ಸರ್ಕಾರ ಗೋಮಾಳ ಜಮೀನುಗಳನ್ನ ಸ್ಮಶಾನಕ್ಕಾಗಿ ಮಂಜೂರು ಮಾಡಿತ್ತು. ಆದರೆ ನೆಲಮಂಗಲ ತಾಲೂಕಿನ ಹಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿಯೂ ಒತ್ತುವರಿ ಆಗಿರುವ ಆರೋಪ ಕೇಳಿ ಬಂದಿದೆ. ಇದೀಗ, ಒತ್ತುವರಿ ಆದ ಸ್ಮಶಾನ ಭೂಮಿಗಳ ತೆರವುಗೊಳಿಸದ (encroachment) ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ. ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರ 639 ಸ್ಮಶಾನ ಜಾಗಗಳನ್ನ ಗುರುತಿಸಿ ಆಯಾ ಗ್ರಾಮಗಳಿಗೆ ನೀಡಲಾಗಿದೆ ಅಂತ ಹೇಳುತ್ತಿದೆ. ಆದರೆ ವಾಸ್ತವವಾಗಿ ನೆಲಮಂಗಲ (Nelamangala) ತಾಲೂಕಿನ ಟಿ. ಬೇಗೂರು, ಹೊನ್ನೇನಹಳ್ಳಿ ಸೇರಿದಂತೆ ಈ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಸ್ಮಶಾನ ಭೂಮಿಯೇ ಇಲ್ಲ. ಸರ್ಕಾರ ನೀಡಿರುವ ಜಮೀನುಗಳು ಒತ್ತುವರಿ ಆಗಿವೆ (graveyard encroachment). ಹೀಗಾಗಿ ಯಾರಾದರೂ ಸತ್ತರೆ ಕೆರೆ ಅಥವಾ ಇನ್ನಿತರ ಜಮೀನುಗಳಲ್ಲಿ ಸತ್ತವರನ್ನ ಹೂಳುತ್ತಿಲಾಗುತ್ತಿದೆ. ಇನ್ನಾದರೂ ಗ್ರಾಮಗಳಿಗೆ ಸ್ಮಶಾನಕ್ಕಾಗಿ ಸೂಕ್ತವಾದ ಸ್ಥಳದಲ್ಲಿ ಭೂಮಿಯನ್ನ ನೀಡುವಂತೆ ಜನರು ಆಗ್ರಹಿಸುತ್ತಿದ್ದಾರೆ.
ಇನ್ನು ಸೋಂಪುರ ಕೈಗಾರಿಕೆ ಪ್ರದೇಶ ಭಾಗದಲ್ಲಿ ಕೆಐಎಡಿಬಿ ರೈತರ ಜಮೀನುಗಳನ್ನ ವಶ ಪಡಿಸಿಕೊಂಡಿದೆ. ಈ ಹಿಂದೆ ಯಾರಾದರೂ ಸತ್ತಾಗ ತಮ್ಮ ಸ್ವಂತ ಜಮೀನುಗಳಲ್ಲಿ ಶವವನ್ನು ಹೂಳುತ್ತಿದ್ದರು. ಆದರೆ ಈಗ ಯಾರಾದರೂ ಗ್ರಾಮದಲ್ಲಿ ಸತ್ತು ಹೋದರೆ ಕೆರೆ ಪಕ್ಕದಲ್ಲಿ ಒಯ್ದು ಮಣ್ಣು ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರದಿಂದ ಆಯಾ ಗ್ರಾಮಗಳಿಗೆ ಎರಡು ಏಕರೆ ಸ್ಮಶಾನ ಭೂಮಿ ನೀಡಿದೆ. ಅಲ್ಲದೇ ಜಾಗ ಇಲ್ಲದೇ ಹೋದ ಪಕ್ಷದಲ್ಲಿ ಜಾಗ ಖರೀದಿ ಮಾಡಿಕೊಡಬೇಕೆಂಬ ಆದೇಶವಿದೆ. ಸರ್ಕಾರದಿಂದ ಹಣ ಕೂಡ ಬಿಡುಗಡೆ ಆಗಿದೆ. ಅಲ್ಲದೇ ಸ್ಮಶಾನ ಭೂಮಿ ಅಭಿವೃದ್ಧಿ ಪಡಿಸಲಾಗಿದೆ ಅಂತಾನೂ ಹೇಳುತ್ತಿದ್ದಾರೆ. ಆದರೆ ವಾಸ್ತವಾಗಿ ಇಲ್ಲಿಯವರೆಗೆ ಯಾವ ಜಾಗ ಕೂಡ ಇಲ್ಲ. ಹೀಗಾಗಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಲ್ಲದೇ, ಅವರ ವಿರುದ್ಧ ಲೋಕಾಯುಕ್ತ ಮೊರೆ ಹೋಗುವುದಾಗಿ ಹೇಳುತ್ತಿದ್ದಾರೆ ಸ್ಥಳೀಯರಾದ ರವೀಂದ್ರ.
ಒಟ್ಟಿನಲ್ಲಿ ಒಂದೆಡೆ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಗ್ರಾಮಗಳಿಗೆ ಸ್ಮಶಾನ ಭೂಮಿ ನೀಡಿ ಅಭಿವೃದ್ಧಿ ಪಡಿಸಿದೆ ಎಂದು ಹೇಳುತ್ತಿದೆಯಾದರೂ ನೆಲಮಂಗಲ ತಾಲೂಕಿನ ಹಲವು ಗ್ರಾಮಗಳಲ್ಲಿ ನೋಡಿದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ, ಯಾರಾದರೂ ಸತ್ತರೆ ಹೂಳಲು ಕೂಡ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ವಿಪರ್ಯಾಸ! ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸ್ಮಶಾನ ಜಾಗ ದೊರಕಿಸಿ ಕೊಡುತ್ತಾ, ಇಲ್ವಾ? ಕಾದು ನೋಡಬೇಕಿದೆ.
ವರದಿ: ವಿನಾಯಕ್ ಗುರವ್, ಟಿವಿ 9, ನೆಲಮಂಗಲ