ಅದು ಪ್ರತಿ ವರ್ಷ ಲಕ್ಷಾಂತರ ಭಕ್ತರ ಆಗಮನದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಆದಾಯ ತರುವ, ಸಿಲಿಕಾನ್ ಸಿಟಿ ಸಮೀಪದಲ್ಲಿರುವ ಪ್ರಮುಖ ಧಾರ್ಮಿಕ ಕ್ಷೇತ್ರ (Sri Kshetra Ghati Subramanya in Doddaballapur). ಆದ್ರೆ ಕೋಟಿ ಕೋಟಿ ಆದಾಯ ನೀಡ್ತಿದ್ದರೂ ಕ್ಷೇತ್ರಕ್ಕೆ ಮಾತ್ರ ಕನಿಷ್ಟ ಗೋಪುರ ಸರಿಪಡಿಸುವ ಗೋಜಿಗೂ ವರ್ಷಗಳಿಂದ ಜಿಲ್ಲಾಡಳಿತ ಹಾಗೂ ಸರ್ಕಾರ ಮುಂದಾಗಿಲ್ಲ. ಅದು ಯಾಕೆ? ಅನ್ನೂದನ್ನ ನೀವೆ ನೋಡಿ. ದೇವಾಲಯದ ಆವರಣ ಭಕ್ತರಿಂದ ತುಂಬಿ ತುಳುಕುತ್ತಿದೆ. ದೇವಸ್ಥಾನದ ಆವರಣದಲ್ಲಿನ ಹುಂಡಿಯಲ್ಲಿನ ಕಂತೆ ಕಂತೆ ಹಣದ ರಾಶಿಯೆ ಹೊರ ಬರ್ತಿದ್ದು ಹತ್ತಾರು ಜನ ಗಂಟೆಗಟ್ಟಲೆ ಎಣಿಸುತ್ತಾ ಕೋಟಿ ಕೋಟಿ ದೇವಸ್ಥಾನದ ಆದಾಯವನ್ನ ಸರ್ಕಾರಕ್ಕೆ ಜಮೆ ಮಾಡಿದ್ದಾರೆ. ಆದ್ರೆ ಇಷ್ಟೆಲ್ಲ ಹಣ, ಇಷ್ಟೊಂದು ಭಕ್ತರು ಇದ್ರು ಈ ದೇವಸ್ಥಾನದ ಪ್ರಮುಖ ರಾಜಗೋಪುರದ ಸ್ಥಿತಿ ಯಾವ ರೀತಿ ಇದೆ ಅನ್ನೂದನ್ನ ನೀವು ಒಮ್ಮೆ ಕಣ್ಣಾರೆ ನೋಡ್ಬಿಡಿ (Apathy).
ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೆ ಪ್ರತಿ ಮಂಗಳವಾರ ಮತ್ತು ಭಾನುವಾರ ಭಕ್ತ ಸಾಗರವೆ ಹರಿದು ಬರುತ್ತೆ. ವೀಕೆಂಡ್ ನಲ್ಲಿ ಸಾವಿರಾರು ಜನ ಕ್ಷೇತ್ರಕ್ಕೆ ಬಂದು ನಾಗದೋಷ ಸರ್ಪ ಸಂಸ್ಕಾರ ಮಾಡಿಸಿಕೊಂಡು ತಮ್ಮ ಇಷ್ಟಾನುಸಾರು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣವನ್ನ ಕಾಣಿಕೆ ಮೂಲಕ ದೇವಾಲಯಕ್ಕೆ ನೀಡ್ತಿದ್ದಾರೆ. ಹೀಗಾಗೆ ಪ್ರತಿ ತಿಂಗಳು ನಡೆಯುವ ಹುಂಡಿ ಎಣಿಕೆಯಲ್ಲಿ ಕನಿಷ್ಠ 40 ಲಕ್ಷ (70 ಲಕ್ಷದವರೆಗೂ) ದೇವಾಲಯಕ್ಕೆ ಹುಂಡಿ ಕಾಣಿಕೆಯಿಂದಲೆ ಆದಾಯ ಹರಿದು ಬರ್ತಿದ್ದು ವಾರ್ಷಿಕವಾಗಿ 12 ಕೋಟಿ ಆದಾಯ ನೀಡ್ತಿದೆ. ಆದ್ರೆ ಇಷ್ಟೆಲ್ಲ ಆದಾಯ ದೇವಾಲಯದಿಂದ ಬರ್ತಿದ್ರು ಅಧಿಕಾರಿಗಳು ಮತ್ತು ಸರ್ಕಾರ ದೇವಾಲಯದ ಅಭಿವೃದ್ದಿಗೆ ಮುಂದಾಗ್ತಿಲ್ಲ. ಆದ್ರಲ್ಲು ದೇವಾಲಯದ ಪ್ರಮುಖ ರಾಜಗೋಪುರದಲ್ಲಿನ ಮೂರ್ತಿಗಳೆಲ್ಲ ಕಳೆದ ಕೆಲ ವರ್ಷಗಳಿಂದ ಕೈ ಕಾಲು ತಲೆ ಮುರಿದುಕೊಂಡು ಭಿನ್ನವಾಗಿದ್ದು ಗೋಪುರದ ಬಣ್ಣ ಸಹ ಅಳಿಸಿದೆ. ಇಷ್ಟೆಲ್ಲ ಆದ್ರು ಜಿಲ್ಲಾಡಳಿತವಾಗಲಿ ಸರ್ಕಾರವಾಗಲಿ ರಾಜಗೋಪುರ ನವೀಕರಣ ಮಾಡಿ ಸುಣ್ಣ ಬಣ್ಣ ಹಾಕಿಸುವ ಕೆಲಸಕ್ಕೆ ಮುಂದಾಗದಿದ್ದು ಅಧಿಕಾರಿಗಳ ವಿರುದ್ದ ಭಕ್ತರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
Also read: ಐತಿಹಾಸಿಕ ವಾಟರ್ ಕರೇಜ್ ಬೀದರಿನಲ್ಲಿದೆ, ಆದ್ರೆ ಮುಚ್ಚಿ ಹೋಗಿದೆ! ಜಿಲ್ಲಾಡಳಿತವೂ ಕಣ್ಮುಚ್ಚಿ ಕುಳಿತಿದೆ
ದೇವಾಲಯದ ಆವರಣದಲ್ಲು ಇದೇ ರೀತಿ ಗೋಪುರ ಹದಗೆಟ್ಟಿದ್ದನ್ನ ಕಂಡು ಭಕ್ತರು ಸ್ವತಃ ತಾವೇ ಲಕ್ಷ ಲಕ್ಷ ಖರ್ಚು ಮಾಡಿ ಸುಣ್ಣ ಬಣ್ಣ ಮಾಡಿಸಿದ್ದಾರೆ. ಆದ್ರೆ ರಾಜಗೋಪುರದಲ್ಲಿ ಮೂರ್ತಿಗಳು ಭಿನ್ನವಾಗಿರುವ ಕಾರಣ 18 ರಿಂದ 20 ಲಕ್ಷ ಖರ್ಚಾಗಲಿದ್ದು ದಾನಿಗಳು ಮುಂದೆ ಬಂದಿಲ್ಲ. ಜೊತೆಗೆ ದೇವಾಲಯದಲ್ಲೆ ಒಂದಷ್ಟು ಹಣವಿದ್ದು ಅದನ್ನ ಬಳಕೆ ಮಾಡಿಕೊಂಡು ಗೋಪುರಕ್ಕೆ ವರ್ಣಲೇಪನ ಹಾಗೂ ಮೂರ್ತಿ ಮಾಡಲು ಅನುಮತಿ ನೀಡುವಂತೆ ಈ ಹಿಂದಿನ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಪತ್ರ ಬರೆದು ಆರು ತಿಂಗಳೆ ಕಳೆದರೂ ಅದಕ್ಕೂ ಅನುಮತಿ ನೀಡಿಲ್ಲ. ಹೀಗಾಗಿ ಬಿಸಿಲು ಮತ್ತು ಮಳೆಯಿಂದ ಗೋಪುರದ ಮೂರ್ತಿಗಳು ಮತ್ತಷ್ಟು ಭಿನ್ನವಾಗ್ತಿದ್ದು ಕೋತಿಗಳು ಸಹ ಮೂರ್ತಿಗಳ ಮೇಲೆ ಕೂರುವುದರಿಂದ ಭಕ್ತರ ಮೇಲು ಮೂರ್ತಿಗಳು ಮುರಿದು ಬೀಳುವ ಆತಂಕ ಎದುರಾಗಿದೆ. ಈ ಬಗ್ಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಧಿಕಾರಿ ಶಿವಶಂಕರ್ ಅವರನ್ನ ಕೇಳಿದ್ರೆ ಈ ಬಗ್ಗೆ ಪರಿಶೀಲನೆ ಮಾಡಿ, ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಹೇಳ್ತಿದ್ದಾರೆ.
ಒಟ್ಟಾರೆ ಕೋಟಿ ಕೋಟಿ ಆದಾಯ ಹಾಗೂ ಬೆಂಗಳೂರು ಸುತ್ತಾಮುತ್ತ ನಾಗದೋಷಕ್ಕೆ ಹೆಸರುವಾಸಿಯಾಗಿರುವ ಪ್ರಸಿದ್ದ ಪುಣ್ಯಕ್ಷೇತ್ರದ ಬಗ್ಗೆಯೆ ಅಧಿಕಾರಿಗಳು ಹಾಗೂ ಸರ್ಕಾರ ಇಷ್ಟು ನಿರ್ಲಕ್ಷ್ಯ ವಹಿಸುತ್ತಿರುವುದು ನಿಜಕ್ಕೂ ದುರಂತ. ಇನ್ನಾದ್ರು ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆ ಎಚ್ಚೆತ್ತು ಭಿನ್ನವಾಗಿರುವ ಗೋಪುರ ಸರಿಪಡಿಸುವ ಮೂಲಕ ಕ್ಷೇತ್ರದ ಪಾವಿತ್ರ್ಯತೆ ಕಾಪಾಡುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ