G20: 40 ದೇಶದ ಗಣ್ಯರು ಭಾಗಿ, ರಸ್ತೆಗೆ ಕ್ಷಿಪ್ರವಾಗಿ ಡಾಂಬಾರು ಭಾಗ್ಯ, ಮಳೆ ನಡುವೆಯೇ ಟಾರ್ ಹಾಕಿ ರಸ್ತೆ ಮೇಲೆ ವೈಟ್ ಟಾಪಿಂಗ್!
G20 Summit at Bangalore: ಜಿಟಿ ಜಿಟಿ ಮಳೆ ಡುವೆಯೂ ರಸ್ತೆಗೆ ತರಾತುರಿಯಲ್ಲಿ ಡಾಂಬಾರು ಹಾಕ್ತಿರುವುದು ಎಷ್ಟರ ಮಟ್ಟಿಗೆ ಸರಿ? ಮಳೆಯ ನಡುವೆಯೂ ಅದೇ ರಸ್ತೆ ಮೇಲೆ ವೈಟ್ ಟಾಪಿಂಗ್ ಸಹ ಮಾಡಲು ಮುಂದಾಗಿದ್ದು ಟಿವಿ 9 ಕ್ಯಾಮರಾ ಕಾಣ್ತಿದ್ದಂತೆ ವೈಟ್ ಟಾಪಿಂಗ್ ಕೆಲಸ ಅರ್ಧಕ್ಕೆ ಮೊಟಕುಗೊಳಿಸಿ ಹೊರಟಿದ್ದಾರೆ.
ಇತ್ತೀಚೆಗಷ್ಟೆ ಮೋದಿ ರಾಜ್ಯಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ರಸ್ತೆಗಳಿಗೆ ಡಾಂಬಾರು ಭಾಗ್ಯ ಕಲ್ಪಿಸಿ ಟೀಕೆಗೆ ಒಳಗಾಗಿದ್ರು,. ಇದಾದ ಬೆನ್ನಲ್ಲೆ ಇದೀಗ ರಾಜಧಾನಿ ಹೊರವಲಯದಲ್ಲಿ ವಿಶ್ವ ಜಿ 20 ಶೃಂಗಸಭೆ ನಡೆಯಲಿದ್ದು (G20 Summit at Bangalore), ಶೃಂಗಸಭೆಗೆ (G20 Summit) ಬರುವ 40 ವಿದೇಶಗಳ ಗಣ್ಯರಿಗಾಗಿ ತರಾತುರಿಯಲ್ಲಿ ಮಳೆ ನಡುವೆ ರಸ್ತೆಗೆ ಟಾರ್ ಮತ್ತು ವೈಟ್ ಟಾಪಿಂಗ್ ಭಾಗ್ಯ ನೀಡ್ತಿದ್ದಾರೆ (Bangalore). ರಾಜಧಾನಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳು ಕೂಲ್ ಕೂಲ್ ಆಗಿದ್ದು ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳ ಮೇಲೆಲ್ಲ ನೀರು ನಿಲ್ತಿದೆ. ಈ ನಡುವೆ ಇಲ್ಲೊಂದು ರಸ್ತೆಗೆ (Road) ಮಾತ್ರ ಜಿಟಿ ಜಿಟಿ ಮಳೆ ನಡುವೆ ಡಾಂಬಾರು ಹಾಕಿದ್ದೂ ಅಲ್ಲದೆ ವೈಟ್ ಟಾಪಿಂಗ್ ಮಾಡಿ (White Topping) ಮೇಲೆ ತಳಕು ಒಳಗೆ ಕೊಳಕು ಅನ್ನೂ ರೀತಿ ಅಧಿಕಾರಿಗಳು ಮಾಡ್ತಿದ್ದಾರೆ.
ದೇವನಹಳ್ಳಿ ಬಳಿ ಜಿ20 ಶೃಂಗಸಭೆಗೆ ತಯಾರಿ ಭರ್ಜರಿ:
ಹೌದು ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ನಂದಿಬೆಟ್ಟದ ರಸ್ತೆಯಲ್ಲಿರುವ ಪ್ರೆಸ್ಟಿಜ್ ಗಾಲ್ಪ್ ಶೈರ್ ರೆಸಾರ್ಟ್ ನ ಜಿಡ್ಬ್ಲ್ಯು ಮ್ಯಾರಿಯೇಟ್ ಹೋಟೆಲ್ ನಲ್ಲಿ ಈ ತಿಂಗಳ 13 ರಿಂದ 17 ರವರೆಗೂ ವಿಶ್ವ ಮಟ್ಟದ ಜಿ20 ಶೃಂಗಸಭೆ ನಡೆಯಲಿದೆ. ಹೀಗಾಗಿ ಈ ಶೃಂಗಸಭೆಗೆ ಯುರೋಪಿಯನ್ ಯೂನಿಯನ್ ಸೇರಿದಂತೆ ವಿಶ್ವದ 40 ದೇಶಗಳ ಗಣ್ಯರು ಭಾಗವಹಿಸಲಿದ್ದಾರೆ. ಹೀಗಾಗಿ ಸಭೆಗೆ ಬರ್ತಿರುವ ಗಣ್ಯರಿಗಾಗಿ ಅಧಿಕಾರಿಗಳು ಹೋಟೆಲ್ ಗೆ ತೆರಳುವ ರಸ್ತೆಯನ್ನ ನವವಧುವಿನಂತೆ ಸಿಂಗರಿಸಲು ಮುಂದಾಗಿದ್ದಾರೆ.
ಇದಕ್ಕಾಗಿ ಜಿಟಿ ಜಿಟಿ ಮಳೆ ನಡುವೆಯೂ ಕಳೆದ ಎರಡು ದಿನಗಳಿಂದ ದೇವನಹಳ್ಳಿಯ ರಾಣಿ ಕ್ರಾಸ್ ನಿಂದ ಕೋಡಗುರ್ಕಿ ಬಳಿಯಿರುವ ಹೋಟೆಲ್ ವರೆಗೂ ರಸ್ತೆಗೆ ಹೊಸದಾಗಿ ಡಾಂಬಾರು ಹಾಕಿದ್ದಾರೆ. ಆದ್ರೆ ಜಿಟಿ ಜಿಟಿ ಮಳೆ ಬರ್ತಿರುವ ನಡುವೆಯೂ ರಸ್ತೆಗೆ ತರಾತುರಿಯಲ್ಲಿ ಡಾಂಬಾರು ಹಾಕ್ತಿರುವುದು ಎಷ್ಟರ ಮಟ್ಟಿಗೆ ಸರಿ ಅನ್ನೂ ಪ್ರಶ್ನೆ ಉದ್ಬವವಾಗಿದೆ. ಅಲ್ಲದೆ ರಸ್ತೆಗೆ ಡಾಂಬಾರು ಹಾಕಿದ್ದಲ್ಲದೆ ಮಳೆಯ ನಡುವೆಯೇ ಅದೇ ರಸ್ತೆ ಮೇಲೆ ಮಳೆ ನಡುವೆಯೂ ಸಿಬ್ಬಂದಿ ವೈಟ್ ಟಾಪಿಂಗ್ ಮಾಡಲು ಮುಂದಾಗಿದ್ದು ಟಿವಿ 9 ಕ್ಯಾಮರಾ ಕಾಣ್ತಿದ್ದಂತೆ ವೈಟ್ ಟಾಪಿಂಗ್ ಕೆಲಸ ಅರ್ಧಕ್ಕೇ ಮೊಟಕುಗೊಳಿಸಿ ಹೊರಟಿದ್ದಾರೆ.
ಜಿ20 ಶೃಂಗಸಭೆಯು ಎರಡು ಹಂತದಲ್ಲಿ ನಡೆಯಲಿದ್ದು 13 ರಂದು ಕೆಂಪೇಗೌಡ ಏರ್ಪೋಟ್ ಮೂಲಕ 40 ದೇಶಗಳ ವಿವಿಧ ಗಣ್ಯರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಜತೆಗೆ ಐದು ದಿನಗಳ ಕಾಲ ಬೆಂಗಳೂರಿನ ಹೊರ ವಲಯದಲ್ಲಿ ಗಣ್ಯರು ಉಳಿಯಲಿದ್ದು ಪ್ರೇಸ್ಟಿಜ್ ನ ಜೆಡ್ಬ್ಲ್ಯು ಮ್ಯಾರಿಯೆಟ್ ಹೋಟೆಲ್ ಮತ್ತು ಏರ್ಪೋಟ್ ನ ತಾಜ್ ಹೋಟೆಲ್ ನ ರೂಂಗಳನ್ನ ಬುಕ್ ಮಾಡಿಕೊಳ್ಳಲಾಗಿದೆ. ಜತೆಗೆ ಹೋಟೆಲ್ ನಲ್ಲಿ ಗಣ್ಯರು ಉಳಿದುಕೊಳ್ಳಲಿರುವ ಹಿನ್ನೆಲೆಯಲ್ಲಿ ಹೋಟೆಲ್ ಸುತ್ತಮುತ್ತ 700 ಕ್ಕೂ ಅಧಿಕ ಪೊಲೀಸರು, ಕೇಂದ್ರ ಭದ್ರತಾ ಪಡೆ ಸೇರಿದಂತೆ ಹಲವು ಹಂತಗಳಲ್ಲಿ ಬಿಗಿ ಭದ್ರತೆಯನ್ನ ಹಮ್ಮಿಕೊಳ್ಳಲಾಗ್ತಿದೆ.
ಜತೆಗೆ ಏರ್ಪೋಟ್ ನಿಂದ ಹೋಟೆಲ್ ಗೆ ತೆರಳುವ ನಂದಿಬೆಟ್ಟದ ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳ ಓಡಾಟದ ಮಾರ್ಗವನ್ನು ಸಹ ಬದಲಾಯಿಸುತ್ತಿದ್ದು 6 ಕಡೆ ಚೆಕ್ ಪೋಸ್ಟಗಳನ್ನ ನಿರ್ಮಾಣ ಮಾಡಿ ತಪಾಸಣೆ ನಡೆಸಲಿದ್ದಾರೆ. ಇನ್ನು ಈ ವೇಳೆ ಸಂಚಾರ ಮಾರ್ಗ ಬದಲಾವಣೆಯನ್ನ ಮಾಡ್ತಿದ್ದು ಸಾರ್ವಜನಿಕರು ಸಹಕರಿಸುವಂತೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಕೋರಿದ್ದಾರೆ.
ಒಟ್ಟಾರೆ ವಿಶ್ವ ಮಟ್ಟದ ಸಭೆ ನಮ್ಮ ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದ್ದು ಅದಕ್ಕಾಗಿ ಅಗತ್ಯ ಕ್ರಮಗಳನ್ನ ಕೈಗೊಳ್ಳುತ್ತಿರುವುದು ಶ್ಲಾಘನೀಯ. ಆದ್ರೆ ಮೊದಲೆ ಶೃಂಗಸಭೆಯ ಮಾಹಿತಿ ಸಿಕ್ಕಿದ್ದರೂ ಅಧಿಕಾರಿಗಳು ಯುದ್ದಕಾಲದಲ್ಲಿ ಶಸ್ತ್ರಾಭ್ಯಾಸವೆಂಬಂತೆ ಸಭೆಯ ದಿನಾಂಕ ಸಮೀಪವಾಗ್ತಿದ್ದಾಗ ರಸ್ತೆಗೆ ಡಾಂಬಾರು ಭಾಗ್ಯ ಕಲ್ಪಿಸುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. (ವರದಿ: ನವೀನ್, ಟಿವಿ 9, ದೇವನಹಳ್ಳಿ)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:26 am, Mon, 12 December 22