
ನೆಲಮಂಗಲ, ಡಿಸೆಂಬರ್ 04: ಒಂದು ವಾರದ ಹಿಂದಷ್ಟೇ ರಿಹ್ಯಾಬ್ ಸೆಂಟರ್ನಲ್ಲಿ (rehab center) ಓರ್ವ ಯುವಕ ಮೃತಪಟ್ಟಿದ್ದ. ಆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಅದರ ಬೆನ್ನಲ್ಲೇ ಮತ್ತೋರ್ವ ವ್ಯಕ್ತಿಯ ಸಾವಾಗಿದೆ (death). ಬೆಂಗಳೂರಿನ ಮಾದನಾಯಕನಹಳ್ಳಿ ಬಳಿಯ ಅಮ್ಮೂಸ್ ರಿಹ್ಯಾಬ್ ಸೆಂಟರ್ನಲ್ಲಿ ಕೇರಳ ಮೂಲದ ಕೆ.ಜೆ.ಮನೀಶ್(42) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಕೈ-ಕಾಲು ಕಟ್ಟಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೌದು.. ರಿಹ್ಯಾಬ್ ಸೆಂಟರ್ನಲ್ಲಿ ಮತ್ತೋರ್ವ ವ್ಯಕ್ತಿ ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸೆಂಟರ್ ನಲ್ಲಿ ವ್ಯಕ್ತಿಯ ಕೈ, ಕಾಲುಗಳನ್ನ ಹಗ್ಗದಿಂದ ಕಟ್ಟಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ದರ್ಶನ್ ಸಾವು: ಪೊಲೀಸರಿಂದಲೇ ಕೊಲೆ ಆರೋಪ, ಪ್ರಕರಣ ಸಿಐಡಿ ಹೆಗಲಿಗೆ
ಕೇರಳದ ಮೂಲದ ಮನೀಶ್ (42) ಸಾವನಪ್ಪಿರುವ ವ್ಯಕ್ತಿ. ರಿಹ್ಯಾಬ್ ಸೆಂಟರ್ ಸಿಬ್ಬಂದಿ ಚಿತ್ರಹಿಂಸೆ ನೀಡಿರುವ ದೃಶ್ಯ ಸಿಸಿಟಿವಿಯಲ್ಲಿ ಕೂಡ ಸೆರೆಯಾಗಿದ್ದು, 2 ಗಂಟೆಗಳ ಕಾಲ ಇರಬೇಕಾದ ವಿಡಿಯೋ ಕೇವಲ 2:42 ನಿಮಿಷ ಮಾತ್ರ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಇನ್ನು ಕುಟುಂಬಸ್ಥರು ಮಾದನಾಯಕನಹಳ್ಳಿ ಬಳಿಯ ಅಮ್ಮೂಸ್ ರಿಹ್ಯಾಬ್ ಸೆಂಟರ್ಗೆ ಮನೀಶ್ರನ್ನು 4 ದಿನದ ಹಿಂದೆ ಸೇರಿಸಿದ್ದರು. ಸದ್ಯ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಮನೀಶ್, ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಗಾರಕ್ಕೆ ಮೃತದೇಹವನ್ನು ರವಾನಿಸಲಾಗಿದ್ದು, ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ. ಇತ್ತ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಎಂಕೆ ದೊಡ್ಡಿ ಲಾಕಪ್ ಡೆತ್ ಕೇಸ್: ಎಎಸ್ಐ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್
ಇತ್ತೀಚೆಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಿಹ್ಯಾಬ್ ಸೆಂಟರ್ನಲ್ಲಿ ಯುವಕ ಸಾವನ್ನಪ್ಪಿದ್ದ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೇ ಕೇಸ್ನಲ್ಲಿ ಅಧಿಕಾರಿಗಳ ತಲೆದಂಡಕ್ಕೆ ಕೂಡ ಕಾರಣವಾಗಿದ್ದು, ಇದೀಗ ಮನೀಶ್ ಸಾವು ಕೂಡ ಸಾಕಷ್ಟು ಅನುಮಾನಸ್ಪದ ರೀತಿಯಲ್ಲಿದ್ದು, ಪೊಲೀಸರು ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕಿದೆ.
ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:14 pm, Thu, 4 December 25