
ದೇವನಹಳ್ಳಿ, ನವೆಂಬರ್ 05: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಮಾಂಸದ ತ್ಯಾಜ್ಯದ ಸಮಸ್ಯೆ ತೀವ್ರಗೊಂಡಿದೆ. ರಸ್ತೆಗಳ ಬದಿ, ರಾಜಕಾಲುವೆಗಳಲ್ಲಿ ಬೇಕಾಬಿಟ್ಟಿಯಾಗಿ ಮಾಂಸದ ತ್ಯಾಜ್ಯ ಸುರಿಯುತ್ತಿರುವುದರಿಂದ ಗ್ರಾಮಸ್ಥರು ದುರ್ವಾಸನೆಯಿಂದ ಕಂಗಾಲಾಗಿದ್ದಾರೆ. ಮತ್ತೊಂದೆಡೆ, ತ್ಯಾಜ್ಯಕ್ಕೆ ನಾಯಿಗಳು ಹಾಗೂ ಹುದ್ದುಗಳು ಬರುತ್ತಿರುವುದರಿಂದ ವಾಹನ ಸವಾರರು ಮತ್ತು ವಿಮಾನಗಳ ಹಾರಾಟಕ್ಕೂ ಆತಂಕ ಎದುರಾಗಿದೆ.
ಅಂದಹಾಗೆ ನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುತ್ತಮುತ್ತ ಕೈಗಾರಿಕಾ ಪ್ರದೇಶ ಹಾಗೂ ವಿಮಾನ ನಿಲ್ದಾಣ ತಲೆ ಎತ್ತಿರುವ ಕಾರಣ ಜನಸಂಖ್ಯೆ ಹೆಚ್ಚಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಮಾಂಸದ ಅಂಗಡಿಗಳು, ಹೋಟೆಲ್ಗಳು ಹೆಚ್ಚಾಗಿದೆ. ಆದರೆ ಇಲ್ಲಿ ಉತ್ಪತ್ತಿಯಾಗುವ ಮಾಂಸದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಗ್ರಾಮದ ರಸ್ತೆಗಳ ಬದಿ ಹಾಗೂ ರಾಜಕಾಲುವೆಗಳಲ್ಲಿ ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ರಸ್ತೆಗಳ ಬದಿ ರಾಶಿ ರಾಶಿ ಮಾಂಸದ ತ್ಯಾಜ್ಯದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಹರಡಿದೆ. ಇದರಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳಿಗೂ ದುರ್ವಾಸನೆ ಹರಡುತ್ತಿದ್ದು, ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತಾಗಿ ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಂಸದ ತ್ಯಾಜ್ಯಕ್ಕೆ ನಾಯಿಗಳು, ಹದ್ದುಗಳು ಸಹ ಹೆಚ್ಚಾಗಿವೆ. ನಾಯಿಗಳು ಬೈಕ್ ಸವಾರರ ಮೇಲೆ ದಾಳಿ ಮಾಡುತ್ತಿದ್ದು, ಹಲವರು ಬಿದ್ದು ಗಾಯಗೊಂಡಿದ್ದಾರೆ. ಜೊತೆಗೆ ಹದ್ದುಗಳ ಸಂಖ್ಯೆ ಸಹ ಹೆಚ್ಚಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವುದರಿಂದ ವಿಮಾನಗಳ ಟೇಕ್ಆಪ್ ಮತ್ತು ಲ್ಯಾಂಡಿಂಗ್ ಸಂದರ್ಭದಲ್ಲಿ ಹದ್ದುಗಳ ಹಾವಳಿ ಆತಂಕಕ್ಕೆ ಕಾರಣವಾಗಿದೆ. ವಿಮಾನಗಳು ಗ್ರಾಮದ ಸಮೀಪದಲ್ಲಿ ಕೆಳಮಟ್ಟದಲ್ಲಿ ಹಾರಾಟ ನಡೆಸುವ ಹಿನ್ನೆಲೆಯಲ್ಲಿ ಹದ್ದುಗಳಿಂದ ವಿಮಾನಗಳ ಸುರಕ್ಷೆತೆಗೆ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿದೆ.
ಇನ್ನು ರಾಜಕಾಲುವೆ ತುಂಬಾ ಮಾಂಸದ ತ್ಯಾಜ್ಯವೇ ತುಂಬಿದ್ದು, ಮಳೆ ಬಂದರೆ ತ್ಯಾಜ್ಯವೆಲ್ಲಾ ಕೆರೆ ಹಾಗೂ ರೈತರ ಜಮೀನುಗಳಿಗೆ ಸೇರುತ್ತದೆ. ಇತ್ತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅಂತ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್ ಪರ್ಯಾಯ ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರ್: ಸವಾರರ ಪಾಲಿಗೆ ಮೃತ್ಯು ಕೂಪವಾದ ರಸ್ತೆ
ಒಟ್ಟಾರೆ ಗ್ರಾಮ ಪಂಚಾಯತಿಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಮಾಂಸದ ಅಂಗಡಿಗಳ ಮಾಲೀಕರ ದುರ್ವತನೆಯಿಂದ ಇದೀಗ ಗ್ರಾಮಸ್ಥರು ಪರದಾಡುವಂತಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಅನಾಹುತ ಸಂಭವಿಸುವ ಮುನ್ನ ಗ್ರಾಮದ ರಾಜಕಾಲುವೆ ಸ್ವಚ್ಛ ಮಾಡುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.