ನೆಲಮಂಗಲ: ಬೆಂಗಳೂರ ಉತ್ತರ ತಾಲೂಕಿನ ಬೈಯಂಡಹಳ್ಳಿಯಲ್ಲಿ ನಕಲಿ ನಂದಿನಿ ತುಪ್ಪದ ಅಡ್ಡೆ ಮೇಲೆ ಕೆಎಂಎಫ್ ಅಧಿಕಾರಿಗಳು ದಾಳಿ ನಡೆಸಿದ್ದು ರಾಜಸ್ಥಾನ ಮೂಲದ ಆರೋಪಿ ಬಾಬುಲಾಲ್(40) ಬಂಧನವಾಗಿದೆ. ಬಂಧಿತನಿಂದ 15 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟ ಜಾಲ ಪತ್ತೆಯಾಗಿತ್ತು. ಈಗ ಮತ್ತೊಂದು ನಕಲಿ ನಂದಿನಿ ತುಪ್ಪದ ಜಾಲ ಪತ್ತೆಯಾಗಿದೆ. ನಕಲಿ ತುಪ್ಪದ ಅಡ್ಡೆ ಮೇಲೆ ಕೆಎಂಎಫ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಎಂಎಫ್ ಜಾಗೃತಿ ದಳದ ಅಶೋಕ್, ಜಯರಾಮ್, ಡಿ ಸುರೇಶ್ ತಂಡದೊಂದಿಗೆ ನೆಲಮಂಗಲ ಉಪವಿಭಾಗ ಡಿವೈಎಸ್ಪಿ ಗೌತಮ್ ದಾಳಿ ನಡೆಸಿ ರಾಜಸ್ಥಾನ ಮೂಲದ ಬಾಬು ಲಾಲ್ನನ್ನು ಬಂಧಿಸಿದ್ದಾರೆ. ಆರೋಪಿಯಿಂದ 15 ಲಕ್ಷ ಮೌಲ್ಯದ ವಸ್ತುಗಳು, ತುಪ್ಪ, ಸ್ಟೌವ್, 2 ಸಿಲಿಂಡರ್ ಸೇರಿದಂತೆ ಇತರೆ ಬಳಕೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಈ ಮೊದಲು ಬಟ್ಟೆ ವ್ಯಾಪಾರ ಮಾಡ್ತಿದ್ದ ಲಾಸ್ ಆದ ಕಾರಣ ನಕಲಿ ತುಪ್ಪ ತಯಾರಿಕೆಗೆ ಮುಂದಾಗಿದ್ದ ಎಂದು ತಿಳಿದು ಬಂದಿದೆ.
ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟ ಜಾಲ ಪತ್ತೆ
ಮೈಸೂರು ಜಿಲ್ಲೆಯ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಹೊಸಹುಂಡಿ ಗ್ರಾಮದಲ್ಲಿ ನಕಲಿ ನಂದಿನಿ ತುಪ್ಪದ ಗೋಡಾನ್ ಪತ್ತೆಯಾಗಿತ್ತು. ಸ್ಥಳೀಯರಿಗೆ ಮೊದಲು ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಸದಸ್ಯರಿಗೆ ಈ ಜಾಲದ ಬಗ್ಗೆ ಮಾಹಿತಿ ನೀಡಿದ್ದರು. ಡಿಸೆಂಬರ್ 16ರಂದು ಸ್ಥಳಕ್ಕೆ ಸಮಿತಿ ಸದಸ್ಯರು ಹೋಗಿ ಪರಿಶೀಲಿಸಿದಾಗ ನಕಲಿ ಜಾಲ ಪತ್ತೆಯಾಗಿತ್ತು. ಇಲ್ಲಿ ನಂದಿನ ತುಪ್ಪದ ಕವರ್ ತಯಾರಿಸುವ ಕೆಲಸ, ಅಸಲಿ ನಂದಿನಿ ತುಪ್ಪಕ್ಕೆ ಕಲಬೆರಕೆ ಮಾಡುವ ಕೆಲಸ ಹಾಗೂ ಟಿನ್ಗಳಿಗೆ ತುಂಬುವ ಕೆಲಸ ಮಾಡಲಾಗುತಿತ್ತು.
ತಲಾ 15 ಕೆಜಿ ತೂಕದ ಸುಮಾರು 1,000 ಟಿನ್ಗಳು ದೊರಕಿವೆ. ರಾಶಿಗಟ್ಟಲೆ ವನಸ್ಪತಿ, ಪಾಮ್ ಆಯಿಲ್, ಕಲರಿಂಗ್ ಕೆಮಿಕಲ್, ನಂದಿನಿ ಬ್ರ್ಯಾಂಡ್ ತುಪ್ಪದ ನಕಲಿ ಕವರ್, ಪ್ಯಾಕಿಂಗ್ ಯೂನಿಟ್ ಎಲ್ಲವನ್ನೂ ಕಂಡು ಸಮಿತಿ ಸದಸ್ಯರೂ ಅವಕ್ಕಾಗಿದ್ದಾರೆ. ಕೂಡಲೇ ಪೊಲೀಸರು, ಕರ್ನಾಟಕ ಹಾಲು ಉತ್ಪನ್ನಗಳ ಸಹಕಾರ ಒಕ್ಕೂಟ, ಫುಡ್ ಸೇಫ್ಟಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟ ಜಾಲ ಪತ್ತೆ ಪ್ರಕರಣ; ಬೆಂಗಳೂರಿನ ಏಜೆನ್ಸಿ ವಿರುದ್ಧ ಎಫ್ಐಆರ್ ದಾಖಲು
Published On - 11:43 am, Thu, 17 February 22