ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಎಂದರೆ ಅಬ್ಬ ಅದೇನು ಕಟ್ಟಡಗಳು, ಅದೇನು ಕ್ಲೀನ್ ಸಿಟಿ ಎಂದು ಮಾತಾಡುತ್ತೇವೆ. ಆದರೆ ಇದೇ ಬಡಾವಣೆಯ ಬಹುತೇಕ ಏರಿಯಾಗಳಲ್ಲಿ ವಿದ್ಯುತ್ ಕಂಬಗಳು ವಾಲಿ ಜನರಿಗೆ ಭಯ ಹುಟ್ಟಿಸಿವೆ. ಬೆಸ್ಕಾಂಗೆ ಈ ಬಗ್ಗೆ ಮಾಹಿತಿ ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಆನೇಕಲ್ ತಾಲೂಕಿನ ಬಹುತೇಕ ಬಡಾವಣೆಗಳ ಕಥೆ ಇಂತಹದ್ದೆ ಆಗಿದೆ. ಹೈ ಟೆನ್ಷನ್ ವಯರ್ಗೆ ಗಿಡದ ಬಳ್ಳಿ ಬೆಳೆದರೂ ಈ ಬಗ್ಗೆ ಗಮನಹರಿಸುವವರೆ ಇಲ್ಲದಂತಾಗಿದೆ. ಇಷ್ಟೇ ಅಲ್ಲದೆ ಹೆಬ್ಬಗೋಡಿ ಅನಂತನಗರದಲ್ಲಿ ಅನೇಕ ಕಡೆಯ ಕಂಬಗಳು ನಿಯಂತ್ರಣ ತಪ್ಪಿ ಭೂಮಿ ಕಡೆ ವಾಲಿವೆ. ಕೆಲವು ಕಂಬಗಳ ಬುಡದಲ್ಲಿ ಕಸದ ರಾಶಿ ಹಾಕಲಾಗಿದೆ. ಅರ್ಧಂಬರ್ಧ ಕನೆಕ್ಷನ್ ಕೊಟ್ಟು ಕಟ್ ಮಾಡಿದ ವಯರ್ಗಳು ಪ್ರಾಣ ಹಾನಿಗೆ ಸಂಚು ಹೂಡಿದಂತೆ ಗೋಚರಿಸುತ್ತಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಆನೇಕಲ್ ವ್ಯಾಪ್ತಿಗೆ ಒಳಪಡುವ ಅನೇಕ ಕಡೆ ವಿದ್ಯುತ್ ಹರಿದು ಅವಘಡಗಳು ನಡೆದು ಹೋಗಿವೆ. ಅದರಲ್ಲು ಈಗ ಮಳೆಗಾಲದ ಸಮಯ ಇಂಥ ಸಂದರ್ಭದಲ್ಲಾದರೂ ಸಾರ್ವಜನಿಕರಿಗೆ ರಕ್ಷಣೆ ಇರುವ ಹಾಗೆ ಕಂಬಗಳಿಂದ ನೇತಾಡುತ್ತಿರುವ ವಯರ್ ಹಾಗೂ ವಾಲಿರುವ ಕಂಬಗಳ ದುರಸ್ತಿ ಮಾಡಬಾರದಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಬೆಸ್ಕಾಂ ಅಧಿಕಾರಿ ರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇಂಥ ಕೆಲವು ಸಮಸ್ಯೆಗಳು ಗಮನಕ್ಕೆ ಬಂದಿದೆ. ಕೂಡಲೇ ಸಮಸ್ತೆಯನ್ನು ಬಗೆ ಹರಿಸುತ್ತೇವೆ ಎಂದು ತಿಳಿಸಿದ್ದಾರೆ.
ಆನೇಕಲ್ ತಾಲೂಕಿನ ಅನಂತನಗರದಲ್ಲಿ ಪ್ರತಿದಿನ ಒಂದಿಲ್ಲೊಂದು ಸಮಸ್ಯೆಯಿಂದ ಗಂಟೆಗಳ ಕಾಲ ವಿದ್ಯುತ್ ಕಡಿತ ಆಗುತ್ತಲೇ ಇರುತ್ತದೆ. ಈಗೇನೋ 8ನೇ ತರಗತಿಗೆ ಮೇಲ್ಪಟ್ಟ ಮಕ್ಕಳಿಗೆ ಶಾಲೆ ಪ್ರಾರಂಭ ಆಗಿದೆ. ಆದರೆ ಆನ್ಲೈನ್ ಕ್ಲಾಸ್ ಇರುವ ಮಕ್ಕಳು ಏನು ಮಾಡಬೇಕು ಎನ್ನುವುದು ಸಾರ್ವಜನಿಕ ವಲಯದಲ್ಲಿರುವ ಪ್ರಮುಖ ಪ್ರಶ್ನೆಯಾಗಿದೆ. ಇನ್ನಾದರು ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಿದೆ.
ವರದಿ: ಸೈಯ್ಯದ್ ನಿಜಾಮುದ್ದೀನ್
ಇದನ್ನೂ ಓದಿ:
ತಿಂಗಳಿಗೆ 20,401 ರೂಪಾಯಿ ವಿದ್ಯುತ್ ಬಿಲ್; ತುಮಕೂರಿನ ವ್ಯಕ್ತಿಗೆ ಬಿಲ್ ಮೂಲಕವೇ ಶಾಕ್ ಕೊಟ್ಟ ಬೆಸ್ಕಾಂ
ಖಾಸಗಿ ಬಸ್ಗೆ ವಿದ್ಯುತ್ ತಂತಿ ತಗುಲಿ ದುರಂತ: ಐವರು ಪ್ರಯಾಣಿಕರು ಸ್ಥಳದಲ್ಲೇ ಸಾವು