಮಾಷೆ ಮಾಡಿದ್ದು, ಸಾವಿನ ವಿಚಾರದಲ್ಲಿ ತಮಾಷೆ ಮಾಡಬೇಡ ಕಣೋ ಎಂದು ಹಲವು ಬಾರಿ ತಾಯಿಯೂ ವಿಜಯ್​​ಗೆ ಬುದ್ಧಿ ಹೇಳಿದ್ದರು. ಆದರೂ ಅದೇ ಚಾಳಿ ಮುಂದುವರಿಸಿದ್ದ ಕಾರಣ ಈಗ ಮಗ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಎಂದು ಕುಟುಂಬಸ್ಥರು ಅಲವತ್ತುಕೊಂಡಿದ್ದಾರೆ.

ವರದಿ: ಮಂಜುನಾಥ್​​, ಡಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.