ದೇವನಹಳ್ಳಿ, ಅ.04: ದೇವನಹಳ್ಳಿಯಲ್ಲಿ ಸಿನಿಮಾ ಮಾದರಿಯ ಘಟನೆಯೊಂದು ನಡೆದಿದೆ. ಕಾಲೇಜಿಗೆ ಹೋಗುವಾಗ ಅಪ್ರಾಪ್ತ ಯುವತಿಯ ಮೇಲೆ ಯುವಕನಿಗೆ ಪ್ರೀತಿ (Love) ಹುಟ್ಟಿದ್ದು ಇಬ್ಬರೂ ಮನೆಯವರ ವಿರೋಧದ ನಡುವೆ ಓಡಿ ಹೋಗಿ ಮದುವೆಯಾಗಿದ್ದರು (Marriage). ಆದರೆ ಅಪ್ರಾಪ್ತೆಯ ಮನೆಯವರು ಯುವಕನ ಮನೆಗೆ ನುಗ್ಗಿ ತಂದೆ-ತಾಯಿಯ ಮೇಲೆ ಹಲ್ಲೆ ಮಾಡಿ ಬಳಿಕ ಯುವಕನನ್ನೂ ಪತ್ತೆ ಮಾಡಿ ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಿದ್ದಾರೆ. ಸದ್ಯ ಯುವಕ ತನ್ನ ಹೆಂಡತಿ ಬೇಕು ಎಂದು ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾನೆ.
ಗುರುಕಿರಣ್ ಎಂಬ ಯುವಕನ ಪ್ರೇಮ ಪುರಾಣಕ್ಕೆ ಈತನ ಮನೆಯವರು ಇದೀಗ ಬೆಚ್ಚಿಬಿದ್ದಿದ್ದಾರೆ. ದೇವನಹಳ್ಳಿ ತಾಲೂಕಿನ ಕೆಂಪತಿಮ್ಮನಹಳ್ಳಿ ಗ್ರಾಮದವನಾದ ಇವನಿಗೆ ಕಾಲೇಜಿಗೆ ಹೋಗ್ತಿದ್ದ ಅಪ್ರಾಪ್ತೆ ಜೊತೆ ಪ್ರೇಮಾಂಕುರವಾಗಿದ್ದು ಮದುವೆ ಮಾಡಿಕೊಂಡಿದ್ದಾನೆ. ಮನೆಯವರ ವಿರೋಧದ ನಡುವೆ ನಾಲ್ಕು ದಿನಗಳಿಂದೆ ಅಪ್ರಾಪ್ತೆಯನ್ನ ಕರೆದುಕೊಂಡು ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾನೆ. ಜೊತೆಗೆ ಮದುವೆಯಾಗಿ ಸಂಬಂಧಿಗಳು, ಸ್ನೇಹಿತರ ಜೊತೆ ಓಡಾಡಿಕೊಂಡಿದ್ದು ಮನೆಗೆ ಫೋನ್ ಮಾಡಿದಾಗ ತಾಯಿ ಕೂಡ ಬೈದು ಕಣ್ಣೀರು ಹಾಕಿದ್ದಾರೆ. ಮತ್ತೊಂದೆಡೆ ಯುವಕ ಮದುವೆಯಾಗಿದಕ್ಕೆ ಆಕ್ರೋಶಗೊಂಡ ಅಪ್ರಾಪ್ತೆ ಮನೆಯವರು ಎರಡು ಕಾರುಗಳಲ್ಲಿ ಗುಂಪು ಕಟ್ಟಿಕೊಂಡು ಬಂದು ಯುವಕನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ ಹುಡುಗನ ತಾಯಿ ತಂದೆ ಮತ್ತು ಮಾವನ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಮನೆಗೆ ನುಗ್ಗಿ ಹಲ್ಲೆ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಒಟ್ಟಿಗೆ ಎಣ್ಣೆ ಹಾಕುವಾಗ ಗಲಾಟೆ; ಇಟ್ಟಿಗೆಯಿಂದ ಹೊಡೆದು ಪತ್ನಿ ಕೊಲೆ ಮಾಡಿದ ಪತಿ
ಮನೆಗೆ ನುಗ್ಗಿದ ಅಪ್ರಾಪ್ತೆ ಕಡೆಯವರು ಯುವಕನ ತಂದೆಯನ್ನ ಹೊಡೆದು ಅವರನ್ನು ಕಾರಿನಲ್ಲಿ ಎಳೆದೊಯ್ದು ಹುಡುಗ ಎಲ್ಲಿದ್ದಾನೆ ಎಂದು ತೋರಿಸುವಂತೆ ಹಿಂಸೆ ಮಾಡಿದ್ದಾರೆ. ಬಳಿಕ ಯುವಕನನ್ನು ಪತ್ತೆ ಹಚ್ಚಿ ಅಪ್ರಾಪ್ತ ಯುವತಿಯನ್ನು ಯುವಕನಿಂದ ಬಿಡಿಸಿಕೊಂಡು ಹೋಗಿದ್ದಾರೆ. ಯುವಕನ ತಂದೆ ಹಾಗೂ ಯುವಕನನ್ನ ಚನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿ ಅಪ್ರಾಪ್ತೆ ಕಡೆಯವರು ಮನೆಗೆ ತೆರಳಿದ್ದಾರೆ. ಇನ್ನೂ ಹಲ್ಲೆ ವಿರುದ್ದ ನಾವು ದೂರು ನೀಡಿದ್ರು ಪೊಲೀಸರು ಕ್ರಮ ಕೈಗೊಳ್ತಿಲ್ಲ. ನಮಗೆ ನ್ಯಾಯ ಕೊಡಿಸಿ ಎಂದು ಯುವಕನ ಮನೆಯವರು ಒತ್ತಾಯ ಮಾಡ್ತಿದ್ದಾರೆ.
ಒಟ್ಟಾರೆ ಪ್ರೀತಿ ಮಾಡಿ ಅಪ್ರಾಪ್ತೆಯನ್ನ ಯುವಕ ಕರೆದುಕೊಂಡು ಹೋಗಿ ಮದುವೆಯಾದ್ರೆ ಇತ್ತ ಯುವಕನ ತಂದೆ ತಾಯಿ ಮಾಡದ ತಪ್ಪಿಗೆ ಶಿಕ್ಷೆಯನುಭವಿಸುವಂತಾಗಿದ್ದು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಇನ್ನೂ ಈ ಸಂಬಂಧ ವಿಶ್ವನಾಥಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನೊಂದ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:54 am, Fri, 4 October 24