ದೇವನಹಳ್ಳಿ, ಅ.11: ಅತ್ತಿಬೆಲೆ ಪಟಾಕಿ ದುರಂತದಲ್ಲಿ 14 ಮಂದಿ ಬಲಿಯಾಗಿದ್ದಾರೆ. ಈ ಘಟನೆ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ (Karnataka Government) ಅತ್ತಿಬೆಲೆ ಪ್ರಕರಣದಲ್ಲಿ ತಹಶೀಲ್ದಾರ್, ಇನ್ಸ್ ಪೆಕ್ಟರ್ ಮತ್ತು ರೀಜನಲ್ ಫೈರ್ ಆಫೀಸರ್ ಅಮಾನತಿಗೆ ಸೂಚಿಸಿದೆ. ಹಾಗೂ ಬಹುಮುಖ್ಯವಾಗಿ ಕರ್ನಾಟಕದಲ್ಲಿ ಪಟಾಕಿ ಬ್ಯಾನ್ (Firecrackers Ban) ಮಾಡಿದೆ. ಪಟಾಕಿ ಮಳಿಗೆಗಳ ಮೇಲೆ ಹದ್ದಿನ ಕಣ್ಣು ಇಡುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ಹೀಗಾಗಿ ಇಂದು ದೇವನಹಳ್ಳಿ, ಚಿಕ್ಕಮಗಳೂರು ಸೇರಿದಂತೆ ಕೆಲ ಕಡೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಲಕ್ಷಾಂತರ ಮೌಲ್ಯದ ಪಟಾಕಿ ಜಪ್ತಿ ಮಾಡಿದ್ದಾರೆ.
ಅತ್ತಿಬೆಲೆ ಘಟನೆ ಬಳಿಕ ಎಚ್ಚೆತ್ತ ಸಿಎಂ ಸಿದ್ದರಾಮಯ್ಯನವರು ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಿನ್ನೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಪಟಾಕಿ ಮಳಿಗೆಗಳ ಮೇಲೆ ಹದ್ದಿನ ಕಣ್ಣು ಇಡುವಂತೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನಲ್ಲಿ ಅಧಿಕಾರಿಗಳು ಪಟಾಕಿ ಮಳಿಗೆಗಳ ಮೇಲೆ ದಾಳಿ ಮಾಡಿದ್ದಾರೆ. ದೇವನಹಳ್ಳಿ ತಹಶೀಲ್ದಾರ್, ವಿಜಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ದೇವನಹಳ್ಳಿ ಪಟ್ಟಣ, ಚನ್ನರಾಯಪಟ್ಟಣ ಮತ್ತು ವಿಜಯಪುರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಲಕ್ಷಾಂತರ ಮೌಲ್ಯದ ಪಟಾಕಿ ಜಪ್ತಿ ಮಾಡಿದ್ದಾರೆ.
ವಿಜಯಪುರ ಪಟ್ಟಣದಲ್ಲಿ ಎಂಟಿಆರ್ ರಮೇಶ್ ಎಂಬುವವನಿಗೆ ಸೇರಿದ ಗೋಡೌನ್ ಮೇಲೆ ತಹಶಿಲ್ದಾರ್ ಶಿವರಾಜ್, ಇನ್ಸ್ಪೆಕ್ಟರ್ ಪ್ರಶಾಂತ್ ನೇತೃತ್ವದ ತಂಡ ದಾಳಿ ನಡೆಸಿ ದೀಪಾವಳಿ ಹಬ್ಬಕ್ಕೆ ಮಾರಾಟ ಮಾಡಲು ಗೋಡೌನ್ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 25 ಲಕ್ಷ ಮೌಲ್ಯದ ಪಟಾಕಿ ವಶಕ್ಕೆ ಪಡೆಯಲಾಗಿದೆ. ಪೊಲೀಸರು ದಾಳಿ ಮಾಡುತ್ತಿದ್ದಂತೆ ಗೋಡೌನ್ ಮಾಲೀಕ ಎಸ್ಕೇಪ್ ಆಗಿದ್ದಾನೆ. ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಪಟಾಕಿಗಳನ್ನು ಶೇಖರಿಸಲಾಗಿತ್ತು.
ಇದನ್ನೂ ಓದಿ: ಹಸಿರು ಪಟಾಕಿ ಎಂದರೇನು? ಗುರುತಿಸುವುದು ಹೇಗೆ, ಎಲ್ಲಿ ಖರೀದಿಸಬೇಕು? ಇಲ್ಲಿದೆ ಮಾಹಿತಿ
ಚಿಕ್ಕಮಗಳೂರು ನಗರದ ಗೋಡೌನ್ಗಳ ಮೇಲೆ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿಗಳನ್ನು ಜಪ್ತಿ ಮಾಡಿದ್ದಾರೆ. ಚಿಕ್ಕಮಗಳೂರು ನಗರ, ಬಸವನಹಳ್ಳಿ ಠಾಣೆಯ ಪೊಲೀಸರು ದಾಳಿ ನಡೆಸಿ ಪರವಾನಗಿ ಪಡೆಯದೆ ಗೋಡೌನ್ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 7 ಲಕ್ಷದ 60 ಸಾವಿರ ಮೌಲ್ಯದ ಪಟಾಕಿ ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮ್ಟೆ ಸೂಚನೆ ಮೇರೆಗೆ ಶರೀಫ್ ಗಲ್ಲಿ, ಬಿ.ಎಮ್ ರಸ್ತೆ, ಹಾಲೆನಹಳ್ಳಿ ಬಳಿ ಇರುವ ಗೋಡೌನ್ಗಳ ಮೇಲೆ ದಾಳಿ ನಡೆದಿದೆ.
ಇನ್ನು ರಾಜಕೀಯ ಕಾರ್ಯಕ್ರಮ, ಮೆರವಣಿಗೆ, ಮದುವೆ, ಗಣೇಶ ಹಬ್ಬ, ಸೇರಿದಂತೆ ಇತರೆ ಸೆಲಿಬ್ರೇಷನ್ ಗಲ್ಲಿ ಯಾವುದೇ ರೀತಿಯ ಪಟಾಕಿ ಬಳಕೆ ಮಾಡದಂತೆ ಸರ್ಕಾರ ಆದೇಶ ಹೊರಡಿಸಿದೆ. ದೀಪಾವಳಿ ಹಬ್ಬದಂದು ಕೇವಲ ಗ್ರೀನ್ ಪಟಾಕಿಯನ್ನಷ್ಟೇ ಸಿಡಿಸಿ ಹಬ್ಬ ಆಚರಿಸಲು ಸರ್ಕಾರ ಸಲಹೆ ನೀಡಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ