ದೇವನಹಳ್ಳಿ: ಸಾಕಷ್ಟು ವರ್ಷಗಳಿಂದ ಜಮೀನಿನಲ್ಲಿ ಕೃಷಿ ಮಾಡುತ್ತಾ ದೇವನಹಳ್ಳಿಯ ರೈತರು ನೆಮ್ಮದಿಯ ಜೀವನ ರೂಪಿಸಿಕೊಂಡಿದ್ದರು. ಆದರೆ ಕಳೆದ ಒಂದು ದಶಕದಿಂದೇಚೆಗೆ ಶುರುವಾದ ಅದೊಂದು ಗಣಿ ಭೂತ ಹಲವು ದಶಕಗಳಿಂದ ಮಾಡಿಕೊಂಡು ಬಂದಿದ್ದ ಕೃಷಿಗೆ ಪೆಟ್ಟು ನೀಡಿದ್ದು, ಹಲವು ಬಾರಿ ನ್ಯಾಯಕ್ಕಾಗಿ ಅಧಿಕಾರಿಗಳ ಸುತ್ತಾ ಸುತ್ತಾಡಿದ ರೈತರು ಇದೀಗ ದಯಾಮರಣದ ಹಾದಿ ಹಿಡಿದಿದ್ದಾರೆ.
ಭೂಮಿಯ ಗರ್ಭದ ವರೆಗೂ ಕಣ್ಣಾಯಿಸಿದಷ್ಟು ದೂರ ಕಾಣಿಸುತ್ತಿರುವ ಈ ಗಣಿ ಪ್ರದೇಶವಿರುವುದು ಯಾವುದೋ ದೂರದ ಕುಗ್ರಾಮದ ಬಳಿಯಲ್ಲ, ಬದಲಾಗಿ ಬೆಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣವಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳೀ ತಾಲೂಕಿನ ತೈಲಗೆರೆ ಬಳಿ. ಹೌದು ತೈಲಗೆರೆಯ ಸರ್ವೆ ನಂಬರ್ 110 ರಲ್ಲಿ ಕಳೆದ ಹಲವು ವರ್ಷಗಳಿಂದ ಕಲ್ಲು ಗಣಿಗಾರಿಕೆಯದ್ದೆ ಸದ್ದು ಹೆಚ್ಚಾಗಿದ್ದು, ರೈತರು ಸಾರ್ವಜನಿಕರು ಗ್ರಾಮಗಳನ್ನು ತೋರೆಯುವಂತಹ ದುಸ್ಥಿತಿ ನಿರ್ಮಾಣವಾಗಿದೆ.
ತೈಲಗೆರೆ ಸರ್ವೆ ನಂಬರ್ಗಳಲ್ಲಿ ಮೂರು ನಾಲ್ಕು ಕಡೆ ತಲೆ ಎತ್ತಿರುವ ಕ್ರಷರ್ ಮತ್ತು ಕಲ್ಲು ಗಣಿಗಾರಿಕೆಯ ಕ್ವಾರಿಗಳು ಹಲವು ವರ್ಷಗಳಿಂದ ಕೃಷಿ ಮಾಡಿ ಜೀವನ ಮಾಡುತ್ತಿದ್ದ ಅನ್ನದಾತರ ಜೀವನವನ್ನು ಬರಿದಾಗುವಂತೆ ಮಾಡಿದೆ. ಗಣಿಗಾರಿಕೆಯಲ್ಲಿ ಜಿಲೆಟಿನ್ಗಳನ್ನು ಬಳಸಿ ಮಾಡುತ್ತಿರುವ ಎತ್ತೇಚ್ಚವಾದ ಬ್ಲಾಸ್ಟಿಂಗ್ನಿಂದ ತೈಲಗೆರೆ ಸುತ್ತಾಮುತ್ತಲಿನ ಮುದ್ದುನಾಯಕನಹಳ್ಳಿ, ಬ್ಯಾಡರಹಳ್ಳಿ ಸೇರಿದಂತೆ ಕೊಯಿರಾ ಸುತ್ತಾಮುತ್ತ ಬ್ಲಾಸ್ಟಿಂಗ್ಗೆ ಸಾಕಷ್ಟು ಮನೆಗಳು ಬಿರುಕು ಬಿಟ್ಟಿದ್ದು ಮನೆಗಳು ಕುಸಿದು ಬಿದ್ದರೆ ಯಾರು ಹೊಣೆ ಎಂದು ಗಣಿಗಾರಿಕೆಯ ವಿರುದ್ಧ ನೊಂದ ರೈತ ರಮೇಶ್ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ಹಲವು ದಶಕಗಳಿಂದ ಕಲ್ಲು ಗಣಿಗಾರಿಕೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಸಾಕಷ್ಟು ಭಾರಿ ಅಧಿಕಾರಿಗಳು ಜನಪ್ರತನಿಧಿಗಳು ಮತ್ತು ಸ್ಥಳಿಯ ಪೊಲೀಸರಿಗೆ ದೂರು ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸಾಕಷ್ಟು ಬಾರಿ ಕಚೇರಿಗಳ ಸುತ್ತಾ ಸುತ್ತಾಡಿ ಸುಸ್ತಾಗಿರುವ ಗ್ರಾಮಸ್ಥರು ಇದೀಗ ಇತ್ತ ಕೃಷಿಯನ್ನು ಮಾಡಲಾಗದೆ ಗಣಿಗಾರಿಕೆಯ ಸ್ಟೋಟದಿಂದ ಮನೆಗಳಲ್ಲಿರಲು ಆಗದಂತ ಪರಿಸ್ಥೀತಿ ನಿರ್ಮಾಣವಾಗಿದೆ. ಹೀಗಾಗಿ ನಮ್ಮ ಜಮೀನು ಮನೆಸಹ ಗಣಿಗಾರಿಕೆಗೆ ತೆಗೆದುಕೊಂಡು ಬಿಡಿ ಎಂದು ರೈತ ಚಂದ್ರಪ್ಪ ಆಕ್ರೋಶ ಹೊರ ಹಾಕಿದ್ದಾರೆ.
ಸರ್ಕಾರದಿಂದ ಅನುಮತಿ ಪಡೆದಿದ್ದೇವೆ ಎಂದು ಗಣಿ ಮಾಲೀಕರು ನೂರಾರು ಅಡಿಗಳ ಆಳಕ್ಕೆ ಮೈನಿಂಗ್ ಮಾಡುತ್ತಿದ್ದು, ಯಾವಾಗ ಏನಾಗುತ್ತೋ ಎನ್ನುವ ಭೀತಿಯು ಕಾಡುತ್ತಿದೆ. ಇನ್ನೂ ಈ ಬಗ್ಗೆ ಅಧಿಕಾರಿಗಳು ಮತ್ತು ಗಣಿ ಮಾಲೀಕರನ್ನು ಕೇಳಲು ಹೋದರೆ ರೈತರ ಮೇಲೆ ಕೆಲವರನ್ನು ಬಿಟ್ಟು ದೌರ್ಜನ್ಯ ಮಾಡಿ ಕೇಸ್ ಹಾಕಿಸುತ್ತಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.
ಗಣಿಗಾರಿಕೆಯ ವಿರುದ್ಧ ಸಾಕಷ್ಟು ವರ್ಷಗಳಿಂದ ಹೋರಾಟ ಮಾಡಿ ಮಾಡಿ ಸುಸ್ತಾಗಿರುವ ಒಂದಷ್ಟು ಜನ ರೈತರು ಇದೀಗ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ತಮಗೆ ಗಣಿಗಾರಿಕೆಯಿಂದ ಮುಕ್ತಿಕೊಡಿ ಇಲ್ಲ. ದಯಾ ಮರಣಕೊಡಿ ಎಂದು ಪತ್ರ ಬರೆದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನೂ ತೈಲಗೆರೆ ಗ್ರಾಮ ನಂದಿಬೆಟ್ಟದ ಪಂಚಗಿರಿ ಬೆಟ್ಟಗಳಿಂದ ಕೂದಲಳತೆ ದೂರದಲ್ಲಿದ್ದು, ಇತ್ತೀಚೆಗಷ್ಟೆ ಬೆಟ್ಟದಲ್ಲಿ ಉಂಟಾದ ಗುಡ್ಡ ಕುಸಿತುಕ್ಕು ಪಂಚಗಿರಿ ಬೆಟ್ಟಗಳ ಸುತ್ತಾಮುತ್ತ ನಡೆಯುತ್ತಿರುವ ಗಣಿಗಾರಿಕೆಯೆ ಕಾರಣ ಎನ್ನುವ ಆರೋಪವಿದೆ.
ಒಟ್ಟಾರೆ ಸ್ಟೋಟಕದ ಕಲ್ಲು ಗಣಿಗಾರಿಕೆಯಿಂದ ತಮ್ಮ ಊರು ಮನೆ ಮತ್ತು ಜಮೀನು ಉಳಿಸಿಕೊಂಡು ಕೃಷಿ ಮುಂದುವರೆಸುವುದಕ್ಕೆ ರೈತರು ಹರಸಾಹಸ ಪಡುತ್ತಿದ್ದಾರೆ. ಆದರೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ರೈತರಿಗೆ ಶಾಪವಾಗಿ ಪರಿಣಮಿಸಿದೆ. ಇನ್ನಾದರೂ ಸರ್ಕಾರ ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ ನೂರಾರು ಅಡಿಗಳ ಆಳದವರೆಗೂ ನಡೆದಿರುವ ಗಣಿಗಾರಿಕೆಯ ಬಗ್ಗೆ ತನಿಖೆ ನಡೆಸುವ ಮೂಲಕ ಗಣಿಗಾರಿಕೆಯ ಶಾಪದಿಂದ ರೈತರಿಗೆ ಮುಕ್ತಿಕೊಡಿಸುವ ಕೆಲಸ ಮಾಡಬೇಕಿದೆ.
ವರದಿ: ನವೀನ್
ಇದನ್ನೂ ಓದಿ:
ಕೋಲಾರದ ದೊಡ್ಡ ಅಯ್ಯೂರು ಗುಡ್ಡಗಳಲ್ಲಿ ಗಣಿಗಾರಿಕೆ ನಡೆಸಲು ಹೈಕೋರ್ಟ್ ತಡೆ; ಗ್ರಾಮಸ್ಥರಿಗೆ ಜಯ
ಶಿವಮೊಗ್ಗ: ಗೃಹ ಸಚಿವರ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ; ಗುಡ್ಡ ಕುಸಿದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು