ದೇವನಹಳ್ಳಿ, ಡಿ.04: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ತಮಿಳುನಾಡು, ಚೆನ್ನೈನಲ್ಲಿ ಮಿಚಾಂಗ್ ಚಂಡಮಾರುತ (Michong Storm) ಅಬ್ಬರ ಜೋರಾಗಿದೆ. ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆ ಕರ್ನಾಟಕ ರಾಜ್ಯದಿಂದ ತೆರಳಬೇಕಿದ್ದ ಹತ್ತಕ್ಕೂ ಹೆಚ್ಚು ರೈಲುಗಳನ್ನು ರದ್ದು ಮಾಡಲಾಗಿದೆ (Train Service). ಜೊತೆಗೆ ಚೆನ್ನೈನಲ್ಲೂ ಭಾರಿ ಮಳೆಯಾಗುತ್ತಿದ್ದು ಚೆನ್ನೈ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದೆ.
ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ತಮಿಳುನಾಡಿನ ಬಹುತೇಕ ರೈಲ್ವೆ ನಿಲ್ದಾಣಗಳು ಮಳೆ ನೀರಿನಿಂದ ಕೂಡಿವೆ. ಕೆಲವೆಡೆ ಸಂಚಾರಕ್ಕೆ ಅಡ್ಡಿಯಾಗಿದೆ. ಗುಡ್ಡ ಕುಸಿತವೂ ಆಗಿದೆ. ಹೀಗಾಗಿ ತಮಿಳುನಾಡು ಭಾಗಕ್ಕೆ ಇಂದು ರೈಲ್ವೆ ಸೇವೆ ಸಂಚಾರ ಇಲ್ಲ. ಪ್ರಯಾಣಿಕರು ಸಹಕರಿಸುವಂತೆ ನೈರುತ್ಯ ರೈಲ್ವೆ ಮನವಿ ಮಾಡಿದೆ. ತಮಿಳುನಾಡಿಗೆ ತೆರಳುವ ರೈಲು ಸೇವೆ ರದ್ದಾಗಿದೆ. ಕರ್ನಾಟಕ ರಾಜ್ಯದಿಂದ ತೆರಳಬೇಕಿದ್ದ ಹತ್ತಕ್ಕೂ ಹೆಚ್ಚು ರೈಲುಗಳನ್ನು ರದ್ದು ಮಾಡಲಾಗಿದೆ. ಇಂದು ಯಾವ ರೈಲು ಕೂಡ ತಮಿಳುನಾಡಿಗೆ ಹೋಗುವುದಿಲ್ಲ ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಚೆನ್ನೈನಲ್ಲಿ ಮಿಚಾಂಗ್ ಚಂಡಮಾರುತ ಅಬ್ಬರ ಹಿನ್ನೆಲೆ ನಿನ್ನೆ ರಾತ್ರಿಯಿಂದ ಇದುವರೆಗೂ ಚೆನ್ನೈನಲ್ಲಿ ಲ್ಯಾಂಡ್ ಆಗಬೇಕಿದ್ದ ಒಟ್ಟು 27 ವಿಮಾನಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯಿರುವ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಆಗಿವೆ. ಎಮಿರೇಟ್ಸ್, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇರಿದಂತೆ 27 ವಿಮಾನಗಳು ಕೆಂಪೇಗೌಡ ಏರ್ಪೋರ್ಟ್ಗೆ ಬಂದಿಳಿದಿದ್ದು ಬೆಳಗ್ಗೆಯಿಂದ ಪ್ರಯಾಣಿಕರು ಏರ್ಪೋರ್ಟ್ನಲ್ಲಿ ಉಳಿಯುವಂತಾಗಿದೆ. ಮಳೆ ಕಡಿಮೆಯಾದ್ರೆ ಮತ್ತೆ ವಿಮಾನಗಳು ಚೆನ್ನೈಗೆ ಹೋಗಬಹುದು ಎಂದು ಪ್ರಯಾಣಿಕರು ಕಾದು ಕುಳಿತಿದ್ದಾರೆ. ಕೆಂಪೇಗೌಡ ಏರ್ಪೋಟ್ ರನ್ ವೇ ನಲ್ಲಿ ಡೈವರ್ಟ್ ವಿಮಾನಗಳು ನಿಂತಿವೆ.
ಇದನ್ನೂ ಓದಿ: Michaung Cyclone: ಮಿಚಾಂಗ್ ಚಂಡಮಾರುತ, ಇಂದಿನಿಂದ ತಮಿಳುನಾಡು, ಆಂಧ್ರದಲ್ಲಿ ಭಾರಿ ಮಳೆ
ಮಿಚಾಂಗ್ ಚಂಡಮಾರುತದ ಅಬ್ಬರಕ್ಕೆ ಚೆನ್ನೈನಲ್ಲಿ ಭಾರೀ ಮಳೆಯಾಗ್ತಿದ್ದು. ಚೆನ್ನೈ ಮುಳುಗಿ ಹೋಗಿದೆ. 23 ಸೆಂಟಿ ಮೀಟರ್ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಚೆನ್ನೈನ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದು, ರಸ್ತೆಗಳು ನದಿಯಂತಾಗಿವೆ.
ಮಳೆಯ ಆರ್ಭಟದಿಂದಾಗಿ ಹಲವು ತಗ್ಗು ಪ್ರದೇಶಗಳು ಮುಳುಗಿವೆ. ಜಲಾವೃತ್ತಗೊಂಡಿದ್ದ ತಂಬರಂ ಮತ್ತು ಪೆರುಂಗಲತ್ತೂರಿ ಪ್ರದೇಶದಲ್ಲಿ ಸಿಲುಕಿದ್ದ 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಜಲಾವೃತ್ತಗೊಂಡಿರುವ 14 ಸಬ್‌ವೇ ಗಳನ್ನು ಬಂದ್ ಮಾಡಲಾಗಿದೆ. ಮ್ಯಾಡ್ಲೇ, ರಂಗರಾಜಪುರಂ, ದೊರೈಸ್ವಾಮಿ, ಮೌಂಟ್, ರಂಗನಾಥನ್, ಗಣೇಶ್ ಪುರಂ, ಗೇಣುರೆಡ್ಡಿ, ವಿಲ್ಲಿವಕ್ಕಂ, ನುಂಗಂಬಾಕಂನಲ್ಲಿರೋ ಸಬ್ ವೇಗಳನ್ನು ಕ್ಲೋಸ್ ಮಾಡಲಾಗಿದೆ. ಸೆಂಟ್ ಥಾಮಸ್ ಮೆಟ್ರೋ ಸ್ಟೇಷನ್ ನೀರು ನುಗ್ಗಿದ್ದರಿಂದ ಪ್ರಯಾಣಿಕರು ಪರದಾಡಿದ್ದಾರೆ. ತಂಬರಂ ಕಾರ್ಪೋರೇಷನ್ ವ್ಯಾಪ್ತಿಯ 39 ನಿರಾಶ್ರಿತ ಕೇಂದ್ರಗಳಲ್ಲಿ 679 ಮಂದಿ ಆಶ್ರಯ ಪಡೆಯುತ್ತಿದ್ದಾರೆ.
ಇನ್ನೂ ಮುಂಜಾಗ್ರತಾ ಕ್ರಮವಾಗಿ ಇಂದು ಸಾರ್ವಜನಿಕ ರಜೆ ಘೋಷಣೆ ಮಾಡಲಾಗಿದೆ. ಮನೆಯಿಂದ ಹೊರ ಬಾರದಂತೆ ಚೆನ್ನೈನ ನಿವಾಸಿಗಳಿಗೆ ಮನವಿ ಮಾಡಲಾಗಿದೆ.
ಮೀನಂಬಾಕಂನಲ್ಲಿ ಅತ್ಯಧಿಕ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 25 ಸೆಂಟಿ ಮೀಟರ್ ಮಳೆ ಸುರಿದಿದೆ. ನಗರ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವ್ಯಾಸಾರ್ಪಾಡಿ ಮತ್ತು ಬೇಸಿನ್ ಬ್ರಿಡ್ಜ್್‌ನ 14 ನಂಬರ್‌ನ ಸೇತುವೆಯಲ್ಲಿ ನೀರಿನ ಹರಿವು ಅಪಾಯ ಮಟ್ಟಕ್ಕೆ ತಲುಪಿದೆ. ಇದ್ರಿಂದ 11 ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಕೂಡ ರದ್ದು ಮಾಡಲಾಗಿದೆ. ಸಬರ್ಬನ್ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ