ಬೆಂಗಳೂರು, ಏ.17: ಶ್ರೀ ರಾಮ ನವಮಿ(Rama Navami) ಅಂಗವಾಗಿ ನಾಡಿನಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಅದರಂತೆಯೇ ಬೆಂಗಳೂರು(Bengaluru) ಹೊರವಲಯದ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯ ಪವಮಾನ ಲೇಔಟ್ ನಲ್ಲಿ ಇರುವ ಶ್ರೀ ಬಯಲು ದಕ್ಷಿಣ ಮುಖ ಆಂಜನೇಯ ಸ್ವಾಮಿ ದೇವಾಲಯದಲ್ಲೂ ಆದ್ದೂರಿಯಾಗಿ ಶ್ರೀ ರಾಮೋತ್ಸವವನ್ನ ಆಚರಿಸಲಾಯಿತು. ನೂರಾರು ವರ್ಷಗಳ ಇತಿಹಾಸವಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮ ನವಮಿಯ ಅಂಗವಾಗಿ ವಿಶೇಷ ಪೂಜೆ ಜೊತೆಗೆ ಮಳೆಗಾಗಿ ವರುಣ ದೇವರಿಗೆ ಸಂಕಲ್ಪ ಹಾಗೂ ವಿಶೇಷ ಪೂಜೆಯನ್ನ ಅರ್ಚಕರು ನೆರವೇರಿಸಿದ್ದು, ವಿಶೇಷವಾಗಿತ್ತು.
ರಾಜ್ಯಾದ್ಯಂತ ಮಳೆ ಇಲ್ಲದೆ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಶ್ರೀರಾಮನ ಜಪದೊಂದಿಗೆ ಮಳೆಗಾಗಿ ವರುಣ ದೇವರ ಕೃಪೆಗಾಗಿ ದೇವಾಲಯದಲ್ಲಿ ಹೋಮ, ಸಂಕಲ್ಪ ಹಾಗೂ ಪೂಜೆಯನ್ನ ನೇರವೇರಿಸಲಾಯಿತು. ಜೊತೆಗೆ ಶ್ರೀರಾಮನವಮಿ ಪ್ರಯುಕ್ತ ದೇವಾಲಯದಲ್ಲಿ ಹಣ್ಣು-ಹಂಪಲು, ಹೂಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಶ್ರೀ ಆಂಜನೇಯ ಸ್ವಾಮಿಗೆ ತುಳಸಿ ಮತ್ತು ಮಣಿಗಳ ಮೂಲಕ ದೇವರಿಗೆ ವಿಶೇಷವಾಗಿ ಅಲಂಕರಿಸಿ, ಲೋಕಕಲ್ಯಾಣಕ್ಕಾಗಿ ದೇವಾಲಯದಲ್ಲಿ ಕಲ್ಯಾಣೋತ್ಸವ, ಶ್ರೀರಾಮ ಭಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ:ಪೆನ್ಸಿಲ್‌ನ ತುದಿಯಲ್ಲಿ ರಾಮನ ಕಲಾಕೃತಿ ಕೆತ್ತಿ ಶ್ರೀರಾಮ ನವಮಿಯ ಶುಭಾಶಯ ಕೋರಿದ ಕಲಾವಿದ
ಶ್ರೀರಾಮ ನವಮಿ ಹಿನ್ನೆಲೆ ಬನ್ನೇರುಘಟ್ಟ, ಗೊಟ್ಟಿಗೆರೆ, ಹುಳಿಮಾವು ಸೇರಿದಂತೆ ಬೆಂಗಳೂರಿನ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ದೇವಾಲಯಕ್ಕೆ ಬಂದ ಭಕ್ತರಿಗೆ ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಿದ್ದು, ಎಂಟರಿಂದ ಹತ್ತು ಸಾವಿರ ಭಕ್ತರಿಗೆ ಅನ್ನ ಪ್ರಸಾದ ವಿನಿಯೋಗ ಮಾಡಲಾಯಿತು.
ಶ್ರೀರಾಮನವಮಿ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ದೇವಾಲಯಗಳಲ್ಲಿ ಶ್ರೀ ರಾಮನ ಭಜನೆ ಮೊಳಗುತ್ತಿದ್ದು, ಅಪಾರ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಶ್ರೀರಾಮನ ಜಪ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ