ಬೆಂಗಳೂರು, ಜೂನ್.09: ಮಾವಿನ ಹಣ್ಣು (Mango) ಕೀಳಲು ಹೋಗಿ ವಿದ್ಯುತ್ ಶಾಕ್ (Electrocution) ನಿಂದ ವಿದ್ಯಾರ್ಥಿ ಮೃತಪಟ್ಟ (Death) ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಹಾಸ್ಟೆಲ್ ಬಳಿ ನಡೆದಿದೆ. ಹೊಸಕೋಟೆ ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಬಳಿ ಇದ್ದ ಮರದಲ್ಲಿ ಹಣ್ಣು ಕೀಳಲು ಹೋಗಿ ದುರ್ಘಟನೆ ಸಂಭವಿಸಿದೆ. 9ನೇ ತರಗತಿ ಓದುತ್ತಿದ್ದ ಬಾಲಕ ಸಾಯಿ ಭುವನ ಮೃತ ದುರ್ದೈವಿ.
ಇಂದು ಬೆಳಗ್ಗೆ ಹಾಸ್ಟೆಲ್ ಮಹಡಿ ಮೇಲೆ ಹಾಕಿದ್ದ ಬಟ್ಟೆ ತೆಗೆದುಕೊಂಡು ಬರಲು ಹೋಗಿದ್ದ ಇಬ್ಬರು ಸಹೋದರರು ಅಲ್ಲೇ ಇದ್ದ ಮರದಲ್ಲಿನ ಮಾವಿನ ಹಣ್ಣು ಕಂಡು ಕೀಳಲು ಮುಂದಾಗಿದ್ದರು. ಈ ವೇಳೆ ಓರ್ವ ಬಾಲಕನಿಗೆ ಕರೆಂಟ್ ಶಾಕ್ ಹೊಡೆದಿದ್ದು ಬಾಲಕ ಮಹಡಿ ಮೇಲಿಂದ ಕೆಳಕ್ಕೆ ಬಿದ್ದಿದ್ದಾನೆ. ಕೂಡಲೆ ವಿದ್ಯಾರ್ಥಿಯನ್ನ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಅಣ್ಣ ತಮ್ಮ ಇಬ್ಬರೂ ಕಳೆದ ಎರಡು ವರ್ಷಗಳಿಂದ ವಸತಿ ಶಾಲೆಯಲ್ಲಿ ಓದುತ್ತಿದ್ದರು. ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ ಪ್ರಕರಣ: ಪೋಕ್ಸೋ ಕೇಸ್ ದಾಖಲು
ಕುಡಿದ ಮತ್ತಿನಲ್ಲಿ ಬೈಕ್ ಓಡಿಸುತ್ತಿದ್ದ ಯುವಕ ವಾಕಿಂಗ್ ಮಾಡುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೇರೋಹಳ್ಳಿ ನಿವಾಸಿ ಶಿವಮ್ಮ (66) ಮೃತ ದುರ್ದೈವಿ.
ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಹೇರೋಹಳ್ಳಿಯ ಮೋರಿ ಬಳಿ ಘಟನೆ ನಡೆದಿದೆ. ವಾಕಿಂಗ್ ಮುಗಿಸಿ ಮನೆಗೆ ನಡೆದುಕೊಂಡು ಹೋಗುವಾಗ ಪಲ್ಸರ್ ಬೈಕ್ನಲ್ಲಿ ವೇಗವಾಗಿ ಬಂದ ಸುನೀಲ್ ಎಂಬ ಯುವಕ ಶಿವಮ್ಮನವರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಶಿವಮ್ಮ ಹಾಗೂ ಸುನೀಲ್ ಗೆ ಗಾಯಗಳಾಗಿದ್ದು ಸ್ಥಳೀಯರು ಖಾಸಗಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಸುನೀಲ್ ಬೈಕ್ ಚಲಾಯಿಸಿರೊದು ಪತ್ತೆಯಾಗಿದೆ. ಮತ್ತೊಂದೆಡೆ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಶಿವಮ್ಮ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಸುನೀಲ್ನನ್ನು ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:33 pm, Sun, 9 June 24